ಏನಿದು ಖಲಿಸ್ತಾನ? ಕೆನಡಾಕ್ಕು ಇದಕ್ಕು ಏನು ಸಂಬಂಧ

ಇತ್ತೀಚೆಗೆ ಭಾರತೀಯ ಮೂಲದ ಕೆನಡಾ ಪ್ರಜೆ ಹರ್ದೀಪ್ ಸಿಂಗ್ ನಿಜ್ಜರ್‌ನನ್ನು ಕೆನಡಾದಲ್ಲಿ ಹತ್ಯೆ ಮಡಾಲಾಗಿದೆ. ಈತ ಕೆನಡಾದಲ್ಲಿ ಸಿಖ್ಖರ ಪ್ರತ್ಯೇಕವಾದಿ ಚಳುವಳಿಯಾದ ಖಲಿಸ್ತಾನದ ಪ್ರಮುಖ ಧ್ವನಿಯಾಗಿದ್ದ. ಹಾಗಾಗಿ ಖಲಿಸ್ತಾನ ಚಳವಳಿಯ ಇತಿಹಾಸವನ್ನೊಮ್ಮೆ ತಿರುವಿ ಹಾಕೋಣ.

ಮುಸ್ಲಿಂ ಲೀಗ್ 1930ರ ಸುಮಾರಿಗೆ ಲಾಹೋರ್ ಸಭೆಯ ನಿರ್ಣಯದಂತೆ ಪಂಜಾಬನ್ನು ಮುಸ್ಲಿಂ ರಾಜ್ಯವೆಂದು ಘೋಷಿಸಬೇಕೆಂದು ಬೇಡಿಕೆಯನ್ನಿಟ್ಟಿತ್ತು. ಅದಕ್ಕುತ್ತರವಾಗಿ ಶಿರೋಮಣಿ ಅಕಾಲಿದಳವು ಹಿಂದೂ ರಾಜ್ಯವಲ್ಲದ ಮತ್ತು ಮುಸ್ಲಿಂ ರಾಜ್ಯವೂ ಅಲ್ಲದ ಪ್ರತ್ಯೇಕವಾದ ಖಲಿಸ್ತಾನದ ಹೆಸರನ್ನು ತೇಲಿಬಿಟ್ಟಿತು.

ಧರ್ಮದ ಆಧಾರದಲ್ಲಿ 1947ರಲ್ಲಿ ದೇಶ ವಿಭಜನೆಯಾದಾಗ ಪಂಜಾಬ್ ಪ್ರಾಂತ್ಯವನ್ನು ಈಸ್ಟ್ ಪಂಜಾಬ್ (ಭಾರತದ ಭಾಗ) ವೆಸ್ಟ್ ಪಂಜಾಬ್ (ಪಾಕಿಸ್ತಾನದ ಭಾಗ)ಗಳನ್ನಾಗಿ ವಿಭಜಿಸಲಾಯಿತು. ಬಹುಪಾಲು ಸಿಖ್ಖರು ಹಾಗೂ ಹಿಂದೂಗಳು ಪಾಕಿಸ್ತಾನದಿಂದ ಭಾರತದ ಪಂಜಾಬ್‌ಗೆ ವಲಸೆ ಬಂದರು. ಹಾಗಾಗಿ ಈಗಿನ ಪಂಜಾಬ್, ಹರಿಯಾಣ ಮತ್ತು ಹಿಮಾಚಲ ಪ್ರದೇಶದಲ್ಲಿ ಸಿಖ್ಖರ ಸಂಖ್ಯೆ ಕ್ರೋಢೀಕೃತಗೊಂಡಿತು.

1955ರ ಸುಮಾರಿಗೆ ಅಕಾಲಿದಳವು ಪಂಜಾಬಿ ಸುಬಾ ಚಳವಳಿಯನ್ನು ಶುರು ಮಾಡಿತು. ಅದರ ಪ್ರಮುಖ ಬೇಡಿಕೆ ಸಾರ್ವಭೌಮ ರಾಜ್ಯ (ಖಲಿಸ್ತಾನ) ಇಲ್ಲವಾದಲ್ಲಿ ಸ್ವಾಯತ್ತ ರಾಜ್ಯ.ಅದಾಗಲೇ ಧರ್ಮದ ಆಧಾರದಿಂದ ದೇಶದ ವಿಭಜನೆಯಾಗಿ ರಕ್ತಪಾತವಾಗಿದ್ದರಿಂದ ಅಂತಹ ಇನ್ನೊಂದು ಕೂಗು ನಮಗೆ ಮಗ್ಗುಲ ಮುಳ್ಳಾಗುತ್ತದೆಂಬ ಅರಿವಾಗಿ ಭಾರತ ಸರ್ಕಾರವು 1966ರಲ್ಲಿ ಪಂಜಾಬ್ ಮರು ಸಂಘಟನೆ ಕಾಯಿದೆಯನ್ನು ಸಂಸತ್ತಿನಲ್ಲಿ ಮಂಡಿಸುತ್ತದೆ. ಅದರಂತೆ ಪಂಜಾಬ್ ಅನ್ನು ಭಾಷೆಯ ಆಧಾರದ ಮೇಲೆ ಪಂಜಾಬ್ ಮತ್ತು ಹರಿಯಾಣ ರಾಜ್ಯಗಳನ್ನಾಗಿ ಮತ್ತು ಪಂಜಾಬ್‌ನ ಕೆಲ ಪ್ರದೇಶಗಳನ್ನು ಹಿಮಾಚಲ ಪ್ರದೇಶಕ್ಕೆ ಸೇರಿಸಲಾಗುತ್ತದೆ. ಆದಾಗ್ಯೂ ಚಂಡೀಘಡವನ್ನು ಪಂಜಾಬ್ ಮತ್ತು ಹರಿಯಾಣ ಎರಡೂ ರಾಜ್ಯದ ರಾಜಧಾನಿಯಾಗಿಯೂ ಮತ್ತು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಲಾಗುತ್ತದೆ. ಇದು ಪಂಜಾಬಿಗರ ಅಸಮಾಧಾನಕ್ಕೆ ಕಾರಣವಾಗುತ್ತದೆ.

1940ರಲ್ಲಿ ಖಲಿಸ್ತಾನದ ಕೂಗು ಶುರುವಾಗಿದ್ದರೂ ಅದಕ್ಕೆ ಬಲವಾದ ಇಂಧನ ಒದಗಿಸಿದ್ದು 1980ರ ಸುಮಾರಿನ ಭಾರತ ಸರ್ಕಾರದ ರವಿ-ಬಿಯಾಸ್  ನದಿಯ ನೀರು ಹಂಚಿಕೆ ನಿರ್ಣಯ. ಇದರ ಅನ್ವಯ ಪಂಜಾಬಿಗೆ ಶೇ. 23 ನೀರು ಮತ್ತು ಉಳಿದದ್ದು ಹರಿಯಾಣ ಮತ್ತು ರಾಜಸ್ಥಾನಕ್ಕೆ ಹಂಚಿಕೆಯಾಗಬೇಕೆಂದು ತೀರ್ಮಾನಿಸಲಾಗುತ್ತದೆ. ಇದು ಸಿಖ್ಖರ ಮತ್ತಷ್ಟು ಅಸಮಾಧಾನಕ್ಕೆ ಗುರಿಯಾಗುತ್ತದೆ.

ಈ ಸಮಯದಲ್ಲಿ ಕಾಂಗ್ರೆಸ್ ಮತ್ತು ಅಕಾಲಿ ದಳದ ಮಧ್ಯೆ ಪಂಜಾಬಿನಲ್ಲಿ ರಾಜಕೀಯ ಪೈಪೋಟಿ ಶುರುವಾಗಿರುತ್ತದೆ. ಏಕೆಂದರೆ ಅಕಾಲಿದಳವು ಸಿಖ್ ಸಮುದಾಯದ ಪ್ರತಿನಿಧಿಯಾಗಿ ಗುರುತಿಸಿಕೊಂಡಿರುತ್ತದೆ.

ಜರ್ನೈಲ್ ಸಿಂಗ್ ಛಿಂದ್ರನ್‌ವಾಲೆ ಈ ಹೊತ್ತಿನಲ್ಲಿ ಖಲಿಸ್ತಾನ್ ಚಳವಳಿಯನ್ನು ಮುನ್ನಡೆಸಲು ಶುರು ಮಾಡು ತ್ತಾನೆ. ಕಾಂಗ್ರೆಸ್ ಇವನನ್ನು ಶುರುವಿನಲ್ಲಿ ಅಕಾಲಿ ದಳದ ವಿರುದ್ಧವಾಗಿ ಉಪಯೋಗಿಸಿ ರುತ್ತದೆ. ಆದರೆ ಖಲಿಸ್ತಾನದ ಕಲ್ಪನೆಯಿಂದ ಉತ್ತೇಜಿತಗೊಂಡಿದ್ದ ಈತ ಭಾರತ ಸರ್ಕಾರದ ವಿರುದ್ಧವಾಗಿಯೇ ತಿರುಗಿ ಬೀಳುತ್ತಾನೆ.

ಬಾಂಗ್ಲಾದೇಶದ ವಿಭಜನೆಗೆ ಪ್ರತೀಕಾರವಾಗಿ ಪಾಕಿಸ್ತಾನದ ಐಎಸ್‌ಐ ಇವನಿಗೆ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡುತ್ತದೆ. ಪಂಜಾಬ್ ಪ್ರತ್ಯೇಕತೆಯ ಕೂಗು ಹಿಂದೆಂದಿಗಿಂತಲೂ ಜೋರಾಗಿ ಕೇಳಿಸಲಾರಂಭಿಸುತ್ತದೆ ಮತ್ತು ಭಿಂದ್ರನ್‌ವಾಲೆ ಖಲಿಸ್ತಾನ ಬೆಂಬಲಿಗರ ಕಣ್ಣಿಗೆ ಹೀರೋ ಆಗಲಾರಂಭಿಸುತ್ತಾನೆ.

ಆಪರೇಷನ್ ಬ್ಲೂಸ್ಟಾರ್

1984 ಜನವರಿ ಮತ್ತು ಜೂನ್ ತಿಂಗಳ ಮಧ್ಯೆ ಪಂಜಾಬ್‌ನಾದ್ಯಂತ ಸಾವಿರಾರು ದಂಗೆಗಳಾಗುತ್ತವೆ. ಕೊಲೆ, ಸುಲಿಗೆ, ದರೋಡೆ, ಕಿಡ್ನಾಪ್‌ನಂತಹ ಪ್ರಸಂಗಗಳು ದಿನಚರಿಗಳಾಗಿರುತ್ತವೆ. ಮತ್ತು ಅದೆಲ್ಲದಕ್ಕೂ ಗುರುದ್ವಾರ ಗಳು ಆಶ್ರಯತಾಣಗಳಾಗುತ್ತಿವೆ ಎಂದು ಸರ್ಕಾರಕ್ಕೆ ಗೊತ್ತಿದ್ದರೂ ಅವು ಸಿಖ್ಖರ ಪವಿತ್ರ ಸ್ಥಾನಗಳಾಗಿರುವು ದರಿಂದ ಗುರುದ್ವಾರಗಳ ಮೇಲೆ ದಾಳಿ ಮಾಡಬಾರ ದೆಂಬುದಾಗಿ ಸರ್ಕಾರ ನಿರ್ಣಯಿಸುತ್ತದೆ ಮತ್ತು ಈ ಎಲ್ಲಾ ಗಲಭೆಗಳ ಹಿಂದೆ ಭಿಂದ್ರನ್‌ವಾಲೆಯ ಕೈವಾಡ ಇರುತ್ತದೆ. ಈ ಎಲ್ಲಾ ಅವ್ಯವಸ್ಥೆಗಳಿಂದಾಗಿ ಕೇಂದ್ರ ಸರ್ಕಾರ ಪಂಬಾಜಿನ ಮೇಲೆ ಎಮರ್ಜೆನ್ಸಿಯನ್ನು ಹಾಕುತ್ತದೆ.

ಇಂತಹ ಸಮಯದಲ್ಲಿ ಭಿಂದ್ರನ್‌ವಾಲೆ ಅಮೃತಸರದ ಸ್ವರ್ಣಮಂದಿರದಲ್ಲಿ ಆಶ್ರಯ ಪಡೆದಿರುತ್ತಾನೆ. ಪಂಜಾಬ್‌ನಾದ್ಯಂತ ಅಸಂಖ್ಯಾತ ಹಿಂಸಾಚಾರ ಪ್ರಕರಣಗಳಾಗುತ್ತಿರುವುದರಿಂದಲೂ ಮತ್ತು ಭಿಂದ್ರನ್‌ವಾಲೆ ಸ್ವರ್ಣಮಂದಿರವನ್ನು ಶಸ್ತ್ರಾಗಾರವನ್ನಾಗಿ ಮಾಡಿಕೊಳ್ಳುವ ಸಾಧ್ಯತೆಯಿಂದ `ಆಪರೇಷನ್ ಬ್ಲೂಸ್ಟಾರ್’ ಕಾರ್ಯಾಚರಣೆಗೆ ಇಂದಿರಾಗಾಂಧಿ ಸಮ್ಮತಿಯನ್ನು ಕೊಡುತ್ತಾರೆ. ಸರ್ಕಾರಿ ದಾಖಲೆಗಳ ಪ್ರಕಾರ ಈ ಕಾರ್ಯಾಚರಣೆಯಲ್ಲಿ 80ಕ್ಕೂ ಅಧಿಕ ಸೈನಿಕರು ಹುತಾತ್ಮರಾಗುತ್ತಾರೆ. ಆದರೆ 700ಕ್ಕೂ ಅಧಿಕ ಸೈನಿಕರು ಮೃತರಾದರೆಂದು ಹಾಗೂ 500ಕ್ಕೂ ಅಧಿಕ ಉಗ್ರಗಾಮಿಗಳು ಹತರಾದರೆಂದು ಅಧಿಕೃತ ಮೂಲಗಳು ಇದನ್ನು ಬಹಿರಂಗಪಡಿಸಿವೆ.

ಇದರ ಪ್ರತೀಕಾರವಾಗಿ 1984 ಅಕ್ಟೋಬರ್ 31ರಂದು ಇಂದಿರಾ ಗಾಂಧಿಯವರನ್ನು ಅವರ ಸಿಖ್ ಅಂಗರಕ್ಷಕರಾದ ಸತ್ವಂತ್ ಸಿಂಗ್ ಮತ್ತು ಬಿಯಾಂತ್ ಸಿಂಗ್ ಹತ್ಯೆ ಮಾಡುತ್ತಾರೆ. ಇದು ಉತ್ತರ ಭಾರತದಾದ್ಯಂತ ದಂಗೆಗೆ ಕಾರಣವಾಗುತ್ತದೆ ಮತ್ತು ಈ ದಂಗೆಗೆ ಕಾಂಗ್ರೆಸ್‌ನ ಪ್ರಚೋದನೆಯೇ ಕಾರಣವೆಂದು ಆರೋಪಿಸಲಾಗುತ್ತದೆ.

ಇದರ ನಂತರ ಖಲಿಸ್ತಾನ ಲಿಬರೇಷನ್ ಫೋರ್ಸ್, ಖಲಿಸ್ತಾನಿ ಕಮ್ಯಾಂಡೋ, ಫೋರ್ಸ್ ಹಾಗೂ ಇತರರು ಖಲಿಸ್ತಾನದ ಪರವಾಗಿ ಗುರುತಿಸಿಕೊಳ್ಳುತ್ತಾರೆ. ಆದರೆ ಪಂಜಾಬ್ ಪೊಲೀಸರು 1990 ರ ಸುಮಾರಿಗೆ ನಿಧಾನವಾಗಿ ಇದರ ಸದ್ದಡಗಿಸುವ ಕೆಲಸವನ್ನು ಮಾಡುತ್ತಾರೆ.

ಖಲಿಸ್ತಾನಿ ಚಳವಳಿ ಈಗಿನ ಪರಿಸ್ಥಿತಿ

ಈಗಿನ ಖಲಿಸ್ತಾನಿ ಚಳವಳಿಗೆ ಪಂಜಾಬಿನಲ್ಲಿ ಮೊದಲಿನಷ್ಟು ಸೆಳೆತವಾಗಲೀ, ಆಕರ್ಷಣೆಯಾಗಲೀ ಉಳಿದಿಲ್ಲ. ಆದರೆ ಅದಕ್ಕೆ ಸೈದ್ಧಾಂತಿಕವಾಗಿ ಮತ್ತು ಆರ್ಥಿಕವಾಗಿ ಕೆನಡಾ, ಯುಕೆ ಮತ್ತು ಅಮೆರಿಕಾದಲ್ಲಿರುವ ಬಹಳಷ್ಟು ಸಿಖ್ಖರ ಬೆಂಬಲವಿದೆ. ಐಎಸ್ಐ ಕೂಡಾ ಇದಕ್ಕೆ ಉತ್ತೇಜನ ಕೊಡುತ್ತಿದೆ.

ಕೆನಡಕ್ಕೂ ಖಲಿಸ್ತಾನಕ್ಕೂ ಏನು ಸಂಬಂಧ ?

ಭಾರತದಲ್ಲಿರುವ ಸಿಖ್ಖರ ಜನಸಂಖ್ಯೆ ಸರಿಸುಮಾರು 2 ಕೋಟಿ ಹಾಗೂ ಶೇಕಡಾವಾರು 1.7%. ಕೆನಡಾದ ಪ್ರಸ್ತುತ ಜನಸಂಖ್ಯೆ 3.8 ಕೋಟಿ ಮತ್ತು ಅದರಲ್ಲಿ ಸಿಖ್ಖರ ಸಂಖ್ಯೆ ಸುಮಾರು 8 ಲಕ್ಷ ಹಾಗೂ ಶೇಕಡಾವಾರು 2.2%. ಕ್ರಿಶ್ಚಿಯನ್, ಮುಸ್ಲಿಂ ಹಾಗೂ ಹಿಂದೂಗಳಂತಹ ಸಿಖ್ಖರು ಕೆನಡಾದಲ್ಲಿ ನಾಲ್ಕನೆಯ ಅತಿದೊಡ್ಡ ಸಂಖ್ಯೆಯಲ್ಲಿದ್ದಾರೆ. ಇಂಗ್ಲಿಷ್ ಮತ್ತು ಫ್ರೆಂಚಿನ ಬಳಿಕ ಕೆನಡಾದಲ್ಲಿ ಪಂಜಾಬಿ ಜನಪ್ರಿಯ ಭಾಷೆ. 1980ರ ನಂತರ ಕೆನಡಾದಲ್ಲಿ ಸಿಖ್ಖರ ಜನಸಂಖ್ಯೆ ಏರುಗತಿಯನ್ನು ಕಂಡಿತು. ಕಟ್ಟಡ ನಿರ್ಮಾಣ, ಬ್ಯಾಂಕಿಂಗ್, ಸಾರಿಗೆ, ಹೋಟೆಲ್ ಮತ್ತು ಪೆಟ್ರೋಲ್ ಬಂಕ್‌ ಉದ್ದಿಮೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ರಾಜಕೀಯವಾಗಿ ನೋಡುವುದಾದರೆ ಕೆನಡಾದ ಒಟ್ಟು 338 ಎಂ.ಪಿ.ಗಳಲ್ಲಿ 18 ಜನರು ಸಿಖ್ಖರು. 8 ಕ್ಷೇತ್ರಗಳು ಇವರ ನಿಯಂತ್ರಣದಲ್ಲಿದ್ದರೆ 15 ಕ್ಷೇತ್ರಗಳ ಫಲಿತಾಂಶವನ್ನು ಇವರು ನಿಯಂತ್ರಿಸಬಲ್ಲರು. ಹಾಗಾಗಿ ಕೆನಡಾದ ಎಲ್ಲಾ ರಾಜಕೀಯ ಪಕ್ಷಗಳು ಇವರನ್ನು ಖುಷಿಯಾಗಿಡಲು ಪ್ರಯತ್ನಿಸುತ್ತಿವೆ.

ಮೇಲೆ ತೋರಿಸಿದ ಸಂಖ್ಯೆಗಿಂತ ಬಲಿಷ್ಟವಾಗಿ ಸಿಖ್ಖರು ಕೆನಡಾದಲ್ಲಿ ಆಯೋಜಿತವಾಗಿದ್ದಾರೆ. ಗುರುದ್ವಾರಗಳ ಮೂಲಕ ಧನಸಹಾಯ ಮಾಡುತ್ತಾರೆ. ಎಲೆಕ್ಷನ್ ಸಮಯದಲ್ಲಿ ಪ್ರಚಾರಕ್ಕೆ ಮಾನವ ಸಂಪನ್ಮೂಲ ಹೇರಳವಾಗಿ ಸಿಗುತ್ತದೆ.

ಕೆನಡಾದ ಈಗಿನ ಆಡಳಿತಾರಾಢ ಲಿಬರಲ್ ಪಾರ್ಟಿಯ ಪ್ರಧಾನಿ ಜಸ್ಟಿನ್ ಟ್ರೂಡೋ ಅಧಿಕಾರದಲ್ಲಿರುವುದು New Democratic Party (NDA) ಸಹಾಯದಿಂದ ಮತ್ತು (NDA) ಸರ್ಕಾರದ ಅಂಗಪಕ್ಷ. NDA 2021ರ ಚುನಾವಣೆಯನ್ನು ಎದುರಿಸಿದ್ದು, ಜಗಮೀತ್ ಸಿಂಗ್ ನೇತೃತ್ವದಲ್ಲಿ. ಪ್ರಸ್ತುತ ಟ್ರೂಡೋ ಸರ್ಕಾರ ಬದುಕಿರುವುದು ಜಗಮೀತ್ ಸಿಂಗ್ ಬೆಂಬಲದಿಂದ. ಜಗಮೀತ್ ಸಿಂಗ್ ಖಲಿಸ್ತಾನಿ ಪರ ಸಹಾನುಭೂತಿ ಮತ್ತು ಭಾರತ ವಿರೋಧಿ ನೀತಿ ಹೊಂದಿರುವವ. ಈ ಜಗಮೀತ್ ಸಿಂಗ್‌ಗೆ 2013ರಲ್ಲಿ ಭಾರತದ ವೀಸಾ ನಿರಾಕರಿಸಲಾಗಿತ್ತು.

ಸಂಬಂಧ ಹಳಸಲು ಕಾರಣಗಳು

2018ರಲ್ಲಿ ಭಾರತಕ್ಕೆ ಭೇಟಿ ಕೊಟ್ಟ ನಿಯೋಗದಲ್ಲಿ ಭಾರತೀಯ ಮೂಲದ ಜಸ್ವಾಲ್ ಅತ್ವಾಲ್ ಇದ್ದ. ಈತ ISYF (Internation Sikh Youth Federation)ನಲ್ಲಿ ಗುರುತಿಸಿಕೊಂಡಿದ್ದ ಮತ್ತು ISYF ಸಂಘಟನೆಯನ್ನು ಉಗ್ರ ಸಂಘಟನೆಯೆಂದು ಭಾರತ ಸರ್ಕಾರ ನಿಷೇಧಿಸಿದೆ. ಭಾರತ ಸರ್ಕಾರದ ಒತ್ತಡದಿಂದ ಈತ ತನ್ನ ನಿಯೋಗದ ಪ್ರತಿನಿಧಿಯಲ್ಲವೆಂದೂ, ಆತನಿಗೂ, ತನಗೂ ಸಂಬಂಧವಿಲ್ಲವೆಂದೂ ಕೆನಡಾ ಸ್ಪಷ್ಟೀಕರಣ ಕೊಟ್ಟು ಮುಜುಗರದಿಂದ ಪಾರಾಯಿತು. ಆದರೆ ಆತ ಕೆನಡಾ ಸರ್ಕಾರಕ್ಕೆ ಆತ್ಮೀಯನೆಂದು ಜಗಜ್ಜಾಹೀರಾಯಿತು.

ಜಸ್ಟಿನ್ ಟ್ರೋಡೋ ಇತ್ತೀಚೆಗೆ ಹತ್ಯೆಯಾದ ಹರ್ದೀಪ್ ಸಿಂಗ್ ನಿಜ್ಜರ್ ಪ್ರಕರಣದಲ್ಲಿ ಭಾರತದ ಕೈವಾಡವಿದೆ ಎಂದು ಆರೋಪಿಸಿದರು ಮತ್ತು ಆ ಆರೋಪಕ್ಕೆ ತಮ್ಮ ಬಳಿ ಸಾಕ್ಷಿಗಳಿವೆ ಎಂದು ಹೇಳಿಕೊಂಡಿತು. ಆದರೆ ಭಾರತ ನಿಜ್ಜರ್‌ನನ್ನು ಉಗ್ರಗಾಮಿಯೆಂದು ಘೋಷಿಸಿಯಾಗಿತ್ತು. ನಿಜ್ಜರ್‌ಗೂ ಮುನ್ನ ಇಬ್ಬರು ಖಲಿಸ್ತಾನಿ ಬೆಂಬಲಿಗರ ಹತ್ಯೆಯಾಗಿತ್ತು ಮತ್ತು ತಾನು ಹಿಟ್‌ಲಿಸ್ಟ್‌ನಲ್ಲಿದ್ದೇನೆಂದು ನಿಜ್ಜರ್‌ಗೆ ಆಗಲೇ ಮನವರಿಕೆಯಾಗಿತ್ತು. ಮೇ ತಿಂಗಳಿನಲ್ಲಿ ಲಾಹೋರ್‌ನಲ್ಲಿ ವಾಸವಾಗಿದ್ದ ಪರಂಜೀತ್ ಸಿಂಗ್‌ನನ್ನು ಗುಂಡಿಟ್ಟು ಹತ್ಯೆಗೈಯಲಾಗಿತ್ತು. ಜೂನ್ 15ರಂದು ಬರ್ಮಿಂಗ್ ಹ್ಯಾಮ್‌ನ ಆಸ್ಪತ್ರೆಯಲ್ಲಿ ಇನ್ನೊಬ್ಬ ತೀವ್ರಗಾಮಿ ಅವತಾರ್ ಸಿಂಗ್ ಕೂಡಾ ಮೃತಪಟ್ಟಿದ್ದ. ಅವನ ಹಿಂಬಾಲಕರ ಪ್ರಕಾರ ಅವನಿಗೆ ವಿಷ ಉಣಿಸಿ ಹತ್ಯೆಗೈಯ್ಯಲಾಗಿತ್ತು. ಅವತಾರ್ ಸಿಂಗ್ ಮಾರ್ಚ್ 2023ರಲ್ಲಿ ಭಾರತದ ಹೈ ಕಮೀಷನರ್ ಕಛೇರಿಯ ಮುಂದಿನ ಭಾರತದ ಧ್ವಜವನ್ನು ಕಿತ್ತೆಸದಿದ್ದ.

ಹಾಗಾಗಿ ಟ್ರುಡೋ ನೇರವಾಗಿ ನಿಜ್ಜರ್ ಪ್ರಕರಣದಲ್ಲಿ ತನ್ನ ಮತ ಬ್ಯಾಂಕ್ ಗಟ್ಟಿಗೊಳಿಸಲು ಮಿತ್ರ ಪಕ್ಷವನ್ನು ಓಲೈಸಲು ಭಾರತದ ಮೇಲೆ ಆರೋಪ ಹೊರಿಸಿದ್ದಾರೆ. ಸ್ವತಃ ಇದನ್ನು ಕೆನಡಾದ ವಿರೋಧ ಪಕ್ಷವಾದ ಕನ್ಸರ್ವೇಟಿವ್ ಪಕ್ಷ ವಿರೋಧಿಸಿದೆ. ಟ್ರುಡೋ ಹೇಳಿಕೆ ಭಾರತ ಮತ್ತು ಕೆನಡಾದ ರಾಜತಾಂತ್ರಿಕ ಸಂಬಂಧವನ್ನು ನಿಲುಗಡೆಗೊಳಿಸಿದೆ. ಅಮೆರಿಕಾ, ಯುಕೆ ಮತ್ತು ಆಸ್ಟ್ರೇಲಿಯಾ ದೇಶಗಳು ಕೆನಡಾದ ಈ ಹೇಳಿಕೆಯಿಂದ ಅಂತರವನ್ನು ಕಾಯ್ದು ಕೊಂಡಿವೆ ಮತ್ತು  ಈ ವಿಷಯದಲ್ಲಿ ತಾನು ಭಾಗವಹಿಸುವುದಿಲ್ಲವೆಂದು ಪರೋಕ್ಷವಾಗಿ ಹೇಳಿದೆ. ಏಕೆಂದರೆ ಈ ಎಲ್ಲಾ ದೇಶಗಳಿಗೆ ಚೀನಾಗೆ ಚೆಕ್‌ಮೇಟ್ ಕೊಡಲು ಬೇಕಾಗಿರುವುದು ಕೆನಡಾವಲ್ಲ. ಬದಲಿಗೆ ಭಾರತ!


ಏನಿದು ಖಲಿಸ್ತಾನ? ಕೆನಡಾಕ್ಕು ಇದಕ್ಕು ಏನು ಸಂಬಂಧ - Janathavani– ಅಖಿನ್ ಹೆಚ್.ಎಸ್., ಮರಬನಹಳ್ಳಿ

error: Content is protected !!