ನಗರದಲ್ಲಿ ಸಡಗರ-ಸಂಭ್ರಮದ ಈದ್ ಮಿಲಾದ್

ನಗರದಲ್ಲಿ ಸಡಗರ-ಸಂಭ್ರಮದ ಈದ್ ಮಿಲಾದ್

ದಾವಣಗೆರೆ, ಸೆ. 28- ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮದಿನದ ಸಂಕೇತವಾಗಿರುವ ಈದ್ ಮಿಲಾದ್ ಹಬ್ಬವನ್ನು  ನಗರಾದ್ಯಂತ ಮುಸ್ಲಿಂ ಬಾಂಧವರು ಸಡಗರ, ಸಂಭ್ರಮದಿಂದ ಆಚರಿಸಿದರು.

ಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ಮೆರವಣಿಗೆಗೆ (ಜುಲುಸ್) ಮಧ್ಯಾಹ್ನ 2 ಗಂಟೆಗೆ ಆಜಾದ್ ನಗರದಲ್ಲಿರುವ ಮದೀನಾ ಅರಬ್ಬಿ ಮದರಸಾದಿಂದ ಪ್ರಾರಂಭಗೊಂಡು ಚಾಮರಾಜಪೇಟೆ, ಮಂಡಿಪೇಟೆ, ವಸಂತ ರಸ್ತೆ, ರೈಲ್ವೇಗೇಟ್ ಮೂಲಕ ಪಿ.ಬಿ. ರಸ್ತೆ, ಅರುಣ ಚಿತ್ರಮಂದಿರದ ಬಳಿ ವಿನೋಬನಗರ, ಶಂಕರ್ ವಿಹಾರ್ ಬಡಾವಣೆಯಿಂದ ಆಗಮಿಸಿದ ಮತ್ತೊಂದು ತಂಡ ವಿಲೀನಗೊಂಡು ಗಾಂಧಿ ವೃತ್ತ ತಲುಪಿತು.

ಕೆಟಿಜೆ ನಗರ, ನಿಟುವಳ್ಳಿ, ಸೈಯದ್ ಪೀರ್ ಬಡಾವಣೆಯಿಂದ ಆಗಮಿಸಿದ ಮುಸ್ಲಿಂ ಬಾಂಧವರು ಅಶೋಕ ಟಾಕೀಸ್ ರೈಲ್ವೆ ಗೇಟ್ ಮೂಲಕ ಕೆ.ಆರ್. ರಸ್ತೆಗೆ ಬಂದು ಮಾಗಾನಹಳ್ಳಿ ರಸ್ತೆಯಲ್ಲಿರುವ ಮಹಮ್ಮದ್ ಅಲಿ ಜೋಹರ್ ನಗರದಲ್ಲಿ ಮಂಡಕ್ಕಿ ಭಟ್ಟಿ ಲೇಔಟ್‌ ನಲ್ಲಿರುವ ಮಿಲಾದ್‌ ಮೈದಾನದಲ್ಲಿ ಸಾಮೂಹಿಕ ವಾಗಿ ಸೇರಿಕೊಂಡು ಸಮಾರೋಪ ಮಾಡಲಾಯಿತು.

ಸಂಜೆ ನಡೆದ ಸಮಾರೋಪ ಸಮಾ ರಂಭದಲ್ಲಿ ಧರ್ಮಗುರುಗಳು ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಸಂದೇಶ ಗಳ ಪ್ರವಚನ ಮಾಡಿ ನಂತರ ಫಾತೇಹಾ ಖ್ವಾನಿ ಪಠಿಸಲಾಯಿತು.

ಈದ್-ಮಿಲಾದ್ ಸಮಿತಿ ಅಧ್ಯಕ್ಷ ಅಲ್ಹಾಜ್ ಎ.ಬಿ.ಹಬೀಬ್‌ವುಲ್ಲಾ ಸಾಬ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಯಾಸೀನ್ ಪೀರ್ ರಜ್ವಿ, ಕಾರ್ಯದರ್ಶಿ ನಜೀರ್ ಅಹಮದ್, ಖಜಾಂಚಿ ಜಬೀವುಲ್ಲಾ, ಬಿ.ಪಿ. ಶಫೀಸಾಬ್ ಸೇರಿದಂತೆ, ಮುಖಂಡರಾದ ಸೈಯದ್ ಸೈಫುಲ್ಲಾ, ಅಲ್ಫತಾ ಅಬ್ದುಲ್ ರೆಹಮಾನ್, ನಸೀರ್ ಅಹಮದ್, ಅಕ್ಬರ್ ಅಲಿ, ಎಂ.ಆರ್. ಸಿದ್ಧೀಕ್, ಷನವಾಜ್ ಖಾನ್ ಸೇರಿದಂತೆ, ಇನ್ನೂ ಅನೇಕರು ಉಪಸ್ಥಿತರಿದ್ದರು.

ಪತ್ರಕರ್ತ ಬಿ.ಸಿಕಂದರ್, ಬುತ್ತಿ ಗಫೂರ್ ಸಾಬ್, ತಂಜೀಮ್ ಸಮಿತಿ ಅಧ್ಯಕ್ಷ ದಾದಾಪೀರ್ (ದಾದು ಸೇಠ್), ಉಪಾಧ್ಯಕ್ಷ ಎಸ್.ಕೆ. ಅಮ್ಜದ್ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಒಂದು ತಂಡ ಮಾಡಿಕೊಂಡು ರಸ್ತೆಯುದ್ದಕ್ಕೂ ಮುಸ್ಲಿಂ ಬಾಂಧವರಿಗೆ ಶುಭ ಕೋರುತ್ತಾ, ಹೆಜ್ಜೆ ಹಾಕುತ್ತಿದ್ದರು. ಈದ್-ಮಿಲಾದ್ ಸಮಿತಿ ರಚನೆಯ ಹಿನ್ನೆಲೆಯಿಂದ ಅಸಮಾಧಾನಗೊಂಡಿದ್ದ ಹಳೇ ಸಮಿತಿಯ ಪದಾಧಿಕಾರಿಗಳು ಆಹ್ವಾನ ನೀಡಿಲ್ಲ ಎಂಬ ಪಿಸುಮಾತು ಕೇಳಿ ಬಂದಿತು.

ಮೆರವಣಿಗೆಯ ಕೇಂದ್ರ ಬಿಂದುವಾಗಿದ್ದ ಮದೀನಾ ರೂಪದ ಗುಂಬಜ್ ಕೆ.ಆರ್. ರಸ್ತೆ, ನೂರಾನಿ ಆಟೋ ನಿಲ್ದಾಣದ ಬಳಿ ಆಗಮಿಸಿದಾಗ ಆಟೋ ಚಾಲಕರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಬಲಾವ್ ಪುಷ್ಪಾರ್ಚನೆ ಬಹಳ ವಿಶೇಷವಾಗಿತ್ತು. ಸೇರಿದ್ದ ಜನರು ತಮ್ಮ ಮೊಬೈಲ್ ನಲ್ಲಿ ದೃಶ್ಯಗಳನ್ನು ಸೆರೆ ಹಿಡಿಯುತ್ತಿದ್ದರು.

ಹೊಸ ಬಟ್ಟೆಗಳನ್ನು ಧರಿಸಿಕೊಂಡು ತಲೆಗೆ ಟೋಪಿ, ದರ್ಬಾನ್ (ಪೇಟ) ಕಟ್ಟಿಕೊಂಡು ಕೈಯಲ್ಲಿ ಝಂಡಾಗಳನ್ನು ಹಿಡಿದು `ನಾರೇ ತಕರೀರ್ ಅಲ್ಲಾಹು ಅಕ್ಬರ್’ ಎಂಬ ಘೋಷಣೆಗಳನ್ನು ಪಠಿಸುತ್ತಾ ಚಿಕ್ಕ ಚಿಕ್ಕ ಮಕ್ಕಳೊಂದಿಗೆ ಹೆಜ್ಜೆ ಹಾಕುತ್ತಿದ್ದ ಮುಸ್ಲಿಂ ಬಾಂಧವರಿಗೆ ರಸ್ತೆಯುದ್ದಕ್ಕೂ ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ಹಣ್ಣು, ಸಿಹಿ, ಷರಬತ್ತು, ತಂಪು ಪಾನೀಯಗಳನ್ನು ನೀಡಿ ಸಹಕರಿಸಿದರು. 

error: Content is protected !!