ದಾವಣಗೆರೆ, ಸೆ. 7 – ಆಗಸ್ಟ್ ತಿಂಗಳಲ್ಲಿ ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ.75ರಷ್ಟು ಕಡಿಮೆ ಮಳೆಯಾಗಿರುವ ಹಿನ್ನೆಲೆಯಲ್ಲಿ, ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ 3.53 ಮೀಟರ್‌ಗಳಷ್ಟು ಇಳಿಕೆಯಾಗಿದೆ.
ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ ಅಂತರ್ಜಲ ಮಟ್ಟ 4.24 ಮೀಟರ್ ಆಗಿತ್ತು. ಈ ಬಾರಿ ಅಂತರ್ಜಲ ಮಟ್ಟ 7.77 ಮೀಟರ್‌ಗೆ ಇಳಿಕೆಯಾಗಿದೆ. ಒಟ್ಟಾರೆ ಇಳಿಕೆ 3.53 ಮೀಟರ್ ಆಗಿದೆ ಎಂದು ಜಿಲ್ಲಾ ಅಂತರ್ಜಲ ಕಚೇರಿಯ ಹಿರಿಯ ಭೂ ವಿಜ್ಞಾನಿ ಆರ್. ಬಸವರಾಜ್ ತಿಳಿಸಿದ್ದಾರೆ.
ನೆಲ ಮಟ್ಟದಿಂದ ಅಂತರ್ಜಲದ ಆಳವನ್ನು ಗುರುತಿಸಲಾಗುತ್ತದೆ. ಹೀಗಾಗಿ ಮಟ್ಟ ಹೆಚ್ಚಾದಷ್ಟು, ಅಂತರ್ಜಲ ಪ್ರಮಾಣ ಕಡಿಮೆ ಇರುತ್ತದೆ.
ಜೂನ್ ತಿಂಗಳಲ್ಲೂ ಮಳೆ ತೀವ್ರವಾಗಿ ಕೈ ಕೊಟ್ಟಿತ್ತು. ಈ ಹಿನ್ನೆಲೆಯಲ್ಲಿ ಆ ತಿಂಗಳಲ್ಲಿ ಅಂತರ್ಜಲ ಮಟ್ಟ 9.99 ಮೀಟರ್‌ವರೆಗೂ ಕುಸಿತವಾಗಿತ್ತು. ಜುಲೈನಲ್ಲಿ ಸುರಿದ ಮಳೆಯಿಂದ ಅಂತರ್ಜಲ ಮಟ್ಟ ತುಸು ಚೇತರಿಕೆ ಕಂಡಿದೆ. ಆದರೂ, ಕಳೆದ ವರ್ಷಕ್ಕೆ ಹೋಲಿಸಿದರೆ ಕಡಿಮೆಯೇ ಆಗಿದೆ.
ಆಗಸ್ಟ್‌ನಲ್ಲಿ ಜಗಳೂರು ತಾಲ್ಲೂಕಿನಲ್ಲಂತೂ ಅಂತರ್ಜಲ ಮಟ್ಟ 16.54 ಮೀಟರ್‌ಗಳವರೆಗೆ ಕುಸಿದಿದೆ. ದಾವಣಗೆರೆಯಲ್ಲಿ 8.65 ಮೀಟರ್, ನ್ಯಾಮತಿಯಲ್ಲಿ 8 ಮೀಟರ್, ಚನ್ನಗಿರಿಯಲ್ಲಿ 6.42 ಮೀಟರ್, ಹರಿಹರದಲ್ಲಿ 4.02 ಮೀಟರ್ ಹಾಗೂ ಹೊನ್ನಾಳಿಯಲ್ಲಿ 2.98 ಮೀಟರ್ ಆಗಿದೆ.
ಕಳೆದ ವರ್ಷ ನ್ಯಾಮತಿಯಲ್ಲಿ ಅಂತರ್ಜಲ ಮಟ್ಟ 2.17 ಮೀಟರ್ ಆಗಿತ್ತು. ಈ ಬಾರಿ 8.00 ಮೀಟರ್‌ಗೆ ಕುಸಿದಿದೆ. ಒಟ್ಟಾರೆ 5.83 ಮೀಟರ್ ನೀರಿನ ಮಟ್ಟ ಕುಸಿತವಾಗಿದೆ.
ಮಳೆ ಕೈ ಕೊಟ್ಟ ಕಾರಣ ರೈತರು ಬೋರ್‌ವೆಲ್‌ಗಳನ್ನು ಹೆಚ್ಚಾಗಿ ಅವಲಂಬಿಸಿದ್ದಾರೆ. ಈ ಸಂದರ್ಭದಲ್ಲೇ ಅಂತರ್ಜಲ ಕುಸಿತ ಕಳವಳ ಕಾರಿಯಾಗಿದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಮತ್ತೆ ಮಳೆರಾಯ ಮುಖ ತೋರಿಸಿದ್ದಾನೆ. ಮುಂಗಾರಿನ ಉಳಿದ ಅವಧಿಯಲ್ಲಾದರೂ ಉತ್ತಮ ಮಳೆಯಾದರೆ ಅಂತರ್ಜಲ ಚೇತರಿಕೆಯಾಗಿ ಬೇಸಿಗೆಯಲ್ಲಿ ಸಂಕಷ್ಟಕ್ಕೆ ಗುರಿಯಾಗುವುದು ತಪ್ಪಲಿದೆ.