ಸರ್ಕಾರದ ಸೌಲಭ್ಯ ಪಡೆದು ಸ್ವಾವಲಂಬಿ ಜೀವನ ನಡೆಸಿ

ಸರ್ಕಾರದ ಸೌಲಭ್ಯ ಪಡೆದು ಸ್ವಾವಲಂಬಿ ಜೀವನ ನಡೆಸಿ

ಹರಿಹರದಲ್ಲಿ ಅಮೃತ ಯೋಜನೆಯಡಿ ಸೌಲಭ್ಯಗಳ ವಿತರಿಸಿದ ಸಂಸದ ಜಿ.ಎಂ. ಸಿದ್ದೇಶ್ವರ

ಹರಿಹರ, ಸೆ,29- ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಸ್ವಾವಲಂಬಿ ಜೀವನ ನಡೆಸಬೇಕು ಎಂದು ಸಂಸದ ಜಿ.ಎಂ.ಸಿದ್ದೇಶ್ವರ ತಿಳಿಸಿದರು.

ನಗರದ ನಗರಸಭೆ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅಮೃತ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ ಹೊಲಿಗೆ ಯಂತ್ರ, ಜೆರಾಕ್ಸ್, ಲ್ಯಾಪ್‌ಟಾಪ್, ಟ್ಯಾಬ್ ವಿತರಿಸಿ ಅವರು ಮಾತನಾಡಿದರು.

ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ನೂರು ದಿನ ತುಂಬಿದರೂ ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆ ಮಾಡುತ್ತಿಲ್ಲ. ಹಿಂದಿನ ಬಸವರಾಜ ಬೊಮ್ಮಾಯಿ ಸರ್ಕಾರದ ಅಭಿವೃದ್ಧಿ ಕಾರ್ಯಗಳು ಈಗ ಉದ್ಘಾಟನೆಯಾಗುತ್ತಿವೆ ಎಂದರು.

ಬೊಮ್ಮಯಿ ಆಡಳಿತದ ಕಾಲದಲ್ಲಿ ಪ್ರತಿಯೊಂದು ನಗರಕ್ಕೆ ನಗರೋತ್ಥಾನ ಅಡಿಯಲ್ಲಿ 30 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದರು. ಅದರಲ್ಲಿ ಶೇ. 24 ರಷ್ಟು ಆರ್ಥಿಕವಾಗಿ ಹಿಂದುಳಿದಿರುವ ವರ್ಗ ದವರಿಗೆ ಬಳಕೆ ಮಾಡಬೇಕೆಂಬ ಉದ್ದೇಶವಿದೆ. ಆ ಯೋಜನೆಯ ಮೂಲಕ ಬಡವರಿಗೆ ಉಪಕರಣಗಳನ್ನು ವಿತರಿಸಲಾಗುತ್ತಿದೆ. ಇದರಲ್ಲಿ ರಾಜ್ಯ ಸರ್ಕಾರದ ಯಾವುದೇ ಪಾತ್ರ ಇಲ್ಲ ಎಂದರು.

ಕೇಂದ್ರ ಸರ್ಕಾರ ರಾಜ್ಯದಲ್ಲಿನ ಜನತೆಗೆ ಅನೇಕ ಅಭಿವೃದ್ಧಿ ಸೌಲಭ್ಯಗಳನ್ನು ಒದಗಿಸುತ್ತಿದ್ದು ಅದರಲ್ಲಿ ಸ್ವಚ್ಛತೆ, ಆದರ್ಶ ಗ್ರಾಮ ಯೋಜನೆ ಅಡಿಯಲ್ಲಿ ಮನೆ ನಿರ್ಮಾಣ, ಸ್ವ ನಿಧಿ ಯೋಜನೆ ಅಡಿಯಲ್ಲಿ ಬೀದಿ ಬದಿಯ ವ್ಯಾಪಾರಿಗಳಿಗೆ ಜಾಮೀನು ಇಲ್ಲದೆ 10 ಸಾವಿರ ರೂಪಾಯಿ ಸಾಲ ಸೌಲಭ್ಯ ಮತ್ತಿತತರೆ ಯೋಜನೆಗಳು ಸೇರಿವೆ ಎಂದರು.

ಶಾಸಕ ಬಿ.ಪಿ. ಹರೀಶ್ ಮಾತನಾಡಿ, ನಗರಸಭೆಯಲ್ಲಿ ಆಡಳಿತ ಕೈ ತಪ್ಪಿದೆ. ನಾನು ಶಾಸಕನಾಗಿ ನಾಲ್ಕು ತಿಂಗಳು ಕಳೆದರೂ ಇದುವರೆಗೂ ಸೌಜನ್ಯಕ್ಕಾದರು ನನಗೆ ನಗರಸಭೆ ಅಧಿಕಾರಿಗಳು ಭೇಟಿ ಮಾಡಿಲ್ಲ. ನಗರಸಭೆ ಆಡಳಿತದ ಬಗ್ಗೆ ಜನರು ರೋಸಿ ಹೋಗಿದ್ದಾರೆ ಎಂದರು.

ಪೌರಾಯುಕ್ತ ಐಗೂರು ಬಸವರಾಜ್ ಅವರು ವಾರ್ಡ್‌ಗೆ ಭೇಟಿ ನೀಡಿದರೆ ಜನರ ಕಷ್ಟ ತಿಳಿಯಲು ಸಾಧ್ಯ. ಕಚೇರಿಯಲ್ಲಿ ಕಾಲ ಹಾಕಿದರೆ ಜನರ ಕಷ್ಟ ಅರಿಯಲು ಸಾಧ್ಯವಿಲ್ಲ ಎಂದು ಹೇಳಿದರು.

ಪೌರಾಯುಕ್ತ ಐಗೂರು ಬಸವರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ, ಅಮೃತ ನಗ ರೋತ್ಥಾನ ಯೋಜನೆ ಹಂತ 4 ಮತ್ತು ಶೇ. 24.10 ರ ಯೋಜನೆಯಡಿ ಫಲಾನುಭವಿಗಳಿಗೆ 46 ಹೊಲಿಗೆ ಯಂತ್ರ, 42 ಜೆರಾಕ್ಸ್ ಯಂತ್ರ, 62 ಟ್ಯಾಬ್ , 124 ಲ್ಯಾಪ್‌ಟಾಪ್ ಸೇರಿದಂತೆ  294 ಫಲನುಭವಿಗಳಿಗೆ ಸೌಲಭ್ಯಗಳ ವಿತರಣೆ ಮಾಡಲಾಗಿದೆ ಎಂದು ಹೇಳಿದರು.

ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ನಿಂಬಕ್ಕ ನಿಂಗಪ್ಪ ಚಂದಪೂರ್,  ಸದಸ್ಯರಾದ ಗುತ್ತೂರು ಜಂಬಣ್ಣ , ಹನುಮಂತಪ್ಪ, ಪಕ್ಕಿರಮ್ಮ, ಸುಮಿತ್ರಾ , ನಾಗರತ್ನ, ಪಿ.ಎನ್. ವೀರುಪಾಕ್ಷಪ್ಪ, ಮುಜಾಮಿಲ್ಲ್ ಬಿಲ್ಲು, ಶಾಯಜಾದ್ ಸನಾವುಲ್ಲಾ, ನಗರಸಭೆ ಅಧಿಕಾರಿಗಳಾದ ಲಕ್ಷ್ಮಣ, ಜಗದೀಶ್, ರವಿಪ್ರಕಾಶ್, ಸಿಬ್ಬಂದಿಗಳಾದ ವೀಣಾ, ಲತಾ, ಮಮತಾ, ಜೆಡಿಎಸ್ ಪಕ್ಷದ ಮುಖಂಡರಾದ ಸುರೇಶ್ ಚಂದಪೂರ್, ಮಂಜುನಾಥ್ ಫೈನಾನ್ಸ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!