ಭಾರತ ರಾಷ್ಟ್ರಪಿತ, ಜಗತ್ತಿಗೆ ಶಾಂತಿ ಸಂದೇಶ ಸಾರಿದ ದಾರ್ಶನಿಕ ಮಹಾತ್ಮ ಗಾಂಧಿಯವರ ಜನ್ಮ ದಿನವನ್ನು ಇಂದು ನಾವೆಲ್ಲರೂ ಆಚರಿಸುತ್ತಿದ್ದೇವೆ. ಗಾಂಧೀಜಿಯವರ ಅಸಂಖ್ಯ ತತ್ವಗಳಲ್ಲಿ, ಜೀವನಾದರ್ಶಗಳಲ್ಲಿ ಮುಖ್ಯವಾಗಿ ಅಹಿಂಸೆ, ಸಮಾನತೆ, ಸಹೋದರತ್ವ, ಸ್ವಾತಂತ್ರ್ಯ, ರಾಷ್ಟ್ರಪ್ರೇಮದ ಕುರಿತಾಗಿ ನಾವೆಲ್ಲರೂ ಇತಿಹಾಸದಿಂದ ಅರಿತಿದ್ದೇವೆ. ಇವೆಲ್ಲವೂ ಬಾಹ್ಯದಿಂದ ಪಾಲಿಸುವಂತದ್ದು, ಇವುಗಳಿಗಿಂತ ತುಸು ಹೆಚ್ಚು ಮುಖ್ಯವಾಗಿ ಆಂತರಿಕವಾಗಿ ಪಾಲಿಸಲೇಬೇಕಾದ ಕೆಲ ಆದರ್ಶಗಳಾದ ಪ್ರೀತಿ, ಭಕ್ತಿ ಮತ್ತು ಸ್ವಚ್ಛತೆ ಅರಿವನ್ನು ಗಾಂಧಿಜಿಯವರ ಜೀವನ ನಮಗೆಲ್ಲ ಹೇಳಿಕೊಡುತ್ತದೆ.
ಸ್ವಾತಂತ್ರ್ಯ ಪಡೆದು 75 ವರ್ಷಗಳು ಕಳೆದು, ಚಂದ್ರ ಮತ್ತು ಮಂಗಳನ ಅಂಗಳಕ್ಕೆ ಭಾರತವು ಪಾದಾರ್ಪಣೆ ಮಾಡಿರುವ ಹೊತ್ತಿನಲ್ಲಿಯೂ ಸಾಮಾನ್ಯ ನಾಗರೀಕರಿಗೂ ಅವಶ್ಯವಾಗಿ ಬೇಕಾದ ಸ್ವಚ್ಛತೆ ಇಲ್ಲದಿರುವುದು ಖೇದಕರ. ಈ ನಿಟ್ಟಿನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರು 2014ರ ಅಕ್ಟೋಬರ್ 2ರಂದು ಸ್ವಚ್ಛ ಭಾರತ ಅಭಿಯಾನ ಆರಂಭಿಸಿದ್ದು ನಮಗೆಲ್ಲ ತಿಳಿದ ವಿಚಾರ. ಸ್ವಚ್ಛ ಸಮಾಜ ನಿರ್ಮಾಣ ಕೇವಲ ಸರಕಾರದ ಕೆಲಸವಲ್ಲ ಬದಲಾಗಿ ಪ್ರತಿಯೊಬ್ಬ ಪ್ರಜೆಯ ಜವಾಬ್ದಾರಿ ಎಂದು ಅರಿತಾಗ ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾಧ್ಯ.
ಸ್ವಚ್ಛ ಭಾರತದ ಪರಿಕಲ್ಪನೆಯನ್ನು ಮತ್ತಷ್ಟು ವಿಸ್ತಾರವಾಗಿ ನೋಡಬೇಕೆಂಬುದು ವೃತ್ತಿಯಲ್ಲಿ ವೈದ್ಯನಾಗಿ ನನ್ನ ಅಭಿಲಾಷೆ. ಸ್ಚಚ್ಛ ಪರಿಸರ ಮತ್ತು ಸ್ವಾಸ್ಥ್ಯ ಸಮಾಜವೆಂಬುದು ನಮ್ಮ ಸುತ್ತಮುತ್ತಲಿನ ಜಾಗವನ್ನು ಮಾತ್ರವೇ ಸ್ವಚ್ಛವಾಗಿ ಇರಿಸಿಕೊಳ್ಳು ವುದು ಎಂದರ್ಥವಲ್ಲ. ಸ್ವಚ್ಛತೆಗೆ ನೂರೆಂಟು ಮುಖ ಗಳು, ವಿಧಗಳಿದ್ದು ಸ್ವಾಸ್ಥ್ಯ ಬದುಕಿಗೆ ಅವೆಲ್ಲವೂ ಹೇಗೆ ಪೂರಕ ಎಂಬುದರ ಕುರಿತ ಚಿಂತನೆ ಹೀಗಿದೆ.
ಸ್ವಚ್ಛ ಆಲೋಚನೆ: ಬದುಕಿನಲ್ಲಿ ಎಲ್ಲ ಹಿತ-ಮಿತಗಳ ಮೂಲ ನಮ್ಮ ಆಲೋಚನೆ ಎಂಬುದು ನಮಗೆಲ್ಲ ತಿಳಿದ ವಿಚಾರ. ಯಾರಲ್ಲಿ ಪ್ರಚಂಡ ನಂಬಿಕೆ, ಪ್ರಯತ್ನ, ಶ್ರದ್ಧೆ, ಪರಿಶ್ರಮ ಇರುತ್ತದೆಯೋ ಅವರಿಗೆ ಯಶಸ್ಸು ಖಂಡಿತ ಇಂದಲ್ಲ-ನಾಳೆ ಒಲಿಯುತ್ತದೆ ಎಂಬ ಮಾತಿದೆ. ಇದೇ ಸ್ಫೂರ್ಥಿಯನ್ನು ನಮ್ಮ ಒಳಹೊರಗೆ ಸ್ವೀಕರಿಸಿ ನೋಡುವ ಗುಣ ನಮ್ಮದಾಗಬೇಕು. ಈ ದೇಶದ ಕತೆ ಇಷ್ಟೇ ಎಂದು ಹೀಗಳೆಯುವ ಬದುಲು, ಸಕಾರಾತ್ಮಕ ಆಲೋಚನೆ ಹೊಂದಿದಾಗ ನಮ್ಮ ವರ್ತನೆ ಬದಲಾಗುತ್ತದೆ, ಇದರಿಂದ ದೇಶವೂ ಬದಲಾಗುತ್ತದೆ, ಅಲ್ಲವೇ?
ಸ್ವಚ್ಛ ಪರಿಸರ: ನಮ್ಮ ವರ್ತನೆಯ ಫಲವಾಗಿ ಸ್ವಚ್ಛ ಪರಿಸರ ಅರಳುತ್ತದೆ. ಇದರ ಫಲದಿಂದ ಸಾಂಕ್ರಾಮಿಕ ರೋಗಗಳ ಅಪಾಯ ಕುಗ್ಗುತ್ತದೆ. ಹಿಂದೆಲ್ಲ ಕಾಲರಾ, ಪ್ಲೇಗ್, ಕ್ಷಯದಿಂದ ಆಗುತ್ತಿದ್ದ ಅನಾಹುತದ ಬಗ್ಗೆ ಕೇಳಿದ್ದೇವೆ. ಇದರಿಂದ ನಮ್ಮ ಅಥವಾ ಸರ್ಕಾರದ ಹಣವೂ ಪೋಲು, ಅಭಿವೃದ್ಧಿಗೂ ಹಿನ್ನಡೆ. ಅದರ ಬದಲಾಗಿ ಆರೋಗ್ಯ ವಂತ ಸಮಾಜದಿಂದ ಎಲ್ಲರೂ ದುಡಿಮೆಯಲ್ಲಿ ತೊಡಗಿದಾಗ ವೈಯುಕ್ತಿಕ ಬೆಳವಣಿಗೆ ಸಾಧ್ಯ, ಇದೆಲ್ಲರ ಒಟ್ಟುಗೂಡಿಕೆಯಿಂದ ದೇಶದ ಅಭಿವೃದ್ಧಿ ಯೂ ಸಾಧ್ಯ. ವಿಶ್ವದಲ್ಲಿ ಭಾರತ ಮನ್ನಣೆಯಲ್ಲಿ ನಮ್ಮ ಕೊಡುಗೆಯೂ ನೀಡಿದ ಸಾರ್ಥಕತೆ ಪ್ರಾಪ್ತಿ.
ಸ್ವಚ್ಛ ಆಡಳಿತ: ನಮ್ಮಲ್ಲಿ ಭ್ರಷ್ಟತೆ ತಳಮಟ್ಟ ದಿಂದಲೂ ಬೇರೂರಿದೆ ಎಂದು ಹೇಳಿಕೊಂಡೇ ಬರಲಾಗುತ್ತಿದೆ. ಆದರೆ, ಭ್ರಷ್ಟತೆಯನ್ನು ನಾವೇ ಪರೋಕ್ಷವಾಗಿ ಪೋಷಿಸುತ್ತಿ ದ್ದೇವೆ ಎಂಬುದೂ ಅಷ್ಟೇ ಸತ್ಯ. ನಮ್ಮ ಮಾತನ್ನು ಕೇಳುವುದನ್ನು ಬಿಟ್ಟು ನಮ್ಮ ವರ್ತನೆಯನ್ನು ನೋಡಿ ನಮ್ಮ ಮಕ್ಕಳು ಕಲಿಯುತ್ತಾರೆ ಎಂಬುದು ಗೊತ್ತಿದ್ದರೂ ನಮ್ಮ ಮನೆ ಯಿಂದಲೇ ಸುಳ್ಳು, ದ್ರೋಹವನ್ನು ಪಾಲಿಸುತ್ತೇವೆ. ಇದೇ ಒಟ್ಟುಗೂಡಿ ಸಮಾಜಕ್ಕೆ ಪಿಡುಗಾಗುತ್ತದೆ.
ಸ್ವಚ್ಛ ವ್ಯವಸ್ಥೆ: ವೈವಿಧ್ಯಮಯ ಭಾರತದಲ್ಲಿ ಜಾತಿ, ಮೇಲು-ಕೀಳು ಎಂಬ ಏರಿಳಿತವು ಅನೂಚಾನವಾಗಿ ಬೆಳೆದು ಬಂದಿದೆ. ಇದರಿಂದಾಗಿ ಎಷ್ಟೋ ಪ್ರದೇಶಗಳು ಜಾತಿ ಆಧಾರದಲ್ಲಿ ವಿಂಗಡನೆಯಾಗಿವೆ. ಎಷ್ಟೋ ಜಾಗಗಳು ಕೊಳಗೇರಿ ಎಂಬ ಹಣೆಪಟ್ಟಿ ಹೊತ್ತಿವೆ. ಶಿಕ್ಷಣ, ಆರೋಗ್ಯ, ನ್ಯಾಯವು ಸಮಾನವಾಗಿ ಹಂಚಿಕೆಯಾದಾಗ ಸಮಾಜವು ಆರೋಗ್ಯವಂತವಾಗಿ ಇರಲಿದೆ.
ಸ್ವಚ್ಛವಾಗಿರುವ ಜಾಗವು ಆಯಾ ಪ್ರದೇಶ ಅಥವಾ ದೇಶದ ನಿವಾಸಿಗಳ ಚಿಂತನೆಗಳೇನು, ಆದ್ಯತೆಗಳೇನು, ಯೋಚನಾ ಲಹರಿಯೇನು ಎಂಬುದರ ಸೂಚ್ಯಂಕ ಎಂದರೆ ತಪ್ಪಾಗದು. ಇದಕ್ಕೆ ಜಪಾನ್, ಸಿಂಗಾಪುರದಂತ ದೇಶಗಳನ್ನು ಉದಾಹರಿಸಬಹುದು. ಭೌತಿಕ ಜಾಗವು ಸ್ವಚ್ಛವಾಗಿದ್ದಾಗ ಆಂತರಿಕವಾಗಿ ನಮ್ಮ ಮನಸ್ಸು ಕೂಡ ಸ್ವಚ್ಛ ಚಿಂತನೆಯತ್ತ ಹೊರಳುತ್ತದೆ. ವಿದ್ಯಾವಂತರು, ಪ್ರಜ್ಞಾವಂತರು ಎನಿಸಿಕೊಂಡ ನಾವುಗಳು ವರ್ಷದಲ್ಲಿ ಒಂದೆರೆಡು ದಿನಗಳಲ್ಲಿ ಸ್ವಚ್ಛತೆಗೆ ಆದ್ಯತೆ ಎಂದು ಹೇಳಿ ಸುಮ್ಮನಾಗುವ ಬದಲು, ನಮ್ಮ ಚಿಂತನೆ ಮತ್ತು ವರ್ತನೆಯಲ್ಲಿಯೇ ಪುಟ್ಟ ಬದಲಾವಣೆ ಮಾಡಿಕೊಂಡಾಗ ಸುಂದರ ಬದುಕು-ಸುಂದರ ಸಮಾಜ ನಿರ್ಮಾಣ ಸಾಧ್ಯ.
ಈ ಸಂದರ್ಭದಲ್ಲಿ ಗಾಂಧಿಜಿಯವರ ನುಡಿಯೇ ನಮಗೆಲ್ಲ ಸ್ಫೂರ್ತಿ: ನಮ್ಮೊಳಗೆ ಬದಲಾವಣೆಯನ್ನು ತರಲು ಸಾಧ್ಯವಾದಲ್ಲಿ ನಾವು ಬಯಸಿದ ಬದಲಾವಣೆ ಜಗತ್ತಿನಲ್ಲಿ ನೋಡಲು ಸಾಧ್ಯ.
– ಡಾ. ರವಿಕುಮಾರ್ ಟಿ.ಜಿ
ಮುಖ್ಯಸ್ಥರು, ಆರೈಕೆ ಆಸ್ಪತ್ರೆ, ದಾವಣಗೆರೆ.