ಬೆಂಗಳೂರಿನ ಸುರೇಶ್ ಗೆಳೆಯರ ತಂಡದವರು ತಮ್ಮ ಗುರುಗಳ ಸ್ಮರಣೆಗಾಗಿ, ಪ್ರತಿ ವರ್ಷ ಕರ್ನಾಟಕ ರಂಗ ಪರಿಷತ್ತು ವತಿಯಿಂದ ಪ್ರತಿ ಜಿಲ್ಲೆಯಲ್ಲೂ ಕಾರ್ಯಕ್ರಮ ಹಮ್ಮಿಕೊಂಡು, ರಂಗಭೂಮಿ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಸೇವೆಗೈದ ಅನನ್ಯ ಪ್ರತಿಭೆಗಳಿಗೆ, `ಸಿ.ಜಿ.ಕೆ.ಪ್ರಶಸ್ತಿ’ ನೀಡಿ ಪುರಸ್ಕರಿಸುತ್ತಾ ಬಂದಿದ್ದಾರೆ. ಅಂತೆಯೇ ದಾವಣಗೆರೆ ಜಿಲ್ಲೆಯಲ್ಲೂ ಪರಿಷತ್ತಿನ ರಾಜ್ಯ ಘಟಕದ ಉಪಾಧ್ಯಕ್ಷರಾದ ಎನ್.ಎಸ್. ರಾಜುರವರು, ಇದೇ ದಿನಾಂಕ 9ರ ಸೋಮವಾರ ನಗರದ ಕು.ವೆಂ.ಪು. ಕನ್ನಡ ಭವನದಲ್ಲಿ ಪರಿಷತ್ತು ಆಯೋಜಿಸಿರುವ ಸಿ.ಜಿ.ಕೆ. ಸ್ಮರಣೋತ್ಸವದಲ್ಲಿ ಸಿ.ಜಿ.ಕೆ. ಪ್ರಶಸ್ತಿಯನ್ನು ನಗರದ ಕ್ರಿಯಾಶೀಲ ಮಹಿಳಾ ಸಾಹಿತಿ, ರಂಗ ಭೂಮಿಯ ನಟಿ ಹಾಗೂ ಸಂಘಟಕರೂ, ಸರಳ ಸೌಜನ್ಯದ ಸಾಕಾರವೆನಿಸಿರುವ ಶ್ರೀಮತಿ ಹೆಚ್. ಕೆ. ಸತ್ಯಭಾಮ ಮಂಜುನಾಥ್ ಅವರಿಗೆ ಪ್ರದಾನ ಮಾಡಲು ತೀರ್ಮಾನಿಸಿರುವುದು ಸಂತಸದ ಸಂಗತಿ.
ಕಲ್ಲಿನಕೋಟೆಯ ಐತಿಹಾಸಿಕ ಜಿಲ್ಲೆ ಚಿತ್ರದುರ್ಗದ ಹಿರಿಯೂರಿನಲ್ಲಿ ಕೃಷಿಕರಾದ ಹೆಚ್ .ವಿ. ಕೃಷ್ಣಪ್ಪ ನಾಯಕ ಮತ್ತು ಜಯಮ್ಮ ದಂಪತಿಗಳ ಪುತ್ರಿಯಾಗಿ 1962 ಆಗಸ್ಟ್ 26ರಂದು ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಸತ್ಯಭಾಮರವರು, ಮೂರನೇ ತರಗತಿಯಲ್ಲಿರುವಾಗಲೇ ಹನುಮಂ ತಾಚಾರ್ ಮಾಸ್ತರ್ರಿಂದ ಕಲಿತ ಹಾಡನ್ನು ಊರಲ್ಲಿ ಆಡುವ ನಾಟಕಗಳಲ್ಲಿ ಗೆಳತಿಯರೊಂದಿಗೆ ಪ್ರಾರ್ಥನೆ ಗೀತೆ ಹಾಡುತ್ತಾ, ಶಾಲಾ ರಜಾ ದಿನಗಳಲ್ಲಿ ಅವ್ವನ ತವರುಮನೆ ಅಜ್ಜಿಯ ಊರಿಗೆ ಹೋದಾಗ, ಗ್ರಾಮದ ಕರಿಯಮ್ಮನ ಗುಡಿ ಕಟ್ಟೆಮೇಲೆ ನಡೆಯುತ್ತಿದ್ದ ನಾಟಕಗಳ ತಾಲೀಮುಗಳನ್ನು ನೋಡುತ್ತಾ, ಪ್ರದರ್ಶನಗಳನ್ನು ವೀಕ್ಷಿಸುತ್ತಾ ಬಂದ ಇವರಿಗೆ ಸಹಜವಾಗಿಯೇ ರಂಗಭೂಮಿಯ ನಂಟು ಒಲಿದು ಬಂದಿತು. ಬಾಲ್ಯದಲ್ಲಿಯೇ ಪತ್ರಿಕೆ ಹಾಗೂ ಮಾಸಿಕ ಪುಸ್ತಕಗಳನ್ನು ಓದುತ್ತಾ ಸಾಹಿತ್ಯಾಸಕ್ತಿಯನ್ನು ಬೆಳೆಸಿಕೊಂಡರು. ಹೀಗೆ ಸಾಹಿತ್ಯ, ಸಂಗೀತ, ರಂಗಭೂಮಿ ಚಟುವಟಿಕೆಗಳಲ್ಲೂ ಕ್ರಿಯಾಶೀಲರಾಗಿ ಉಜ್ವಲ ಪ್ರತಿಭೆಯನ್ನು ರೂಪಿಸಿಕೊಂಡರು.
ವಿದ್ಯಾಭ್ಯಾಸ ಮುಗಿಯುತ್ತಲೇ ಬ್ಯಾಂಕ್ ಉದ್ಯೋಗಿಯಾಗಿ ಕೆಲಸಕ್ಕೆ ಸೇರಿದ ಸತ್ಯಭಾಮ ರವರು, 32 ವರ್ಷಗಳ ಕಾಲ ಬ್ಯಾಂಕ್ ನಲ್ಲಿ ಸೇವೆ ಸಲ್ಲಿಸಿ, ತಮ್ಮ ಐವತ್ತನೇ ವಯಸ್ಸಿನಲ್ಲಿ ದಾವಣಗೆರೆಯ ಕಾರ್ಪೊರೇಷನ್ ಬ್ಯಾಂಕ್ ಅಸಿಸ್ಟೆಂಟ್ ಮ್ಯಾನೇಜರ್ ವೃತ್ತಿಯಿಂದ ಸ್ವಯಂ ನಿವೃತ್ತರಾದರು, ನಂತರ ಸಂಗೀತ, ಸಾಹಿತ್ಯ, ರಂಗಭೂಮಿ, ಸಮಾಜಸೇವಾ ಕಾರ್ಯಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿ ಕೊಂಡರು. ಮನೆತನಕ್ಕೆ ಹಿರಿಯ ಮಗಳಾಗಿ, ಹಿರಿಯ ಸೊಸೆಯಾಗಿ, ಉದ್ಯೋಗಸ್ಥ ಮಹಿಳೆಯಾಗಿ, ಜವಾಬ್ದಾರಿಗಳನ್ನು ನಿರ್ವಹಿಸುತ್ತಾ ಎಲ್ಲರ ಪ್ರೀತಿ, ಗೌರವಕ್ಕೆ ಪಾತ್ರರಾಗಿದ್ದಾರೆ. ರಂಗಭೂಮಿಯ ಸಂಘಟಕರೂ, ನಟಿ ಹಾಗೂ ಗಾಯಕಿಯೂ ಆಗಿರುವ ಸತ್ಯಭಾಮ ರವರು, ಮಕ್ಕಳಿಗೆ ಬೇಸಿಗೆ ಶಿಬಿರ, ಸಂಗೀತ ಶಿಬಿರ, ರಂಗಭೂಮಿ ಶಿಬಿರಗಳನ್ನು ನಡೆಸಿ, ಮಕ್ಕಳಲ್ಲಿ ಸಾಂಸ್ಕೃತಿಕ ಪ್ರಜ್ಞೆಯನ್ನು ಮೂಡಿಸುವಲ್ಲಿ ಯಶಸ್ಸು ಕಂಡಿದ್ದಾರೆ. `ಒನಕೆ ಓಬವ್ವ’, `ಕಿತ್ತೂರು ಚೆನ್ನಮ್ಮ’, `ಹೇಮರೆಡ್ಡಿ ಮಲ್ಲಮ್ಮ’ ಸನ್ನಿವೇಶಗಳನ್ನು ಏಕಪಾತ್ರಾಭಿನಯದ ಮೂಲಕ ಪ್ರದರ್ಶನ ನೀಡಿ, ಉತ್ತಮ ಪ್ರತಿಭೆ ತೋರಿ ಜನ-ಮನ ಸೆಳೆದಿದ್ದಾರೆ.
ಹವ್ಯಾಸಿ ಕಲಾ ತಂಡ, ವನಿತಾ ಭೂಮಿಕಾ ರಂಗವೇದಿಕೆ, ವನಿತಾ ಸಮಾಜ ಕದಳಿ ವೇದಿಕೆ, ಸೇರಿದಂತೆ ಅನೇಕ ಕಲಾ ಸಂಸ್ಥೆಗಳಿಂದ `ಬಾವಿಯಲ್ಲಿ ಬಿದ್ದ ಭವಣೆ’ ನಾಟಕದಲ್ಲಿ ರಾಜಕಾರಣಿ ಪಾತ್ರ, `ಮ್ಯಾಡ್ ಮ್ಯಾಡ್ ಮ್ಯಾಡ್ ವಲ್ಡ್೯’ ನಲ್ಲಿ ಜವಾನ, `ಕಲ್ಲನಕೆರೆ ಮಲ್ಲನಗೌಡ’ ನೃತ್ಯ ರೂಪಕದಲ್ಲಿ ಗೌಡನಾಗಿ `ಎಲ್ಲಾರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ನಾಟಕದಲ್ಲಿ ಪಂಡಿತನಾಗಿ, `ಜ್ಞಾನೋದಯ’ದಲ್ಲಿ ಪ್ರಮುಖ ಪಾತ್ರ, `ಜೀವನ್ಮುಖಿ’ಯಲ್ಲಿ ಅತ್ತೆ, `ಕಿತ್ತೂರು ರಾಣಿ ಚೆನ್ನಮ್ಮ’ ನಾಟಕದಲ್ಲಿ ನಟ, ಮಲ್ಲಸರ್ಜ, ಶಿವಬಸಪ್ಪ ಹೀಗೆ ಅನೇಕ ನಾಟಕಗಳಲ್ಲಿ ಸಮರ್ಪಕವಾಗಿ ಅಭಿನಯಿಸಿ, ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿ ಉತ್ತಮ ರಂಗ ಕಲಾವಿದೆಯಾಗಿದ್ದಾರೆ. ಚುಟುಕು, ಕಥೆ, ಕವನ, ಲೇಖನ, ಸಂಪಾದನೆ, ವಿಮರ್ಶೆ, ಪ್ರಬಂಧ ಇವುಗಳು, ಸಾಹಿತ್ಯ ಕ್ಷೇತ್ರಗಳಲ್ಲಿನ ಇವರ ಬರಹಗಳಾಗಿವೆ. ವ್ಯಕ್ತಿ ಪರಿಚಯ, ಪ್ರಕೃತಿ, ಪರಿಸರ ಇವುಗಳ ಬಗ್ಗೆಯೂ ಹತ್ತಾರು ವರ್ಷಗಳಿಂದ ಬರೆಯುತ್ತಾ ಮುಂಜಾವಿನ ಕವಿಯೆಂದೇ ಪ್ರಚಲಿತರಾಗಿದ್ದಾರೆ.
ಅನೇಕ ಶಾಲಾ- ಕಾಲೇಜು, ಸಂಘ – ಸಂಸ್ಥೆಗಳ ಸಂಪನ್ಮೂಲ ವ್ಯಕ್ತಿಯಾಗಿಯೂ ಸೇವೆ ಸಲ್ಲಿಸುತ್ತಿರುವ ಸತ್ಯಭಾಮ, ವನಿತಾ ಸಾಹಿತ್ಯ ವೇದಿಕೆಯ ಕಾರ್ಯ ದರ್ಶಿಯಾಗಿ, ರಂಗವೇದಿಕೆಯ ಉಪಾಧ್ಯಕ್ಷರಾಗಿ, ಚಿತ್ರದುರ್ಗ-ದಾವಣಗೆರೆ ಜಿಲ್ಲಾ ಬ್ಯಾಂಕ್ ನಿವೃತ್ತರ ಒಕ್ಕೂಟದ ಉಪಾಧ್ಯಕ್ಷರಾಗಿ, ಕಸ್ತೂರ ಬಾ ಸಮಾಜದ ಸಹ- ಕಾರ್ಯದರ್ಶಿ ಯಾಗಿ, ಜಾಗೃತ ಮಹಿಳಾ ಸಂಘ, ಕದಳಿ ಮಹಿಳಾ ವೇದಿಕೆ, ಶರಣ ಸಾಹಿತ್ಯ ಪರಿಷತ್ತು, ಚುಟುಕು ಸಾಹಿತ್ಯ ಪರಿಷತ್ತುಗಳಲ್ಲಿಯೂ ಪದಾಧಿಕಾರಿಯಾಗಿದ್ದೂ ಅಲ್ಲದೆ `ಜಿಲ್ಲೆ ಸಮಾಚಾರ ಪತ್ರಿಕೆ ಬಳಗ’ದ ಅಧ್ಯಕ್ಷರಾಗಿ, ಜಿಲ್ಲಾ ಕ.ಸಾ.ಪ. ಕಾರ್ಯ ಕಾರಿ ಸಮಿತಿ ಸದಸ್ಯರಾಗಿ, ಕನ್ನಡ ಜಾಗೃತಿ ಸಮಿತಿ ಯ ಸದಸ್ಯರಾಗಿ, ಇನ್ನು ಹಲವಾರು ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಅನುಪಮ ಸೇವಾ ಕಾರ್ಯಗಳನ್ನು ಗುರುತಿಸಿ, ಜೆ.ಸಿ.ಐ. ಮಾನವೀಯ ಸೇವೆಗೆ ಮೊದಲ ಸ್ಥಾನ, ಅಂಬೇಡ್ಕರ್ ಫೆಲೋಶಿಪ್, ಬಸವ ಜ್ಯೋತಿ ಪ್ರಶಸ್ತಿ, ದಾವಣಗೆರೆಯ ಮಹಾನಗರ ಪಾಲಿಕೆಯಿಂದ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಜಿಲ್ಲಾಡಳಿತದಿಂದ ರಾಜ್ಯೋತ್ಸವ ಪ್ರಶಸ್ತಿ ,ಜಿಲ್ಲಾ ವನಿತಾ ಸಾಹಿತ್ಯ ಶ್ರೀ ಪ್ರಶಸ್ತಿ, ಎಂ. ಕೆ. ಇಂದಿರಾ ಪ್ರಶಸ್ತಿ, ಸಿದ್ದಗಂಗಾ ಸೇವಾ ಪ್ರಶಸ್ತಿ, ಅಲ್ಲದೇ ಸಾಹಿತ್ಯ ಸಮ್ಮೇಳನ, ಸಾಹಿತ್ಯ ಗೋಷ್ಠಿಗಳಲ್ಲೂ ಅಭಿನಂದಿಸಿ, ಗೌರವಿಸಿದ್ದಾರೆ. ಇವರ ಆರು ಕವನ ಸಂಕಲನಗಳು ಬಿಡುಗಡೆಗೊಂಡಿವೆ. ನಾಟಕ ಪ್ರದರ್ಶನ ಎಲ್ಲೇ ನಡೆದರೂ ನೋಡುವ ಆಸಕ್ತಿ ಇವರದು.
ಸತ್ಯಭಾಮ ಇವರ ಪತಿ ಜಿ. ಆರ್. ಮಂಜುನಾಥ್ ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಹುದ್ದೆ ಯವರೆಗೂ ಸೇವೆ ಸಲ್ಲಿಸಿ ನಿವೃತ್ತರಾದವರು. ಈಗ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಗಂಡು ಮಕ್ಕಳಿಬ್ಬರು ಇಂಜಿನಿಯರಿಂಗ್ ಪದವೀಧರರು, ಹಿರಿಯ ಮಗ ಜಿ.ಎಂ. ರಾಘವೇಂದ್ರ ಪ್ರಸಾದ್ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್, ಕಿರಿಯ ಮಗ ಜಿ.ಎಂ. ರಾಖೇಶ್ ಭಾರತೀಯ ರಿಸರ್ವ್ ಬ್ಯಾಂಕ್ ನಲ್ಲಿ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ, ಇಬ್ಬರು ಸೊಸೆಯರಾದ ಸುಮಾ ಮತ್ತು ಸಿಂಧು ಇಂಜಿನಿಯರ್ ಪದವೀಧರರು, ಮೂರು ವರ್ಷದ ಮೊಮ್ಮಗ ಅನ್ವಯ್ ಇವ ರೊಂದಿಗೆ ಸಂತಸದ ಜೀವನ ಕಂಡಿದ್ದಾರೆ. ಸಂಕೀರ್ಣ ಕ್ಷೇತ್ರಗಳಲ್ಲಿ ಸಮಾಜಮುಖಿಯಾಗಿ ನಿರಂತರ ದುಡಿಯುತ್ತಾ ಬಂದಿರುವ ಸತ್ಯಭಾಮ ರವರಿಗೆ, `ಸಿ .ಜಿ .ಕೆ. ಪ್ರಶಸ್ತಿ’ ಒಲಿದು ಬಂದಿರುವುದು ಅವರ ಸೇವಾ ಕಾರ್ಯಕ್ಕೆ ಸಂದ ಗೌರವವಾಗಿದೆ.
– ಬಸವರಾಜ ಐರಣಿ, ಪತ್ರಕರ್ತರು ದಾವಣಗೆರೆ.