ಅಧಿಕಾರಿಗಳಿಗೆ ಅನ್ಯಾಯ ಎಸ್ಸೆಸ್ ಹೇಳಿಕೆಗೆ ಬೆಂಬಲ

ಅಧಿಕಾರಿಗಳಿಗೆ ಅನ್ಯಾಯ ಎಸ್ಸೆಸ್ ಹೇಳಿಕೆಗೆ ಬೆಂಬಲ

ದಾವಣಗೆರೆ, ಅ. 3- ಲಿಂಗಾಯತ ಅಧಿಕಾರಿಗಳಿಗೆ ಹುದ್ದೆ ನೀಡುವಲ್ಲಿ ಸಮಸ್ಯೆಯಾಗಿರುವ ಬಗ್ಗೆ ತಮ್ಮ ಬಳಿಯೂ ಕೆಲವರು ತಿಳಿಸಿದ್ದಾರೆ ಎಂದು ಕೂಡಲ ಸಂಗ ಮದ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮಿ ಹೇಳಿದ್ದಾರೆ.

ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸರ್ಕಾರದ ಆಡಳಿತ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಅಧಿಕಾರಿಗಳ ಪ್ರಾಮಾಣಿಕತೆ ಹಾಗೂ ದಕ್ಷತೆ ಆಧಾರದ ಮೇಲೆ ಆಯಕಟ್ಟಿನ ಜಾಗದಲ್ಲಿ ಕೂರಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.

ಲಿಂಗಾಯತ ಸಮುದಾಯದ ಅಧಿಕಾರಿಗಳಿಗೆ ಸೂಕ್ತ ಹುದ್ದೆಗಳು ದೊರೆತಿಲ್ಲ ಎಂದು ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ತಿಳಿಸಿದ್ದರು. ಈ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಸ್ವಾಮೀಜಿ ಉತ್ತರಿಸಿದರು. ಸರ್ಕಾರಗಳು ಬದಲಾದಂತೆ ಜನಾಂಗದ ಆಧಾರದ ಮೇಲೆ ದೂರ ಇಡುವುದು, ಹುದ್ದೆ ನೀಡದಿರುವುದು ಸರಿಯಲ್ಲ. ಶಾಸಕ ಶಾಮನೂರು ಶಿವಶಂಕರಪ್ಪನವರು ನೋವಿನಿಂದ ಆಡಿರುವ ಮಾತುಗಳನ್ನು ಸರಿಪಡಿಸಲು ಸರ್ಕಾರ ಕಾರ್ಯೋನ್ಮುಖವಾಗಬೇಕು ಎಂದರು.

ಎಲ್ಲಾ ಲಿಂಗಾಯತರಿಗೆ 2ಎ ಹಾಗೂ ಒ.ಬಿ.ಸಿ. ಮೀಸಲಾತಿ ಕಲ್ಪಿಸಬೇಕು. ಈ ಬಗ್ಗೆ ಬಜೆಟ್ ನಂತರ ತಮ್ಮೊಂದಿಗೆ ಮಾತನಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಆದರೆ, ಇದುವರೆಗೂ ಸಭೆ ಕರೆದಿಲ್ಲ. ಈ ಹಿನ್ನೆಲೆಯಲ್ಲಿ ಹೋರಾಟಕ್ಕೆ ಮುಂದಾಗಿರುವುದಾಗಿ ಶ್ರೀಗಳು ಇದೇ ಸಂದರ್ಭದಲ್ಲಿ ಹೇಳಿದರು.

ಎಲ್ಲಾ ಸಮಾಜಗಳಿಗೆ ಸಾಮಾಜಿಕ ನ್ಯಾಯ ಕೊಡಲು ದೇಶದಲ್ಲಿ ವೈಜ್ಞಾನಿಕ ಆಧಾರದ ಮೇಲೆ ಜಾತಿ ಗಣತಿ ನಡೆಸಬೇಕು ಎಂದು ಶ್ರೀಗಳು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ನಿಜವಾದ ಜಾತಿ ಗಣತಿ ಮಾಡಿದರೆ ಅದು ದೇಶದ ಪ್ರಗತಿಗೆ ನೆರವಾಗಲಿದೆ. ಕೇಂದ್ರ ಸರ್ಕಾರವೇ ಜಾತಿ ಗಣತಿ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಹೀಗಾಗಿ ಕೇಂದ್ರ ಸರ್ಕಾರವೇ ದೇಶಾದ್ಯಂತ ಜಾತಿ ಗಣತಿ ನಡೆಸಬೇಕು ಎಂದು ಹೇಳಿದರು.

error: Content is protected !!