ವಿಶ್ವ ಟೆನ್ನಿಸ್ ಟೂರ್ನಿಯಲ್ಲಿ ಯುವ ಆಟಗಾರರ ಮುನ್ನಡೆ

ವಿಶ್ವ ಟೆನ್ನಿಸ್ ಟೂರ್ನಿಯಲ್ಲಿ ಯುವ ಆಟಗಾರರ ಮುನ್ನಡೆ

ಗೆಲುವಿಗೆ ಶ್ರೇಯಾಂಕ ಆಟಗಾರರ ಪ್ರಯಾಸ

ದಾವಣಗೆರೆ, ಅ.25- ಐಟಿಎಫ್ ದಾವಣಗೆರೆ ಓಪನ್ ಪುರುಷರ ವಿಶ್ವ ಟೆನ್ನಿಸ್ ಟೂರ್‌ನ ರೋಚಕ ಸ್ಪರ್ಧೆಗಳಲ್ಲಿ ತೀವ್ರ ಸವಾಲು ಎದುರಿಸಿದ ಎಲ್ಲಾ ಶ್ರೇಯಾಂಕದ ಆಟಗಾರರು ಸಿಂಗಲ್ಸ್ ಪ್ರಿ ಕ್ವಾರ್ಟರ್ ಫೈನಲ್‌ಗೆ ಮುನ್ನಡೆದಿದ್ದಾರೆ. ಆ ಮೂಲಕ ಮುಂದಿನ ಎಲ್ಲ ಸ್ಪರ್ಧೆಗಳು ತೀವ್ರ ಕುತೂಹಲ ಮೂಡಿಸಿವೆ.

ದಾವಣಗೆರೆಯ ಜಿಲ್ಲಾ ಟೆನಿಸ್ ಅಸೋಸಿಯೇಷನ್ ಅಂಗಳದಲ್ಲಿ ಬುಧವಾರ ನಡೆದ ಸ್ಪರ್ಧೆಗಳಲ್ಲಿ ಅಗ್ರ ಶ್ರೇಯಾಂಕದ ಆಟಗಾರ ಅಮೆರಿಕದ ನಿಕ್ ಚಾಪೆಲ್ ಅವರು ವೈಲ್ಡ್ ಕಾರ್ಡ್ ಪ್ರವೇಶ ಪಡೆದ ರಂಜಿತ್ ವಿರಾಲಿ-ಮುರುಗೇಶನ್ ವಿರುದ್ದ ಮೊದಲ ಸೆಟ್‌ನಲ್ಲಿ ತೀವ್ರ ಸವಾಲು ಎದುರಿಸಿದರು. ಆದರೆ ಎರಡನೇ ಸೆಟ್‌ನಲ್ಲಿ ಎದುರಾಳಿಗೆ ಪಾಯಿಂಟ್ ಗಳಿಸಲು ಅವಕಾಶವನ್ನೇ ನೀಡದೆ ಹಿಡಿತ ಸಾಧಿಸಿ ಅಂತಿಮವಾಗಿ 7-6 (3), 6-0 ರಿಂದ ಜಯ ಗಳಿಸಿದರು. ಅರ್ಹತಾ ಆಟಗಾರ ತುಷಾರ್ ಮದನ್ ಅವರ ಸಾಮರ್ಥ್ಯವನ್ನು ಕಡೆಗಣಿಸಿದ್ದ ಎರಡನೇ ಶ್ರೇಯಾಂಕದ ಆಟಗಾರ ಬೋಗ್ಡಾನ್ ಬೊಬ್ರಾವ್ ಮೊದಲ ಸೆಟ್ ಅನ್ನು 6-4 ರಿಂದ ಸುಲಭವಾಗಿ ಕಳೆದುಕೊಂಡರು. ಆದರೆ ತಕ್ಷಣವೇ ಎಚ್ಚೆತ್ತುಕೊಂಡು ತಮ್ಮ ಅನುಭವದ ಆಟವಾಡಿದ ಬೋಗ್ಡಾನ್, ನಂತರದ ಸೆಟ್‌ನಲ್ಲಿ ಎದುರಾಳಿಯನ್ನು ಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಂಡರು. ಎರಡನೇ ಸೆಟ್‌ನಲ್ಲಿ 6-2 ರಿಂದ ಪಂದ್ಯವನ್ನು ಸಮ ಮಾಡಿಕೊಂಡರೆ, ನಿರ್ಣಾಯಕ ಪಂದ್ಯದಲ್ಲಿ 6-0 ರಿಂದ ಇನ್ನಷ್ಟು ಸುಲಭವಾಗಿ ಜಯ ಗಳಿಸಿ ಪ್ರಭುತ್ವ ಮೆರೆದರು.

ಬೋಗ್ಡಾನ್ ಮಾಡಿದ ತಪ್ಪನ್ನೇ ಮೂರನೇ ಶ್ರೇಯಾಂಕದ ಆಟಗಾರ ದಿಗ್ವಿಜಯ್ ಪ್ರತಾಪ್ ಸಿಂಗ್ ಸಹ ಮಾಡಿದರು. ಎದುರಾಳಿ ಅರ್ಹತಾ ಆಟಗಾರ ರೋಹನ್ ಮೆಹ್ರಾ ವಿರುದ್ಧ ಮೊದಲ ಸೆಟ್‌ನಲ್ಲಿ 4-6ರಿಂದ ಸೋತರು. ಆದರೆ ಮುಂದಿನ ಎರಡು ಸೆಟ್‌ಗಳಲ್ಲಿ 6-3 ಮತ್ತು 6-2ರಿಂದ ಗೆಲುವು ಪಡೆದರು. ಆದರೆ ನಾಲ್ಕನೇ ಶ್ರೇಯಾಂಕದ ಆಟಗಾರ ಫ್ರಾನ್ಸ್‌ನ ಫ್ಲೋರೆಂಟ್ ಬಾಕ್ಸ್ ಅವರು ವೈಲ್ಡ್ ಕಾರ್ಡ್ ಪ್ರವೇಶ ಪಡೆದ ಆಟಗಾರ ಅಜಯ್ ಮಲಿಕ್ ಅವರನ್ನು 6-1, 6-2ರಿಂದ ಸುಲಭವಾಗಿ ಮಣಿಸಿದರು.

ಧಾರವಾಡದ ಐಟಿಎಫ್ ವಿಜೇತ ರಾಮಕುಮಾರ್ ರಾಮನಾಥನ್ ಮತ್ತು ಇಶಾಕ್ ಎಕ್ಬಾಲ್ ನಡುವಿನ ಪಂದ್ಯ ದಿನದ ವಿಶೇಷವಾಗಿತ್ತು. ಒಟ್ಟು 2 ಗಂಟೆ 32 ನಿಮಿಷ ಕಾಲ ನಡೆದ ಅತ್ಯಂತ ಕುತೂಹಲಕಾರಿ ಪಂದ್ಯದ ಮೊದಲ ಸೆಟ್‌ನ ಆರಂಭದಲ್ಲಿ ಇಶಾಕ್ ಆಟದ ಮೇಲೆ ಪ್ರಭುತ್ವ ಸಾಧಿಸಿದರು. ರಾಮಕುಮಾರ್ ಅವರ ಸರ್ವ್‌ಗಳನ್ನು ಮುರಿದು 3-1ರಿಂದ ಮುನ್ನಡೆ ಪಡೆದರು. ಆದರೆ ಆರನೇ ಗೇಮ್‌ನಲ್ಲಿ ರಾಮಕುಮಾರ್ 6-6ರಲ್ಲಿ ಸಮ ಮಾಡಿಕೊಂಡರು. ನಂತರ ಟೈಬ್ರೇಕರ್‌ನಲ್ಲಿ ರಾಮಕುಮಾರ್ 7-4ರಿಂದ ಗೆಲ್ಲಲು ಹರಸಾಹಸ ಪಟ್ಟರು. ಸರ್ವೀಸ್ ಮತ್ತು ಆಟದಲ್ಲಿ ಪ್ರತಿ ಹಂತದಲ್ಲಿ ಮಾಡಿದ ಹಲವು ತಪ್ಪುಗಳಿಗೆ ರಾಮಕುಮಾರ್ ಪ್ರಯಾಸ ಪಡಬೇಕಾಯಿತು.

ಎರಡನೇ ಸೆಟ್‌ನಲ್ಲಿಯೂ ಸಹ ಯುವ ಆಟಗಾರ ಇಶಾಕ್ ಎಕ್ಬಾಲ್ 4-2ರಿಂದ ಆರಂಭದಲ್ಲಿ ಮುನ್ನಡೆ ಸಾಧಿಸಿದ್ದರು. ಆದರೆ ಇದನ್ನು ಮುಂದುವರೆಸಿಕೊಂಡು ಹಿಡಿತ ಸಾಧಿಸುವಲ್ಲಿ ಮತ್ತು ಎದುರಾಳಿಯ ತಪ್ಪುಗಳ ಲಾಭ ಪಡೆಯಲು ಇಶಾಕ್ ವಿಫಲರಾದರು. ಆದರೆ ರಾಮಕುಮಾರ್ ಎದುರಾಳಿಯ ದೌರ್ಬಲ್ಯಗಳನ್ನು ಅರ್ಥ ಮಾಡಿಕೊಂಡು 5-4ರಿಂದ ಮುನ್ನಡೆ ಸಾಧಿಸಿದರು. ನಂತರ 12ನೇ ಆಟದಲ್ಲಿ ಇಶಾಕ್ ಅವರ ಸರ್ವ್ ಮುರಿದು ಪಂದ್ಯ ಗೆದ್ದು 2-0 ಸೆಟ್‌ಗಳಿಂದ ಮುನ್ನಡೆದರು. ಮೂರನೇ ಸೆಟ್‌ನಲ್ಲಿ ಇಬ್ಬರೂ ಹಿಂದಿನ ಸೆಟ್‌ಗಳಲ್ಲಿ ಮಾಡಿದ ತಪ್ಪುಗಳನ್ನು ಮುಂದುವರೆಸಿದರು. ಆರಂಭದಲ್ಲಿ ಇಶಾಕ್ 2-0ರಿಂದ ಮುಂದಿದ್ದರೂ ನಂತರ 2-3ರಿಂದ ಹಿಂದುಳಿದರು. ಡೇವಿಸ್ ಕಪ್ ಆಟಗಾರ ರಾಮಕುಮಾರ್ ಒಂದೆರಡು ಉತ್ತಮ ಸರ್ವ್ ಮತ್ತು ಹೊಡೆತಗಳ ಮೂಲಕ ಗಮನ ಸೆಳೆದರು. ಅಂತಿಮವಾಗಿ 6-3ರಿಂದ ಸೆಟ್ ಗೆದ್ದು 16ರ ಘಟ್ಟಕ್ಕೆ ಪ್ರವೇಶಿಸಿದರು.

ಇತರೆ ಪಂದ್ಯಗಳಲ್ಲಿ ಎರಡನೇ ಶ್ರೇಯಾಂಕದ ಆಟಗಾರ ಬೋಗ್ಡಾನ್ ಬೊಬ್ರೋವ್ 4-6, 6-2, 6-0ರಿಂದ ತುಷಾರ್ ಮದನ್ ವಿರುದ್ಧ; ಅಮೆರಿಕದ ನಿಕ್ ಚಾಪೆಲ್ 7-6 (3), 6-3 ರಿಂದ ರಂಜಿತ್ ವೈರಾಲಿ ವಿರುದ್ಧ; ವಿಷ್ಣುವರ್ಧನ್ 6-0,6-1 ರಿಂದ ಫೈಸರ್ ಖಮರ್ ವಿರುದ್ಧ; ಪ್ರಜ್ವಲ್ ದೇವ್ 6-3, 6-0 ರಿಂದ ಮನಿಶ್ ಗಣೇಶ್ ವಿರುದ್ಧ; ದಿಗ್ವಿಜಯ್ ಪ್ರತಾಪ್ ಸಿಂಗ್ 4-6, 6-3, 6-2ರಿಂದ ರೋಹನ್ ಮೆಹ್ರಾ ವಿರುದ್ಧ; ರಿಷಬ್ ಅಗರವಾಲ್ 7-6 (5), 6-4ರಿಂದ ಲ್ಯೂಕ್ ಸೊರೆನ್ಸೇನ್ ವಿರುದ್ಧ; ಮಲೇಷ್ಯಾದ ಮಿಟ್ಸುಕಿ ವೀ ಕಾಂಗ್ ಲಿಯೋಂಗ್ 7-5, 6-4ರಿಂದ ಕಬೀರ್ ಹನ್ಸ್ ವಿರುದ್ಧ; ಮನೀಷ್ ಸುರೇಶಕುಮಾರ 6-2, 6-1ರಿಂದ ಅಥರ್ವ್ ಶರ್ಮ ವಿರುದ್ಧ; ದೇವ್ ಜೇವಿಯ 6-0, 63ರಿಂದ ರಾಘವ್ ಜೈಸಿಂಘಾನಿ ವಿರುದ್ಧ; ನಿಕಿ ಕಲಿಯಾಂದ ಪೂಣಚ್ಚ 6-3, 6-3ರಿಂದ ನಿತಿನ್ ಕುಮಾರ್ ಸಿನ್ಹಾ ವಿರುದ್ಧ; ಮಾಧ್ವಿನ್ ಕಾಮತ್ 4-5, 7-6 (10), 6-4ರಿಂದ ಸಾಯಿ ಕಾರ್ತೀಕ್ ರೆಡ್ಡಿ ಗಂಟಾ ವಿರುದ್ಧ ಗೆಲುವು ಸಾಧಿಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆದರು.

error: Content is protected !!