ಸಮಾಜ ನಮಗೇನು ಕೊಟ್ಟಿದೆ ಎನ್ನುವುದಕ್ಕಿಂತ ಸಮಾಜಕ್ಕೆ ನಾವೇನು ಕೊಟ್ಟಿದ್ದೇವೆ ಎಂದು ತೋರಿಸಿಕೊಟ್ಟವರು ಲಿಂ. ಸಿರಿಗೆರೆ ಶ್ರೀಗಳು

ಸಮಾಜ ನಮಗೇನು ಕೊಟ್ಟಿದೆ ಎನ್ನುವುದಕ್ಕಿಂತ ಸಮಾಜಕ್ಕೆ ನಾವೇನು ಕೊಟ್ಟಿದ್ದೇವೆ ಎಂದು ತೋರಿಸಿಕೊಟ್ಟವರು ಲಿಂ. ಸಿರಿಗೆರೆ ಶ್ರೀಗಳು

ಭಕ್ತರ ಸಭೆಯಲ್ಲಿ ಸಾಧು ಸದ್ಧರ್ಮ ವೀರಶೈವ ಸಮಾಜದ ಕೇಂದ್ರ ಸಮಿತಿಯ ಕಾರ್ಯದರ್ಶಿ ಎಂ.ಬಿ ಸಂಗಮೇಶಗೌಡರು

ದಾವಣಗೆರೆ, ಸೆ.14- ಸಿರಿಗೆರೆ ಬೃಹನ್ಮಠದ ಲಿಂಗೈಕ್ಯ ಹಿರಿಯ ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿಯವರ 31ನೇ ವರ್ಷದ ಶ್ರದ್ಧಾಂಜಲಿಯ ಕಾರ್ಯಕ್ರಮವು ಇದೇ ದಿನಾಂಕ 20 ರಿಂದ 24 ರವರೆಗೆ ಸಿರಿಗೆರೆಯಲ್ಲಿ ನಡೆಯಲಿದೆ.

ಈ ಸಂಬಂಧ ಪ್ರತಿ ವರ್ಷದಂತೆ ಈ ವರ್ಷವೂ ಈ ಕಾರ್ಯಕ್ರಮಕ್ಕೆ ದಾಸೋಹದ ಮೂಲಕ ಭಕ್ತಿಯನ್ನು ಸಮರ್ಪಿಸಲು ನಗರದ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ಇಂದು ಸಂಜೆ ಏರ್ಪಡಾಗಿದ್ದ ಭಕ್ತರ ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಸಾಧು ಸದ್ಧರ್ಮ ವೀರಶೈವ ಸಮಾಜದ ಕೇಂದ್ರ ಸಮಿತಿಯ ಕಾರ್ಯದರ್ಶಿ  ಎಂ.ಬಿ ಸಂಗಮೇಶಗೌಡರು, ಶಿವಕುಮಾರ ಸ್ವಾಮೀಜಿಯವರು ಸಮಾಜಕ್ಕೆ ಸಲ್ಲಿಸಿದ ಸೇವೆಯನ್ನು ಮೆಲುಕು ಹಾಕುತ್ತಾ, ಲಿಂಗೈಕ್ಯ ಶ್ರೀಗಳು ಸಮಾಜ ನಮಗೇನು ಕೊಟ್ಟಿದೆ ಎನ್ನುವುದಕ್ಕಿಂತ ಸಮಾಜಕ್ಕೆ ನಾವೇನು ಕೊಟ್ಟಿದ್ದೇವೆ ಎನ್ನುವುದನ್ನು ನಮಗೆ ತೋರಿಸಿಕೊಟ್ಟಿದ್ದಾರೆ ಎಂದರು.

ಸಾಧು ಸದ್ಧರ್ಮ ವೀರಶೈವ ಸಮಾಜ ಬಾಂಧವರು ಸಮಾಜದಲ್ಲಿ ಗೌರವದಿಂದ ತಲೆ ಎತ್ತಿ ನಿಲ್ಲುವಂತಹ ಸಂಸ್ಕಾರವನ್ನು ಕೊಟ್ಟವರು ಲಿಂಗೈಕ್ಯ ಶ್ರೀ ಶಿವಕುಮಾರ ಮಹಾಸ್ವಾಮೀಜಿ. 

ಲಿಂಗೈಕ್ಯ ಶ್ರೀಗಳು ಎಲ್ಲಾ ವರ್ಗದ ಮಕ್ಕಳಿಗೆ ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಶಾಲಾ-ಕಾಲೇಜುಗಳನ್ನು ಸ್ಥಾಪಿಸಿ, ಶಿಕ್ಷಣ ನೀಡುವುದರ ಮೂಲಕ ಸದೃಢ ಸಮಾಜ ನಿರ್ಮಾಣ ಮಾಡುವಲ್ಲಿ ಶ್ರಮಿಸಿದ ಧೀಮಂತರು ಎಂದು ಸಂಗಮೇಶ ಗೌಡರು ಬಣ್ಣಿಸಿದರು.

ಸಮಾಜದ ಕೇಂದ್ರ ಸಮಿತಿಯ ಮತ್ತೋರ್ವ ಕಾರ್ಯದರ್ಶಿ ಬಿ. ವಾಮದೇವಪ್ಪ ಮಾತನಾಡಿ,   ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ದುಗ್ಗಾಣಿ ಮಠವನ್ನು ಬಹು ಎತ್ತರಕ್ಕೆ ಕೊಂಡೊಯ್ದು ನಾವೆಲ್ಲರೂ ಅತ್ಯಂತ ಗೌರವದಿಂದ, ಸಂಸ್ಕಾರದಿಂದ ಬದುಕುವಂತೆ ಮಾಡಿದ್ದಾರೆ. ಇಂದು ಈ ಬಹುದೊಡ್ಡ ಸಮಾಜದಿಂದ ನಮ್ಮೆಲ್ಲರ ಗೌರವ ಹೆಚ್ಚಾಗಿದೆ. ಸಮಾಜದ ಗೌರವ ಹೆಚ್ಚಾಗುವಂತೆ ಮಾಡಿದವರು ಹಿರಿಯ ಲಿಂಗೈಕ್ಯ ಜಗದ್ಗುರುಗಳು. ಧನ್ಯತೆಯ ಭಾವನೆಯಿಂದ ಶ್ರದ್ಧಾಂಜಲಿ ಸಮಾರಂಭದಲ್ಲಿ ಎಲ್ಲರೂ ಪಾಲ್ಗೊಳ್ಳೋಣ  ಎಂದು ಸಮಾಜ ಬಾಂಧವರಿಗೆ ಕರೆ ನೀಡಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸಾಧು ಸದ್ಧರ್ಮ ವೀರಶೈವ ಸಮಾಜದ ದಾವಣಗೆರೆ ತಾಲ್ಲೂಕು ಘಟಕದ  ಅಧ್ಯಕ್ಷ ಎಚ್.ಡಿ. ಮಹೇಶ್ವರಪ್ಪ ಮಾತನಾಡಿ, ಹಿರಿಯ ಜಗದ್ಗುರುಗಳವರು ಕಟ್ಟಿ ಬೆಳೆಸಿದ ಈ ನಮ್ಮ ಸಮಾಜವನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ದಾವಣಗೆರೆ ತಾಲ್ಲೂಕಿನ ಸುಮಾರು 128 ಗ್ರಾಮಗಳಲ್ಲಿ ಕಾರ್ಯದರ್ಶಿ ಆನೆಕೊಂಡದ ಲಿಂಗರಾಜ್, ಕೆ.ಜಿ. ಬಸವನಗೌಡ್ರು, ಕೋಡಿಹಳ್ಳಿ ಜಯಣ್ಣ, ಆಲೂರು ಬಸವರಾಜಪ್ಪ   ಜೊತೆಗೂಡಿ  ಸಂಚರಿಸಿ, ಆ ಗ್ರಾಮಗಳಲ್ಲಿ ತರಳಬಾಳು ಗ್ರಾಮ ಸಮಿತಿಯನ್ನು ರಚಿಸಿದ್ದೇವೆ. ಆ ಎಲ್ಲಾ ಗ್ರಾಮ ಸಮಿತಿಯವರು ಹಿರಿಯ ಶ್ರೀಗಳ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಧನ, ಧಾನ್ಯಗಳನ್ನು ಭಕ್ತಿ ಪೂರ್ವಕವಾಗಿ ಸಮರ್ಪಿಸುತ್ತಿದ್ದಾರೆ ಎಂದು ತಿಳಿಸಿದರು.

ಸಮಾಜದ ದಾವಣಗೆರೆ ತಾಲ್ಲೂಕು ಘಟಕದ ಉಪಾಧ್ಯಕ್ಷ ಕಕ್ಕರಗೊಳ್ಳದ ಬಸವನಗೌಡರು, ಕಾರ್ಯದರ್ಶಿ ಆನೆಕೊಂಡದ ಲಿಂಗರಾಜ್ ವೇದಿಕೆ ಮೇಲೆ  ಉಪಸ್ಥಿತರಿದ್ದರು.

ಸಹಾಯಕ ಪ್ರಾಧ್ಯಾಪಕ ಎಚ್.ಎನ್. ಸುರೇಶ್ ಅತ್ತಿಗೆರೆ, ಕಕ್ಕರಗೊಳ್ಳದ ಪರಮೇಶ್ವರಪ್ಪ ಮಾತನಾಡಿದರು.

ಕಕ್ಕರಗೊಳ್ಳದ ಪರಮೇಶ್ವರಪ್ಪ, ಸಹಾಯಕ ಪ್ರಾಧ್ಯಾಪಕ ಎಚ್‌.ಎನ್ ಸುರೇಶ್ ಅತ್ತಿಗೆರೆ, ಜಿ.ಸಿ. ಉಮಾಪತಿ ಗೌಡ್ರು ಕತ್ತಲಗೆರೆ, ಹೆಚ್.ವಿ. ಶೇಖರಪ್ಪ, ಕೆ.ಎನ್. ಹಾಲಪ್ಪ ಕಕ್ಕರಗೊಳ್ಳದ ಬಸವರಾಜಪ್ಪ, ಕೆ.ಜಿ. ಮಾಂತೇಶ್ ಗೌಡರು, ಕೆ. ಮಂಜಪ್ಪ, ಜಿ. ವೀರೇಶ್, ನಾರೇಶ್ ಕೆ.ಎಂ., ಸುರೇಶ್ ಕೆ. ಶಾಮನೂರು, ನಿವೃತ್ತ ಶಿಶುಕಲ್ಯಾಣ ಅಧಿಕಾರಿ ಸಿದ್ದೇಶಪ್ಪ, ಕರಿಬಸಪ್ಪ ಬಿ. ಆನೆಕೊಂಡ, ಕರೆಶಿವಪ್ಪಳ ರುದ್ರೇಶ್, ಅಧ್ಯಾಪಕ ಸಿ.ಜಿ. ಜಗದೀಶ್ ಕೂಲಂಬಿ, ಶಿವಕುಮಾರ, ಹರೀಶ್, ಹಾಲೇಶ್ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.

error: Content is protected !!