ಗ್ಯಾರಂಟಿ ಯೋಜನೆಗಳಿಗೆ ಹೆದರಿದ ಕೇಂದ್ರ: ಸಚಿವ ಎಸ್.ಎಸ್. ಮಲ್ಲಿಕಾರ್ಜುನ್
ದಾವಣಗೆರೆ, ಆ. 30- ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗುತ್ತದೆ ಎಂದು ಟೀಕಿಸಿದವರೇ, ಇಂದು ಸಿಲಿಂಡರ್ ದರ 200 ರೂ. ಇಳಿಕೆ ಮಾಡಿದ್ದಾರೆ ಎಂದು ಗಣಿ, ಭೂ ವಿಜ್ಞಾನ ಹಾಗೂ ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದರು.
ಅವರು ಬುಧವಾರ ಇಲ್ಲಿನ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ `ಗೃಹಲಕ್ಷ್ಮಿ’ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.
ಚುನಾವಣೆಗೂ ಮುನ್ನ ಸರ್ಕಾರ ಘೋಷಿಸಿದ್ದ ಭರವಸೆಗಳ ಪೈಕಿ ನಾಲ್ಕನೇ ಈಡೇರಿಸಿದ್ದೇವೆ. ನಿರುದ್ಯೋಗ ಭತ್ಯೆ ನೀಡುವ ಯುವ ನಿಧಿ ಯೋಜನೆಯನ್ನು ಇದೇ ಡಿಸೆಂಬರ್ ಅಥವಾ ಜನವರಿ ತಿಂಗಳೊಳಗೆ ಜಾರಿಗೆ ತರಲಾಗುವುದು ಎಂದರು.
ರಾಜ್ಯ ಸರ್ಕಾರದ ಈ ಎಲ್ಲಾ ಘೋಷಣೆಗಳು ನಿಜವಾಗಿಯೂ ಜನರಿಗೆ ತಲುಪುವಂತವಾಗಿವೆ. ಇವುಗಳನ್ನೆಲ್ಲಾ ನೋಡಿಯೇ ಹೆದರಿರುವ ಕೇಂದ್ರ ಸರ್ಕಾರವು ಇದೀಗ ಲೋಕಸಭಾ ಚುನಾವಣೆಯಲ್ಲಿ ನಮಗೆ ಉಳಿಗಾಲ ಇಲ್ಲ ಎಂದು ಸಿಲಿಂಡರ್ ಬೆಲೆ 200 ರೂ. ಇಳಿಕೆ ಮಾಡಿದೆ. ಕೇಂದ್ರ ಸರ್ಕಾರದವರಿಗೆ ಬಡತನ ಗೊತ್ತಿಲ್ಲ. ಅವರದ್ದು ಶ್ರೀಮಂತರ ಪಕ್ಷ ಎಂದು ತೀಕ್ಷ್ಣವಾಗಿ ತರಾಟೆಗೆ ತೆಗೆದುಕೊಂಡರು.
ಟೀಕಿಸುವ ವಿರೋಧ ಪಕ್ಷಗಳ ಮಾತಿಗೆ ಕಿವಿಗೊಡಬೇಡಿ. ಮುಂಬರುವ ಲೋಕಸಭಾ ಚುನಾವಣೆಯಲ್ಲಿಯೂ ಕಾಂಗ್ರೆಸ್ ಬೆಂಬಲಿಸುವ ಮೂಲಕ ಅವರಿಗೆ ಉತ್ತರ ಕೊಡಿ ಎಂದು ಕರೆ ನೀಡಿದರು.
ಹೊಟ್ಟೆಗೆ ಹಿಟ್ಟು, ಮಲಗಲು ಸೂರು, ಉತ್ತಮ ಆರೋಗ್ಯ, ಒಳ್ಳೆಯ ಶಿಕ್ಷಣ ಸೇರಿದಂತೆ ಮೂಲ ಸೌಲಭ್ಯಗಳನ್ನು ಒದಗಿಸುವುದು ಸರ್ಕಾರದ ಕೆಲಸ. ಈ ನಿಟ್ಟಿನಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಗರೀಬಿ ಹಠಾವೋ ಘೋಷಣೆಯಂತೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ಯೋಜನೆಗಳ ಮೂಲಕ ಬಡತನ ನಿರ್ಮೂಲನೆ ಮಾಡುವಂತಹ ಕೆಲಸ ಮಾಡುತ್ತಿದೆ ಎಂದರು.
ಗೃಹ ಲಕ್ಷ್ಮಿ ಯೋಜನೆಯಡಿ ಜಿಲ್ಲೆಯಲ್ಲಿ 3,27,472 ಫಲಾನುಭವಿಗಳು ನೋಂದಾಯಿಸಿಕೊಂಡಿರುವುದು ಸಂತೋಷದ ವಿಷಯ. ಆದರೆ ಇನ್ನೂ ಶೇ.15ರಷ್ಟು ಜನರು ನೋಂದಾಯಿಸಿಕೊಳ್ಳಬೇಕಿದ್ದು, ಶೀಘ್ರವೇ ಯೋಜನೆ ಲಾಭ ಪಡೆಯಿರಿ ಎಂದು ಹೇಳಿದರು.
ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಮಾತನಾಡಿ, ಚುನಾವಣೆಗೂ ಮುನ್ನ ಘೋಷಿಸಿದ್ದ ಭರವಸೆಗಳನ್ನು ಈಡೇರಿಸುವ ಮೂಲಕ ದೇಶದಲ್ಲಿಯೇ ನುಡಿದಂತೆ ನಡೆದ ಸರ್ಕಾರ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವಾಗಿದೆ ಎಂದರು.
ಯೋಜನೆಯಿಂದ ಬರುವ ಹಣವನ್ನು ಬ್ಯಾಂಕಿನವರು ಸಾಲಕ್ಕೆ ಜಮಾ ಮಾಡಿಕೊಳ್ಳಬಾರದು. ಈ ಬಗ್ಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಬೇಕು ಎಂದರು.
ಬಿಜೆಪಿ ಮುಖಂಡರು ಯೋಜನೆಗಳ ಬಗ್ಗೆ ಟೀಕಿಸುತ್ತಾರೆ. ಅದಾನಿ, ಅಂಬಾನಿಗೆ ಹಣ ನೀಡುವಾಗ ದೇಶ ದಿವಾಳಿಯಾಗುವುದಿಲ್ಲವೇ? ಬಡವರಿಗೆ ಹಣ ಕೊಟ್ಟರೆ ಟೀಕೆ ಮಾಡುವುದೇಕೆ? ಎಂದು ಪ್ರಶ್ನಿಸಿದರು.
ಮಳೆ ಬಾರದೇ ಬೆಳೆಗಳು ಒಣಗುತ್ತಿದ್ದು, ಜಿಲ್ಲೆಯನ್ನು ಸಂಪೂರ್ಣ ಬರ ಪೀಡಿತ ಎಂದು ಘೋಷಿಸುವಂತೆ ಉಸ್ತುವಾರಿ ಸಚಿವರು ಮುಖ್ಯಮಂತ್ರಿಗಳಿಗೆ ಒತ್ತಾಯಿಸಬೇಕು ಎಂದು ಇದೇ ವೇಳೆ ಬಸವಂತಪ್ಪ ಮನವಿ ಮಾಡಿದರು.
ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಮಾತನಾಡುತ್ತಾ, 1.10 ಕೋಟಿಗೂ ಹೆಚ್ಚು ಮಹಿಳೆಯರಿಗೆ 2 ಸಾವಿರ ರೂ. ನೀಡುವ ಈ ಯೋಜನೆಯ ಉದ್ಘಾಟನಾ ದಿನ ಸುವರ್ಣಾಕ್ಷರದಲ್ಲಿ ಬರೆದಿಡುವಂತಹದ್ದು ಎಂದರು.
ಎಲ್ಲರಿಗೂ ಸಮಪಾಲು-ಸಮಬಾಳು ಎಂಬ ಧ್ಯೇಯೋದ್ಧೇಶದಿಂದ ಸರ್ಕಾರ ಈ ಯೋಜನೆಗಳನ್ನು ಜಾರಿಗೆ ತಂದಿದೆ. ತುಮಕೂರು ಹೊರತುಪಡಿಸಿದರೆ, ದಾವಣಗೆರೆ ಫಲಾನುಭವಿಗಳ ನೋಂದಣಿಯಲ್ಲಿ ಎರಡನೇ ಸ್ಥಾನದಲ್ಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಫಲಾನುಭವಿಗಳ ನೋಂದಣಿಗಾಗಿ 300ಕ್ಕೂ ಹೆಚ್ಚು ಪ್ರಜಾಪ್ರತಿನಿಧಿಗಳನ್ನು ನೇಮಿಸಲಾಗಿತ್ತು. ಗ್ರಾಮ ಪಂಚಾಯ್ತಿ ಹಾಗೂ ತಾಲ್ಲೂಕು ಪಂಚಾಯ್ತಿ ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿತ್ತು. ವಯಸ್ಕ ಹಾಗೂ ವಿಕಲಚೇತನರ ಮನೆಗಳಿಗೇ ತೆರಳಿ ಯಾವುದೇ ಭ್ರಷ್ಟಾಚಾರ ಹಾಗೂ ಶುಲ್ಕ ವಿಧಿಸದೆ ನೋಂದಣಿ ಮಾಡಲಾಗಿದೆ ಎಂದು ಹೇಳಿದರು.
ರಕ್ಷಾಬಂಧನದ ಶುಭಾಶಯ
ತಮ್ಮ ಭಾಷಣದ ಮೊದಲಿಗೆ ಸಚಿವ ಮಲ್ಲಿಕಾರ್ಜುನ್ ಅವರು ನೆರೆದಿದ್ದ ಮಹಿಳೆಯರಿಗೆ ರಕ್ಷಾಬಂಧನದ ಶುಭಾಶಯ ಕೋರಿದರು. ಕಾರ್ಯಕ್ರಮದ ಕೊನೆಯಲ್ಲಿ ಫಲಾನುಭವಿ ಯೊಬ್ಬರು ಸಚಿವರಿಗೆ ರಾಖಿ ಕಟ್ಟಿದಾಗ, ಸಚಿವರು ನಗದು ಕಾಣಿಕೆ ನೀಡಿದರು.
ಗೃಹ ಲಕ್ಷ್ಮಿ ಯೋಜನೆ ಕುರಿತು ಫಲಾನುಭವಿ ಗಳಾದ ಉಮಾ ಹಾಗೂ ಲೀಲಾ ಸ್ವತಃ ತಾವೇ ರಚಿಸಿದ್ದ ಹಾಡು ಹಾಡಿ ಗಮನ ಸೆಳೆದರು.
ರಾಜಕೀಯಕ್ಕೆ ಬಂದದ್ದು ಸಾರ್ಥಕವಾಯ್ತು
ಗೃಹ ಲಕ್ಷ್ಮಿ ಯೋಜನೆ ಉದ್ಘಾಟನೆ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸಿದ್ದರು. ಸಭಾಂಗಣ ಭರ್ತಿಯಾಗಿತ್ತು. ಅನೇಕರು ಹೊರಭಾಗದಲ್ಲಿ ಕುಳಿತು ಎಲ್ಇಡಿ ಪರದೆ ಮೂಲಕ ಕಾರ್ಯಕ್ರಮ ವೀಕ್ಷಿಸಿದರು.
ನೆರೆದಿದ್ದ ಮಹಿಳೆಯರನ್ನು ಕಂಡು ಸಂತೋಷಪಟ್ಟ ಸಚಿವ ಎಸ್ಸೆಸ್ಸೆಂ, ಗೃಹ ಲಕ್ಷ್ಮಿ ಯೋಜನೆ ಉದ್ಘಾಟಿಸುತ್ತಿರುವುದು ನನ್ನ ಪುಣ್ಯ. ರಾಜಕೀಯಕ್ಕೆ ಬಂದದ್ದಕ್ಕೂ ಸಾರ್ಥಕವಾಯಿತು ಎನಿಸುತ್ತಿದೆ. ಈ ಯೋಜನೆಯ ಯಶಸ್ಸನ್ನು ನಿಮ್ಮ ಮೂಲಕ ಕಾಣಬೇಕಿದೆ ಎಂದರು.
ಬಡ್ಡಿ ವ್ಯವಹಾರ ಕಡಿಮೆಯಾಗಲಿ
ಬಡವರ ಜೀವ ಹಿಂಡುವ ಬಡ್ಡಿ ವ್ಯವಹಾರ ಕಡಿಮೆಯಾಗಲಿ ಎಂದು ಸಚಿವ ಎಸ್ಸೆಸ್ಸೆಂ ಆಶಯ ವ್ಯಕ್ತಪಡಿಸಿದರು. ಚಿಕ್ಕ ವ್ಯಾಪಾರಿಗಳಿಗೆ ಬೆಳಿಗ್ಗೆ ಹಣ ನೀಡಿ ಸಂಜೆಯಾಗುತ್ತಲೇ ಹೆಚ್ಚಿನ ಬಡ್ಡಿ ಸಹಿತ ವಸೂಲಿ ಮಾಡುವ ದಂಧೆ ಹೆಚ್ಚಾಗಿದೆ. ಇದು ಕಡಿಮೆಯಾಗಬೇಕು. ಸರ್ಕಾರದ ಗ್ಯಾರಂಟಿ ಯೋಜನೆಗಳ ಹಣವನ್ನು ಸದ್ಭಳಕೆ ಮಾಡಿಕೊಳ್ಳಿ. ಇದೇ ಹಣವನ್ನು ಬೇರೆ ಕಾರ್ಯಗಳಿಗೆ ವಿನಿಯೋಗಿಸುವುದರಿಂದ ತೆರಿಗೆ ರೂಪದಲ್ಲಿ ಮತ್ತೆ ಸರ್ಕಾರಕ್ಕೆ ಆದಾಯ ಬರುತ್ತದೆ ಎಂದರು.
ಗೃಹ ಲಕ್ಷ್ಮಿ ಯೋಜನೆಯಿಂದ ಮಹಿಳೆಯರು ಆರ್ಥಿಕವಾಗಿ ಪುನಶ್ಚೇತನಗೊಳ್ಳಲು ಸಹಕಾರಿಯಾಗಿದೆ. ಇದು ಮಹಿಳಾ ಸಬಲೀಕರಣದ ಹೊಸ ದಿಕ್ಸೂಚಿ. ಈ ಯೋಜನೆ ಬಳಕೆಯಿಂದ ಅರ್ಥಪೂರ್ಣ ಬದುಕು ಕಟ್ಟಿಕೊಳ್ಳುವಂತೆ ಜಿಲ್ಲಾಧಿಕಾರಿ ಸಲಹೆ ನೀಡಿದರು.
ಜಿಲ್ಲಾ ಪಂಚಾಯ್ತಿ ಸಿಇಒ ಸುರೇಶ್ ಬಿ.ಇಟ್ನಾಳ್ ಮಾತನಾಡುತ್ತಾ, ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಶೇ.90ರಷ್ಟು ಫಲಾನುಭವಿಗಳ ನೋಂದಣಿಯಾಗಿದೆ. ಸಾಕಷ್ಟು ಜನರು ಯೋಜನೆಯ ಹಣವನ್ನು ಮಕ್ಕಳ ವಿದ್ಯಾಭ್ಯಾಸ, ಔಷಧ ಖರೀದಿ ಸೇರಿದಂತೆ, ಕುಟುಂಬ ನಿರ್ವಹಣೆಗೆ ಬಳಸುವುದಾಗಿ ಹೇಳಿದ್ದಾರೆ. ಇದು ತ್ಯಾಗದ ಪ್ರತೀಕ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಾತನಾಡುತ್ತಾ, ಎಲ್ಲಿ ಮಹಿಳೆಯರಿಗೆ ಗೌರವ ಇರುತ್ತದೋ, ಅಲ್ಲಿ ದೇವರು ನೆಲೆಸಿರುತ್ತಾನೆ ಎಂದು ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಅದರಂತೆ ಈ ಯೋಜನೆಯಲ್ಲಿ ಲಕ್ಷ್ಮಿಯ ಹೆಸರಿದ್ದು, ಸಂಸಾರ ಉತ್ತಮವಾಗಿರಬೇಕಾದರೆ, ಮಹಿಳೆಯರ ಪಾತ್ರ ಮುಖ್ಯ ಹಾಗೂ ಮಹಿಳೆ ಆರ್ಥಿಕವಾಗಿ ಸ್ವಾವಲಂಬಿಯಾದರೆ, ದೇಶದ ಪ್ರಗತಿ ಸಾಧ್ಯ ಎಂಬುದನ್ನು ಮನಗಂಡು ಈ ಯೋಜನೆ ರೂಪಿಸಲಾಗಿದೆ. ಸದ್ಭಳಕೆ ಮಾಡಿಕೊಳ್ಳಿ ಎಂದು ಕಿವಿ ಮಾತು ಹೇಳಿದರು.
ಯೋಜನೆಯ ಫಲಾನುಭವಿ ಬಂಬೂ ಬಜಾರ್ ವಾಸಿ ಉಮಾ ಮಾತನಾಡುತ್ತಾ, ಬೀದಿ ಬದಿ ವ್ಯಾಪಾರ ಮಾಡುವ ನಾನು ನಾಲ್ಕು ಯೋಜನೆಗಳ ಸೌಲಭ್ಯ ಪಡೆದಿದ್ದು, ಇಂದು ಖುಷಿಯಿಂದ ಕುಟುಂಬ ನಿರ್ವಹಿಸುತ್ತಿದ್ದೇನೆ ಎಂದರು. ಮತ್ತೋರ್ವ ಫಲಾನುಭವಿ ಜಿ.ಎಸ್. ಶ್ವೇತಾ, ಯೋಜನೆಗಳ ಅನುಕೂಲಗಳಿಂದ ಜೀವನ ಸಾಕಷ್ಟು ಸುಧಾರಿಸಿದೆ ಎಂದರು.
ಪಾಲಿಕೆ ಮೇಯರ್ ವಿನಾಯಕ ಬಿ.ಹೆಚ್, ಸದಸ್ಯರಾದ ಚಮನ್ ಸಾಬ್, ಗಡಿಗುಡಾಳ್ ಮಂಜುನಾಥ್, ಜಯಮ್ಮ ಗೋಪಿನಾಥ್, ಎ.ನಾಗರಾಜ್, ಉಪವಿಭಾಗಾಧಿಕಾರಿ ದುರ್ಗಾಶ್ರೀ, ತಹಶೀಲ್ದಾರ್ ಅಶ್ವತ್ಥ್, ದೂಡಾ ಆಯುಕ್ತ ಬಸವನಗೌಡ ಕೋಟೂರು, ಸ್ಮಾರ್ಟ್ ಸಿಟಿ ಎಂಡಿ ವೀರೇಶ್ ಕುಮಾರ್, ಕಾಂಗ್ರೆಸ್ ಮುಖಂಡರಾದ ಎನ್.ಜಿ. ಪುಟ್ಟಸ್ವಾಮಿ, ಮಲ್ಲಿಕಾರ್ಜುನ್ ಇತರರು ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ನಿರೂಪಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ವಾಸಂತಿ ಉಪ್ಪಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಾನಗರ ಪಾಲಿಕೆ ಆಯುಕ್ತರಾದ ರೇಣುಕಾ ಸ್ವಾಗತಿಸಿದರು.
ಸರ್ಕಾರ ನೂರು ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸದಸ್ಯರು ಸಚಿವರಿಗೆ ಸಿಹಿ ಹಂಚಿ ಸಂಭ್ರಮಿಸಿದರು.