ಆಗಸ್ಟ್ ಮುಗಿದರೂ ಹಲವರಿಗಿಲ್ಲ ಅನ್ನಭಾಗ್ಯ

ಆಗಸ್ಟ್ ಮುಗಿದರೂ ಹಲವರಿಗಿಲ್ಲ ಅನ್ನಭಾಗ್ಯ

ಪಡಿತರದಾರರ ಖಾತೆಗಳಿಗೆ ಹಣ ಜಮಾ ಮಾಡುವ ಕಡತಕ್ಕೆ ಜಿಲ್ಲಾಧಿಕಾರಿಗಳ ಅನುಮೋದನೆ ದೊರೆತಿದೆ. ಒಂದೆರಡು ದಿನಗಳಲ್ಲೇ ಹಣ ಜಮಾ ಆಗಲಿದೆ.

– ಶಿದ್ದರಾಮ ಮಾರಿಹಾಳ, ಆಹಾರ ಇಲಾಖೆಯ ಉಪ ನಿರ್ದೇಶಕ

ದಾವಣಗೆರೆ, ಆ. 31 – ಕಳೆದ ಜುಲೈ ತಿಂಗಳಲ್ಲಿ ರಾಜ್ಯ ಸರ್ಕಾರ ಅನ್ನ ಭಾಗ್ಯದ ಹಣವನ್ನು ಬಿ.ಪಿ.ಎಲ್. ಹಾಗೂ ಅಂತ್ಯೋದಯ ಪಡಿತರದಾರರ ಖಾತೆಗಳಿಗೆ ಜಮಾ ಮಾಡುವ ಪ್ರಕ್ರಿಯೆ ಆರಂಭಿಸಿತ್ತು. ಆದರೆ, ಆಗಸ್ಟ್ ತಿಂಗಳು ಮುಗಿದರೂ ಜಿಲ್ಲೆಯ ಸಾಕಷ್ಟು ಜನರಿಗೆ ಅನ್ನಭಾಗ್ಯದ ಹಣ ದೊರೆತಿಲ್ಲ.

ತಾಂತ್ರಿಕ ಕಾರಣಗಳಿಂದಾಗಿ ಪಡಿತರದಾರರ ಬ್ಯಾಂಕ್ ಖಾತೆಗಳಿಗೆ ಹಣ ಜಮಾ ಆಗಿಲ್ಲ. ಒಂದೆರಡು ದಿನಗಳಲ್ಲಿ ಹಣ ಜಮಾ ಆಗಲಿದೆ ಎಂದು ಆಹಾರ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಬಿಪಿಎಲ್ ಹಾಗೂ ಅಂತ್ಯೋದಯ ಪಡಿತರದಾರರಿಗೆ ತಲಾ ಹತ್ತು ಕೆ.ಜಿ. ಅಕ್ಕಿ ನೀಡುವುದಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ತಿಳಿಸಿತ್ತು. ಆದರೆ, ಇದಕ್ಕೆ ಅಗತ್ಯ ಅಕ್ಕಿ ಲಭ್ಯವಾಗದ ಕಾರಣ, ತಿಂಗಳಿಗೆ ಐದು ಕೆಜಿ ಅಕ್ಕಿ ಹಣವಾಗಿ ತಲಾ ಒಬ್ಬ ಪಡಿತರದಾರರಿಗೆ 170 ರೂ.ಗಳನ್ನು ನೀಡಲು ನಿರ್ಧರಿಸಲಾಗಿತ್ತು.

ಆಗಸ್ಟ್ ತಿಂಗಳಲ್ಲಿ ಕೆಲವರ ಖಾತೆಗಳಿಗೆ ಹಣ ಜಮಾ ಆಗಿದ್ದರು, ಇನ್ನೂ ಸಾಕಷ್ಟು ಜನರ ಖಾತೆಗಳಿಗೆ ಹಣ ಜಮಾ ಆಗಿರಲಿಲ್ಲ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಆಹಾರ ಇಲಾಖೆಯ ಅಧಿಕಾರಿಗಳು, ಜಿಲ್ಲೆಯ ಪಡಿತರದಾರರಿಗೆ ಹಣ ಜಮಾ ಮಾಡುವ ಕುರಿತ 6 ಕಡತಗಳಿಗೆ ತಾಂತ್ರಿಕ ಕಾರಣಗಳಿಂದ ಅನುಮತಿ ವಿಳಂಬವಾಗಿದೆ ಎಂದು ಹೇಳಿದ್ದಾರೆ.

ಪಡಿತರದಾರರಿಗೆ ಹಣ ಜಮಾ ಮಾಡಲು 17 ಕಡತಗಳಿಗೆ ಅನುಮತಿ ದೊರೆಯಬೇಕಿತ್ತು. ಆರಕ್ಕೆ ಅನುಮತಿ ವಿಳಂಬವಾಗಿದೆ. ಪ್ರತಿ ಕಡತದಲ್ಲಿ 20 ಸಾವಿರ ಪಡಿತದಾರರ ಮಾಹಿತಿ ಇರುತ್ತದೆ.

ಪಡಿತದಾರರ ಆಧಾರ್ ಕಾರ್ಡ್ ಮಾಹಿತಿಯನ್ನು ಬ್ಯಾಂಕ್ ಖಾತೆ ಜೊತೆ ಜೋಡಣೆ ಮಾಡದೇ ಇರುವಂತಹ ಸಮಸ್ಯೆಗಳಿದ್ದರೆ ಅಂಥವರ ಖಾತೆಗಳಿಗೆ ಹಣ ಬರುವುದಿಲ್ಲ. ಆದರೆ, ಹಣ ಬಿಡುಗಡೆ ವಿಳಂಬವಾದ ಕಾರಣಕ್ಕೆ ಯಾರೂ ಅನ್ನಭಾಗ್ಯದ ಹಣದಿಂದ ವಂಚಿತರಾಗುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಆಗಸ್ಟ್ ತಿಂಗಳಲ್ಲಿ ಹಣ ಜಮಾ ಆಗದೇ ಇದ್ದರೂ, ಆ ಕಂತು ಅವಧಿ ಮೀರುವುದಿಲ್ಲ, ಆಗುವುದಿಲ್ಲ. ಹೀಗಾಗಿ ಪಡಿತರದಾರರು ಕಳವಳ ಪಡಬೇಕಿಲ್ಲ ಎಂದೂ ಅವರು ಹೇಳಿದ್ದಾರೆ.

error: Content is protected !!