ದಾವಣಗೆರೆ, ಅ. 26 – ಕಳುವು, ಸುಲಿಗೆ ಹಾಗೂ ಕಾಣೆಯಾದ 130 ಮೊಬೈಲ್ಗಳನ್ನು ಪತ್ತೆ ಮಾಡಿರುವ ಜಿಲ್ಲಾ ಪೊಲೀಸರು ವಾರಸುದಾರರಿಗೆ ಮರಳಿಸಿದ್ದಾರೆ. ಇವುಗಳ ಮೌಲ್ಯ 20 ಲಕ್ಷ ರೂ.ಗಳಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಸಿಇಐಆರ್ ಪೋರ್ಟಲ್ ಮೂಲಕ ಇವು ಗಳನ್ನು ಪತ್ತೆ ಮಾಡ ಲಾಗಿದೆ. ಪೋರ್ಟಲ್ ಮೂಲಕ ಜಿಲ್ಲೆಯಲ್ಲಿ 3290 ಮೊಬೈಲ್ಗಳನ್ನು ಬ್ಲಾಕ್ ಮಾಡಲಾಗಿದ್ದು, ಅವುಗಳಲ್ಲಿ ಈಗಾಗಲೇ 390 ಮೊಬೈಲ್ ಗಳನ್ನು ಮೊಬೈಲ್ ವಾರಸುದಾರರಿಗೆ ಹಿಂತಿ ರುಗಿಸಲಾಗಿತ್ತು. ಇಂದು 130 ಮೊ ಬೈಲ್ ಮರಳಿಸಲಾಗಿದೆ ಎಂದರು.
ಸೆಂಟ್ರಲ್ ಇಕ್ವಿಪ್ಮೆಂಟ್ ಐಡೆಂಟಿಟಿ ರಿಜಿಸ್ಟರ್ (ಸಿಇಐಆರ್) ಪೋರ್ಟಲ್ ನಾಗರಿಕ ಸ್ನೇಹಿಯಾಗಿದ್ದು ಮೊಬೈಲ್ ಕಳೆದುಕೊಂಡವರಿಗೆ ನೆರವಾಗುತ್ತದೆ. ಕಳುವಾದ, ಸುಲಿಗೆಯಾದ ಅಥವಾ ಕಾಣೆಯಾದ ಮೊಬೈಲ್ಗಳನ್ನು ಬ್ಲಾಕ್ ಮಾಡಲು ಕೇಂದ್ರದ ದೂರಸಂಪರ್ಕ ಇಲಾಖೆಯಿಂದ ಜಾರಿಗೆ ತಂದಿರುವ ನೂತನ ವ್ಯವಸ್ಥೆ ಇದಾಗಿದೆ ಎಂದವರು ವಿವರಿಸಿದರು.
ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮೊಬೈಲ್ ಕಳೆದುಕೊಂಡವರು ಈ ಪೋರ್ಟಲ್ನಲ್ಲಿ ಮಾಹಿತಿಯನ್ನು ನೋಂದಾಯಿಸಿ ಮೊಬೈಲ್ ಬ್ಲಾಕ್ ಮಾಡಿದ್ದು, ನಂತರ ಪೊಲೀಸರು ಪೋರ್ಟಲ್ ನೆರವಿನಿಂದ ಆ ಮೊಬೈಲ್ಗಳನ್ನು ಪತ್ತೆ ಹಚ್ಚಿದ್ದಾರೆ. ಅವುಗಳಲ್ಲಿ ಕೆಲವು ಕೇರಳ ಇನ್ನಿತರೆ ಕಡೆಗಳಲ್ಲಿ ದೊರೆತಿವೆ ಎಂದವರು ಹೇಳಿದರು.
ಈ ಪೋರ್ಟಲ್ ಮೂಲಕ ರಾಜ್ಯದಲ್ಲಿ 1.52 ಲಕ್ಷ ಮೊಬೈಲ್ ಗಳನ್ನು ಬ್ಲಾಕ್ ಮಾಡಿ 40 ಸಾವಿರ ಪತ್ತೆ ಹಚ್ಚಲಾಗಿದೆ. ಸಾರ್ವಜನಿಕರು ತಮ್ಮ ಮೊಬೈಲ್ ಕಳವು, ಸುಲಿಗೆ ಅಥವಾ ಕಾಣೆಯಾಗಿದ್ದಲ್ಲಿ ಕೂಡಲೇ ನೂತನ ಸಿಇಐಆರ್ ವೆಬ್ ಪೋರ್ಟಲ್ಗೆ ಭೇಟಿ ನೀಡಿ ನೋಂದಾಯಿಸಿಕೊಳ್ಳಬೇಕು. ಈ ವ್ಯವಸ್ಥೆಯ ಸದುಪಯೋಗ ಪಡೆಯ ಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯ ಕುಮಾರ್ ಎಂ. ಸಂತೋಷ್, ಸಿಇಎನ್ ಪೊಲೀಸ್ ಇನ್ಸ್ಪೆಕ್ಟರ್ ಪಿ. ಪ್ರಸಾದ್, ಜಿಲ್ಲಾ ಪೊಲೀಸ್ ಕಚೇರಿಯ ಪೊಲೀಸ್ ಇನ್ಸ್ಪೆಕ್ಟರ್ ರುದ್ರಪ್ಪ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.