ಲಿಂಗಾಯತ ಸಮುದಾಯದವರು ಒಂದಾಗಬೇಕು: ಯಡಿಯೂರಪ್ಪ
ಬೆಂಗಳೂರು, ಅ. 1 – ಕಾಂಗ್ರೆಸ್ ಸರ್ಕಾರ ವೀರಶೈವ ಲಿಂಗಾಯತ ಅಧಿಕಾರಿಗಳನ್ನು ಕಡೆಗಣಿಸಿದೆ ಎಂದು ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ನೀಡಿರುವ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ.
ಕಾಂಗ್ರೆಸ್ ಪಕ್ಷದ ಸಚಿವರು ಶಿವಶಂಕರಪ್ಪ ಅವರ ಹೇಳಿಕೆಗೆ ಆಕ್ಷೇಪಿಸುತ್ತಿದ್ದರೆ, ಬಿಜೆಪಿ ಮುಖಂಡರು ಸ್ವಾಗತಿಸುತ್ತಿದ್ದಾರೆ.
ಈ ನಡುವೆ ಹೇಳಿಕೆ ನೀಡಿರುವ ಬಿಜೆಪಿ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ, ಶಿವಶಂಕರಪ್ಪ ನವರು ವೀರಶೈವ ಸಮಾಜದ ರಾಷ್ಟ್ರೀಯ ಅಧ್ಯಕ್ಷರು, ಅವರ ಭಾವನೆಗಳಿಗೆ ನನ್ನ ಬೆಂಬಲ ಇದೆ ಎಂದಿದ್ದಾರೆ. ಆಕ್ಷೇಪಗಳನ್ನು ತಳ್ಳಿ ಹಾಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ನಮ್ಮ ಸರ್ಕಾರ ಜಾತ್ಯತೀತವಾಗಿದೆ. ಯಾರಿಗೂ ಅನ್ಯಾಯವಾಗಿಲ್ಲ ಎಂದಿದ್ದಾರೆ.
ಶಕ್ತಿ ಯೋಜನೆ, ಅನ್ನಭಾಗ್ಯ, ಗೃಹ ಜ್ಯೋತಿ, ಗೃಹಲಕ್ಷ್ಮಿ ಯೋಜನೆಗಳು ಎಲ್ಲರಿಗೂ ಜಾರಿಗೆ ಬಂದಿವೆ. ನಾವು ಜಾತಿ ಭೇದ ಮಾಡುವುದಿಲ್ಲ. ಎಲ್ಲ ಜಾತಿಗಳನ್ನು ಸಮಾನವಾಗಿ ಕಾಣುತ್ತೇವೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಆದರೆ, ಶಿವಶಂಕರಪ್ಪ ಅವರ ಹೇಳಿಕೆಗಳು ಬಿಜೆಪಿ ಕೈಗೆ ಅಸ್ತ್ರ ನೀಡಿದಂತಾಗಿದೆ. ಯಡಿಯೂರಪ್ಪ ಅವರು ಶಿವಶಂಕರಪ್ಪನವರನ್ನು ಬೆಂಬಲಿಸಿದ್ದು, ವೀರಶೈವ ಸಮಾಜವನ್ನು ಕಡೆಗಣಿಸುತ್ತಿರುವ ಬಗ್ಗೆ ಶಿವಶಂಕರಪ್ಪ ಅವರಿಗೆ ಕಳಕಳಿ ಇದೆ. ವೀರಶೈವ ಸಮಾಜದ ಎಲ್ಲ ಮುಖಂಡದಲ್ಲಿ ಇದೇ ತಳಮಳ, ಗೊಂದಲ ಇದೆ. ವೀರಶೈವ – ಲಿಂಗಾಯತ ಸಮುದಾಯದವರು ಜಾಗೃತರಾಗಬೇಕು. ಒಂದಾಗಬೇಕು ಎಂದಿದ್ದಾರೆ.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೂ ಸರ್ಕಾರವನ್ನು ಸಮರ್ಥಿಸಿಕೊಂಡಿದ್ದು, ಸರ್ಕಾರ ಜಾತಿ ಆಧಾರದ ಮೇಲೆ ಹುದ್ದೆಗಳನ್ನು ಕೊಡುವುದಿಲ್ಲ ಎಂದಿದ್ದಾರೆ.
ಸಿದ್ದರಾಮಯ್ಯನವರಿಂದ ನೀವೆಲ್ಲ ಗೆದ್ದಿದ್ದೀರಿ
ಎಸ್ಸೆಸ್ ಹೇಳಿಕೆಗಳಿಗೆ ವಿಶ್ವನಾಥ್ ಪ್ರತ್ಯುತ್ತರ
ಬೆಂಗಳೂರು, ಅ. 1 – ಲಿಂಗಾಯತರಿಗೆ ಸಂಪುಟದಲ್ಲಿ 7 ಸ್ಥಾನಗಳನ್ನು ನೀಡಲಾಗಿದೆ. ಇನ್ನೆಷ್ಟು ಸ್ಥಾನ ಬೇಕಿತ್ತು? ಎಂದಿರುವ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್, ನೀವೆಲ್ಲ ಗೆದ್ದಿರುವುದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಎಂದಿದ್ದಾರೆ.
ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಲಿಂಗಾಯತ ಅಧಿಕಾರಿಗಳಿಗೆ ಸೂಕ್ತ ಹುದ್ದೆಗಳು ಸಿಕ್ಕಿಲ್ಲ ಎಂದು ಆಕ್ಷೇಪಿಸಿರುವುದನ್ನು ವಿಶ್ವನಾಥ್ ತರಾಟೆಗೆ ತೆಗೆದುಕೊಂಡಿದ್ದಾರೆ. ಜಾತ್ಯತೀತವಾದ ಕಾಂಗ್ರೆಸ್ ಪಕ್ಷದ ಪ್ರತಿನಿಧಿಯಾದ ಶಾಮನೂರು ಶಿವಶಂಕರಪ್ಪ ಅವರು ಜಾತಿಯ ಪಕ್ಷದ ಪ್ರತಿನಿಧಿಯಂತೆ ಮಾತನಾಡುತ್ತಿರುವುದನ್ನು ಖಂಡಿಸುತ್ತೇನೆ ಎಂದೂ ಅವರು ಹೇಳಿದ್ದಾರೆ.
ನಮ್ಮಲ್ಲಿ ಜಾತಿ ಆಧರಿಸಿ ಯಾರಿಗೂ ಹುದ್ದೆ ಕೊಡುವುದಿಲ್ಲ. ಬೇರೆ ಬೇರೆ ಜಾತಿಯವರಿಗೆ ಎಲ್ಲೆಲ್ಲಿ ಅವಕಾಶ ಮಾಡಿಕೊಡಬೇಕೋ, ಅಲ್ಲಿ ಮಾಡಿಕೊಟ್ಟಿದ್ದೇವೆ. ಲಿಂಗಾಯತರಿಗೆ ಏಳು ಮಂತ್ರಿ ಸ್ಥಾನ ಕೊಟ್ಟಿದ್ದೇವೆ. ಇನ್ನೆಷ್ಟು ಸ್ಥಾನ ಕೊಡಬೇಕು ನಿಮಗೆ ಎಂದು ವಿಶ್ವನಾಥ್ ಕೇಳಿದ್ದಾರೆ.
ನಿಮಗೆ ಮುಖ್ಯಮಂತ್ರಿ ಸ್ಥಾನ ಬೇಕಿದ್ದರೆ ನಾಯಕತ್ವ ವಹಿಸಿಕೊಳ್ಳಿ. ನಿಮ್ಮ ಸಮುದಾಯದವರಿಂದ ಹೆಚ್ಚಿನ ಮತ ಹಾಕಿಸಿ. ನಂತರ ಗೆದ್ದು ಬಂದು ಮುಖ್ಯಮಂತ್ರಿಯಾಗಿ. ಈ ವಿಚಾರದಲ್ಲಿ ನಿಮ್ಮ ಆಸಕ್ತಿ ತೋರಿಸಿ. ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ನಿಮ್ಮ ಸಮುದಾಯದಿಂದ ಎಷ್ಟು ಮತ ಹಾಕಿಸಿದ್ದೀರಾ? ಸಿದ್ದರಾಮಯ್ಯ ಅವರಿಂದಲೇ ನೀವೆಲ್ಲ ಗೆದ್ದಿದ್ದೀರಿ ಎಂದು ತಿಳಿಸಿದ್ದಾರೆ.
ಲಿಂಗಾಯತರು ಒಂದಾದರೆ ಸರ್ಕಾರ ಅಲ್ಲಾಡಿಸಬಹುದು
ಲಿಂಗಾಯತ ಅಧಿಕಾರಿಗಳಿಗೆ ಸರಿಯಾದ ಸ್ಥಾನಗಳು ಸಿಕ್ಕಿಲ್ಲ ಎಂದು ಎಸ್ಸೆಸ್ ಪುನರುಚ್ಛಾರ
ಲಿಂಗಾಯತ ಸಮುದಾ ಯದ ಐ.ಎ.ಎಸ್. ಹಾಗೂ ಐ.ಪಿ.ಎಸ್. ಅಧಿಕಾರಿಗಳಿಗೆ ಸೂಕ್ತ ಸ್ಥಾನಗಳು ದೊರೆತಿಲ್ಲ ಎಂದು ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಪುನರುಚ್ಛರಿಸಿದ್ದಾರೆ.
ಲಿಂಗಾಯತ ಸಮುದಾಯಕ್ಕೆ ಏಳು ಸಚಿವ ಸ್ಥಾನ ನೀಡಲಾಗಿದೆ ಹಾಗೂ ಅಧಿಕಾರಿಗಳಿಗೆ ಸೂಕ್ತ ಸ್ಥಾನ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಶಿವಶಂಕರಪ್ಪ, ನಾನು ಸಚಿವ ಸ್ಥಾನದ ಬಗ್ಗೆ ಮಾತನಾಡಿಲ್ಲ. ಅಧಿಕಾರಿಗಳಿಗೆ ಸೂಕ್ತ ಸ್ಥಾನ ದೊರೆತಿಲ್ಲ ಎಂದಿರುವುದಾಗಿ ತಿಳಿಸಿದ್ದಾರೆ.
ಲಿಂಗಾಯತರು ಒಂದಾದರೆ ಸರ್ಕಾರವನ್ನೇ ಅಲ್ಲಾಡಿಸಬಹುದು, ಸರ್ಕಾರವನ್ನೂ ರಚಿಸಬಹುದು ಎಂದು ಈ ಹಿಂದೆ ಹೇಳಿದ್ದೆ. ಇನ್ನೂ ಹತ್ತು ಬಾರಿ ಹೇಳುತ್ತೇನೆ ಎಂದೂ ಶಿವಶಂಕರಪ್ಪ ಹೇಳಿದ್ದಾರೆ.
ಜಾತಿ ಆಧಾರದ ಮೇಲೆ ಅಧಿಕಾರಿಗಳಿಗೆ ಹುದ್ದೆ ಕೊಡುವುದು ಕಷ್ಟ. ಮುಖ್ಯಮಂತ್ರಿಗಳು ಸಮತೋಲನ ನಿಭಾಯಿಸುತ್ತಿದ್ದಾರೆ. ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವುದು ನಮ್ಮ ಜವಾಬ್ದಾರಿ ಎಂದಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಸಕ ಶಿವಶಂಕರಪ್ಪ ಬಳಿ ಮಾತನಾಡಲಿದ್ದಾರೆ ಎಂದೂ ಶಿವಕುಮಾರ್ ತಿಳಿಸಿದ್ದಾರೆ.
ಸರ್ಕಾರ ಜಾತಿ ಆಧಾರದ ಮೇಲೆ ಹುದ್ದೆ ನೀಡುತ್ತಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಅವರೂ ಹೇಳಿದ್ದಾರೆ.
ಶಾಮನೂರು ಶಿವಶಂಕರಪ್ಪನವರು ಹಿರಿಯರು. ಅವರು ಸರ್ಕಾರದಲ್ಲಿ ಬಂದು ರಕ್ಷಣೆ ಮಾಡುವ ಕೆಲಸ ಮಾಡಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಜಾರಕಿಹೊಳಿ ಹೇಳಿದ್ದಾರೆ.
ಮುಖ್ಯಮಂತ್ರಿ ಹುದ್ದೆಗೆ ಹಲವರು ಸರದಿಯಲ್ಲಿ ನಿಂತಿದ್ದಾರೆ. ಲಿಂಗಾಯತರ ಸರದಿ ಬಂದಾಗ ಅವರಿಗೆ ಮುಖ್ಯಮಂತ್ರಿ ಸ್ಥಾನ ಸಿಗಲಿದೆ ಎಂದು ಪ್ರಶ್ನೆಯೊಂದಕ್ಕೆ ಸಚಿವರು ಉತ್ತರಿಸಿದ್ದಾರೆ.