ರೈತ ಹುತಾತ್ಮರ ದಿನಾಚರಣೆಯಲ್ಲಿ ಶ್ರೀ ಪಂಡಿತಾರಾಧ್ಯ ಸ್ವಾಮೀಜಿ ಆಗ್ರಹ
ಓಬೇನಹಳ್ಳಿ ಕಲ್ಲಿಂಗಪ್ಪ ಮತ್ತು ಸಿದ್ಧನೂರು ನಾಗರಾಜಚಾರ್ ಅವರ 31ನೇ ವರ್ಷದ ರೈತ ಹುತಾತ್ಮರ ದಿನಾಚರಣೆ ಮತ್ತು ಸ್ಮಾರಕ ಭವನದ ಉದ್ಘಾಟನೆ
ದಾವಣಗೆರೆ, ಸೆ. 13- ಸರ್ಕಾರ ಬೇರೆ ಕ್ಷೇತ್ರ ಗಳಿಗಿಂತ ಕೃಷಿ ಕ್ಷೇತ್ರಕ್ಕೆ ಹೆಚ್ಚು ಒತ್ತು ಕೊಡಬೇಕು. ಎಲ್ಲಾ ಸರ್ಕಾರಗಳು ರೈತರ ಪರ ಮಾತನಾಡುತ್ತವೆ. ಆದರೆ ಅವರಿಗೆ ಅನುಕೂಲವಾಗುವಂತಹ ಕೆಲಸ ಮಾಡುವುದು ವಿರಳ ಎಂದು ಸಾಣೇಹಳ್ಳಿ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.
ದಾವಣಗೆರೆ ತಾಲ್ಲೂಕು ಉಳುಪಿನಕಟ್ಟೆ ಕ್ರಾಸ್ ಬಳಿ ಇರುವ ರೈತ ಹುತಾತ್ಮ ಸಮಾಧಿ ಎದುರಿಗೆ ರೈತ ಹುತಾತ್ಮರ ಸ್ಮರಣಾರ್ಥ ಸಮಿತಿ, ಜಿಲ್ಲೆಯ ರೈತಪರ ಸಂಘಟನೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಓಬೇನಹಳ್ಳಿ ಕಲ್ಲಿಂಗಪ್ಪ ಮತ್ತು ಸಿದ್ಧನೂರು ನಾಗರಾ ಜಾಚಾರ್ ಅವರ 31 ನೇ ವರ್ಷದ ರೈತ ಹುತಾತ್ಮರ ದಿನಾಚರಣೆ ಮತ್ತು ಸ್ಮಾರಕ ಭವನ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ರೈತರ ಸಮಸ್ಯೆ ನೂರಾರು. `ಒಕ್ಕಲಿಗ ಒಕ್ಕದಿದ್ದರೆ ಬಿಕ್ಕುವುದು ಜಗವೆಲ್ಲಾ’ ಎಂಬ ಸರ್ವಜ್ಞನ ಮಾತಿನಂತೆ ಇಡೀ ಸಮಾಜಕ್ಕೆ ಅನ್ನ ನೀಡಲು ರೈತ ಹಗಲಿರುಳು ದುಡಿಯುತ್ತಾನೆ. ಅಂತಹ ರೈತ ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ, ಕೃಷಿಗೆ ಅಗತ್ಯವಾದ ಸವಲತ್ತುಗಳು ಸಿಗಬೇಕಾಗಿದೆ ಎಂದರು.
ಅಡಿಕೆ, ಹಣ ತಿಂದು ಬದುಕಲು ಸಾಧ್ಯವಿಲ್ಲ. ಆಹಾರ ಪದಾರ್ಥಗಳನ್ನು ತಿಂದು ಬದುಕಲು ಸಾಧ್ಯ. ಹಾಗಾಗಿ ಆಹಾರ ಪದಾರ್ಥಗಳನ್ನು ಬೆಳೆಯುವಂತಹ ಜನರಿಗೆ ಸರ್ಕಾರ ಹೆಚ್ಚಿನ ಸವಲತ್ತುಗಳನ್ನು ಒದಗಿಸುವ ಪ್ರಯತ್ನ ಮಾಡಬೇಕು. ಬೆಂಬಲ ಬೆಲೆ ಸಿಗುವಂತಾಗಬೇಕು. ರಾಗಿ, ಜೋಳಕ್ಕೂ ಹತ್ತು ಸಾವಿರ ಕ್ವಿಂಟಾಲ್ಗೆ ಸಿಕ್ಕರೆ ರೈತನ ಸ್ಥಿತಿ ಉತ್ತಮವಾಗಲಿದೆ. ರೈತರೂ ಸಹ ಒಂದೇ ಬೆಳೆಗೆ ಜೋತು ಬೀಳಬಾರದು. ವೈವಿಧ್ಯಮಯ ಬೆಳೆಗಳನ್ನು ಬೆಳೆಯಬೇಕೆಂದು ಹಿತ ನುಡಿದರು.
ರೈತ ಹುತಾತ್ಮರ ಸ್ಮಾರಕದ ಬಳಿ ರೈತ ಸಮುದಾಯ ಭವನ, ತರಬೇತಿ ಕೇಂದ್ರ ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಶಾಸಕರು, ಜಿಲ್ಲಾ ಮಂತ್ರಿಗಳು ಮತ್ತು ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು. ಕೊಟ್ಟ ಭರವಸೆ ಹುಸಿಯಾಗದಂತೆ ನೋಡಿಕೊಳ್ಳಬೇಕೆಂದು ಸೂಚ್ಯವಾಗಿ ತಿಳಿಸಿದರು.
ಆನಗೋಡು ನಂಜುಂಡಪ್ಪ ಅವರ ಸಲಹೆಯಂತೆ ಹಿಂದಿನ ಕೃಷಿ ಪದ್ಧತಿಯನ್ನು ಪರಿಚಯಿಸುವ ಸಲುವಾಗಿ ಕೃಷಿ ಪರಿಕರಗಳ ಪ್ರದರ್ಶನವನ್ನು ಏರ್ಪಡಿಸುವ ಮೂಲಕ ಮುಂದಿನ ಪೀಳಿಗೆಗೆ ಅದನ್ನು ಪರಿಚಯಿಸುವ ಪ್ರಯತ್ನ ತುಂಬಾ ಒಳ್ಳೆಯದು. ಆ ಕಾರ್ಯವನ್ನೂ ಸಹ ಮಾಡಬೇಕೆಂದು ಸೂಚನೆ ನೀಡಿದರು.
ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಮಾತನಾಡಿ, ಪ್ರೊ. ನಂಜುಂಡಸ್ವಾಮಿ ಅವರು ಹೋರಾಟಕ್ಕೆ ಕರೆ ಕೊಟ್ಟರೆ ಇಡೀ ರೈತ ಸಮೂಹ ಸಹಸ್ರ ಸಂಖ್ಯೆಯಲ್ಲಿ ಬರುತ್ತಿತ್ತು. ಆದರೆ ಇವತ್ತಿನ ರೈತ ಸಂಘಟನೆಗಳು ಹಿಂದಿನಂತೆ ಬಲಿಷ್ಠವಾಗಿರದೇ ಬಲಹೀನವಾಗಿರುವುದು ವಿಷಾದದ ಸಂಗತಿಯಾಗಿದೆ. ಮುಖಂಡರು ಸಮಾಜ ಮುಖಿ ಚಿಂತನೆಗಳನ್ನು ಮೈಗೂಡಿಸುವ ಮೂಲಕ ರೈತರನ್ನು ಸಂಘಟಿಸುವ ಮೂಲಕ ಹೋರಾಟ ನಡೆಸುವುದು ಸೂಕ್ತ ಎಂದರು.
ಕೃಷಿ ಪರಿಕರಗಳ ವಸ್ತು ಪ್ರದರ್ಶನ ಏರ್ಪಡಿಸಿ
ರೈತರಿಗೆ ಅಗತ್ಯವಾದ ರೈತ ಸಮುದಾಯ ಭವನ, ವಸತಿ ಗೃಹ ನಿರ್ಮಾಣ, ರೈತರ ತರಬೇತಿ ಕೇಂದ್ರದ ಜೊತೆಗೆ ಬಹುಮುಖ್ಯವಾಗಿ ರೈತರ ಕೃಷಿ ಪರಿಕರಗಳ ವಸ್ತು ಪ್ರದರ್ಶನವನ್ನು ಏರ್ಪಡಿಸುವ ಅವಶ್ಯವಿದೆ.
– ಹೆಚ್. ನಂಜುಂಡಪ್ಪ ಆನಗೋಡು.
ಸಾಲದ ಕಿರುಕುಳ ತಪ್ಪಿಸಿ
ರೈತರು ಅನ್ಯಾಯದ ವಿರುದ್ಧ ಪ್ರತಿಭಟಿಸದಂತಹ ವಾತಾವರಣ ನಿರ್ಮಾಣವಾಗಿದೆ. ಸರ್ಕಾರದ ಕಣ್ಣಾಮು ಚ್ಚಾಲೆ ಆಟದಿಂದ ರೈತರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಸಾಲದ ಕಿರುಕುಳ ತಪ್ಪಿಸಬೇಕು. ನಿರಂತರ ಏಳು ತಾಸು ವಿದ್ಯುತ್ ಪೂರೈಸ ಬೇಕು. ತಾಲ್ಲೂಕನ್ನು ಬರಪೀಡಿತ ಪಟ್ಟಿಗೆ ಸೇರ್ಪಡೆ ಮಾಡಬೇಕು.
– ಹೊನ್ನೂರು ಮುನಿಯಪ್ಪ
ರೈತರ ಸ್ಥಿತಿಗತಿ ಅರಿಯಲು ಇಂಟಲಿಜೆನ್ಸಿ ನೇಮಿಸಿ
ರೈತರ ಹಿತದೃಷ್ಟಿಯಿಂದ ಕೆಲವು ನಿಯಮಗಳನ್ನು ಬದಲಿಸಬೇಕಾದ ಅಗತ್ಯವಿದೆ. ರೈತರೊಂದಿಗೆ ಸಂವಾದ ನಡೆಸಲು ಪಂಡಿತಾರಾಧ್ಯ ಶ್ರೀಗಳು ಮುಂದಾಗಬೇಕು. ಗೋಲಿಬಾರ್ ನಲ್ಲಿ ಮೃತಪಟ್ಟ ರೈತ ಕುಟುಂಬಗಳಿಗೆ ಮಾಸಾಶನ ನೀಡಬೇಕು. ಬೆಳೆ ನೀತಿ, ಬೆಲೆ ನೀತಿ ರೂಪುಗೊಳ್ಳಬೇಕು. ಕಂಗಾಲಾಗಿರುವ ರೈತರ ಸ್ಥಿತಿಗತಿ ಅರಿಯಲು ಗುಪ್ತಚರ (ಇಂಟಲಿಜೆನ್ಸಿ)ಇಲಾಖೆ ಅಧಿಕಾರಿಗಳ ನೇಮಕ ಆಗಬೇಕು.
– ತೇಜಸ್ವಿ ಪಟೇಲ್
ಬರಪೀಡಿತ ತಾಲ್ಲೂಕು ಘೋಷಣೆ ಸಾಧ್ಯತೆ
ತಾಲ್ಲೂಕಿನಲ್ಲಿ ಬೆಳೆ ಸಮೀಕ್ಷೆ ನಡೆಸಲಾಗಿದ್ದು, ಸರ್ಕಾರಕ್ಕೆ ಈಗಾಗಲೇ ವರದಿ ಸಲ್ಲಿಕೆಯಾಗಿದೆ. ಎರಡನೇ ಹಂತದಲ್ಲಿ ಬರಪೀಡಿತ ತಾಲ್ಲೂಕು ಘೋಷಣೆ ಸಾಧ್ಯತೆ ಇದೆ.
– ಡಾ. ಅಶ್ವತ್ಥ್, ತಹಶೀಲ್ದಾರ್
ಸಮಾಜದಲ್ಲಿರುವ ರೈತ, ದಲಿತ, ಕಾರ್ಮಿಕ ಸಂಘಟನೆಗಳ ಮೊದಲಿದ್ದ ಧ್ವನಿ ಅಡಗಿರುವುದು ನೋವಿನ ಸಂಗತಿಯಾಗಿದೆ. ಜನಪರ, ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕ ಸಂಘಟನೆಗಳು ಬಲ ಹೆಚ್ಚಿಸಿಕೊಳ್ಳಬೇಕು. ಪಂಡಿತಾರಾಧ್ಯ ಶ್ರೀಗಳು ಮುಖಂಡರನ್ನು ಕರೆದು ಮಾತನಾಡಿ ಹರಿದು ಹಂಚಿ ಹೋಗಿರುವ ರೈತ ಸಂಘಟನೆಗಳನ್ನು ಒಗ್ಗೂಡಿಸುವ ಪ್ರಯತ್ನವನ್ನು ಮಾಡುವಂತೆ ಮನವಿ ಮಾಡಿದರು.
ಹುತಾತ್ಮರ ಸ್ಮಾರಕ ಭವನದ ಬಳಿ ಸಮುದಾಯ ಭವನ ನಿರ್ಮಾಣ ಸೇರಿದಂತೆ ರೈತರ ಇತರೆ ಸಮಸ್ಯೆಗಳನ್ನು ಆಲಿಸಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಮಲ್ಲಿಕಾರ್ಜುನ್, ಕೃಷಿ ಸಚಿವ ಕೃಷ್ಣಭೈರೇಗೌಡರ ಗಮನಕ್ಕೆ ತಂದು ಪರಿಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
22 ಕೆರೆ ಏತ ನೀರಾವರಿ ಯೋಜನೆಯಡಿ ಎಲ್ ಅಂಡ್ ಟಿ ಕಂಪನಿಯವರು ಮಾಡಲಾದ ಪೈಪ್ಲೈನ್ ಕಾಮಗಾರಿ ಕಳಪೆಯಿಂದ ಕೂಡಿದ್ದು, ಯೋಜನೆಯ ಉದ್ದೇಶ ಇನ್ನೂ ಈಡೇರಿಲ್ಲ. ಕಳಪೆ ಕಾಮಗಾರಿ ನಿರ್ವಹಿಸಿದ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಕಾಮಗಾರಿಗೆ ವ್ಯಯಿಸಿದ ಹಣವನ್ನು ವಾಪಾಸ್ ಪಡೆಯಲು ಅಧಿವೇಶನದಲ್ಲಿ ಪ್ರಸ್ತಾಪ ಮಾಡಿ, ಸರಿಪಡಿಸಲು ಸರ್ಕಾರಕ್ಕೆ ಮನವಿ ಮಾಡಿರುವುದಾಗಿ ತಿಳಿಸಿದರು.
ಮಾಯಕೊಂಡ ಕ್ಷೇತ್ರ ಅತಿ ಹೆಚ್ಚು ಮೆಕ್ಕೇಜೋಳ ಬೆಳೆಯುವ ಪ್ರದೇಶವಾಗಿದ್ದು, ಮೆಕ್ಕೇಜೋಳವನ್ನು ಆಹಾರ ಪಡಿತರ ವ್ಯಾಪ್ತಿಯಡಿ ತರುವ ಮೂಲಕ ರೈತರ ಹಿತ ಕಾಪಾಡುವಂತೆ ಒತ್ತಾಯಿಸಿದ ಅವರು, ಮಳೆಯ ಕೊರತೆಯಿಂದಾಗಿ ಬೆಳೆ ಬಾರದೇ ತಾಲ್ಲೂಕಿನ ರೈತರು ತೀವ್ರ ಸಂಕಷ್ಟಕ್ಕೀಡಾಗಿದ್ದು, ದಾವಣಗೆರೆಯನ್ನು ಬರಪೀಡಿತ ತಾಲ್ಲೂಕನ್ನಾಗಿ ಘೋಷಿಸುವಂತೆ ಸರ್ಕಾರದ ಮೇಲೆ ಒತ್ತಡ ತರುವುದಾಗಿ ಹೇಳಿದರು.
ಸಮಿತಿ ಅಧ್ಯಕ್ಷ ಎನ್.ಜಿ. ಪುಟ್ಟಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಸಮಿತಿ ಗೌರವಾಧ್ಯಕ್ಷ ಹೆಚ್. ನಂಜುಂಡಪ್ಪ, ರೈತ ಮುಖಂಡರಾದ ತೇಜಸ್ವಿ ಪಟೇಲ್, ಹೊನ್ನೂರು ಮುನಿಯಪ್ಪ, ತುರ್ಚಘಟ್ಟ ಬಸವರಾಜಪ್ಪ, ಅರುಣ್ ಕುಮಾರ್ ಕುರುಡಿ, ಆವರಗೆರೆ ರುದ್ರಮುನಿ, ಆರ್.ಜಿ.ಹಳ್ಳಿ ರಾಜಶೇಖರ್, ಗಂಗಾಧರಪ್ಪ, ಹೆಚ್.ಎನ್. ಶಿವಕುಮಾರ್, ಎಸ್.ಕೆ. ಚಂದ್ರಶೇಖರ್, ಮಹೇಶ್ವರ ಗೌಡ್ರು, ಬುಳ್ಳಾಪುರದ ಹನುಮಂತಪ್ಪ, ನೇರ್ಲಿಗಿ ಸ್ವಾಮಿ, ರೇವಣ್ಣ, ತಹಶೀಲ್ದಾರ್ ಡಾ. ಅಶ್ವತ್ಥ್, ಉಪತಹಶೀಲ್ದಾರ್ ರಾಮಸ್ವಾಮಿ, ಮುರಿಗೇಂದ್ರಪ್ಪ, ಮರುಳಸಿದ್ಧಯ್ಯ, ಕಾರ್ಯಪಾಲಕ ಇಂಜಿನಿಯರ್ ಟಿ. ಪುಟ್ಟಸ್ವಾಮಿ ಮತ್ತಿತರರು ಭಾಗವಹಿಸಿದ್ದರು.
ಚಿನ್ನಸಮುದ್ರ ಉಮೇಶ್ ನಾಯ್ಕ ರೈತ ಗೀತೆ ಹಾಡಿದರು. ಕಕ್ಕರಗೊಳ್ಳ ಕೆ.ಪಿ. ಕಲ್ಲಿಂಗಪ್ಪ ಕಾರ್ಯಕ್ರಮ ನಿರೂಪಿಸಿದರು. ಶಾಮನೂರು ಹೆಚ್.ಆರ್. ಲಿಂಗರಾಜ್ ಸ್ವಾಗತಿಸಿದರು. ಆವರಗೆರೆ ರುದ್ರಮುನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ರೈತ ಹುತಾತ್ಮರ ಸ್ಮಾರಕ ಭವನವನ್ನು ಪಂಡಿತಾರಾಧ್ಯ ಶ್ರೀಗಳು ಉದ್ಘಾಟಿಸಿದರು.