`ಆಫ್ ಅಂಡ್ ಆನ್ ಪದ್ಧತಿ’ ಕೈಬಿಟ್ಟು ನಿರಂತರ ನೂರು ದಿನ ಭದ್ರಾ ನೀರು ಹರಿಸಲು ಆಗ್ರಹ

`ಆಫ್ ಅಂಡ್ ಆನ್ ಪದ್ಧತಿ’ ಕೈಬಿಟ್ಟು ನಿರಂತರ ನೂರು ದಿನ ಭದ್ರಾ ನೀರು ಹರಿಸಲು ಆಗ್ರಹ

ಸಂಸದ ಸಿದ್ದೇಶ್ವರ ನೇತೃತ್ವದ ನಿಯೋಗ ಜಲಸಂಪನ್ಮೂಲ ಸಚಿವ, ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿ

ಉಪ ಮುಖ್ಯಮಂತ್ರಿ ಭರವಸೆ

ಸಂಸದರ ನಿಯೋಗದ ಮನವಿಗೆ ಸ್ಪಂದಿಸಿದ ಉಪ ಮುಖ್ಯಮಂತ್ರಿ  ಡಿ.ಕೆ.ಶಿವಕುಮಾರ್, ನಿರಂತರ ನೀರು ಹರಿಸಲು ಐಸಿಸಿ ಅಧ್ಯಕ್ಷ ಮಧು ಬಂಗಾರಪ್ಪ ಮತ್ತು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ಸೂಚನೆ ನೀಡುವುದಾಗಿ ಭರವಸೆ ನೀಡಿದ್ದಾರೆ.

ದಾವಣಗೆರೆ, ಅ.12- ಲೋಕಸಭಾ ಸದಸ್ಯ  ಜಿ. ಎಂ. ಸಿದ್ದೇಶ್ವರ ನೇತೃತ್ವದ ನಿಯೋಗವು   ಇಂದು ಬೆಂಗಳೂರಿನಲ್ಲಿ ಉಪ ಮುಖ್ಯಮಂತ್ರಿ ಮತ್ತು ಜಲಸಂಪನ್ಮೂಲ ಸಚಿವ ಡಿ. ಕೆ. ಶಿವಕುಮಾರ್ ಅವರನ್ನು  ಭೇಟಿ ಮಾಡಿ,  `ಆಫ್ ಅಂಡ್ ಆನ್ ಪದ್ಧತಿ’ ಕೈಬಿಟ್ಟು,  ಭದ್ರಾ ನೀರನ್ನು  ನೂರು ದಿನ ನಿರಂತರವಾಗಿ ಹರಿಸಬೇಕು  ಎಂದು ಒತ್ತಾಯಿಸಿತು.

ಮಧ್ಯ ಕರ್ನಾಟಕ ರೈತರ ಜೀವನಾಡಿ ಯಾಗಿರುವ ಭದ್ರಾ ಜಲಾಶಯದಿಂದ ನೀರನ್ನು ಆಗಸ್ಟ್ 10ನೇ ತಾರೀಖಿನಿಂದ ನಿರಂತರವಾಗಿ 100 ದಿನ ‌ಹರಿಸುವುದಾಗಿ ಸರ್ಕಾರ ಆದೇಶ ಹೊರಡಿಸಿತ್ತು. ಆದ್ದರಿಂದ ರೈತರು ಜಮೀನು ಉಳುಮೆ ಮಾಡಿಕೊಂಡು ಭತ್ತದ ನಾಟಿ ಮಾಡಿದ್ದಾರೆ.

 ಜಿಲ್ಲೆಯಲ್ಲಿ ಸುಮಾರು 1.5 ಲಕ್ಷ ಎಕರೆಯಲ್ಲಿ ಭತ್ತದ ಬೆಳೆ ಬೆಳೆಸಿದ್ದಾರೆ. ಈಗ ಬೆಳೆ ಹೂವಾಡುವ ಹಂತದಲ್ಲಿದ್ದು, ತೆನೆ ಕಟ್ಟುವ ಸಮಯ. ಆದರೆ ಭದ್ರಾ ನೀರಾವರಿ ಸಲಹಾ ಸಮಿತಿ  ನಿರಂತರ 100 ದಿನ ‌ಹರಿಸುವ ತೀರ್ಮಾನ ಬದಲಿಸಿದೆ. 

`ಆಫ್ ಅಂಡ್ ಅನ್ ಪದ್ಧತಿ’ ಅಂದರೆ 20 ದಿನ ನೀರು  ‌ಹರಿಸುವುದು ಮತ್ತು 10 ದಿನ ನೀರು ನಿಲ್ಲಿಸುವುದನ್ನು
ಜಾರಿ ಮಾಡಿದೆ. ಇದರಿಂದ ನಿರಂತರ ನೀರು ಬೇಡುವ ಭತ್ತದ ಬೆಳೆಗೆ ಹಾನಿಯಾಗಲಿದೆ. 

ಪ್ರಸ್ತುತ ಭದ್ರಾ ನೀರು ಹರಿಸುವ ಐ.ಸಿ.ಸಿ ವೇಳಾಪಟ್ಟಿ ಪ್ರಕಾರ ಅಕ್ಟೋಬರ್ 15 ರಂದು ನೀರು ನಿಲುಗಡೆ ಮಾಡಲಾಗುವುದು. ನಿರಂತರ ವಾಗಿ 100 ದಿನ ನೀರು ‌ಹರಿಸುವುದಾಗಿ ಸರ್ಕಾರ ಆದೇಶ ಹೊರಡಿಸಿದ್ದರಿಂದ ದಾವಣಗೆರೆ ಜಿಲ್ಲೆಯ ರೈತರು ಸಾಲ ಸೋಲ ಮಾಡಿ, ಸಾಕಷ್ಟು ಬಂಡವಾಳ ಸುರಿದು ಭತ್ತದ ಬೆಳೆ ಬೆಳೆಸಿದ್ದಾರೆ.  

ನೀರು ನಿಲ್ಲಿಸಿದರೆ  ಭತ್ತದ ಬೆಳೆ ಬೆಳೆಸಿರುವ ರೈತರಿಗೆ ಬಹಳ ಅನ್ಯಾಯವಾಗುತ್ತದೆ. ಇದರಿಂದ, ರೈತರು ತೀವ್ರ ಆರ್ಥಿಕ ಸಂಕಷ್ಟ ಅನುಭವಿಸುವಂತಾಗುತ್ತದೆ. ಹಾಗಾಗಿ ಭದ್ರಾ ನೀರು ಹರಿಸುವ ಐಸಿಸಿ ತೀರ್ಮಾನಿಸಿರುವ `ಆಫ್ ಅಂಡ್ ಆನ್ ಪದ್ಧತಿ’ ರದ್ದುಗೊಳಿಸಿ ನಿರಂತರ 100 ದಿನ ನೀರು ಹರಿಸಬೇಕು ಎಂದು ಎಂದು ಒತ್ತಾಯಿಸಿದಾಗ,  ಮನವಿಗೆ ಸ್ಪಂದಿಸಿದ ಉಪಮುಖ್ಯಮಂತ್ರಿಗಳು ನಿರಂತರ ನೀರು ಹರಿಸಲು ಐಸಿಸಿ ಅಧ್ಯಕ್ಷ ಮಧು ಬಂಗಾರಪ್ಪ  ಮತ್ತು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್‌ರವರಿಗೆ ಸೂಚನೆ ನೀಡುವುದಾಗಿ ಭರವಸೆ ನೀಡಿದರು.

ನಿಯೋಗದಲ್ಲಿ ಶಾಸಕ ಬಿ ಪಿ ಹರೀಶ್, ವಿಧಾನ ಪರಿಷತ್‌ ಸದಸ್ಯ ನವೀನ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್. ಎಂ. ವೀರೇಶ್ ಹನಗವಾಡಿ, ಪ್ರಧಾನ ಕಾರ್ಯದರ್ಶಿ ಬಿ. ಎಸ್. ಜಗದೀಶ್, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ್, ರೈತ ಮುಖಂಡ ಕೊಳೇನಹಳ್ಳಿ ಬಿ. ಎಂ. ಸತೀಶ್, ಧನಂಜಯ್ ಕಡ್ಲೇಬಾಳು, ಶ್ಯಾಗಲೆ ದೇವೇಂದ್ರಪ್ಪ, ಬಾತಿ ವೀರೇಶ್ ದೊಗ್ಗಳ್ಳಿ, ಬಿ. ಕೆ. ಶಿವಕುಮಾರ್  ಮುಂತಾದವರು ಭಾಗವಹಿಸಿದ್ದರು.

error: Content is protected !!