ಸ್ಥಳದಲ್ಲಿಯೇ ಸಮಸ್ಯೆಗೆ ಪರಿಹಾರ ಸಮಯ, ಖರ್ಚು ಉಳಿತಾಯ

ಸ್ಥಳದಲ್ಲಿಯೇ ಸಮಸ್ಯೆಗೆ ಪರಿಹಾರ ಸಮಯ, ಖರ್ಚು ಉಳಿತಾಯ

ಕಡ್ಲೆಬಾಳು ಗ್ರಾಮದ ಜನತಾ ದರ್ಶನದಲ್ಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್

ದಾವಣಗೆರೆ, ಸೆ.25-ಜನರ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲಿಯೇ ಪರಿಹರಿಸುವುದರಿಂದ ಜನರ ಸಮಯ, ಖರ್ಚು ಉಳಿತಾಯವಾಗಿ ವಿಶ್ವಾಸ ಮೂಡುತ್ತದೆ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಹೇಳಿದರು.

ಅವರು ಸೋಮವಾರ ತಾಲ್ಲೂಕಿನ ಕಡ್ಲೆಬಾಳು ಗ್ರಾಮದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾ ಯತ್, ಗ್ರಾಮ ಪಂಚಾಯಿತಿ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸ ಲಾದ ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ಜನರು ಸರ್ಕಾರದ ಸೌಲಭ್ಯ ಗಳಿಗಾಗಿ ಕಚೇರಿ ಅಲೆಯುವುದನ್ನು ತಪ್ಪಿಸಬೇಕೆಂದು ಮತ್ತು ಸಣ್ಣ ಸಣ್ಣ  ಸಮಸ್ಯೆಗೂ ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದವರೆಗೂ ಅಲೆಯಬೇಕಾದ ಸ್ಥಿತಿಯನ್ನು ತಪ್ಪಿಸುವ ಉದ್ದೇಶದಿಂದ ಸರ್ಕಾರ ಪ್ರತಿ 15 ದಿನಗಳಿಗೊಮ್ಮೆ ಜಿಲ್ಲಾ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಜನತಾದರ್ಶನ ನಡೆಸಿ ಜನರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಲು ಮುಖ್ಯ ಮಂತ್ರಿಗಳು ಜನತಾ ದರ್ಶನ ನಡೆಸಿ ಸಮಸ್ಯೆಯನ್ನು ಸ್ಥಳದಲ್ಲಿಯೇ ಬಗೆಹರಿಸಲು ಸೂಚನೆ ನೀಡಿದ್ದಾರೆ ಎಂದರು. 

ಬೇತೂರು ಗ್ರಾಮದಲ್ಲಿ ಈ ಹಿಂದೆ ಪೈಪ್‍ಲೈನ್ ಮಾಡುವ ಮೂಲಕ ಶೌಚಾಲಯದ ಸಂಪರ್ಕ ವನ್ನು ಪ್ರತಿ ಮನೆಯಿಂದ ಕಲ್ಪಿಸ ಲಾಗಿತ್ತು, ಇದೇ ಮಾದರಿಯಲ್ಲಿ ಕಡ್ಲೆಬಾಳು ಸೇರಿದಂತೆ ಎಲ್ಲೆಲ್ಲಿ ಬೇಡಿಕೆ ಹೆಚ್ಚಿದೆಯೋ ಅಂತಹ ಗ್ರಾಮಗಳಲ್ಲಿ ಯುಜಿಡಿ ಪೈಪ್‍ಲೈನ್ ಮಾಡಲು ಯೋಜಿಸಲಾಗಿದ್ದು ಇದು ಗ್ರಾಮಾಂತರ ಪ್ರದೇಶದ ಮಾದರಿ ಯೋಜನೆಯಾಗಲಿದೆ ಎಂದರು. 

 ಜನತಾ ದರ್ಶನದ ಮೂಲಕ ಜನರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಮತ್ತು ಸರ್ಕಾರದ ಸೌಲಭ್ಯಗಳನ್ನು ನೀಡಲಾಗುತ್ತದೆ. ಅದೇ ರೀತಿ ಗ್ರಾಮಾಂತರ ಪ್ರದೇಶದಲ್ಲಿ ಕ್ಯಾಂಪಸ್ ಆಯ್ಕೆ, ಉದ್ಯೋಗ ಮೇಳಗಳನ್ನು ಆಯೋಜನೆ ಮಾಡುವ ಮೂಲಕ ಯುವಕರಿಗೆ ಬದುಕು ಕಟ್ಟಿಕೊಡುವ ಕೆಲಸ  ಮಾಡಲಾಗುತ್ತದೆ ಎಂದರು. 

ಕೃಷಿ ಇಲಾಖೆಯಿಂದ ರೈತರಿಗೆ ಪಶು ಸಾಕಾಣಿಕೆಗಾಗಿ ರೂ.40 ಸಾವಿರ ಸಹಾಯಧನ ನೀಡಲಾಗುತ್ತದೆ. ಈಗಾಗಲೇ ತಮಿಳುನಾಡಿನಿಂದ ಹಸುಗಳನ್ನು ಖರೀದಿಸಿ ನೀಡಲಾಗುತ್ತಿದೆ. ಇದರೊಂದಿಗೆ ಡಿಸಿಸಿ ಬ್ಯಾಂಕ್‍ನಿಂದ ಸಾಲದ ರೂಪದಲ್ಲಿ ಇನ್ನಷ್ಟು ಹಣ ನೀಡಿದಲ್ಲಿ ಗುಜರಾತ್‍ನಿಂದ ಇನ್ನೂ ಅತ್ಯುತ್ತಮ ತಳಿಗಳ ಎಮ್ಮೆ, ಹಸುಗಳನ್ನು ಖರೀದಿಸುವುದರಿಂದ ಹಾಲು ಹೆಚ್ಚು ಮತ್ತು ದೀರ್ಘಾವಧಿಯವರೆಗೆ ಕೊಡುತ್ತವೆ. ಜಿಲ್ಲಾ ಸಹಕಾರ ಬ್ಯಾಂಕ್‍ನವರು ಈ ನಿಟ್ಟಿನಲ್ಲಿ ರೈತರಿಗೆ ಸಹಾಯ ಮಾಡಬೇಕೆಂದರು.

ಕಡಲೆಬಾಳು ಗ್ರಾಮವು ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗವಾಗಿದ್ದರಿಂದ ಇಲ್ಲಿ ನೀರಿನ ಸಮಸ್ಯೆ ಹೆಚ್ಚು ಇದೆ. ಇದಕ್ಕಾಗಿಯೇ ಈ ಹಿಂದೆ 5 ಕೆರೆಗಳಿಗೆ ನೀರು ತುಂಬಿಸಲು 135 ಕೋಟಿ ವೆಚ್ಚದ ಯೋಜನೆ ರೂಪಿಸಲಾಗಿತ್ತು, ಆದರೆ ಕಾರಣಾಂತರದಿಂದ ನಿಂತು ಹೋಗಿದೆ. ಇದನ್ನು ಅನುಷ್ಟಾನ ಮಾಡಿ ಈ ಭಾಗದ ರೈತರ ಸಮಸ್ಯೆ ನೀಗಿಸಲು ಕ್ರಮ ವಹಿಸಲಾಗುತ್ತದೆ ಎಂದರು.

ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ ಮಾತನಾಡಿ, ಜನತಾ ದರ್ಶನ ಅಂಗವಾಗಿ 25 ಕ್ಕೂ ಹೆಚ್ಚು ಭೂ ಮಾಪಕರು ಸುತ್ತಮುತ್ತಲಿನ ಗ್ರಾಮಗಳಲ್ಲಿ ಸರ್ವೆ ಕಾರ್ಯ ಕೈಗೊಂಡು ಪಹಣಿ ತಿದ್ದುಪಡಿ, ಸರ್ವೆ ದಾಖಲೆ ತಿದ್ದುಪಡಿ ಕಾರ್ಯವನ್ನು ಏಕಕಾಲದಲ್ಲಿ ಮಾಡಲಾಗಿದೆ. ಇಂದು ನೊಂದವರಿಗೆ ಜನತಾ ದರ್ಶನ ಆಶಾಕಿರಣವಾಗಿದೆ ಎಂದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಇಟ್ನಾಳ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಕ್ಕಮ್ಮ, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್, ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಪಾಲಿಕೆ ಆಯುಕ್ತ ರೇಣುಕಾ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪ್ರಭಾಕರ್, ಸಹಕಾರ ಸೊಸೈಟಿಯ ಸತ್ಯಬಾಬು, ಮುಖಂಡರಾದ ರಾಘವೇಂದ್ರ, ಗಿರೀಶ್, ಬೇತೂರು ಕರಿಬಸಪ್ಪ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು, ಮುಖಂಡರು ಉಪಸ್ಥಿತರಿದ್ದರು. ಉಪವಿಭಾಗಾಧಿಕಾರಿ ದುರ್ಗಶ್ರೀ ಸ್ವಾಗತಿಸಿದರು.

error: Content is protected !!