ಥೀಮ್ ಪಾರ್ಕ್‌ಗೆ ಸಿದ್ದೇಶ್ವರ ಮೆಚ್ಚುಗೆ

ಥೀಮ್ ಪಾರ್ಕ್‌ಗೆ ಸಿದ್ದೇಶ್ವರ ಮೆಚ್ಚುಗೆ

5.23 ಕೋಟಿ ರೂ. ವೆಚ್ಚದಲ್ಲಿ ದೃಶ್ಯಕಲಾ ಮಹಾವಿದ್ಯಾಲಯದ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಥೀಮ್ ಪಾರ್ಕ್

ದಾವಣಗೆರೆ, ಅ.25- ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದ ದೃಶ್ಯಕಲಾ ಮಹಾವಿದ್ಯಾಲಯದ ಆವರಣದಲ್ಲಿ ಥೀಮ್ ಪಾರ್ಕ್ ಉತ್ತಮವಾಗಿ ನಿರ್ಮಾಣವಾಗಿದೆ. ಚಿನ್ನಿದಾಂಡು, ಬುಗುರಿ, ಮರಕೋತಿ, ಜಾನುವಾರು ಸಂತೆ, ಗೋಲಿ ಆಟ ಸೇರಿದಂತೆ ಇತರೆ ಪ್ರತಿಕೃತಿಗಳನ್ನು ಇಲ್ಲಿ ನಿರ್ಮಿಸಲಾಗಿದ್ದು, ಇದೆಲ್ಲವನ್ನೂ ನೋಡಿದರೆ ನಮ್ಮ ಬಾಲ್ಯ ನೆನಪಾಗುತ್ತಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.

ಒಂದೂವರೆ ಎಕರೆ ಜಾಗದಲ್ಲಿ , 5.23 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಥೀಮ್ ಪಾರ್ಕ್ ಹಾಗೂ ತೆರೆದ ರಂಗ ಮಂದಿರವನ್ನು ಬುಧವಾರ ವೀಕ್ಷಿಸಿ ಅವರು ಮಾತನಾಡಿದರು.

ದಾವಿವಿ ಹಿಂದಿನ ಉಪ ಕುಲಪತಿ ಪ್ರೊ.ಎಸ್.ವಿ. ಹಲಸೆ ಹಾಗೂ ಆಗಿನ ಸಿಂಡಿಕೇಟ್ ಸದಸ್ಯ ಕೊಂಡಜ್ಜಿ ಜಯಪ್ರಕಾಶ್, ದಾವಣಗೆರೆ ಸಂಸ್ಕೃತಿ ಮತ್ತು ಗ್ರಾಮೀಣ ಪರಂಪರೆಯನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಥೀಮ್ ಪಾರ್ಕ್ ನಿರ್ಮಾಣಕ್ಕೆ, ದೃಶ್ಯಕಲಾ ಮಹಾವಿದ್ಯಾಲಯದ ಆವರಣದಲ್ಲಿ ಒಂದೂವರೆ ಎಕರೆ ಜಾಗ ಮಾಡಿದ್ದರು. 

ಈ ಹಿನ್ನೆಲೆಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ 6.5 ಕೋಟಿ ರೂ. ಬಿಡುಗಡೆ ಮಾಡಿಸಲಾಗಿತ್ತು. ಈಗ ಇಲ್ಲಿ 5.23 ಕೋಟಿ ರೂ. ವೆಚ್ಚದಲ್ಲಿ ಥೀಮ್ ಪಾರ್ಕ್ ನಿರ್ಮಾಣವಾಗಿ, ಲೋಕಾರ್ಪಣೆಗೆ ತಯಾರಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಯಾವಾಗ ದಿನಾಂಕ ನಿಗದಿ ಮಾಡುತ್ತಾರೋ, ಆಗ ಈ ಥೀಮ್ ಪಾರ್ಕ್ ಅನ್ನು ಉದ್ಘಾಟಿಸಲಾಗುವುದು ಎಂದು ತಿಳಿಸಿದರು.

ಈ ಥೀಮ್ ಪಾರ್ಕ್ ಸ್ಮಾರ್ಟ್‌ಸಿಟಿ ಯೋಜನೆಯಡಿ ನಿರ್ಮಾಣವಾಗಿದ್ದರೂ, ಇದನ್ನು ದಾವಣಗೆರೆ ವಿವಿಗೆ ಹಸ್ತಾಂತರ ಮಾಡಲಾಗುವುದು. ಬಳಿಕ ಇದರ ನಿರ್ವಹಣೆಯನ್ನು ವಿಶ್ವವಿದ್ಯಾನಿಲಯವೇ ಮಾಡಲಿದೆ ಎಂದು ಸಂಸದರು ಹೇಳಿದರು.

ಈ ವೇಳೆ ಸ್ಮಾರ್ಟ್ ಸಿಟಿ ಲಿಮಿಟೆಡ್  ವ್ಯವಸ್ಥಾಪಕ ನಿರ್ದೇಶಕ ವೀರೇಶ್‌ ಕುಮಾರ್, ರಾಜಹರ್ಷ ಶಿಲ್ಪಕಲಾ ಕುಟೀರದ ಭರತ್‌ರಾಜ್, ಮಹಾವಿದ್ಯಾಲಯದ ಸತೀಶ್ ವಲ್ಯಾಪುರೆ, ದೂಡಾ ಮಾಜಿ ಅಧ್ಯಕ್ಷರಾದ ಯಶವಂತರಾವ್ ಜಾಧವ್, ರಾಜನಹಳ್ಳಿ ಶಿವಕುಮಾರ್, ಮಹಾನಗರ ಪಾಲಿಕೆ ಉಪ ಮೇಯರ್ ಯಶೋಧ ಯಗ್ಗಪ್ಪ, ವಿಪಕ್ಷ ನಾಯಕ ಕೆ. ಪ್ರಸನ್ನಕುಮಾರ್, ಸದಸ್ಯರಾದ ಎಸ್.ಟಿ. ವೀರೇಶ್, ಸೋಗಿ ಶಾಂತಕುಮಾರ್, ಶಿವಾನಂದ್, ಗಾಯತ್ರಿಬಾಯಿ, ರೇಖಾ ಸುರೇಶ್ ಗಂಡಗಾಳೆ, ಮುಖಂಡರಾದ ಕೊಂಡಜ್ಜಿ ಜಯಪ್ರಕಾಶ್, ಲೋಕಿಕೆರೆ ನಾಗರಾಜ್ ಮತ್ತಿತರರಿದ್ದರು.

error: Content is protected !!