ಸಂಸ್ಕೃತಿಯ ಉತ್ಥಾನ ಉತ್ತಮ ಸಂಸ್ಕಾರಗಳಿಂದಲೇ ಸಾಧ್ಯ: ಶ್ರೀಶೈಲ ಶ್ರೀ

ಸಂಸ್ಕೃತಿಯ ಉತ್ಥಾನ ಉತ್ತಮ ಸಂಸ್ಕಾರಗಳಿಂದಲೇ ಸಾಧ್ಯ: ಶ್ರೀಶೈಲ ಶ್ರೀ

ದಾವಣಗೆರೆ, ಸೆ. 25- ಜನ್ಮದಾರಭ್ಯ ಮರಣ ಪರ್ಯಂತ ವಿಭಿನ್ನ ಹಂತಗಳಲ್ಲಿ ಮನುಷ್ಯನಿಗೆ ನೀಡಲಾಗುವ ಉತ್ತಮ ಸಂಸ್ಕಾ ರಗಳಿಂದಲೇ ಸಂಸ್ಕೃತಿಯ ಉತ್ಥಾನ ಸಾಧ್ಯ ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧ ರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಪ್ರತಿಪಾದಿಸಿದರು.

ಇಲ್ಲಿನ  ದಾವಣಗೆರೆ-ಹರಿಹರ ಅರ್ಬನ್ ಸಹಕಾರಿ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಶ್ರೀಶೈಲ ಜಗದ್ಗುರುಗಳಾದ ಲಿಂ. ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದಂಗಳವರ 37 ನೇ ಪುಣ್ಯಾರಾಧನೆ ಹಾಗೂ ಲಿಂ. ಉಮಾಪತಿ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದಂಗಳವರ 12 ನೇ ವರ್ಷದ ಸ್ಮರಣೋತ್ಸವ, ಉಜ್ಜಯಿನಿ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ದ್ವಾದಶ ಪೀಠಾರೋಹಣ ವರ್ಧಂತಿ ಮಹೋತ್ಸವ ಮತ್ತು ಜನಜಾಗೃತಿ ಧರ್ಮ ಸಮ್ಮೇಳನದ ಸಾನ್ನಿಧ್ಯ ವಹಿಸಿ ಜಗದ್ಗುರುಗಳು ಆಶೀರ್ವಚನ ನೀಡಿದರು.

ಕಲ್ಲಿಗೆ ಸಂಸ್ಕಾರ ಕೊಟ್ಟರೆ ಸುಂದರವಾದ ಮೂರ್ತಿಯಾಗುತ್ತದೆ. ಅನ್ನಕ್ಕೆ ಸಂಸ್ಕಾರ ಕೊಟ್ಟರೆ ಪ್ರಸಾದವಾಗುತ್ತದೆ. ನೀರಿಗೆ ಸಂಸ್ಕಾರ ಕೊಟ್ಟರೆ ಪಾದೋದಕವಾಗುತ್ತದೆ. ಅದರಂತೆ ಮನುಷ್ಯನಿಗೆ ಸಂಸ್ಕಾರ ಕೊಟ್ಟರೆ ಮಹಾದೇವನಾಗುತ್ತಾನೆ ಎಂದರು.

ವೃಷ್ಠಿಯಾಗಿ ಮತ್ತು ಸಮಷ್ಠಿಯಾಗಿ ಈ ಸಂಸ್ಕಾರಗಳನ್ನು ನೀಡುವ ಶ್ರೇಷ್ಠ ಪರಂಪರೆ ಈ ದೇಶದಲ್ಲಿ ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದಿದೆ. ದೇಶದ ಪ್ರತಿಯೊಂದು ಹಬ್ಬ, ಹರಿದಿನ, ವಿಶೇಷ ಉತ್ಸವ ಮುಂತಾದ ಸಂದರ್ಭಗಳ ಹಿಂದೆ ಸಮಾಜಕ್ಕೆ ಸಮಷ್ಠಿಯಾಗಿ ಸಂಸ್ಕಾರ ನೀಡುವ ಉದ್ದೇಶವಿರುವುದನ್ನು ಕಾಣಬಹುದು ಎಂದು ಹೇಳಿದರು.

ಸಂಸ್ಕಾರಗಳ ಮೂಲಾಧಾರವೇ ಸದ್ಗುರು. ಗುರುವಿನ    ಮಾರ್ಗದರ್ಶನದಿಂದಲೇ   ಪ್ರತಿಯೊಬ್ಬ ರಿಗೂ ಸಂಸ್ಕಾರಗಳು ಪ್ರಾಪ್ತವಾಗುತ್ತವೆ. ಉತ್ತಮ ಸಂಸ್ಕಾರಗಳನ್ನು ನೀಡುವ ಮೂಲಕ ಮನುಕುಲವನ್ನು ಸನ್ಮಾರ್ಗದತ್ತ ಮುನ್ನಡೆಸುವ ವ್ಯಕ್ತಿಯನ್ನೇ ಸದ್ಗುರು ಎಂದು ಕರೆಯಲಾಗುತ್ತದೆ. ಪಂಚಪೀಠಗಳು ಸನಾತನ ಕಾಲದಿಂದ ಸಮಾಜಕ್ಕೆ ಧರ್ಮ ಮಾರ್ಗದ ಚೌಕಟ್ಟನ್ನು ನೀಡಿ ಧರ್ಮಬೋಧೆ, ದೀಕ್ಷೆ, ಸಂಸ್ಕಾರಗಳನ್ನು ದಯಪಾಲಿಸುತ್ತಾ ಬಂದಿವೆ ಎಂದು ಹೇಳಿದರು.

ಗುರು ಪರಂಪರೆಯನ್ನು ಗೌರವಿಸಬೇಕಾದುದು ಪ್ರತಿಯೊಬ್ಬರ ಆದ್ಯ ಕರ್ತವ್ಯ. ಮಾತೃ-ಪಿತೃ ಋಣದಂತೆ ಗುರು ಋಣವನ್ನು ತೀರಿಸಲು ಯಾರಿಂದಲೂ ಸಾಧ್ಯವಾಗುವುದಿಲ್ಲ. ಕಾರಣ ಗುರುಗಳ ಸ್ಮರಣೆಯನ್ನು ಮಾಡುತ್ತಾ ನಮ್ಮ ಬದುಕನ್ನು ಸಾರ್ಥಕಗೊಳಿಸಬೇಕು ಎಂದು ಹಿತ ನುಡಿದರು.

ಹರಿಹರ ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಈ ವರ್ಷ ಮಳೆಯ ಕೊರತೆಯಿಂದ ರೈತರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಕಾವೇರಿ ನೀರಿನ ಸಮಸ್ಯೆ ಮತ್ತು ಭದ್ರಾ ಜಲಾಶಯದಿಂದ ನೀರು ನಿಲುಗಡೆಯಾಗಿರುವುದರಿಂದ ರೈತರ ಗೋಳು ಹೇಳತೀರದು ಎಂದರು.

ಪಂಚಪೀಠಗಳು ವೀರಶೈವ ಪರಂಪರೆ, ಸಂಸ್ಕೃತಿಮೂಲಕ ಧರ್ಮವನ್ನು ಗಟ್ಟಿಗೊಳಿಸುವ ಕೆಲಸವನ್ನು ಮಾಡುತ್ತಾ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಶ್ಲ್ಯಾಘನೀಯ. ಲಿಂ. ವಾಗೀಶ ಪಂಡಿತಾರಾಧ್ಯ ಶ್ರೀಗಳು ಮತ್ತು ಲಿಂ. ಉಮಾಪತಿ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳ ಧಾರ್ಮಿಕ ಸೇವೆ ಅನನ್ಯವಾದುದು ಎಂದು ಹೇಳಿದರು.

ದಾವಣಗೆರೆ-ಹರಿಹರ ಅರ್ಬನ್ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎನ್.ಎ. ಮುರುಗೇಶ್ ಮಾತನಾಡಿ, ಕೇವಲ ರಾಜಕೀಯ ಲಾಭಕ್ಕಾಗಿ ಸನಾತನ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುವುದು ಸರಿಯಲ್ಲ ಎಂದರು.

ಹಿಂದೂ ಧರ್ಮವನ್ನು ನಾಶ ಮಾಡಲೆಂದೇ ಹುಟ್ಟಿಕೊಂಡಿರುವ ದುಷ್ಟಶಕ್ತಿಗಳಿಂದ ಏನೂ ಮಾಡಲು ಸಾಧ್ಯವಿಲ್ಲ. ಪ್ರತಿಯೊಬ್ಬ ಹಿಂದೂಗಳು ಸಹ ಇಂತಹ ಹೇಳಿಕೆಗಳನ್ನು ಬಲವಾಗಿ ಖಂಡಿಸಬೇಕೆಂದರು.

ವ್ಯಂಗ್ಯ ಚಿತ್ರಕಾರ ಹೆಚ್.ಬಿ. ಮಂಜುನಾಥ್ `ಸಮಾಜ ಮತ್ತು ಪಂಚಪೀಠಗಳ ಪಾತ್ರ’ ಕುರಿತು ವಿಶೇಷ ಉಪನ್ಯಾಸ ನೀಡಿದರು. ಭ್ರಮರಾಂಭಿಕ ದೇವಿ ನುಡಿ ಸೇವೆ ಸಲ್ಲಿಸಿದರು.

ಹೊನ್ನಾಳಿ ಹಿರೇಕಲ್ಮಠದ ಶ್ರೀ ಒಡೆಯರ್ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ, ಅಂಬಿಕಾನಗರದ ಶ್ರೀ ಈಶ್ವರ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಮಣಕೂರು ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಶ್ರೀ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಸಮ್ಮುಖ ವಹಿಸಿದ್ದರು.

ಲೆಕ್ಕಪರಿಶೋಧಕ ಅಥಣಿ ಎಸ್. ವೀರಣ್ಣ, ಶ್ರೀಶೈಲ ಎಜುಕೇಶನ್ ಟ್ರಸ್ಟ್ ಖಜಾಂಚಿ ಜಿ.ಎಸ್. ಅನಿತ್ ಕುಮಾರ್, ದೂಡಾ ಮಾಜಿ ಅಧ್ಯಕ್ಷ ದೇವರಮನಿ ಶಿವಕುಮಾರ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ, ಜಿ.ನಂಜನಗೌಡರು, ಎ.ಹೆಚ್. ಕುಬೇರಪ್ಪ, ಬಕ್ಕೇಶ ಅಜ್ಜಂಪುರ, ಆರ್.ಆರ್. ಮಠ, ಎನ್. ರಾಜಣ್ಣ, ಕೆ.ಎಂ. ಪರಮೇಶ್ವರಯ್ಯ, ಎಂ.ಎನ್. ಹರೀಶ್, ಬನ್ನಯ್ಯಸ್ವಾಮಿ ಹಿರೇಮಠ  ಮತ್ತಿತರರು ಭಾಗವಹಿಸಿದ್ದರು.

ಗುರುಕುಲ ಸಾಧಕರು ವೇದಘೋಷ ನಡೆಸಿಕೊಟ್ಟರು. ಸಂಗೀತ ರಾಘವೇಂದ್ರ ಪ್ರಾರ್ಥಿಸಿದರು. ಡಿ.ಎಂ. ಹಾಲಸ್ವಾಮಿ ಸ್ವಾಗತಿಸಿದರು. ಪಿ.ಜಿ. ರಾಜಶೇಖರಯ್ಯ ಧ್ವಜ ವಂದನೆ ಸ್ವೀಕರಿಸಿದರು. ಸೌಭಾಗ್ಯಮ್ಮ ಎಸ್. ಹಿರೇಮಠ ನಿರೂಪಿಸಿದರು.

error: Content is protected !!