ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

ಭಾರತೀಯ ರೈತ ಒಕ್ಕೂಟ, ಬಿಜೆಪಿ ಹಾಗೂ ವಿವಿಧ ಸಂಘಟನೆಗಳಿಂದ ಪ್ರತಿಭಟನೆ, ಸರ್ಕಾರದ ವಿರುದ್ಧ ಆಕ್ರೋಶ

ದಾವಣಗೆರೆ, ಸೆ.25- ಭದ್ರಾ ಕಾಲುವೆಗಳಿಗೆ ನೀರಿನ ಹರಿವು ಸ್ಥಗಿತಗೊಂಡಿರುವುದನ್ನು ವಿರೋಧಿಸಿ ಹಾಗೂ 100 ದಿನಗಳ ಕಾಲ ಸತತವಾಗಿ ನೀರು ಹರಿಸುವಂತೆ ಒತ್ತಾಯಿಸಿ ಭಾರತೀಯ ರೈತ ಒಕ್ಕೂಟದಿಂದ ಸೋಮವಾರ ಕರೆ ನೀಡಲಾಗಿದ್ದ ದಾವಣಗೆರೆ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ನಗರದ ಜಯದೇವ ವೃತ್ತ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಮಾತ್ರ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.  ಸ್ವಯಂ ಪ್ರೇರಿತರಾಗಿಯೇ ಈ ಪ್ರದೇಶಗಳಲ್ಲಿ ಮಳಿಗೆಗಳು ಮುಚ್ಚಲ್ಪಟ್ಟಿದ್ದವು. ಉಳಿದಂತೆ ನಗರದ ಬೇರೆ  ಭಾಗಗಳಲ್ಲಿ ಬಹುತೇಕ ಅಂಗಡಿ ಮುಂಗಟ್ಟುಗಳು ತೆರೆಯಲ್ಪಟ್ಟಿದ್ದವು.

ಸರ್ಕಾರಿ ಕಚೇರಿಗಳು, ಬ್ಯಾಂಕುಗಳು, ಪೆಟ್ರೋಲ್ ಬಂಕ್‌ಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ಬೆರಳೆಣಿಕೆಯಷ್ಟು ಶಾಲೆಗಳು ಮಾತ್ರ ರಜೆ ಘೋಷಿಸಿದ್ದರೆ, ಬಹುತೇಕ ಶಾಲಾ-ಕಾಲೇಜುಗಳು ಎಂದಿನಂತಿದ್ದವು. 

ನಗರ ಸಾರಿಗೆ ಬಸ್‌ಗಳ ಸಂಚಾರ ಸ್ಥಗಿತವಾಗಿತ್ತು. ಆದರೆ ಆಟೋಗಳು ಎಂದಿನಂತೆ ಸಂಚರಿಸಿದವು. ಸಾರಿಗೆ ಬಸ್‌ಗಳಿಲ್ಲದೆ ಪ್ರಯಾಣಿಕರು ಪರದಾಡುತ್ತಿದ್ದರು. ಈ ಅವಕಾಶ ಬಳಸಿಕೊಂಡ ಆಟೋದವರು ಹೆಚ್ಚಿನ ಹಣ ಕೇಳುತ್ತಿದ್ದುದು ಕಂಡು ಬಂತು.

ಬೇರೆ ಊರುಗಳಿಂದ ನಗರಕ್ಕೆ ಬರುತ್ತಿದ್ದ ಬಸ್ಸುಗಳು ನಗರದ ಹೊರ ಭಾಗದಲ್ಲಿಯೇ ಪ್ರಯಾಣಿಕರನ್ನು ಇಳಿಸುತ್ತಿದ್ದರಿಂದ ನಗರ ಪ್ರವೇಶಿಸಲು ಜನತೆ ಹರ  ಸಾಹಸ ಪಡಬೇಕಾಯಿತು. ವಾಣಿಜ್ಯ ಪ್ರದೇಶವಾದ ಮಂಡಿಪೇಟೆ, ಕಾಳಿಕಾದೇವಿ ರಸ್ತೆ, ಕೆ.ಆರ್‌.ಮಾರುಕಟ್ಟೆ, ಬಿನ್ನಿ ಕಂಪನಿ ರಸ್ತೆ, ಚಾಮರಾಜಪೇಟೆ, ಎಂ.ಜಿ.ರಸ್ತೆಯಲ್ಲಿ ರೈತರ ಹೋರಾಟಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ಬೆಳಿಗ್ಗೆ ಬೈಕ್‌ಗಳ ಮೂಲಕ ತೆರಳಿದ ಬಿಜೆಪಿ ಕಾರ್ಯಕರ್ತರು ಬಂದ್‌ಗೆ ಸಹಕರಿಸುವಂತೆ ಮನವಿ ಮಾಡಿದರು. ಕೆಲವೆಡೆ ಬಲವಂತವಾಗಿ ಅಂಗಡಿಗಳನ್ನು ಮುಚ್ಚಿಸಲಾಯಿತು. ಬಸ್‌ ಹಾಗೂ ಆಟೋಗಳನ್ನು ತಡೆದು ಪ್ರಯಾಣಿಕರನ್ನು ಕೆಳ ಇಳಿಸಿ ಕಳುಹಿಸಲಾಯಿತು. ಮಧ್ಯಾಹ್ನ  ಹದಡಿ ರಸ್ತೆಯಲ್ಲಿ ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿದ್ದ ಖಾಸಗಿ ಬಸ್‌ ತಡೆದ ಪ್ರತಿಭಟನಾಕಾರರು, ಬಸ್‌ನ ಚಾವಿ ಕಸಿದುಕೊಂಡು ಎಚ್ಚರಿಕೆ ನೀಡಿ ಮರಳಿಸಿದರು.

ಹದಡಿ ರಸ್ತೆಯಲ್ಲಿ ತೆರೆಯಲ್ಪಟ್ಟಿದ್ದ ಹಣ್ಣಿನ ಅಂಗಡಿಯೊಂದರಲ್ಲಿದ್ದ ಕಲ್ಲಂಗಡಿ ಹಣ್ಣನ್ನು ರಸ್ತೆಗೆ ಎಸೆಯುವ ಮೂಲಕ ಆಕ್ರೋಶ ಹೊರ ಹಾಕಿದ ಪಾಲಿಕೆ ಮಾಜಿ ಮೇಯರ್ ಬಿ.ಜಿ. ಅಜಯ್ ಕುಮಾರ್ ಬಂದ್‌ ಬೆಂಬಲಿಸುವಂತೆ ಹೇಳಿದರು. ಬಂದ್ ಹಿನ್ನೆಲೆಯಲ್ಲಿ  ಬಿಗಿ ಪೊಲೀಸ್ ಬಂದೋ ಬಸ್ತ್ ಏರ್ಪಡಿಸಲಾಗಿತ್ತು.

ರೈತ ಒಕ್ಕೂಟದ ಪದಾಧಿಕಾರಿಗಳು ಹಾಗೂ ವಿವಿಧ ಸಂಘಟನೆಗಳ ವತಿಯಿಂದ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಂತರ ಮಹಾತ್ಮ ಗಾಂಧಿ ವೃತ್ತದಲ್ಲೂ ಟಯರ್ ಸುಟ್ಟು, ಸಚಿವ ಮಧು ಬಂಗಾರಪ್ಪ ಅವರ ಭಾವಚಿತ್ರ ದಹಿಸಿ ಪ್ರತಿಭಟಿಸಲಾಯಿತು.

ಪ್ರತಿಭಟನೆಯಲ್ಲಿ ಹರಿಹರ ಶಾಸಕ ಬಿ.ಪಿ. ಹರೀಶ್, ರೈತ ಮುಖಂಡರಾದ ಕೊಳೇನಹಳ್ಳಿ ಬಿ.ಎಂ. ಸತೀಶ್, ಶಾಮನೂರು ಲಿಂಗರಾಜು, ಬೆಳವನೂರು ನಾಗೇಶ್ವರರಾವ್, ಲೋಕಿಕೆರೆ ನಾಗರಾಜ್, ಬಿ.ಜಿ. ಅಜಯಕುಮಾರ್, ರಾಜನಹಳ್ಳಿ ಶಿವಕುಮಾರ್, ಶ್ರೀನಿವಾಸ ದಾಸಕರಿಯಪ್ಪ, ಅಣಬೇರು ಜೀವನಮೂರ್ತಿ, ಎಸ್.ಎನ್. ಕಲ್ಲೇಶ್, ಕೆ. ಪ್ರಸನ್ನಕುಮಾರ್, ಎಸ್.ಟಿ. ವೀರೇಶ್, ಕೆ.ಎಂ. ವೀರೇಶ್, ಉಪ ಮೇಯರ್ ಯಶೋಧ ಹೆಗ್ಗಪ್ಪ, ವೀಣಾನಂಜಪ್ಪ, ಭಾಗ್ಯಪಿಸಾಳೆ, ನೀತಾ ನಂದೀಶ್, ಮಂಜುಳಾ, ರಾಜೇಶ್ವರಿ, ಸರ್ವಮಂಗಳ, ಕುಮಾರಿ, ಮಾಜಿ ಮೇಯರ್ ಹೆಚ್. ಎನ್. ಗುರುನಾಥ್, ಎಪಿಎಂಸಿ ಮಾಜಿ ಅಧ್ಯಕ್ಷ ಕುಂದುವಾಡದ ಗಣೇಶಪ್ಪ, ಆರನೇಕಲ್ಲು ವಿಜಯಕುಮಾರ್, ಮಳಲಕೆರೆ ಸದಾನಂದ, ಶ್ಯಾಗಲೆ ಕ್ಯಾಂಪ್ ಭೋಗೇಶ್ವರರಾವ್, ಕುಂದುವಾಡದ ಜಿಮ್ಮಿ ಹನುಮಂತಪ್ಪ, ಎ. ಪ್ರಕಾಶ್, ಮಹೇಶಪ್ಪ, ಕಲ್ಲುಬಂಡೆ ಪ್ರಸಾದ್, ಕಲ್ಪನಹಳ್ಳಿ ಉಜ್ಜಣ್ಣ, ಕಲ್ಪನಹಳ್ಳಿ ಸತೀಶ್, ಕೋಲ್ಕುಂಟೆ ಬಸಪ್ಪ, ಶಾಮನೂರು ಕಲೇಶಪ್ಪ, ಸತ್ಯನಾರಾಯಣ ಕ್ಯಾಂಪ್ ನಾಗೇಶ್ವರರಾವ್, ಮತ್ತಿ ಜಯಣ್ಣ, ಗೋಣಿವಾಡ ನಾಗರಾಜ್, ಕಡ್ಲೆಬಾಳ್ ಧನಂಜಯ, ಶ್ಯಾಗಲೆ ದೇವೇಂದ್ರಪ್ಪ, ಸುರೇಶ ಗಂಡುಗಾಳೆ ಮುಂತಾದವರು ಭಾಗವಹಿಸಿದ್ದರು. ಆಮ್ ಆದ್ಮಿ ಪಾರ್ಟಿಯ ಜಿಲ್ಲಾ ಸಮಿತಿ ವತಿಯಿಂದಲೂ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

error: Content is protected !!