ದಾವಣಗೆರೆ, ಸೆ. 19 – ಅಕ್ರಮ ಪಂಪ್ಸೆಟ್ ಬಳಸುವ ಅಡಿಕೆ ತೋಟ ಗಾರರ ಒತ್ತಡಕ್ಕೆ ಮಣಿದು ಭತ್ತದ ಬೆಳೆಗೆ ಹರಿಸುವ ಭದ್ರಾ ನೀರನ್ನು ನಿಲ್ಲಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ರೈತರು, ರಸ್ತೆ ತಡೆ ನಡೆಸಿದ್ದಾರೆ.
ಭದ್ರಾ ಅಚ್ಚುಕಟ್ಟಿಗೆ ಸಂಬಂಧ ಪಡದೇ ಇರುವ ಅಡಿಕೆ ಬೆಳೆಗಾರರು ಪ್ರತಿಭಟನೆ ಮಾಡಿದ್ದಾರೆ ಎಂದು ನೀರು ನಿಲ್ಲಿಸಲಾಗಿದೆ. ನಿಜವಾದ ಅಚ್ಚುಕಟ್ಟುದಾರರು ನೀರಿಗಾಗಿ ಹೋರಾಡುವ ಪರಿಸ್ಥಿತಿ ಬಂದಿದೆ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭದ್ರಾ ಅಣೆಕಟ್ಟೆಯಿಂದ ನೀರು ಹರಿಸುವುದನ್ನು ನಿಲ್ಲಿಸಲು ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಆದರೆ, ದಾವಣಗೆರೆ ಭಾಗದ ಭತ್ತದ ರೈತರ ಒತ್ತಡದ ನೀರು ಹರಿಸುವುದನ್ನು ಮುಂದುವರೆಸಲಾಗಿತ್ತು. ಆದರೆ, ಮಂಗಳವಾರ ಮೇಲ್ದಂಡೆ ಭಾಗದ ರೈತರು ಪ್ರತಿಭಟನೆ ನಡೆಸಿದ ನಂತರ ಭದ್ರಾ ಬಲದಂಡೆಗೆ ನೀರು ನಿಲ್ಲಿಸಲಾಗಿದೆ.
ಈ ಬಗ್ಗೆ ನಗರದ ನೀರಾವರಿ ಕಚೇರಿ ಆವರಣದಲ್ಲಿ ಪ್ರತಿಭಟನಾ ಸಭೆ ನಡೆಸಿದ ರೈತರು, ಈ ಮೊದಲು ತೀರ್ಮಾನಿಸಿದಂತೆ 100 ದಿನ ನಿರಂತರ ನೀರು ಹರಿಸುವಂತೆ ಒತ್ತಾಯಿಸಿದರು. ನಂತರ ಹದಡಿ ರಸ್ತೆಯನ್ನು ತಡೆದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಭಾರತೀಯ ರೈತ ಒಕ್ಕೂಟದ ಅಧ್ಯಕ್ಷ ಹೆಚ್.ಆರ್. ಶಾಮನೂರು ಲಿಂಗರಾಜ್, ಅಕ್ರಮ ಪಂಪ್ಸೆಟ್ಗಳ ಅಡಿಕೆ ತೋಟದವರ ಒತ್ತಡಕ್ಕೆ ಮಣಿದು, ನೀರು ನಿಲ್ಲಿಸಲಾಗಿದೆ. ಇದರಿಂದಾಗಿ ಭತ್ತದ ಬೆಳೆ ಹಾಳಾಗಲಿದೆ. ಈ ಮೊದಲು ನಿರ್ಧರಿಸಿದಂತೆ ಸತತ 100 ದಿನ ನೀರು ಹರಿಸಬೇಕು ಎಂದು ಒತ್ತಾಯಿಸಿದರು.
ಆಕ್ರೋಶಗೊಂಡ ರೈತರಿಂದ ರಸ್ತೆ ತಡೆ
ಆನ್ ಅಂಡ್ ಆಫ್ ವ್ಯವಸ್ಥೆ ಮಾಡಿದರೆ ಕೊನೆ ಭಾಗಕ್ಕೆ ನೀರು ಸಿಗದೇ ಭತ್ತದ ಬೆಳೆ ನಾಶವಾಗಲಿದೆ. ಈ ಹಿಂದೆ ನಿಗದಿಪಡಿಸಿದಂತೆ ನೀರು ನಿರಂತರವಾಗಿ ಹರಿಸದೇ ಇದ್ದರೆ ತೀವ್ರ ಹೋರಾಟ ನಡೆಸಲಾಗುವುದು.
– ಶಾಮನೂರು ಹೆಚ್.ಆರ್. ಲಿಂಗರಾಜ್
ಮೊದಲು 100 ದಿನ ನಿರಂತರ ನೀರು ಹರಿಸುವುದಾಗಿ ಹೇಳಲಾಗಿತ್ತು. ನಂತರ ಆನ್ ಅಂಡ್ ಆಫ್ ಪದ್ಧತಿ ಎನ್ನಲಾಯಿತು. ಕಳೆದ ಶನಿವಾರ ಮತ್ತೆ ನೀರು ಕೊಡುವುದಾಗಿ ಹೇಳಿ, ಮಂಗಳವಾರ ನೀರು ನಿಲ್ಲಿಸಲಾಗಿದೆ. ರೈತರ ಜೊತೆ ಚಲ್ಲಾಟ ಆಡಲಾಗುತ್ತಿದೆ.
– ನಾಗೇಶ್ವರರಾವ್
ಭದ್ರಾ ಅಚ್ಚುಕಟ್ಟಿನ ಶೇ. 70 ಭಾಗ ದಾವಣಗೆರೆ ಜಿಲ್ಲೆಯಲ್ಲಿದೆ. ಆದರೂ, ಕೆಲವೇ ರೈತರ ಮಾತು ಕೇಳಿ ನೀರು ಹರಿಸುವುದನ್ನು ನಿಲ್ಲಿಸಲಾಗಿದೆ. ಜಲಾಶಯದಲ್ಲಿ ಈಗ 30.54 ಟಿಎಂಸಿ ನೀರಿದೆ. ನಿರಂತರ ನೀರು ಹರಿಸಿದರೂ ಬೇಸಿಗೆ ನಿಭಾಯಿಸುವಷ್ಟು ನೀರು ಉಳಿಯಲಿದೆ ಎಂದು ಹೇಳಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ನಾಗೇಶ್ವರರಾವ್ ಮಾತನಾಡಿ, ಸರ್ಕಾರ ಐದು ಗ್ಯಾರಂಟಿಗಳನ್ನು ಜಾರಿಗೆ ತರುತ್ತಿರುವ ರೀತಿಯಲ್ಲೇ ರೈತರಿಗೆ ನೀರಿನ ಗ್ಯಾರಂಟಿ ಕೊಡಬೇಕು. ಭದ್ರಾ ಅಣೆಕಟ್ಟೆಯನ್ನು ರೈತರ ವಶಕ್ಕೆ ನೀಡಿದರೆ ಭತ್ತಕ್ಕೆ ಸಮರ್ಪಕ ನೀರು ಕೊಡುವ ಜೊತೆಗೆ ಹತ್ತು ಟಿಎಂಸಿ ನೀರನ್ನೂ ಉಳಿಸುತ್ತೇವೆ ಎಂದು ಸವಾಲು ಹಾಕಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಗಣೇಶಪ್ಪ ಮಾತನಾಡಿ, ಭತ್ತದ ಬೆಳೆಗಾಗಿ ಪ್ರತಿ ಎಕರೆಗೆ 25-30 ಸಾವಿರ ರೂ. ಈಗಾಗಲೇ ಖರ್ಚಾಗಿದೆ. ನಿರಂತರ ನೀರು ಹರಿಸುವುದಾಗಿ ರೈತರಿಗೆ ಸುಳ್ಳು ಸಂದೇಶ ಕಳಿಸಿ, ಈಗ ನೀರು ಬಂದ್ ಮಾಡಿದರೆ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ ಎಂದು ಹೇಳಿದರು.
ಪ್ರತಿಭಟನಾ ಸಭೆಯಲ್ಲಿ ರೈತ ಮುಖಂಡರಾದ ಕೃಷ್ಣಮೂರ್ತಿ, ಮಂಜಣ್ಣ, ವಿಜಯಕುಮಾರ್ ಆರನೇಕಲ್, ರವಿಕುಮಾರ್ ಹಂಪನೂರು, ಮಂಜುನಾಥ ಶಿರಮಗೊಂಡನಹಳ್ಳಿ ಮತ್ತಿತರರು ಉಪಸ್ಥಿತರಿದ್ದರು.