ಜಾತ್ಯತೀತ ವ್ಯವಸ್ಥೆಗೆ ದಕ್ಕೆ ಆಗದಂತೆ ನೋಡಿಕೊಳ್ಳಿ

ಜಾತ್ಯತೀತ ವ್ಯವಸ್ಥೆಗೆ ದಕ್ಕೆ ಆಗದಂತೆ ನೋಡಿಕೊಳ್ಳಿ

ಪ್ರೊ. ಕೃಷ್ಣಪ್ಪ ಭವನದಲ್ಲಿನ ಸಂವಿಧಾನ ಓದು ಕಾರ್ಯಾಗಾರದಲ್ಲಿ ನ್ಯಾ.ನಾಗಮೋಹನ್‌ದಾಸ್‌

ಮಲೇಬೆನ್ನೂರು, ಸೆ.10- `ಜಾತ್ಯತೀತೆ ಎನ್ನುವುದು ನಮ್ಮ ದೇಶದ ಮೂಲ ತತ್ವ ಎಂದು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿದೆ. ಹಾಗಾಗಿ ಅದು ಸಂವಿಧಾನದಲ್ಲಿ ಇನ್ನೂ ಉಳಿದಿದೆ. ಇಲ್ಲದಿದ್ದರೆ ಇಷ್ಟೊತ್ತಿಗೆ `ಜಾತ್ಯತೀತ’ ಎಂಬ ಪದವನ್ನೇ ಸಂವಿಧಾನದಿಂದ ತೆಗೆದು ಹಾಕುತ್ತಿ ದ್ದರೆಂದು ನಿವೃತ್ತ ನ್ಯಾಯಮೂರ್ತಿ ಹೆಚ್‌.ಎನ್‌. ನಾಗಮೋಹನ್‌ ದಾಸ್‌ ಹೇಳಿದರು.

ಹನಗವಾಡಿ ಸಮೀಪ ಇರುವ ಪ್ರೊ. ಬಿ. ಕೃಷ್ಣಪ್ಪ ಭವನದಲ್ಲಿ ಮಾನವ ಬಂಧುತ್ವ ವೇದಿಕೆ ವತಿಯಿಂದ ಇಂದು ಹಮ್ಮಿಕೊಂಡಿದ್ದ ವಿಭಾಗೀಯ ಮಟ್ಟದ `ಸಂವಿಧಾನ ಓದು ಕಾರ್ಯಾಗಾರ’ದಲ್ಲಿ 2ನೇ ದಿನ `ಸಂವಿಧಾನ ಮತ್ತು ಜಾತ್ಯತೀತೆ’ ವಿಷಯ ಕುರಿತು ಹಾಗೂ ಸಮಾರೋಪವಾಗಿ ಅವರು ಮಾತನಾಡಿದರು.

ಸುಪ್ರೀಂ ಕೋರ್ಟ್‌ ಜಾತ್ಯತೀತೆಯನ್ನು ಎತ್ತಿ ಹಿಡಿದಿದ್ದರೂ ಅದನ್ನು ಅಪವಿತ್ರತೆ ಮಾಡುವ ಕೆಲಸವನ್ನು  ನಿರಂತರವಾಗಿ ನಡೆಯುತ್ತಿದೆ. ಸಂವಿಧಾನದಲ್ಲಿ ಕಟ್ಟಿಕೊಟ್ಟಿರುವ ಜಾತ್ಯತೀತ ವ್ಯವಸ್ಥೆಯನ್ನು ಉಳಿಸಿ ಬೆಳೆಸಲು ನಾವು ಜಾಗೃತರಾಗಬೇಕು. ಅದಕ್ಕಾಗಿ ಪ್ರತಿಯೊಬ್ಬರೂ ಸಂವಿಧಾನ ಓದಿ ಅರ್ಥ ಮಾಡಿಕೊಳ್ಳಬೇಕು. ಜೊತೆಗೆ ಇತರರಿಗೂ ಸಂವಿಧಾನದ ಮಹತ್ವ ತಿಳಿಸಬೇಕೆಂದರು.

ಸಂವಿಧಾನ ಓದಿ ಅರ್ಥ ಮಾಡಿಕೊಂಡ ವರು ಅದನ್ನು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಆಚರಣೆಗೆ ತರಬೇಕೆಂದ ನಾಗಮೋಹನ್‌ದಾಸ್‌ ಅವರು, ಜಾತ್ಯತೀತ ವ್ಯವಸ್ಥೆಗೆ ದಕ್ಕೆ ಆದಾಗ ಮತ್ತು ಸಂವಿಧಾನದ ಆಶಯಗಳಿಗೆ ವಿರುದ್ಧವಾದ ಶಿಕ್ತಿಗಳನ್ನು ಹಿಮ್ಮೆಟ್ಟಿಸುವುದಕ್ಕಾಗಿ ದೇಶದ ಜನ ಪಕ್ಷಾತೀತವಾಗಿ ಜಾತ್ಯತೀತವಾಗಿ ಒಂದಾಗಬೇಕೆಂದು ಕರೆ ನೀಡಿದರು.

ಜಗತ್ತಿನ ಎಲ್ಲಾ ಧರ್ಮಗಳೂ ಕೂಡಾ ಜನರ ದುಃಖ, ದುಮ್ಮಾನಗಳನ್ನು ಪರಿಹರಿಸಲು ಹುಟ್ಟಿವೆ. ಹಾಗಾಗಿ ನಾವ್ಯಾರೂ ಧರ್ಮವಿರೋಧಿ ಗಳಾಗಬೇಕಿಲ್ಲ. ಆದರೆ ಮೂಲಭೂತವಾದ ಕೋಮುವಾದ ಆಗುವುದನ್ನು ತಡೆಗಟ್ಟಬೇಕಾದ ಧರ್ಮವನ್ನು ರಾಜಕಾರಣಕ್ಕೆ ಬಳಸುತ್ತಿದ್ದಾರೆ.

ಇದರಿಂದಾಗಿ ಮೂಲಭೂತವಾದ, ಕೋಮುವಾದ ಸೃಷ್ಟಿಯಾಗಿ ಸಾವಿರಾರು ಜನ ಪ್ರಾಣ ಕಳೆದುಕೊಂಡಿದ್ದಾರೆ. ಮೂಲಗಳ ಪ್ರಕಾರ ದೇಶದಲ್ಲಿ ಇದುವರೆಗೆ 14 ಸಾವಿರಕ್ಕೂ ಹೆಚ್ಚು ಕೋಮು ಗಲಭೆಗಳು ನಡೆದಿವೆ. ಅದರಲ್ಲಿ ಸತ್ತವರು, ಹಿಂದೂ-ಮುಸ್ಲಿಮರು ಎನ್ನುವುದ ಕ್ಕಿಂತ ಮುಖ್ಯವಾಗಿ ಮನುಷ್ಯರು ಎಂಬುದನ್ನು ನಾವು ಮೊದಲು ಅರ್ಥಮಾಡಿಕೊಳ್ಳಬೇಕು.

ಮೂಲಭೂತವಾದ ಮತ್ತು ಧರ್ಮವನ್ನು ಬೆರಸದೆ ಇರುವ ರಾಜಕೀಯ ವ್ಯವಸ್ಥೆಗೆ ಜಾತ್ಯತೀತ ಎನ್ನುತ್ತೇವೆ. ಜೊತೆಗೆ ನಮ್ಮ ದೇಶದಲ್ಲಿ ಎಲ್ಲಾ ವ್ಯವಸ್ಥೆಗಳಿಗಿಂತ `ಪ್ರಜಾಪ್ರಭುತ್ವ ವ್ಯವಸ್ಥೆ’ ಅತ್ಯಂತ ಶ್ರೇಷ್ಟವಾದದ್ದು. ಅಂತಹ ಪ್ರಜಾಪ್ರಭುತ್ವ ಮೂಲಭೂತವಾದಗಳನ್ನು ಬೆರಸಿ ದೇಶದಲ್ಲಿ ಅಶಾಂತಿ ಉಂಟು ಮಾಡುತ್ತಿದ್ದಾರೆ.

ಅಷ್ಟೇ ಅಲ್ಲ, ಇವತ್ತು ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ವ್ಯವಸ್ಥೆ ಕೂಡಾ ಕೋಮುವಾದದಿಂದ ಕೂಡಿದೆ ಎಂದು ಬೇಸರ ವ್ಯಕ್ತಪಡಿಸಿದ ನಾಗಮೋಹನ್‌ದಾಸ್‌ ಅವರು, ಒಂದು ದೇಶವನ್ನು ಆರ್ಥಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕವಾಗಿ ಕಟ್ಟಲು ಜಾತ್ಯತೀತೆ ಬಹಳ ಮುಖ್ಯವಾಗಿದೆ. ಏಕೆಂದರೆ ಜಾತ್ಯತೀತ ಮೌಲ್ಯದಿಂದ ದೇಶಕ್ಕೆ ಒಳ್ಳೆಯದಾಗುತ್ತದೆ. ಆದ್ದರಿಂದ ಎಲ್ಲರೂ ಬದುಕಿನಲ್ಲಿ ಭಾತೃತ್ವ ಮತ್ತು ಮೌಲ್ಯವನ್ನು ಅಳವಡಿಸಿಕೊಳ್ಳಬೇಕು.

ಭ್ರಷ್ಟಾಚಾರದ ವಿರುದ್ಧ ದೇಶದಲ್ಲಿ ದೊಡ್ಡ ಆಂದೋಲನವಾಗಬೇಕು. ಇದರಲ್ಲಿ ಯುವಜನರು ಹೆಚ್ಚು ಭಾಗಿಯಾಗಬೇಕು. ಇಲ್ಲದಿದ್ದರೆ ಭ್ರಷ್ಟಾಚಾರದಿಂದಾಗಿ ನೈತಿಕವಾಗಿ ದಿವಾಳಿ ಆಗುತ್ತವೆ ಎಂದು ನಾಗಮೋಹನ್‌ದಾಸ್‌ ಎಚ್ಚರಿಸಿದರು.

`ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಪರಿಕಲ್ಪನೆ’ ಕುರಿತು ಕಿಗ್ಗಾ ರಾಜಶೇಖರ್‌ ಹಾಗೂ `ಸಂವಿಧಾನ ಮತ್ತು ಮಹಿಳೆ’ ಕುರಿತು ಡಾ. ಎ.ಬಿ. ರಾಮಚಂದ್ರಪ್ಪ ಮಾತನಾಡಿದರು. 

ಪ್ರೊ ಕೃಷ್ಣಪ್ಪ ಟ್ರಸ್ಟ್‌ನ ರುದ್ರಪ್ಪ ಹನಗವಾಡಿ, ವಕೀಲರಾದ ಅನಂತ್‌ನಾಯ್ಕ್‌, ಎಲ್‌.ಹೆಚ್‌. ಅರುಣ್‌ಕುಮಾರ್‌, ಅನೀಶ್‌ಪಾಷಾ, ಹುಲಿಕಟ್ಟೆ ಚನ್ನಬಸಪ್ಪ, ಸಂತೋಷ್‌ ನೋಟದ್‌, ಪತ್ರಕರ್ತ ಜಿಗಳಿ ಪ್ರಕಾಶ್‌, ಮಾಡಾಳ್‌ ಶಿವಕುಮಾರ್‌, ರಾಘು ದೊಡ್ಮನಿ, ಉಕ್ಕಡಗಾತ್ರಿ ಮಂಜು ಸೇರಿದಂತೆ ಇತರರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

error: Content is protected !!