ಗಾಂಧೀಜಿ – ಶಾಸ್ತ್ರೀಜಿ ಜಯಂತಿಯಲ್ಲಿ ಶಾಸಕ ಕೆ.ಎಸ್. ಬಸವಂತಪ್ಪ ಆಗ್ರಹ
ದಾವಣಗೆರೆ, ಅ. 2 – ಪೌರ ಕಾರ್ಮಿಕರ ರಕ್ತ ಹೀರಲಾಗುತ್ತಿದೆ. ಅವರ ಸಂಬಳದ ಹಣ ದರೋಡೆ ಆಗುತ್ತಿದೆ. ಅವರು ದುಡಿದ ಸಂಬಳ ಅವರ ಕೈಗೆ ಸಂಪೂರ್ಣವಾಗಿ ಸಿಗುವಂತೆ ಆಗಬೇಕು ಎಂದು ಶಾಸಕ ಕೆ.ಎಸ್. ಬಸವಂತಪ್ಪ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ನಗರ ಪಾಲಿಕೆ ಹಾಗೂ ವಾರ್ತಾ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಗಾಂಧಿ ಭವನದಲ್ಲಿ ಆಯೋಜಿಸಲಾಗಿದ್ದ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರೀಜಿ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಪೌರ ಕಾರ್ಮಿಕರಿಗೆ 15 ಸಾವಿರ ಸಂಬಳ ಕೊಟ್ಟರೂ, ಅವರ ಕೈಗೆ 5-6 ಸಾವಿರ ರೂ. ಮಾತ್ರ ಸಿಗುತ್ತಿದೆ. ಈ ರೀತಿಯ ದರೋಡೆ ತಡೆಗಟ್ಟುವ ಪುಣ್ಯಾತ್ಮ ಯಾರೂ ಬರುತ್ತಿಲ್ಲ ಎಂದವರು ವಿಷಾದಿಸಿದರು.
ಪೌರ ಕಾರ್ಮಿಕರ ದುಡಿದ ಸಂಬಳ ಅವರಿಗೆ ಸಿಗುವಂತಾಗಬೇಕು. ಅಧಿಕಾರಿ ಇಲ್ಲವೇ ರಾಜಕಾರಣಿ ಯಾರೇ ತಪ್ಪು ಮಾಡಿದರೂ ತಿದ್ದಬೇಕು. ಆಗಲೇ ಗಾಂಧಿ ಜಯಂತಿಗೆ ಅರ್ಥ ಬರುತ್ತದೆ ಎಂದರು.
ಗ್ರಾಮ ಪಂಚಾಯ್ತಿಗಳ ಸ್ವಚ್ಛತೆಗಾಗಿ ಈಗ 2-3 ಲಕ್ಷ ರೂ. ಹಣ ಕೊಡಲಾಗುತ್ತಿದೆ. ಇದರ ಬದಲು ಗ್ರಾಮ ಪಂಚಾಯ್ತಿಗೊಬ್ಬ ಪೌರ ಕಾರ್ಮಿಕನನ್ನು ನೇಮಿಸಿದರೆ ಸ್ವಚ್ಛತೆ ಸಾಧ್ಯ ಎಂದೂ ಅವರು ಅಭಿಪ್ರಾಯ ಪಟ್ಟರು.
ಸ್ಮಶಾನಗಳೇ ನಿಜವಾದ ದೇವಸ್ಥಾನ ಅಧಿಕಾರಿಗಳು ಇಲ್ಲಿಗೆ ಬಂದಿರಲಿ
ರಾಮ ನಗರದಲ್ಲಿ 10-15 ಎಕರೆ ಪ್ರದೇಶದಲ್ಲಿ ಅಧಿಕಾರಿಗಳಿಗೆ ವಸತಿಗಳನ್ನು ನಿರ್ಮಿಸಲಾಗಿದೆ. ಆದರೆ, ಪಕ್ಕದಲ್ಲೇ ಸ್ಮಶಾನಗಳಿವೆ ಎಂಬ ಕಾರಣಕ್ಕಾಗಿ ಅಧಿಕಾರಿಗಳು ಇಲ್ಲಿಗೆ ಬರುತ್ತಿಲ್ಲ. ಸಾವಿರಾರು ಕೋಟಿ ರೂ. ವೆಚ್ಚದ ವಸತಿ ನಿಲಯಗಳು ಹಾಳಾಗುತ್ತಿವೆ ಎಂದು ಶಾಸಕ ಕೆ.ಎಸ್. ಬಸವಂತಪ್ಪ ವಿಷಾದಿಸಿದ್ದಾರೆ.
ಇಲ್ಲಿನ ಹಿಂದೂ, ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಸ್ಮಶಾನಗಳು ದೇವಸ್ಥಾನಗಳಿದ್ದಂತೆ. ಸ್ಮಶಾನಗಳೇ ನಿಜವಾದ ದೇವಸ್ಥಾನ. ಇವುಗಳ ಪಕ್ಕ ವಾಸ ಮಾಡಿದರೆ ಅನ್ಯಾಯ ಆಗುವುದಿಲ್ಲ. ಅಧಿಕಾರಿಗಳು ಇಲ್ಲಿಗೆ ಬರುವಂತಾಗಲು ಜಿಲ್ಲಾಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು ಎಂದು ಶಾಸಕರು ಒತ್ತಾಯಿಸಿದರು.
ಗಾಂಧೀಜಿ ಕಾಲಿಟ್ಟಿದ್ದ ಜಾಗ ಈಗ ಅಪವಿತ್ರ!
ಗಾಂಧಿ ಹೆಸರಿಗೆ ತೇಪೆ, ಭವನಕ್ಕೆ ದೂಳು
ನಗರದ ಗಾಂಧಿ ಭವನ ದೂಳು ಹಿಡಿಯುತ್ತಿದೆ. ವರ್ಷಕ್ಕೊಮ್ಮೆ ಗಾಂಧಿ ಜಯಂತಿಯಂದು ಮಾತ್ರ ಈ ಭವನದ ಬಾಗಿಲು ತೆರೆಯಲಾಗುತ್ತಿದೆ ಎಂದು ಶಾಸಕ ಕೆ.ಎಸ್. ಬಸವಂತಪ್ಪ ವಿಷಾದಿಸಿದ್ದಾರೆ.
ಇಲ್ಲಿ ಖಾದಿ ಭಂಡಾರ ಕಚೇರಿ, ಇಲ್ಲವೇ ಗ್ರಾಮೋದ್ಯೋಗಗಳಿಗೆ ಸಂಬಂಧಪಟ್ಟ ಕಚೇರಿಗಳನ್ನು ತೆರೆ ಯಿರಿ. ಆಗ ದಿನನಿತ್ಯ ಜನ ಬರುತ್ತಾರೆ. ಆಗ ಭವನ ವ್ಯವಸ್ಥಿತ ವಾಗಿ ನೋಡಿ ಕೊಳ್ಳಲು ಸಾಧ್ಯ ಎಂದರು. ಸಮಾರಂಭದ ಬ್ಯಾನ ರ್ನಲ್ಲಿ ಮಹಾತ್ಮ ಗಾಂಧೀಜಿ ಹೆಸರು ತಪ್ಪಾದ ಕಾರಣ ಅದರ ಮೇಲೆ ಪ್ಯಾಚ್ ಹಾಕಿ ಸರಿಪಡಿಸಿದ್ದನ್ನು ಪ್ರಸ್ತಾಪಿಸಿದ ಶಾಸಕರು, ಗಾಂಧೀಜಿ ಹೆಸರನ್ನು ಸರಿಯಾಗಿ ಬರೆಯಲು ಆಗಲಿಲ್ಲ ಎಂದರೆ ನಾವು ಇನ್ನೇನು ಮಾಡಲು ಸಾಧ್ಯ? ಎಂದು ಪ್ರಶ್ನಿಸಿದರು.
ಗಾಂಧೀಜಿ ದಾವಣಗೆರೆಗೆ ಬಂದಾಗ ಅವರು ಭೇಟಿ ನೀಡಿದ ಕೆಲ ಜಾಗಗಳನ್ನು ವಸತಿ ನಿಲಯ, ಮತ್ತಿತರೆ ಉದ್ದೇಶಗಳಿಗೆ ನೀಡಲಾಗಿತ್ತು. ಇವುಗಳಲ್ಲಿ ಕೆಲವು ಈಗ ಅಪವಿತ್ರವಾಗಿವೆ. ವ್ಯಾಪಾರಿ ಕೇಂದ್ರಗಳಾಗಿವೆ. ಅಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಮೇಲೆ ಕಡಿವಾಣ ಹಾಕಬೇಕಿದೆ ಎಂದೂ ತಿಳಿಸಿದರು.
ಗ್ರಾಮೀಣ ಭಾಗದಲ್ಲಿ ಸಾಕಷ್ಟು ಶೌಚಾಲಯಗಳು ಗೋದಾಮುಗಳಾಗಿ ಪರಿವರ್ತನೆ ಯಾಗಿವೆ. ಈ ಬಗ್ಗೆ ಅಧಿಕಾರಿಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅರಿವು ಮೂಡಿಸುವ ಕ್ರಮ ತೆಗೆದುಕೊಳ್ಳಬೇಕಿದೆ ಎಂದು ಬಸವಂತಪ್ಪ ಹೇಳಿದರು.
ಜಿಲ್ಲಾಧಿಕಾರಿ ಎಂ.ವಿ. ವೆಂಕಟೇಶ್ ಮಾತ ನಾಡಿ, ಗಾಂಧೀಜಿ ಹಾಗೂ ಶಾಸ್ತ್ರಿ ಅವರ ಜೀವನದ ಸಂದೇಶವನ್ನು ಮುಂದಿನ ಪೀಳಿಗೆಗೆ ತಲುಪಿಸುವುದಷ್ಟೇ ಅಲ್ಲದೇ, ಇಡೀ ವಿಶ್ವಕ್ಕೇ ತಿಳಿಸಬೇಕಿದೆ ಎಂದರು.
ವೇದಿಕೆಯ ಮೇಲೆ ಪಾಲಿಕೆ ಮೇಯರ್ ವಿನಾಯಕ್ ಪೈಲ್ವಾನ್, ಜಿಲ್ಲಾ ಪಂಚಾಯ್ತಿ ಸಿಇಒ ಸುರೇಶ್ ಇಟ್ನಾಳ್, ಎಸ್ಪಿ ಉಮಾ ಪ್ರಶಾಂತ್, ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಮೀನಾಕ್ಷಿ ಜಗದೀಶ್, ಪಾಲಿಕೆ ಸದಸ್ಯರಾದ ಎ. ನಾಗರಾಜ್, ಪಾಮೇನಹಳ್ಳಿ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.
ಹಿರಿಯ ಪತ್ರಕರ್ತ ಜಿ.ಎಸ್. ಉಜ್ಜಿನಪ್ಪ ಉಪನ್ಯಾಸ ನೀಡಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಧನಂಜಯ ಸ್ವಾಗತಿಸಿದರು. ಪೊಲೀಸ್ ಇಲಾಖೆಯ ದೇವರಾಜ್ ಮತ್ತು ಶೈಲಜಾ ನಿರೂಪಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ವಂದಿಸಿದರು.