ಮಡಿವಾಳ ಸಮಾಜದ ಸಂಘಟನೆಗಾಗಿ ಜಾಗೃತಿ ಅಗತ್ಯ

ಮಡಿವಾಳ ಸಮಾಜದ ಸಂಘಟನೆಗಾಗಿ ಜಾಗೃತಿ ಅಗತ್ಯ

ಜಗಳೂರು, ಆ.26- ನಿತ್ಯ ಕಾಯಕದಲ್ಲಿ ತೊಡಗಿರುವ ಮಡಿವಾಳ ಸಮಾಜದ ಒಗ್ಗಟ್ಟಿನ ಸಂಘಟನೆಗಾಗಿ ಜಾಗೃತಿ ಮೂಡಿಸಲಾಗುತ್ತಿದೆ  ಎಂದು ಚಿತ್ರದುರ್ಗ ಮಡಿವಾಳ ಗುರುಪೀಠದ ಶ್ರೀ ಬಸವ ಮಾಚಿದೇವ ಮಹಾಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ವಾಲ್ಮೀಕಿ ಭವನದಲ್ಲಿ ಮಡಿವಾಳ ಸಮಾಜದಿಂದ ಶ್ರಾವಣ ಮಾಸದ ಅಂಗವಾಗಿ ಹಮ್ಮಿಕೊಂಡಿದ್ದ `ಮನ, ಮನೆಗೆ ಮಾಚಿದೇವ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ಸಂವಿಧಾನ ಬದ್ದ ಹಕ್ಕುಗಳಿಗಾಗಿ, ಸರ್ವ ತೋಮುಖ ಅಭಿವೃದ್ಧಿಗಾಗಿ  ತಳಸಮುದಾಯಗಳು ಸಂಘಟಿತರಾಗಬೇಕು. 12 ನೇ ಶತಮಾನದಲ್ಲಿ ಬಸವಣ್ಣನವರ  ಅನುಭವ ಮಂಟಪದಲ್ಲಿ ವಚನಕಾರರ ಮುಂಚೂಣಿ ನಾಯಕತ್ವ ವಹಿಸಿದ್ದ ಮಾಚಿದೇವರ ಜಾತ್ಯತೀತ ಭಾವನೆ ಹಾಗೂ ಆದರ್ಶ, ಸಂದೇಶಗಳು ಸಮಾಜಕ್ಕೆ ಪಸರಿಸಬೇಕು. ರಾಜ್ಯದಲ್ಲಿ ಹಮ್ಮಿಕೊಂಡಿರುವ ಮನ, ಮನೆಗೆ ಮಾಚಿದೇವ  ಜನಜಾಗೃತಿ ಆಂದೋಲನದ ಯಶಸ್ವಿಗೆ ಸಮಾಜದ ಬಂಧುಗಳು ಪಕ್ಷಾತೀತವಾಗಿ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಆಧುನಿಕ ತಂತ್ರಜ್ಞಾನ ಯುಗದಲ್ಲಿಯೂ ಮಡಿವಾಳ ಸಮುದಾಯದವರು ಮೂಲ ವೃತ್ತಿ ಬಟ್ಟೆ ತೊಳೆದು, ಇಸ್ತ್ರಿ ಮಾಡುವ ಸೇವೆಯಲ್ಲಿ ತೊಡಗಿದ್ದಾರೆ. ಮಡಿವಾಳ ಸಮಾಜದವರು ಸನಾತನ ಸಂಸ್ಕೃತಿ,ಬಡತನದ ಕೂಪದಿಂದ ಹೊರಬಂದು ಉದ್ಯಮಿಗಳಾಗಬೇಕು ಎಂದು ಕಿವಿಮಾತು ಹೇಳಿದರು.

ಜಾತ್ರೆ ಹಬ್ಬಗಳ  ದುಂದುವೆಚ್ಚಕ್ಕೆ ಕಡಿವಾಣ ಹಾಕಿ, ಮಕ್ಕಳ ಶಿಕ್ಷಣಕ್ಕೆ ಒತ್ತುಕೊಡಿ. ಸಮಾಜದ ಬದಲಾವಣೆ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಸಲಹೆ ನೀಡಿದರು.

ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ, ಸಾಧು ಸತ್ಪುರುಷರ  ಆಶೀರ್ವಾದದಿಂದ ಶಾಸಕ ನಾಗಿ ಆಯ್ಕೆಯಾಗಿರುವೆ.ಕ್ಷೇತ್ರದ ಅಭಿವೃದ್ಧಿ ನನ್ನ ಗುರಿ. ಮಡಿವಾಳ ಸಮಾಜಕ್ಕೆ ಭವನ ನಿರ್ಮಾಣಕ್ಕೆ ಅನುದಾನ ಒದಗಿಸಿ, ಮಡಿವಾಳ ಸಮಾಜದ ಶ್ರೇಯೋಭಿವೃದ್ಧಿಗೆ ಬದ್ದನಾಗಿರುವೆ.

ಬಸವಣ್ಣನವರ ಅನುಭವ ಮಂಟಪದ ಮಾದರಿಯಲ್ಲಿ ಎಲ್ಲಾ ಸಮುದಾಯಗಳ  ವಿಶ್ವಾಸಗಳಿಸಿ ಉತ್ತಮ ಆಡಳಿತ ನಡೆಸುವೆ‌. ಪಕ್ಷಾತೀತವಾಗಿ ಸಹಕಾರ ನೀಡಬೇಕು ಎಂದರು.

ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ, ಮಡಿವಾಳ ಸಮಾಜದವರು ಒಗ್ಗಟ್ಟಾಗಬೇಕು. ನನ್ನ ಆಡಳಿತಾವಧಿಯಲ್ಲಿ ಮಡಿವಾಳ ಸಮುದಾಯ ಭವನ ನಿರ್ಮಾಣಕ್ಕೆ ನಿವೇಶನ ಒದಗಿಸಿರುವೆ. ಭವನ ನಿರ್ಮಾಣಕ್ಕೆ ಸಂಸದರ ಅನುದಾನದಡಿ  10 ಲಕ್ಷ ಕೊಡಿಸುವೆ. ವೈಯಕ್ತಿಕ ಧನ ಸಹಾಯ ಮಾಡುವೆ. ಶೀಘ್ರ ಅಡಿಪಾಯ ಹಾಕಬೇಕು ಎಂದು ಹೇಳಿದರು.

ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ, ಪ.ಪಂ‌ ಸದಸ್ಯೆ ಮಂಜಮ್ಮ‌  ಮಾತನಾಡಿದರು.

ಸಮಾರಂಭದಲ್ಲಿ ಮಡಿವಾಳ ಸಮಾಜದ ತಾಲ್ಲೂಕು ಅಧ್ಯಕ್ಷ ಎಂ.ಸಿ.ರೇವಣಸಿದ್ದಪ್ಪ, ತಾಲ್ಲೂಕು ಕಾರ್ಯದರ್ಶಿ ಬಿ.ರಮೇಶ್, ನಿವೃತ್ತ ಯೋಧ ರಾಜಣ್ಣ, ರಶ್ಮಿ ಮಡಿವಾಳ, ಶಿಕ್ಷಕ ನಾಗೇಶ್, ಉಮೇಶ್, ಹರೀಶ್, ಸಮಾಜದ ಉಪಾಧ್ಯಕ್ಷ ಶಿಕ್ಷಕ ಎಂ.ಆರ್. ಹನುಮಂತಪ್ಪ, ಶಿವಕುಮಾರ್, ತಿಪ್ಪೇಸ್ವಾಮಿ, ರವಿಕುಮಾರ್, ಹನುಮಂತಪ್ಪ, ಪಲ್ಲಾಗಟ್ಟೆ ಶೇಖರಪ್ಪ ಮುಂತಾದವರು ಇದ್ದರು.

error: Content is protected !!