ಮಕ್ಕಳು-ತಾಯಂದಿರ ಮರಣ ಪ್ರಮಾಣ ತಗ್ಗಿಸಲು ಅಗತ್ಯ ಕ್ರಮಕ್ಕೆ ಡಿಸಿ ನಿರ್ದೇಶನ

ಮಕ್ಕಳು-ತಾಯಂದಿರ ಮರಣ ಪ್ರಮಾಣ ತಗ್ಗಿಸಲು ಅಗತ್ಯ ಕ್ರಮಕ್ಕೆ ಡಿಸಿ ನಿರ್ದೇಶನ

ದಾವಣಗೆರೆ, ಅ. 3 – ಮಕ್ಕಳು ಮತ್ತು ತಾಯಂದಿರ ಮರಣ ಪ್ರಮಾಣ ತಗ್ಗಿಸುವ ನಿಟ್ಟಿನಲ್ಲಿ ಸಂಬಂಧಿತ ಅಧಿಕಾರಿಗಳು ಅಗತ್ಯ ಕ್ರಮಕೈಗೊಳ್ಳಬೇಕು. ಮಿಷನ್ ಇಂದ್ರಧನುಷ್ ಅಭಿಯಾನದ ಕೊನೆಯ ಹಂತವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಎಂದು ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ತಿಳಿಸಿದರು.

ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ 3 ನೇ ಸುತ್ತಿನ ಮಿಷನ್ ಇಂದ್ರಧನುಷ್ 5.0 ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತುಂಬು ಗರ್ಭಿಣಿಯರಿಗೆ ತುರ್ತು ಸಂದರ್ಭದಲ್ಲಿ ವೆಂಟಿಲೇಟರ್ ವ್ಯವಸ್ಥೆ, ಬಿ.ಪಿ, ಮಧುಮೇಹ ಪರೀಕ್ಷೆ, ಅಗತ್ಯ ಔಷಧಿ ಹಾಗೂ ಚಿಕಿತ್ಸೆ ನೀಡಬೇಕು ಎಂದು ನಿರ್ದೇಶಿಸಿದರು.

ಜಿಲ್ಲಾ, ತಾಲ್ಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಇಂದ್ರಧನುಷ್ ಅಭಿಯಾನವು ಪರಿಣಾಮಕಾರಿಯಾಗಿ ಕಾರ್ಯಗತಗೊಳ್ಳಬೇಕು. ನಗರದ ವಿವಿಧ ಭಾಗಗಳಲ್ಲಿ ಪೋಷಕರೇ ಮಕ್ಕಳಿಗೆ ಲಸಿಕೆ ಹಾಕಿಸಲು ಹಿಂದೆ ಸರಿಯುತ್ತಿದ್ದು, ದಾವಣಗೆರೆ ತಾಲ್ಲೂಕು ವ್ಯಾಪ್ತಿಯಲ್ಲಿ 44 ಮಕ್ಕಳು ಲಸಿಕೆಯಿಂದ ವಂಚಿತರಾಗಿರುವುದರಿಂದ ಲಸಿಕೆ ಕುರಿತು ಪೋಷಕರಿಗೆ ಸಂಪೂರ್ಣ ಮಾಹಿತಿ ನೀಡಿ ಮಕ್ಕಳಿಗೆ ಲಸಿಕೆ ನೀಡಬೇಕು ಎಂದರು.

3ನೇ ಸುತ್ತಿನ ಮಿಷನ್ ಇಂದ್ರಧನುಷ್ ಅಭಿಯಾನ ವು ಇದೇ ದಿನಾಂಕ 9 ರಿಂದ 14ರ ವರೆಗೆ ನಡೆಯಲಿದ್ದು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರಿಗೆ ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ತರಬೇತಿ ನೀಡಬೇಕು. ನಿಗದಿತ ಸಮಯದಲ್ಲಿ ರೋಗಿ ಗಳ ತುರ್ತು ಚಿಕಿತ್ಸೆಗಾಗಿ 108 ಆಂಬ್ಯುಲೆನ್ಸ್ ಸೇವೆ ಯನ್ನು  ಬಳಸಿಕೊಳ್ಳುವಂತೆ ಜನರಲ್ಲಿ ಜಾಗೃತಿ ಮೂಡಿಸ ಬೇಕು. ನಗರದಲ್ಲಿ ಕಾನೂನು ಬಾಹಿರವಾಗಿ ಧೂಮಪಾನ ಹಾಗೂ ಮದ್ಯಪಾನ ಸೇವನೆ ಮಾಡುತ್ತಿದ್ದು ಅಂತವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಜಿಲ್ಲಾಸ್ಪತ್ರೆ ಡಯಾಲಿಸಿಸ್ ಕೇಂದ್ರದಲ್ಲಿ ರೋಗಿಗಳಿಗೆ ಫ್ಯಾನ್, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿ ಅವರಿಗೆ ಸೂಕ್ತ ವಾತಾವರಣ ಕಲ್ಪಿಸಬೇಕು.

ನಗರದಲ್ಲಿ ಮೆಡಿಕಲ್ ಹಾಗೂ ಇಂಜಿನಿಯರಿಂಗ್ ವಿದ್ಯಾರ್ಥಿಗಳೇ ಗಾಂಜಾ ಅಥವಾ ಇತರೆ ಮಾದಕ ವಸ್ತುಗಳಿಗೆ ಹೆಚ್ಚು ಆಕರ್ಷಿತರಾಗಿ ಬಲಿಯಾಗುತ್ತಿದ್ದಾರೆ. ಕಾಲೇಜುಗಳಲ್ಲಿ ಕೌನ್ಸಿಲಿಂಗ್ ನಡೆಸಿ ಮಾದಕ ವಸ್ತುಗಳಿಂದ ವಿದ್ಯಾರ್ಥಿಗಳನ್ನು ಮುಕ್ತಗೊಳಿಸುವ ನಿಟ್ಟಿನಲ್ಲಿ  ಅಧಿಕಾರಿಗಳು  ಅಗತ್ಯ ಕ್ರಮ ವಹಿಸಬೇಕು.

ಡಿಹೆಚ್‌ಓ ಡಾ. ಷಣ್ಮುಖಪ್ಪ. ಎಸ್, ಆರ್.ಸಿ.ಹೆಚ್ ಅಧಿಕಾರಿ ಡಾ. ರೇಣುಕಾರಾಧ್ಯ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ನಾಗೇಂದ್ರಪ್ಪ, ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.

error: Content is protected !!