ವೀರಶೈವ ಒಳಪಂಗಡಗಳಿಗೆ ಓಬಿಸಿ ಲಾಭಕರ

ವೀರಶೈವ ಒಳಪಂಗಡಗಳಿಗೆ ಓಬಿಸಿ ಲಾಭಕರ

ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಮತ

ದಾವಣಗೆರೆ, ಸೆ. 26- ಪ್ರತ್ಯೇಕ ಧರ್ಮದ ಮಾನ್ಯತೆ ಪಡೆದುಕೊಳ್ಳುವುದಕ್ಕಿಂತ ಕೇಂದ್ರದ ಓಬಿಸಿ ಸ್ಥಾನ ಪಡೆದುಕೊಳ್ಳುವುದು ವೀರಶೈವ ಲಿಂಗಾಯತ ಧರ್ಮದ ಒಳಪಂಗಡಗಳಿಗೆ ಹೆಚ್ಚು ಲಾಭಕರವಾಗಲಿದೆ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ದಾವಣಗೆರೆ-ಹರಿಹರ ಅರ್ಬನ್ ಸಹಕಾರಿ ಸಮುದಾಯ ಭವನದಲ್ಲಿ ಇಂದು ಆಯೋಜನೆಗೊಂಡಿದ್ದ ಶ್ರೀಶೈಲ ಜಗದ್ಗುರು ಲಿಂ. ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿಯವರ 37 ನೇ ಪುಣ್ಯಾರಾಧನೆ ಹಾಗೂ ಲಿಂ. ಉಮಾಪತಿ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ 12 ವರ್ಷದ ಸ್ಮರಣೋತ್ಸವ, ಉಜ್ಜಯಿನಿ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ದ್ವಾದಶ ಪೀಠಾರೋಹಣ ವರ್ಧಂತಿ ಮಹೋತ್ಸವ ಹಾಗೂ ಜನ ಜಾಗೃತಿ ಧರ್ಮ ಸಮ್ಮೇಳನದ ಸಾನ್ನಿಧ್ಯ ವಹಿಸಿ ಜಗದ್ಗುರುಗಳು ಆಶೀರ್ವಚನ ನೀಡಿದರು.

ಕೇಂದ್ರದ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ವೀರಶೈವ ಲಿಂಗಾಯತ ಧರ್ಮದ ಎಲ್ಲಾ ಒಳಪಂಗಡಗಳನ್ನು ಸೇರಿಸುವುದಕ್ಕಾಗಿ ಎಲ್ಲಾ ಮಠಾಧೀಶರು ಸರ್ಕಾರವನ್ನು ಆಗ್ರಹಿಸುವ ಹೋರಾಟ ಮಾಡುತ್ತಿರುವುದಾಗಿ ತಿಳಿಸಿದರು.

ಪ್ರತ್ಯೇಕ ಧರ್ಮದವರಿಗೆ ಶೇ. 4.5 ಮೀಸಲಾತಿ ಇದ್ದರೆ, ಓಬಿಸಿಯವರಿಗೆ 22.5 ಮೀಸಲಾತಿ ಇದೆ. ಆದರೆ ಧರ್ಮದ ಮಾನ್ಯತೆಗಿಂತ ಕೇಂದ್ರದ ಓಬಿಸಿ ಮೀಸಲಾತಿ ಪಡೆಯುವುದು ಅವಶ್ಯ ಎಂದರು.

ಸಮಾಜದ ಎಲ್ಲಾ ಪಂಗಡಗಳಿಗೂ ಇದನ್ನು ನೀಡಬೇಕೆಂಬ ಆಗ್ರಹವಿರುವ ಕಾರಣ ತನ್ಮೂಲಕ ಸಮಾಜದ ಸಂಘಟನೆ ಸಹ ಸಾಧ್ಯವಾಗುತ್ತದೆ ಎಂಬುದು ನಮ್ಮ ಭಾವನೆ. ಮೀಸಲಾತಿ ಹೋರಾಟಕ್ಕೆ ಸಮಾಜದ ಎಲ್ಲರೂ ಕೈಜೋಡಿಸಬೇಕೆಂದು ಕರೆ ನೀಡಿದರು.

ಶ್ರೀಶೈಲ ಪೀಠದ ಸರ್ವಾಂಗೀಣ ವಿಕಾಸಕ್ಕೆ ಭದ್ರ ಬುನಾದಿ ಹಾಕಿ, ಧರ್ಮಪೀಠ, ಸಮಾಜಗಳನ್ನು ವಿಕಾಸಗಳೊ ಸಿದವರು ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳ ನಂತರ ಅನೇಕ ದಶಕಗಳವರೆೆಗೆ ಸಮಾಜಕ್ಕೆ ಧರ್ಮದ ಮಾರ್ಗದರ್ಶನ ಮಾಡುವ ಜೊತೆಗೆ ಪೀಠದ ಅಂಗ ಸಂಸ್ಥೆ ಮತ್ತು ಶಾಖಾ ಮಠಗಳನ್ನು ಬೆಳೆಸಿದವರು ಉಮಾಪತಿ ಪಂಡಿತಾರಾಧ್ಯ ಶ್ರೀಗಳು ಎಂದರು.

ವೀರಶೈವ ಒಳಪಂಗಡಗಳಿಗೆ ಓಬಿಸಿ ಲಾಭಕರ - Janathavani

ಸನಾತನ ವೀರಶೈವ ಲಿಂಗಾಯತ ಧರ್ಮಕ್ಕೆ ತನ್ನದೇ ಆದ ವಿಶಿಷ್ಟವಾದ ಆದಿ ಗುರುಪರಂಪರೆ ಇದೇ. ಗುರು ಮತ್ತು ವಿರಕ್ತ ಎಂಬುದಾಗಿ ಮೇಲ್ನೋಟಕ್ಕೆ ಈ ಪರಂಪರೆ ಎರಡು ವಿಧವಾಗಿ ಗೋಚರಿಸುತ್ತವೆ. ಕೆಲವು ಸಣ್ಣಪುಟ್ಟ ವ್ಯತ್ಯಾಸಗಳನ್ನು ಹೊರತುಪಡಿಸಿದರೆ. ಈ ಎರಡೂ ಪರಂ ಪರೆಗಳ ತತ್ವ, ಸಿದ್ಧಾಂತ, ಆಚರಣೆ ಮತ್ತು ಉದ್ದೇಶಗಳು ಒಂದೇ ಆಗಿರುವುದರಿಂದ ಗುರು ಮತ್ತು ವಿರಕ್ತ ಪರಂ ಪರೆಗಳು ಈ ಧರ್ಮದ ಎರಡು ಕಣ್ಣುಗಳಿದ್ದಂತೆ. ಸಮಾಜವು ಎರಡನ್ನೂ ವಿಭಜಿಸಿ ನೋಡುವ ಪ್ರಯತ್ನ ಮಾಡಬಾರದು ಎಂದು ಹಿತ ನುಡಿದರು.

ಶಿವಭಕ್ತಿಯನ್ನು ಹೇಗೆ ಮಾಡಬೇಕೆಂಬ ಅರಿವು ಗುರುವಿನಿಂದಲೇ ಪ್ರಾಪ್ತವಾಗುವುದರಿಮದ ಗುರು ಭಕ್ತಿಯ ಮೂಲಕ ಅದನ್ನು ಪಡೆದುಕೊಳ್ಳದೇ ಗುರುವನ್ನು ಕಡೆಗಣಿಗಸಿ ಶಿವಭಕ್ತಿಯನ್ನು ಮಾಡಿದರೆ ಅದು ಸಿದ್ಧಿಯಾಗುವುದಿಲ್ಲ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಮಾತನಾಡಿ, ಶ್ರೀಶೈಲ ಜಗದ್ಗುರುಗಳು ಹಿಂದಿನಿಂದಲೂ ನಮ್ಮ ಮನೆತನಕ್ಕೆ ಆಶೀರ್ವಾದ ಮಾಡಿದ್ದರಿಂದ ನಮಗೆ ಉನ್ನತ ಸ್ಥಾನಮಾನ ಸಿಗಲು ಸಾಧ್ಯವಾಗಿದೆ ಎಂದರು.

ಕೇದಾರ ಶ್ರೀಗಳು ಸಹ ನಮ್ಮ ನಿವಾಸಕ್ಕೆ ಆಗಮಿಸಿ ಸಂಗೀತಯುಕ್ತ ಇಷ್ಟಲಿಂಗ ಪೂಜೆ ಮಾಡಿ ನಮ್ಮನ್ನು ಹರಿಸಿರುವುದು ನಮಗೆ ಅತ್ಯಂತ ಹರ್ಷ ತಂದಿದೆ ಎಂದು ಹೇಳಿದರು.

ಎಲ್ಲಾ ಪೂಜ್ಯರ ಆಶೀರ್ವಾದದಿಂದ ನಾಡಿನಲ್ಲಿ ಉತ್ತಮ ಮಳೆ, ಬೆಳೆಯಾಗಿ ರೈತರ ಬದುಕು ಹಸನಾಗಲಿ ಎಂದು ಆಶಿಸಿದ ಸಚಿವರು, ನಮ್ಮ ಸರ್ಕಾರ ಐದು ಗ್ಯಾರಂಟಿ ನೀಡುವ ಮೂಲಕ ಮಹಿಳೆಯರಿಗೆ ಅನೇಕ ಯೋಜನೆಗಳನ್ನು ರೂಪಿಸಿದೆ. ಇದರಿಂದ ನಾಡಿನ ಜನತೆಗೆ ಒಳಿತಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಉಜ್ಜಯಿನಿ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ನಾವು ಭಾರತೀಯರೆಂಬ ಸಮನ್ವಯ ಭಾವ ಎಲ್ಲರಲ್ಲಿ ಮೂಡಲಿ, ನಾಡಿನಲ್ಲಿ ಮಳೆ, ಬೆಳೆ, ವ್ಯಾಪಾರ, ವಹಿವಾಟು ಸಮೃದ್ಧಿಯಾಗಿ ಆಗಲಿ ಎಂದು ಆಶಿಸಿದರು.

ಶ್ರೀಶೈಲ ಪೀಠವನ್ನು ಅತ್ಯಂತ ಎತ್ತರಕ್ಕೆ ಏರಿಸಿದ ಕೀರ್ತಿ ಲಿಂ. ವಾಗೀಶ ಪಂಡಿತಾರಾಧ್ಯ ಶ್ರೀ ಹಾಗೂ ಲಿಂ. ಉಮಾಪತಿ ಪಂಡಿತಾರಾಧ್ಯ ಶ್ರೀಗಳಿಗೆ ಸಲ್ಲುತ್ತದೆ. ಉಭಯ ಜಗದ್ಗುರುಗಳಲ್ಲಿನ ಕರ್ತೃ ತ್ವ ಶಕ್ತಿ ಅವರ ಸೇವೆಯ ಮೂಲಕ ಉತುಂಗಕ್ಕೆ ಕೊಂಡೊಯ್ದಿದೆ ಎಂದರು.

ಬಸವನ ಬಾಗೇವಾಡಿ ಹಿರೇಮಠದ ಶ್ರೀ ಒಡೆಯರ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ, ಮಾಜಿ ಸಚಿವ ಎಸ್.ಎ. ರವೀಂದ್ರನಾಥ್, ಪತ್ರಕರ್ತ ಪ್ರಶಾಂತ್ ರಿಪ್ಪನಪೇಟೆ, ಜ್ಯೋತಿ ರಾಧೇಶ್ ಜಂಬಗಿ ಮಾತನಾಡಿದರು.

ಕಾಶೀ ಜಗದ್ಗುರುಗಳು ಸೇರಿದಂತೆ ಅಂಬಿಕಾನಗರದ ಶ್ರೀ ಈಶ್ವರ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಆವರಗೊಳ್ಳದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ, ರಾಮಘಟ್ಟದ ಶ್ರೀ ರೇವಣಸಿದ್ದ ಶಿವಾಚಾರ್ಯ ಸ್ವಾಮೀಜಿ, ಶ್ರೀ ರಾಚೋಟಿ ಶಿವಾಚಾರ್ಯ ಸ್ವಾಮೀಜಿ,  ಮಣಕೂರು ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಕೋಣಂದೂರು ಶ್ರೀ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಶ್ರೀ ಕೇದಾರ ಶಾಂತಲಿಂಗ ಸ್ವಾಮೀಜಿ, ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ತೋಗರ್ಸಿ ಶ್ರೀಗಳು ಸಮ್ಮುಖ ವಹಿಸಿದ್ದರು.

ದೂಡ ಮಾಜಿ ಅಧ್ಯಕ್ಷ ಕೆ.ಎಂ. ಸುರೇಶ್, ದಾವಣಗೆರೆ-ಹರಿಹರ ಅರ್ಬನ್ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎನ್.ಎ. ಮುರುಗೇಶ್, ಪಾಲಿಕೆ ಸದಸ್ಯ ಗಡಿಗುಡಾಳ್ ಮಂಜುನಾಥ್, ಕೆ.ಎಂ. ಪರಮೇಶ್ವರಯ್ಯ, ರಾಜಶೇಖರಯ್ಯ, ಬನ್ನಯ್ಯ ಸ್ವಾಮಿ, ರಾಜಶೇಖರ ಗುಂಡಗಟ್ಟಿ, ಎಂ.ಎನ್. ಹರೀಶ್, ಟಿ.ಎಂ. ವಿನಾಯಕ, ಕೊಟ್ರೇಶ್, ಎನ್.ಹೆಚ್.ಪಾಟೀಲ್, ಹೇಮಂತ ಆರಾಧ್ಯ, ಬೆಳ್ಳೂಡಿ ಜ್ಯೋತಿ ಪ್ರಕಾಶ್, ಆರ್.ಟಿ. ಪ್ರಶಾಂತ್, ಎಂ.ಎನ್. ಜಯಪ್ರಕಾಶ್ ಮತ್ತಿತರರಿದ್ದರು.

ಶ್ರೀಶೈಲ ಮಠದ ಗುರುಕುಲ ಸಾಧಕರಿಂದ ವೇದಘೋಷ, ಸಂಗೀತಾ ರಾಘವೇಂದ್ರ ಪ್ರಾರ್ಥಿಸಿದರು. ಮುರುಗೇಶ್ ಸ್ವಾಗತಿಸಿದರು. ಸೌಭಾಗ್ಯ ಹಿರೇಮಠ ನಿರೂಪಿಸಿದರು. ಶಿವಕುಮಾರ್ ಶೆಟ್ಟರ್ ಧ್ವಜ ವಂದನೆ ಸ್ವೀಕರಿಸಿದರು.

error: Content is protected !!