ಅನುದಾನದ ಹಣ ಪೂರ್ಣ ಬಳಕೆಯಾಗಲಿ

ಅನುದಾನದ ಹಣ ಪೂರ್ಣ ಬಳಕೆಯಾಗಲಿ

ಬೆಳವನೂರು ಗ್ರಾಮದ ಜನತಾ ದರ್ಶನದಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ

ದಾವಣಗೆರೆ, ಅ. 25 – ಸರ್ಕಾರ ವಿವಿಧ ಯೋಜನೆಗಳಿಗೆ ನೀಡುವ ಅನುದಾನ ಅವಧಿ ಮೀರಿ ವಾಪಸ್ ಹೋಗಬಾರದು. ಇದಕ್ಕಾಗಿ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಬೇಕು ಹಾಗೂ ಜನರು ಯೋಜನೆಗಳ ಬಗ್ಗೆ ತಿಳಿದು ಅದರ ಲಾಭ ಪಡೆಯಬೇಕು ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು.

ತಾಲ್ಲೂಕಿನ ಬೆಳವನೂರು ಗ್ರಾಮದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಜನತಾ ದರ್ಶನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸರ್ಕಾರಿ ಯೋಜನೆಗಳನ್ನು ಜನರಿಗೆ ತಲುಪಿಸಲು ಜನತಾದರ್ಶನ ಸರಿಯಾದ ವ್ಯವಸ್ಥೆಯಾಗಿದೆ. ಅಧಿಕಾರಿಗಳೇ ಮನೆ ಮನೆಗೆ ಬಂದು ಜನರ ಸಮಸ್ಯೆ ಕೇಳಿ ಬಗೆಹರಿಸುತ್ತಿದ್ದಾರೆ. ಪ್ರತಿ ತಾಲ್ಲೂಕು ಹಾಗೂ ಊರುಗಳಿಗೆ ಈ ಜನತಾ ದರ್ಶನ ತಲುಪಲಿದೆ ಎಂದವರು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾಧಿಕಾರಿ ಎಂ.ವಿ. ವೆಂಕಟೇಶ್, ಹಲವು ಜ್ವಲಂತ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸುತ್ತಿದ್ದೇವೆ. ಸ್ಥಳದಲ್ಲೇ ಬಗೆಹರಿಯದ ಸಮಸ್ಯೆಗಳಿಗೆ ಎರಡು ವಾರಗಳಲ್ಲಿ ಪರಿಹಾರ ನೀಡಲು ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

ಆಶ್ರಯ ಮನೆಗಳಿಗೆ ಹಲವಾರು ಅರ್ಜಿಗಳು ಬಂದಿವೆ. ಸರ್ಕಾರಿ ಜಮೀನು ಗುರುತಿಸಿ ಈ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಇಟ್ನಾಳ್ ಮಾತನಾಡಿ, ಬೆಳವನೂರು ಪಂಚಾಯ್ತಿಯ ವಿದ್ಯುತ್ ನಿರ್ವಹಣೆ ಜಿಲ್ಲೆಗೇ ಮಾದರಿಯಾಗಿದೆ. ಬೆಳವನೂರು ಪಂಚಾಯ್ತಿಯಲ್ಲಿ ಈಗಲೂ 80 ಲಕ್ಷ ರೂ.ಗಳ ಅನುದಾನ ಲಭ್ಯವಿದೆ. ಇನ್ನಷ್ಟು ಅಭಿವೃದ್ಧಿಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ವೇದಿಕೆಯ ಮೇಲೆ ಬೆಳವನೂರು ಗ್ರಾ.ಪಂ. ಅಧ್ಯಕ್ಷೆ ಹೂವಮ್ಮ, ಬೆಳವನೂರು ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಎಂ.ಪಿ. ನವೀನ್ ಕುಮಾರ್, ಉದ್ಯಮಿ ಎಸ್.ಎಸ್. ಗಣೇಶ್, ತಹಶೀಲ್ದಾರ್ ಅಶ್ವತ್ಥ್‌ ಮತ್ತಿತರರು ಉಪಸ್ಥಿತರಿದ್ದರು.

ಉಪವಿಭಾಗಾಧಿಕಾರಿ ದುರ್ಗಾಶ್ರೀ ಸ್ವಾಗತಿಸಿದರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ನಿರೂಪಿಸಿದರು.

error: Content is protected !!