ಅರಿವಿನ ಪರಿಮಳ ಸೂಸಿದ ಶರಣ ಹೂಗಾರ ಮಾದಯ್ಯ

ಅರಿವಿನ ಪರಿಮಳ ಸೂಸಿದ ಶರಣ ಹೂಗಾರ ಮಾದಯ್ಯ

ಅನಂತನ ಹುಣ್ಣಿಮೆ : ಇಂದು ಶರಣ ಹೂಗಾರ ಮಾದಯ್ಯ  ಜಯಂತಿ

ಶರಣರ ಹೂಗಾರ ಮಾದಯ್ಯನವರು ಕಲ್ಯಾಣದ ಅನುಭವ ಮಂಟಪದ ಮಹಾಮನೆಯ ಏಳುನೂರಾ ಎಪ್ಪತ್ತು ಅಮರಗಣಂಗಳಲ್ಲಿ ಒಬ್ಬರು.

ಇವರ ಕುರಿತಾಗಿ ನಮಗೆ ಭೀಮ ಕವಿಯ ಬಸವ ಪುರಾಣದಲ್ಲಿ, ಜನಪದ ಸಾಹಿತ್ಯದಲ್ಲಿ, ಅನ್ನಪೂರ್ಣ ತಾಯಿಯವರ “ಜಾನಪದದಲ್ಲಿ ಶರಣರು” ಎನ್ನುವ ಸಾಹಿತ್ಯ ಕೃತಿಯಲ್ಲಿ ಮಾಹಿತಿಗಳು ದೊರೆಯುತ್ತವೆ.

ಶರಣ ಹೂಗಾರ ಮಾದಯ್ಯನವರು ಬಾಗಲಕೋಟಿ ಜಿಲ್ಲೆಯ ಬಾದಾಮಿ ಹತ್ತಿರದವರು ಎಂದು ತಿಳಿದು ಬರುತ್ತದೆ. ಇವರ ವಚನಗಳು ಲಭ್ಯವಾಗಿಲ್ಲ. 

ಬಾದಾಮಿ ಹತ್ತಿರದ ಒಂದು ಶಿವ ದೇವಾಲಯದಲ್ಲಿ  ಮಹಾದೇವ ಎನ್ನುವ ಶಿವ ಭಕ್ತ ಅರ್ಚಕ ವೃತ್ತಿಯನ್ನು ಮಾಡುತ್ತಿದ್ದ.

ಐಹೊಳೆಯ ಪಟ್ಟಣದಲ್ಲಿ  ವೇದಭಾಸ್ಕರ, ಗುಣವತಿ ಎಂಬ ರಾಜ ರಾಣಿಯರು ಇರುತ್ತಾರೆ.  ಇವರ ಮಗ ಶಿವಯೋಗಿ ಮಲ್ಲರಸ (ಮಾದರಸ) ಮುಂದೆ ತಾರುಣ್ಯಕ್ಕೆ ಬಂದಾಗ ಕಲಕುರ್ಕಿಯ ಅರಸರಾಗುತ್ತಾರೆ.

ಬಾದಾಮಿ ಹತ್ತಿರವಾದ ಕಾರಣ ಶಿವಯೋಗಿ ಮಲ್ಲರಸರು ಆಗಾಗ ಮಹಾದೇವ ಪೂಜಿಸುತ್ತಿದ್ದ ಶಿವ ದೇವಾಲಯಕ್ಕೆ ಭೇಟಿ ಕೊಡುತ್ತಿದ್ದರು. ಹಾಗಾಗಿ ಮಲ್ಲರಸರಿಗೂ-ಮಹಾದೇವರಿಗೂ ಆತ್ಮೀಯ ಸ್ನೇಹ ಉಂಟಾಗುತ್ತದೆ.

ಅನಂತನ ಹುಣ್ಣಿಮೆಯಂದು ಮಹಾದೇವನಿಗೆ ಮಗ ಹುಟ್ಟುತ್ತಾನೆ. ಮಹಾದೇವನಿಗೆ ಶಿವನಲ್ಲಿ ಅಪಾರವಾದ ಶ್ರದ್ಧೆ, ಭಕ್ತಿ ಇದ್ದ ಕಾರಣ ಅವನಿಗೆ ಮಹಾದೇವ ಎಂದೇ ಹೆಸರಿಡುತ್ತಾನೆ. ತಂದೆ ಮಗನ ಹೆಸರು ಒಂದೇ ಆದ್ದರಿಂದ ಊರಿನ ಜನ ಮಗನಿಗೆ ಚಿಕ್ಕ ಮಾದಣ್ಣ ಎಂದು ಕರೆಯುತ್ತಾರೆ.

ಪ್ರತಿದಿನ ಚಿಕ್ಕ ಮಾದಣ್ಣನು ಹೂವು, ಪತ್ರೆಗಳನ್ನು ತಂದು,  ತಂದೆ ಪೂಜಿಸುವ ದೇವಾಲಯದ ಶಿವಲಿಂಗಕ್ಕೆ ಹೂವಿನ ಅಲಂಕಾರವನ್ನು,  ಜನರ ಕಣ್ಮನ ಸೆಳೆಯುವಂತೆ ಬಹಳ ಸುಂದರವಾಗಿ ಅಲಂಕರಿಸುವುದನ್ನು ಕರಗತ ಮಾಡಿಕೊಂಡಿದ್ದ. ಬಹಳ ಶ್ರದ್ಧೆ, ಭಕ್ತಿಯಿಂದ ಹೂವು ಪತ್ರೆಗಳಿಂದ ಅಲಂಕರಿಸುವುದು ಮಾದಣ್ಣನ ಕಾಯಕವಾಗಿ ಮುಂದುವರೆಯುತ್ತದೆ. ಅಂದಿನಿಂದ ಊರ ಜನರು ಚಿಕ್ಕ ಮಾದಣ್ಣನನ್ನು ಹೂಗಾರ ಮಾದಣ್ಣ ಎಂದು  ಕರೆಯಲಾರಂಭಿಸುತ್ತಾರೆ.

ಮಾದಣ್ಣನಿಗೆ ಮಾದೇವಿ ಎನ್ನುವ ವಧುವಿನೊಂದಿಗೆ  ವಿವಾಹವಾಗುತ್ತದೆ.

ಕಲಕುರ್ಕಿಯ ಅರಸರಾದ ಶಿವಯೋಗಿ ಮಾದರಸರಿಗೂ ಒಬ್ಬ ಮಗ ಇರುತ್ತಾನೆ. ಅವನೇ ಸಕಲೇಶ ಮಾದರಸ. ತಂದೆಯೊಂದಿಗೆ ಸಕಲೇಶ ಮಾದರಸರು ಶಿವನ ದೇವಸ್ಥಾನಕ್ಕೆ ಹೋಗುತ್ತಿದ್ದರು. ಆದ್ದರಿಂದ ಹೂಗಾರ ಮಾದಯ್ಯನವರಿಗೂ – ಸಕಲೇಶ ಮಾದರಸರಿಗೂ ಸಂಪರ್ಕ ಹೆಚ್ಚಾಗುತ್ತದೆ.

ಮಾದಣ್ಣನಿಗೆ ಸಕಲೇಶ ಮಾದರಸರು ಬಸವಣ್ಣನವರ ವಿಚಾರಗಳನ್ನು ಸಿಕ್ಕಾಗಲೆಲ್ಲ ತಿಳಿಸುತ್ತಾ ಹೋಗುತ್ತಾರೆ.

ಸಕಲೇಶ ಮಾದರಸರಿಂದ ಎಲ್ಲಾ ಮಾಹಿತಿಗಳನ್ನು ಪಡೆದು ದಂಪತಿ ಕಲ್ಯಾಣಕ್ಕೆ ಹೋಗಿ ಬರುವುದಾಗಿ ನಿಶ್ಚಯಿಸಿ, ಕಲ್ಯಾಣಕ್ಕೆ ಬರುತ್ತಾರೆ.

ಹಡಪದ ಅಪ್ಪಣ್ಣನವರಲ್ಲಿ ತಮ್ಮ ಪರಿಚಯಗಳನ್ನೆಲ್ಲಾ ಹೇಳಿಕೊಂಡು ಬಸಣ್ಣನವರನ್ನು ಕಾಣುತ್ತಾರೆ. ಎಲ್ಲಾ ಶರಣ ಸಂಕುಲವನ್ನು ಕಂಡು ಆನಂದವಾಗಿ ಸಂತೃಪ್ತರಾಗಿ, ನಾವು ಕಲ್ಯಾಣದಲ್ಲೇ ಇರುತ್ತೇವೆ ಎಂಬ ಆಶಯವನ್ನು ವ್ಯಕ್ತಪಡಿಸುತ್ತಾರೆ.

ಮಹಾಮನೆಯಲ್ಲಿರುವ ಎಲ್ಲಾ ತತ್ವ, ಸಿದ್ಧಾಂತಗಳಿಗೆ ಬದ್ಧರಾಗಿ ಇರುವುದಾಗಿ ಸಮ್ಮತಿಸಿ, ಶರಣ ಸಕಲೇಶ ಮಾದರಸರಿಂದ ಲಿಂಗ ದೀಕ್ಷೆಯನ್ನು ಪಡೆಯುತ್ತಾರೆ.

” ಸಕಲೇಶ ಮಾದರಸು ಭಕುತ ಮಾದಯ್ಯನಿಗೆ 

ನಿಕಟಗರು ಲಿಂಗ ಜಂಗಮನು | ಕಾಯಕದ

ನಿಕಸ ಮಂಟಪಕೆ ಮೂಗುತಿಯೂ ”

ಎಂದು ಜನಪದಕಾರರು ಹೇಳುತ್ತಾರೆ.

ಕಲ್ಯಾಣದ ನಿಯಮದಂತೆ ಶರಣನಾದವನು ಮೊದಲು ಕಾಯಕ ಮಾಡಬೇಕು.  ಅದರಂತೆ ಮಾದಣ್ಣನವರು ತಾವು ಮಾಡುತ್ತಿದ್ದ ಹೂವು ಪತ್ರೆ ಕಾಯಕವನ್ನೇ ಪ್ರತಿ ದಿನ ಶರಣರ ಲಿಂಗ ಪೂಜೆಗೆ ಹೂವು ಪತ್ರೆಗಳನ್ನು ತಂದು ಕೊಡುವ ಕಾಯಕವಾನ್ನಾಗಿ ಮಾಡುತ್ತಾರೆ. 

“ಹೂವು ಪತ್ರೆ ದವನಗಳು ಆಪು ಶಿವ ಪೂಜೆಗೆನೆ

ತಾಪ ಸಂಸಾರ ನೀಗುದಕೆ | ಮಾದಣ್ಣ

ಮಾಪರಿತನದರ ಕಾಯಕವ ”

“ಹೂಗಾರ ಮಾದಣ್ಣ ಬೇಗುದಯಹರಿಯುದಕೆ

ಹೋಗಿ ಹೂ ಪತ್ರಿ ಬನದೊಳಗೆ | ಎತ್ತರಲು

ಜೋಗಿ ಜಂಗಮರ ಶಿವ ಪೂಜೆ”

ಹೀಗೆ ಹೂವು ಪತ್ರೆ ತಲುಪಿಸುವ ಕಾಯಕ ಮಾಡುತ್ತಿರಲು ಅಂದಿನಿಂದ ಹೂಗಾರ ಮಾದಣ್ಣನವರು ಎನ್ನುವುದು ಹೋಗಿ, ಶರಣ ಹೂಗಾರ ಮಾದಯ್ಯ ಎಂದಾಗುತ್ತದೆ.

ಬೆಳಗಿನ ಜಾವ ನಸುಕಿನಲ್ಲೇ ಎದ್ದು ಹೂವು, ಪತ್ರೆ ವನಕ್ಕೆ ಹೋಗಿ ಹೂವು, ಪತ್ರೆಗಳನ್ನು ತಂದು ಶರಣರ ಮನೆ ಮನೆಗೆ ತಲುಪಿಸಿ, ಶರಣರು ನೀಡಿದ ದ್ರವ್ಯದಿಂದ ದಂಪತಿಗಳಿಬ್ಬರು ಕೂಡಿಕೊಂಡು ಶರಣರಿಗೆ, ಜಂಗಮರಿಗೆ ದಾಸೋಹವನ್ನು ಮಾಡಿ,  ಶರಣರೊಂದಿಗೆ ಅರಿವಿನ ಅನುಭಾವದೊಂದಿಗೆ ಪರಮ ಸುಖಿಯಾಗಿರುತ್ತಾರೆ. 

“ಕಲ್ಯಾಣ ಮನೆಯಾಯಿತ್ತು ಎಲ್ಲಾ ಶಿವಶರಣರಿಗೆ,

ನಲ್ಲೆ ಮಾದೇವಿ ಲಿಂಗಣ್ಣ ಮಗನೊಡನೆ ಉಲ್ಲಾಸದಿಂದಿದ್ದರು ಮಾದಯ್ಯ ”

ಶರಣರು, ಶರಣರ ಜೀವನವು ಹೂ ಇದ್ದಂತೆ. ಮಾದಯ್ಯನವರು ಅದರಂತೆ ಶರಣರಿಂದ ಅರಿವು ಎನ್ನುವ ಮಕರಂಧವನ್ನು ಹೀರಿಕೊಂಡು, ತಮ್ಮೊಳಗೆ ಇಟ್ಟುಕೊಳ್ಳುತ್ತಾ,  ಅನುಭಾವವೆಂಬ ಜೇನುತುಪ್ಪವನ್ನು ಸವಿದವರು. ಅನುಭಾವದ ಸುಧೆಯನ್ನು ಹಂಚಿದವರು. ಕಲ್ಯಾಣದಲ್ಲಿ ಅರಿವಿನ ಪರಿಮಳವನ್ನು ಸೂಸಿದವರು ಶರಣ ಹೂಗಾರ ಮಾದಯ್ಯನವರು.


– ಶಿವಪ್ರಸಾದ ಕರ್ಜಗಿ, ದಾವಣಗೆರೆ.

error: Content is protected !!