ಭದ್ರಾ ನೀರಿಗೆ ಮುಂದುವರೆದ ಹೋರಾಟ

ಭದ್ರಾ ನೀರಿಗೆ ಮುಂದುವರೆದ ಹೋರಾಟ

ಟ್ರ್ಯಾಕ್ಟರ್ ರಾಲಿಗೆ ಮುಂದಾದ ರೈತರಿಗೆ ಪೊಲೀಸರ ತಡೆ

ದಾವಣಗೆರೆ, ಸೆ. 22 – ಭದ್ರಾ ಜಲಾಶಯದಿಂದ ಬಲದಂಡೆಗೆ ಸತತ 100 ದಿನ ನೀರು ಹರಿಸಲು ಆಗ್ರಹಿಸಿ ಟ್ರ್ಯಾಕ್ಟರ್ ರಾಲಿ ನಡೆಸಲು ಮುಂದಾದ ರೈತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ನಗರದ ಬೀರಲಿಂಗೇಶ್ವರ ದೇವಾಲಯದ ಆವರಣದಿಂದ ಟ್ರ್ಯಾಕ್ಟರ್ ರಾಲಿ ನಡೆಸಲು ಭಾರತೀಯ ರೈತ ಒಕ್ಕೂಟದ ಮುಖಂಡರು ನಿರ್ಧರಿಸಿದ್ದರು.

ಈ ಹಿಂದೆ ಸತತ 100 ದಿನ ನೀರು ಹರಿಸುವುದಾಗಿ ತಿಳಿಸಿದ್ದ ಕಾರಣ ಬಿತ್ತನೆ ಮಾಡಿದ್ದೇವೆ. ಈಗ ಆನ್‌ ಅಂಡ್‌ ಆಫ್ ಪದ್ಧತಿಯಲ್ಲಿ ನೀರು ಬಿಡುವುದಾಗಿ ತಿಳಿಸಲಾಗಿದೆ. ಇದರಿಂದಾಗಿ ಭತ್ತದ ಬೆಳೆ ಹಾಳಾಗುವ ಆತಂಕವಿದೆ ಎಂದು ರೈತ ಮುಖಂಡರು ತಿಳಿಸಿದರು.

ನಾಲ್ಕು ದಿನಗಳಿಂದ ಹೋರಾಟ ನಡೆಸುತ್ತಿದ್ದರೂ ಸರ್ಕಾರ ಇದುವರೆಗೂ ಭದ್ರಾ ಅಚ್ಚುಕಟ್ಟಿನ ನೀರಾವರಿ ಸಲಹಾ ಸಮಿತಿ ಸಭೆ ನಡೆಸಲು ಮುಂದಾಗಿಲ್ಲ. ರೈತರನ್ನು ಸರ್ಕಾರ ನಿರ್ಲಕ್ಷಿಸುವುದರ ವಿರುದ್ಧ ಟ್ರ್ಯಾಕ್ಟರ್ ರಾಲಿ ನಡೆಸುವುದಾಗಿ ರೈತ ಮುಖಂಡರು ಹೇಳಿದರು.

ಸರ್ಕಾರದ ವಿರುದ್ಧ ಧಿಕ್ಕಾರ ಕೂಗುತ್ತಾ ರೈತರು ಟ್ರ್ಯಾಕ್ಟರ್ ರಾಲಿಗೆ ಮುಂದಾದರು. ಆದರೆ, ಬೀರಲಿಂಗೇಶ್ವರ ದೇವಾಲಯದ ಗೇಟ್ ಮುಚ್ಚಿದ ಪೊಲೀಸರು, ರೈತರು ಹೊರ ಹೋಗದಂತೆ ತಡೆದರು.

ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ರೈತರು, ಎರಡು ದಿನಗಳ ಹಿಂದೆಯೇ ಪ್ರತಿಭಟನೆ ಮಾಡುವುದಾಗಿ ತಿಳಿಸಲಾಗಿತ್ತು. ಶಾಂತಿಯುತ ಪ್ರತಿಭಟನೆಗೆ ಅಡ್ಡಿಪಡಿಸಲಾಗುತ್ತಿದೆ ಎಂದು ಆಕ್ಷೇಪಿಸಿದರು.

ಆಗ ಪೊಲೀಸರು ಹಾಗೂ ರೈತರ ನಡುವೆ ವಾಗ್ವಾದ ನಡೆಯಿತು.  ನಂತರ ಪ್ರತಿಭಟನಾ ನಿರತ ರೈತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ನಿನ್ನೆ ರೈತರು ಹೆದ್ದಾರಿ ತಡೆ ನಡೆಸಿದ್ದರು. ಟ್ರ್ಯಾಕ್ಟರ್ ರಾಲಿ  ಮೂಲಕ ಮತ್ತೆ ಹೆದ್ದಾರಿ ತಡೆ ನಡೆಸುವ ಮಾಹಿತಿ ಇತ್ತು. ಹೆದ್ದಾರಿ ತಡೆದರೆ ದೊಡ್ಡ ಸಮಸ್ಯೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ರೈತರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದರು.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಹೆಚ್.ಆರ್. ಶಾಮನೂರು ಲಿಂಗರಾಜ್, ಕೊಳೇನಹಳ್ಳಿ ಸತೀಶ್, ಬೆಳವನೂರು ನಾಗೇಶ್ವರ ರಾವ್, ಲೋಕಿಕೆರೆ ನಾಗರಾಜ್, ಡಾ. ರವಿಕುಮಾರ್, ಗುರುನಾಥ್, ಕುಂದುವಾಡ ಗಣೇಶಪ್ಪ, ಕುಂದುವಾಡ ಹನುಮಂತಪ್ಪ, ಮಹೇಶ್ವರಪ್ಪ ಹೊಸ ಕುಂದುವಾಡ, ಅಗಸನಕಟ್ಟೆ ಅಣ್ಣಪ್ಪ, ಪುನೀತ್ ಮತ್ತಿತರರು ಪಾಲ್ಗೊಂಡಿದ್ದರು.

error: Content is protected !!