ಹಿಂದೂಗಳಲ್ಲಿ ಬಲಹೀನತೆ ಹೆಚ್ಚಾದರೆ ಅಪಾಯ

ಹಿಂದೂಗಳಲ್ಲಿ ಬಲಹೀನತೆ ಹೆಚ್ಚಾದರೆ ಅಪಾಯ

ಹರಿಹರದಲ್ಲಿ ಕ್ಯಾರಗುಡ್ಡ ಮಠ ಹುಕ್ಕೇರಿ ಶ್ರೀ ಅಭಿನವ ಮಂಜುನಾಥ ಸ್ವಾಮಿಗಳ ಎಚ್ಚರಿಕೆ

ಹರಿಹರ, ಅ. 7-  ಹಿಂದೂಗಳಲ್ಲಿ ಬಲಹೀನತೆ ಹೆಚ್ಚಾದರೆ,  ಮುಂದಿನ ದಿನಗಳಲ್ಲಿ ಅಪಾಯ ತಪ್ಪಿದ್ದಲ್ಲ. ಹಾಗಾಗಿ ಸನಾತನ ಧರ್ಮದ ಪರಂಪರೆ ಮತ್ತು ಅಸ್ಮಿತೆಗೆ ಧಕ್ಕೆ ಬಂದಾಗ ಎಲ್ಲರೂ ಒಗ್ಗಟ್ಟಿನಿಂದ ಸ್ವಯಂ ಪ್ರೇರಿತರಾಗಿ   ಜಾಗೃತರಾಗಿ ಸನಾತನ ಧರ್ಮವನ್ನು ಉಳಿಸಬೇಕು ಎಂದು ಕ್ಯಾರಗುಡ್ಡ ಮಠ ಹುಕ್ಕೇರಿ ಶ್ರೀ ಅಭಿನವ ಮಂಜುನಾಥ ಸ್ವಾಮಿಗಳು ಅಭಿಪ್ರಾಯಪಟ್ಟರು. 

ನಗರದ ಹಿಂದೂ ಮಹಾಗಣಪತಿ ಸಮಿತಿ ವತಿಯಿಂದ ನಡೆದ ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. 

ಭಾರತದ ಪ್ರತಿಯೊಬ್ಬ ನಾಗರಿಕರು ಧರ್ಮದ ಆಚರಣೆ, ಸಂಸ್ಕಾರ, ಸಂಸ್ಕೃತಿ, ಪರಂಪರೆ, ಮತ್ತು ಅಸ್ಮಿತೆಗೆ ಧಕ್ಕೆ ಬಂದಾಗ ನಾವೆಲ್ಲರೂ ಒಗ್ಗಟ್ಟನ್ನು ಪ್ರದರ್ಶಿಸಬೇಕು. ಇಲ್ಲದೇ ಹೋದರೆ ಮುಂದಿನ ದಿನಗಳಲ್ಲಿ ಬಹು ದೊಡ್ಡ ಪ್ರಮಾಣದಲ್ಲಿ ಅಪಾಯ ವನ್ನು ಎದುರಿಸುವಂತಹ ಕಾಲ ಸೃಷ್ಟಿಯಾಗುತ್ತದೆ. 

ಶಿವಮೊಗ್ಗದ ರಾಗಿಗುಡ್ಡ ಹೋಗಿ,  ಕ್ರೋಧ ಗುಡ್ಡವಾಗಿ ಮಾರ್ಪಟ್ಟಿತು. ಇಂತಹ ಸಮಯದಲ್ಲಿ ಹಿಂದೂಗಳ ಕುಟುಂಬಕ್ಕೆ ನೋವು  ಆದಾಗ ನೋವು ಕೊಟ್ಟವರ ನಡೆಗಳನ್ನು  ಖಂಡಿಸಬೇಕು. ಇಲ್ಲದೇ ಹೋದರೆ ಅವಘಡ ಹೆಚ್ಚು ಆಗಲಿಕ್ಕೆ ದಾರಿಯಾಗುತ್ತದೆ.

ಆದರೆ ಇವತ್ತು ಹಬ್ಬದ ಆಚರಣೆಗೆ ಎಲ್ಲದಕ್ಕೂ ಆದೇಶ ಪತ್ರವನ್ನು ಪಡೆಯುವಂತಹ ಕಾಲಘಟ್ಟದಲ್ಲಿ ನಾವು ಇದ್ದೇವೆ. ಸನಾತನ ಧರ್ಮ ಇನ್ನೊಬ್ಬರಿಗೆ ನೋವು ಕೊಟ್ಟು ಬದುಕನ್ನು ಕಟ್ಟಿಕೊಂಡ ಧರ್ಮವಲ್ಲ. ಇನ್ನೊಬ್ಬರಿಗೆ ಅಂಜುವ ಕುಲವಲ್ಲ. ಸ್ವಾಭಿಮಾನದ ಬದುಕನ್ನು ಕಟ್ಟಿಕೊಂಡು ಬದುಕುತ್ತಿರುವ ಧರ್ಮವಾಗಿದೆ. ಹಿಂದೂ ಧರ್ಮದ ಬಗ್ಗೆ ಅವಹೇಳನ ಪದಗಳನ್ನು ಬಳಸಿ ಮಾತನಾಡಿದವರಿಗೆ ಉತ್ತರ ಕೊಡುವ ಕಾಲ ದೂರವಿಲ್ಲ. ಜೊತೆಗೆ ಧರ್ಮವನ್ನು ಉಳಿಸಲು ಶಾಸ್ತ್ರ ಮತ್ತು ಶಸ್ತ್ರದ ಪರಿಣಿತಿಯನ್ನು ಹೊಂದುವುದು  ಅವಶ್ಯಕತೆಯಿದೆ. 

ಮುಂದೆ ಜೈಕಾರ, ಹಿಂದೆ ಧರ್ಮಕ್ಕೆ ಧಕ್ಕೆ ಉಂಟುಮಾಡುವ ವ್ಯಕ್ತಿಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು.  ಅರಳಿದ ಹೂವು ಬಾಡುತ್ತದೆ.  ಕಟ್ಟಿದ ಮನೆ ಬೀಳುತ್ತದೆ. ಆದರೆ ಹಲವಾರು ಶತಮಾನಗಳಲ್ಲಿ ಹುಟ್ಟಿದ ಸನಾತನ ಧರ್ಮವನ್ನು ಯಾವುದೇ ಕಾರಣಕ್ಕೂ ಅಳಿಯಲು ಬಿಡುವುದು ಸಾಧ್ಯವಿಲ್ಲ.  

ಬಸವಣ್ಣನವರು ಮಾಡಿದ ಒಂದು ಅಂತರ್‌ಜಾತಿ ವಿವಾಹ ಅನೇಕ ವಿಚಾರಗಳ ಕ್ರಾಂತಿ ಸೃಷ್ಟಿ ಮಾಡಿತು. ನಾಡಿನ ಅನೇಕ ಮಠಗಳು ಕೇವಲ ಧರ್ಮವನ್ನು ಕಟ್ಟುವ ಕೆಲಸವನ್ನು ಮಾಡದೇ ಎಲ್ಲವನ್ನೂ ಸರಿ ದಾರಿಯಲ್ಲಿ ನಡೆಯುವ ಹಾಗೆ ಮಾಡುತ್ತಿವೆ.   ಧರ್ಮದ ಜಾಗೃತಿ ಯಾಗಬೇಕಾದರೆ ಮೊದಲು ನಮ್ಮಲ್ಲಿ ಜಾಗೃತಿ ಇರಬೇಕು. ಗಂಡು ಮಕ್ಕಳು ಮದ್ಯಪಾನದ ಚಟವನ್ನು ಮತ್ತು ಮಹಿಳೆಯರು ಧಾರಾವಾಹಿ ನೋಡುವ ಹವ್ಯಾಸವನ್ನು ಬಿಟ್ಟರೆ, ಮಗು ದೇಶದ ಉತ್ತಮ ಪ್ರಜೆಯಾಗುತ್ತದೆ ಎಂದು ಹೇಳಿದರು.

ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ್ಯದ ಸಂಚಾಲಕ ಕೇಶವಮೂರ್ತಿ ದಿಕ್ಸೂಚಿ ಭಾಷಣದಲ್ಲಿ,  ಸನಾತನ ಧರ್ಮವನ್ನು ನಾಶ ಮಾಡುತ್ತೇವೆ ಎಂದು   ಅಯೋಗ್ಯರು ಮಾತ್ರ ಮಾತನಾಡುತ್ತಾರೆ. ನದಿಯ ನೀರಿನ ತರಹ ಹರಿಯುವುದೇ ಸನಾತನ ಧರ್ಮವಾಗಿದೆ. ಹುಟ್ಟು, ಸಾವು ಎರಡೂ ಇಲ್ಲದೆ ಇರುವುದು ಸನಾತನ ಧರ್ಮ, ಸೂರ್ಯ ಚಂದ್ರರಷ್ಟೇ ಶ್ರೇಷ್ಠವಾಗಿದೆ.

ಸನಾತನ ಧರ್ಮಕ್ಕೆ ತನ್ನದೇ ಆದ ಸಂಸ್ಕಾರ, ಸಂಸ್ಕೃತಿ ಇರುವುದರಿಂದ, ಅನ್ನದಾನ ಮಾಡುವ ಸಂಪ್ರದಾಯ, ಸಂಸೃತಿ, ಸಂಸ್ಕಾರ ಹಿಂದೂಗಳಲ್ಲಿ ಮಾತ್ರ ಕಾಣಬ ಹುದು. ಇಂದಿನ ಕೆಲವು ಕೆಟ್ಟ ವ್ಯಕ್ತಿಗಳ ಸ್ವಾರ್ಥದಿಂದ ಹಿಂದೂ ಸಂಪ್ರದಾಯಕ್ಕೆ ದಕ್ಕೆಯಾಗಿದೆ.  ಹಿಂದೂ ಸಮಾಜವನ್ನು ಛಿದ್ರ ಮಾಡಬೇಕು ಎಂದು ಅನೇಕ ಹುನ್ನಾರಗಳನ್ನು ಮಾಡಿ ಜಾತಿಯನ್ನು ಒಡೆಯುವ ಸಾಹಸಕ್ಕೆ ಮುಂದಾಗಿದ್ದಾರೆ. ಇದರ ಬಗ್ಗೆ  ಹಿಂದೂಗಳು ಎಚ್ಚರಿಕೆಯಿಂದ ಒಟ್ಟಿಗೆ ಬದುಕಬೇಕು ಎಂದರು. 

ವಿಶ್ವದ ಹಲವಾರು ದೇಶಗಳಲ್ಲಿ  ಜನರು ಗಣಪತಿ ಆರಾಧನಾ ಮಾಡುತ್ತಾರೆ.   ನಮ್ಮ ಧರ್ಮದ ಬಗ್ಗೆ ಅಭಿಮಾನ ಇಟ್ಟುಕೊಂಡು ಬಾಳಬೇಕು. ಜೊತೆಗೆ ಹಿಂದೂ ಸಮಾಜಕ್ಕೆ ಶಕ್ತಿಯನ್ನು ತುಂಬುವುದಕ್ಕೆ ಹಿರಿಯರು ಮುಂದಾಗಬೇಕಿದೆ ಎಂದರು. 

ಈ ಸಂದರ್ಭದಲ್ಲಿ ಉತ್ಸವ ಸಮಿತಿ  ಅಧ್ಯಕ್ಷ ಎ.ಬಿ. ವಿಜಯಕುಮಾರ್, ಧರಣೇಂದ್ರ, ವೀರೇಶ್ ಅಜ್ಜಣ್ಣನವರ್, ಚಂದನ್ ಮೂರ್ಕಲ್, ದಿನೇಶ್, ಮಹೇಶ್, ಲೋಕೇಶ್ ಮೂರ್ಕಲ್, ರಟ್ಟಿಹಳ್ಳಿ ಮಂಜುನಾಥ್, ಸ್ವಾತಿ ಹನುಮಂತಪ್ಪ, ರುದ್ರಮ್ಮ, ಅಂಬುಜಾ ರಾಜೊಳ್ಳಿ, ರೂಪಾ ಶಶಿಕಾಂತ್, ಸಾವಿತ್ರ, ಸುಮನ್ ಖಮಿತ್ಕರ್,  ರೇಷ್ಮಿ ಮೆಹರ್ವಾಡೆ, ಶಾರದ ಶಾಸ್ತ್ರಿ, ನಳಿನಾ ಇತರರು ಹಾಜರಿದ್ದರು.

error: Content is protected !!