ಪಕ್ಷ ಮಾಸ : ಮಾನವನನ್ನು ಎಚ್ಚರಿಸುವ ಮಾಸ

ಪಕ್ಷ ಮಾಸ : ಮಾನವನನ್ನು ಎಚ್ಚರಿಸುವ ಮಾಸ

ಪಕ್ಷ ಮಾಸ ಎಂದರೆ ಪಿತೃಗಳನ್ನು ನೆನೆಯುವ, ಅವರನ್ನು ಸಂತೈ ಸುವ, ಅವರ ಒಳಗಿರುವ ಭಗವಂತನನ್ನು ಪೂಜಿಸುವ ಮಾಸ. ನಮ್ಮ ಮೇಲೆ ಇರುವ ಮೂರು ಋಣಗಳಲ್ಲಿ, ಪಿತೃ ಋಣ ಬಹು ಮುಖ್ಯ. ಇದನ್ನು ತೀರಿಸಲು ಅವರು ಬದು ಕಿರುವಾಗ ಅವರನ್ನು ಚೆನ್ನಾಗಿ ನೋಡಿಕೊಳ್ಳ ಬೇಕು. ಈಗಿನ ಕಾಲದಲ್ಲಿ ತಂದೆ-ತಾಯಿ ಯನ್ನು ಕಡೆಯ ತನಕ ನೋಡಿಕೊಳ್ಳುವ ಮಕ್ಕಳೇ ಅಪರೂಪ. ಏಕೆಂದರೆ ವಿಶ್ವದ ಮೂಲೆ ಮೂಲೆಗಳಲ್ಲಿ ಕೆಲಸಕ್ಕೆ ಹೋಗುವ ವರ ತಂದೆ-ತಾಯಿ ಗಳು ಭಾರತದಲ್ಲೇ ಇರುತ್ತಾರೆ.ಅವರ ಗತಿ ಏನು ? ಅಷ್ಟೇ ಅಲ್ಲ ಇಲ್ಲೇ ಇರುವ ಮಕ್ಕಳು, ಸೊಸೆಯಂದಿರು ಅವರನ್ನು ದೂರ ಮಾಡುವುದು! ಮನಸ್ಸಿಗೆ ನೋವಾಗುವಂತೆ ನಡೆದುಕೊಂಡು, ಪ್ರತಿದಿನ ನರಕಯಾತನೆ ಅನುಭವಿಸುವಂತೆ ಮಾಡುವುದು! ಆಸ್ತಿ ಜಗಳಗಳಾಡಿ ಮಾತು ಬಿಡುವುದು! ಸರ್ವೇಸಾಮಾನ್ಯ. ತಂದೆ-ತಾಯಿಯ ಬಗ್ಗೆ ಎಂದೂ ಯಾರೂ ಯೋಚಿಸರು. ದುಡ್ಡು ಐಷಾರಾಮಿ  ಜೀವನವೇ ಮುಖ್ಯವಾಗುತ್ತದೆ! ಮುಂದೆ ತಮ್ಮ ಮಕ್ಕಳು ತಮ್ಮನ್ನು ಹೀಗೇ ಕಾಣಬಹುದು ಎಂದು ಯೋಚಿಸರು!

ಎರಡನೆಯದಾಗಿ ಅವರು ತೀರಿಕೊಂಡಾಗ ಅನ್ನದಾನ ಮಾಡಬೇಕು. ಮೂರನೆಯದಾಗಿ ಅವರಿಗಾಗಿ ಗಯಾ ಮುಂತಾದ ಕ್ಷೇತ್ರಗಳಲ್ಲಿ ತರ್ಪಣ ಕೊಡಬೇಕು. ಪಿಂಡ ಪ್ರದಾನ ಮಾಡಬೇಕು.

ಪಿತೃ ಋಣ ತೀರಿಸದ ಕಾರಣವೇ ಈಗ ಕಂಡುಬರುತ್ತಿರುವ ಅಶಾಂತಿ, ಅತೃಪ್ತಿ, ಆತಂಕ ಯಾವ ಕೆಲಸವೂ ಸರಿಯಾಗಿ ಆಗದಿರುವುದು, ಮಕ್ಕಳಾಗದಿರುವುದು ಎಲ್ಲಾ ಕಷ್ಟಗಳಿಗೂ ಕಾರಣವಿರಬಹುದು.

ಈ ಪಿತೃ ಪಕ್ಷದಲ್ಲಿ ಪಿತೃ ದೇವತೆಗಳು  ಒಟ್ಟಾರೆ ಮಾನವರನ್ನು ಅನುಗ್ರಹಿಸಲು ಭೂಮಿಗೆ ಬರುತ್ತಾರೆ ಎಂಬ ನಂಬಿಕೆ ಇದೆ. ಅವರನ್ನು ಮೆಚ್ಚಿಸಿದರೆ ಎಲ್ಲಾ ಇಷ್ಟಾರ್ಥ ಪೂರೈಸಿ ಸುಖ, ಸಂತೋಷ, ನೆಮ್ಮದಿ, ಶಾಂತಿ ಕೊಡುತ್ತಾರೆ ಎಂಬ ನಂಬಿಕೆ ಇದೆ.

ಕೇವಲ ತಂದೆ-ತಾಯಿ ಅಲ್ಲದೆ ಅಗಲಿದ ಎಲ್ಲ ಬಂಧು ಬಾಂಧವರನ್ನು ನೆನೆಸಿಕೊಂಡು, ಅವರ ಅಂತರ್ಗತವಾಗಿ ಇರುವಂತಹ ದೇವತೆಗಳಾದ ವಸುಗಳು, ರುದ್ರರು, ಆದಿತ್ಯರಿಗೆ ಮತ್ತು ಆ ದೇವತೆಗಳೊಳಗಿರುವಂತಹ ಭಗವಂತನಿಗೆ ಪೂಜೆ ಸಲ್ಲಿಸುವುದೇ ಪಿತೃ ಕಾರ್ಯ. ಇದಕ್ಕೆ ಭಾದ್ರಪದ ಮಾಸದ ಕೃಷ್ಣ ಪಕ್ಷದ 15 ದಿನ ಬಹಳ ಶ್ರೇಷ್ಠ. ಅದರಲ್ಲೂ ಕಡೆಯ ದಿನವಾದ ಮಹಾಲಯ ಅಮಾವಾಸ್ಯೆಯಂದು ಜಾತಿ, ಮತ ಭೇದವಿಲ್ಲದಂತೆ ಪ್ರತಿಯೊಬ್ಬರೂ ತಮ್ಮ ಹಿರಿಯರ ಪೂಜೆಯನ್ನು ಮಾಡುತ್ತಾರೆ. ಎಲ್ಲ ಜನಾಂಗದ ಮಾನವರು ತಮ್ಮ ಹಿರಿಯರನ್ನು ನೆನೆಸಿಕೊಳ್ಳುತ್ತಾರೆ.

ಈ ಪಿತೃಪಕ್ಷ ಎಲ್ಲ ಮಾನವರಿಗೂ ಕಡೆಗೊಂದು ದಿನ ತಾನು ಈ ಲೋಕವನ್ನು ಬಿಟ್ಟು ಹೋಗಬೇಕು ಎಂಬುದನ್ನು ಜ್ಞಾಪಿ ಸುತ್ತದೆ. ಎಷ್ಟೋ ಜನ ತನ್ನ ಕಣ್ಣ ಮುಂದೆ ಹೋಗುತ್ತಿದ್ದರೂ ತಾನು ಮಾತ್ರ ಶಾಶ್ವತ ಎಂದು ನಂಬಿ ಮೆರೆಯುವ ಮಾನವನ ಅಹಂಕಾರ. ತನ್ನ ಹಾಗೆ ಬದುಕಿದ್ದ ಆದರೆ ಈಗ ಇಲ್ಲದ ಪಿತೃಗಳ ನೆನಪಿನಿಂದ ಸ್ವಲ್ಪವಾದರೂ ಕುಸಿಯಬೇಕು. ಆತನ ಮನಸ್ಸು ಪರಮಾತ್ಮನ ಕಡೆ ತಿರುಗಬೇಕು. ವಿಷಯ ಭೋಗದ ಸುಖಗಳನ್ನು ಬಿಟ್ಟು ವೈರಾಗ್ಯ ಬರಬೇಕು ಎಂಬುದು ಇದರ ಒಳಗಿನ ಉದ್ದೇಶವಿರಬಹುದು.

ಕೃಷ್ಣ ಭಗವದ್ಗೀತೆಯ ಎರಡನೇ ಅಧ್ಯಾಯದಲ್ಲಿ ಬಟ್ಟೆ ಬದಲಿಸುವ ಹಾಗೆ ಮನುಷ್ಯ ದೇಹವನ್ನು ಬದಲಿಸಿಕೊಂಡು ಆತ್ಮ ಒಂದು ದೇಹದಿಂದ ಮತ್ತೊಂದು ದೇಹಕ್ಕೆ ಪ್ರವೇಶ ಮಾಡುತ್ತದೆ ಎಂದು ಹೇಳಿ, ಆತ್ಮದ ನಿರಂತರತೆ ಮತ್ತು ದೇಹದ ಅಸ್ಥಿರತೆಯ ಬಗ್ಗೆ ತಿಳಿಸುತ್ತಾನೆ. ಮತ್ತೆ 15ನೇ ಅಧ್ಯಾಯದಲ್ಲಿ ಕ್ಷರವಾದದ್ದು ದೇಹ ಅಕ್ಷರ ವಾದದ್ದು ಆತ್ಮ ಎಂಬುದನ್ನು ತಿಳಿಸುತ್ತಾನೆ.

ನಾನು ನಾನು ಎಂದು ನಾವು ಯಾವುದನ್ನು ಸಂಬೋಧಿಸುತ್ತೇವೋ ಅದು ನಮ್ಮ ಒಳಗಿರು ವಂತಹ ಆತ್ಮವಾದ್ದರಿಂದ ನಮಗೂ ಮರಣ ಸಂಭವಿಸುತ್ತದೆ ಎಂಬುದನ್ನು ನಾವು ಎಂದೂ ನಂಬುವುದಿಲ್ಲ, ಒಪ್ಪುವುದಿಲ್ಲ. ಏಕೆಂದರೆ ಈ ಆತ್ಮಕ್ಕೆ ಸಾವಿಲ್ಲ. ಆದರೆ ತಪ್ಪೇನಾಗುತ್ತದೆ ಎಂದರೆ ಈ ದೇಹವೇ ನಾನು ಎಂದು ನಾವು ತಿಳಿದುಕೊಂಡು ಬಿಡುತ್ತೇವೆ. ದೇಹಕ್ಕೆ ಸಾವಿಲ್ಲ ಎನ್ನುವುದು ಸುಳ್ಳು.

ನಮ್ಮ ಸುಖ ಭೋಗಗಳು ಎಲ್ಲವೂ ಈ ದೇಹಕ್ಕಾಗಿಯೇ ಮಾಡುತ್ತಿರುತ್ತೇವೆ. ದೇಹ ವಯಸ್ಸಾಗುತ್ತಾ ತನ್ನ ಚೈತನ್ಯ, ಶಕ್ತಿ, ರೂಪ ಎಲ್ಲವನ್ನೂ ಕಳೆದುಕೊಳ್ಳುತ್ತದೆ. ಆದರೂ ಆಸೆ, ಚಪಲ ಕಡಿಮೆಯಾಗುವುದಿಲ್ಲ. ಆದ್ದರಿಂದಲೇ ಈ 15 ದಿನ ಪಕ್ಷ ಮಾಸದಲ್ಲಿ ಪಿತೃಗಳನ್ನು ನೆನೆಯುವ ಸಂದರ್ಭದಲ್ಲಿ ಯಾವ ಶುಭ ಕಾರ್ಯಗಳನ್ನೂ ಮಾಡುವು ದಿಲ್ಲ. ಮನಸ್ಸನ್ನು ಕೇವಲ ಆ ಹಿರಿಯರ ಸಂತೃಪ್ತಿಗೆ ಮೀಸಲಿಡುವುದರ ಜೊತೆಗೆ, ನಮ್ಮ ಅಸ್ತಿತ್ವದ ಬಗ್ಗೆಯೂ ನಾವು ತಿಳಿದು ಕೊಳ್ಳಬೇಕಾಗುತ್ತದೆ. ಈ ದೇಹವನ್ನೇ ನಾವು ಬಿಟ್ಟು ಹೋಗುತ್ತೇವೆ ಎಂಬುದು ಮನ ದಟ್ಟದಾಗ ದೇಹ ಸಂಬಂಧಿ ವಸ್ತುಗಳ ಬಗೆಗಿನ ವ್ಯಾಮೋಹವು ಕಡಿಮೆಯಾಗು ತ್ತದೆ. ಮತ್ತೆ ಮತ್ತೆ ಹುಟ್ಟು – ಸಾವಿನ ಈ ಚಕ್ರದಿಂದ ಬಿಡುಗಡೆಯಾಗುವ ಮಾರ್ಗ ವನ್ನು ಹುಡುಕುವ ಕಡೆಗೆ ಮನಸ್ಸು ಚಲಿ ಸುತ್ತದೆ. ಹೀಗಾಗಲೀ ಎಂಬುದೇ ಈ ಪಕ್ಷ ಮಾಸದ ಉದ್ದೇಶವಿದ್ದರೂ ಇರಬಹುದು.

ಒಟ್ಟಿನಲ್ಲಿ ಎಷ್ಟು ರಾಜ ವೈಭೋಗದಿಂದ ಬದುಕಿದಂತಹ ನಮ್ಮ ಪೂರ್ವಿಕರು ಹೇಗೆ ಮಣ್ಣಿನಲ್ಲಿ ಸೇರಿ ಹೋದರು, ಅವರು ಗರ್ವದಿಂದ ತೊಡುತ್ತಿದ್ದ ಬಟ್ಟೆಗಳು, ಬಳಸುತ್ತಿದ್ದ ಸಾಮಾನುಗಳು ಹೇಗೆ ಈಗ ಕೆಲಸಕ್ಕೆ ಬಾರದಾದವು ಎಂಬುದನ್ನೆಲ್ಲ ನೋಡಿ ಯಾದರೂ ಮುಂದೊಂದು ದಿನ ನಾವು ಯಾವುದರ ಬಗ್ಗೆ ಬೀಗುತ್ತೇವೋ ಜಂಭ ಪಡುತ್ತೇವೋ ಅದು ನಿಷ್ಪ್ರಯೋಜಕವಾಗಿ ಬಿಡುತ್ತದೆ. ನಿತ್ಯ ನೂತನವಾದ ನಿತ್ಯ ಸತ್ಯವಾದ ಪರಮಾತ್ಮನ ಬಗ್ಗೆ ನಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎಂಬ ಕಾತರ ನಮ್ಮ ಮನದಲ್ಲಿ ಮೂಡಬೇಕು.

ಎಚ್ಚರಿಸಲು ಬರುವ ಈ ಪರ್ವ ಕಾಲದಲ್ಲಿ ಅಧ್ಯಾತ್ಮಿಕವಾಗಿ ನಾವು ಬೆಳೆ ಯೋಣ. ಶಾಶ್ವತ ಸುಖವನ್ನು ಕೊಡುವ ಜ್ಞಾನಾರ್ಜನೆಯನ್ನು ಮಾಡೋಣ. ಆ ನಿಟ್ಟಿನಲ್ಲಿ ನಾವು ದಿಟ್ಟ ಹೆಜ್ಜೆಯನ್ನು ಹಾಕೋಣ ಎಂದು ಪ್ರಾರ್ಥಿಸುತ್ತೇನೆ.


ಶ್ರೀ ಕೃಷ್ಣಾರ್ಪಣಮಸ್ತು

ರೂಪಶ್ರೀ ಶಶಿಕಾಂತ್

error: Content is protected !!