ಮಾಧ್ಯಮ ದಿನಾಚರಣೆ, ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪತ್ರಕರ್ತರಿಗೆ ಕಿವಿಮಾತು
ದಾವಣಗೆರೆ, ಆ. 27- ಸಂಘಟಿತರಾಗಿ ಸೌಲಭ್ಯಗಳನ್ನು ಪಡೆಯುವಂತೆ ಗಣಿ, ಭೂ ವಿಜ್ಞಾನ ಹಾಗೂ ತೋಟಗಾರಿಕಾ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಪತ್ರಕರ್ತರಿಗೆ ಕಿವಿ ಮಾತು ಹೇಳಿದರು.
ಭಾನುವಾರ ನಗರದ ಕುವೆಂಪು ಕನ್ನಡ ಭವನದಲ್ಲಿ ಜಿಲ್ಲಾ ವರದಿಗಾರರ ಕೂಟದಿಂದ ಹಮ್ಮಿಕೊಳ್ಳಲಾಗಿದ್ದ ಮಾಧ್ಯಮ ದಿನಾಚರಣೆ, ಮಾಧ್ಯಮ ಪ್ರಶಸ್ತಿ ಪ್ರದಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಪತ್ರಕರ್ತರ ಭವನ ನಿರ್ಮಾಣಕ್ಕೆ ವಿಶಾಲವಾದ ಜಾಗ ಕೊಡಿಸಲು ತಯಾರಿದ್ದೇನೆ. ಅಲ್ಲಿ ರಿಕ್ರಿಯೇಷನ್ ಸೆಂಟರ್ ಸ್ಥಾಪಿಸಿ, ಪತ್ರಕರ್ತರ ಕುಟುಂಬದವರೂ ಸಹ ಭಾಗವಹಿಸುವಂತೆ ಸೌಲಭ್ಯ ಕಲ್ಪಿಸಿಕೊಳ್ಳಬಹುದು ಎಂದು ಹೇಳಿದರು.
ವರದಿಗಾರರ ಕೂಟದ ಕಚೇರಿಗೆ ನಿವೇಶನ ಹಾಗೂ ಪತ್ರಕರ್ತರಿಗೆ ನಿವೇಶನ ನೀಡುವ ಕುರಿತು ಶೀಘ್ರವೇ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಮಾಧ್ಯಮ ಪ್ರಶಸ್ತಿ ಪ್ರದಾನ ಮಾಡಿದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್, ಪ್ರಜಾಪ್ರಭುತ್ವದಲ್ಲಿ ಪತ್ರಕರ್ತರಿಗೆ ವಿಶೇಷ ಗೌರವವಿದೆ. ಆದರೆ ಅವರಿಗೆ ಸೇವಾ ಭದ್ರತೆ ಇಲ್ಲ. ಸೌಲಭ್ಯಗಳೂ ಕಡಿಮೆ. ಸಮಾಜದ ಬಗ್ಗೆ ಕಾಳಜಿ ವಹಿಸುವ ಪತ್ರಕರ್ತರು ತಮ್ಮ ಕುಟುಂಬದ ಕಡೆ ಗಮನ ಕೊಡುವುದು ಕಡಿಮೆ ಎಂದರು.
ಮಾಧ್ಯಮ ಪ್ರಶಸ್ತಿ ಪ್ರದಾನ
`ಜನತಾವಾಣಿ’ ಹಿರಿಯ ವರದಿಗಾರ ಎಸ್.ಎ. ಶ್ರೀನಿವಾಸ್, `ಕನ್ನಡ ಭಾರತಿ’ ಸಂಪಾದಕ ಮಲ್ಲಿಕಾರ್ಜುನ ಕಬ್ಬೂರು, `ವಿಜಯ ವಾಣಿ’ ಸ್ಥಾನಿಕ ಸಂಪಾದಕ ಎಂ.ಬಿ.ನವೀನ್, `ವಿಜಯ ಕರ್ನಾಟಕ’ ಸ್ಥಾನಿಕ ಸಂಪಾದಕ ಸದಾನಂದ ಹೆಗಡೆ, `ವಾರ್ತಾ ವಿಹಾರ’ ಸಂಪಾದಕ ಎಂ.ವೈ. ಸತೀಶ್, `ದಾವಣಗೆರೆ ಕನ್ನಡಿಗ’ ಸಂಪಾದಕ ಆರ್.ರವಿ, `ಸುವರ್ಣ ಟಿವಿ’ ಕ್ಯಾಮೆರಾ ಮ್ಯಾನ್ ಕಿರಣ್ ಕುಮಾರ್, `ನ್ಯೂಸ್ 18′ ಜಿಲ್ಲಾ ವರದಿಗಾರ ಎ.ಸಿ. ಸಂಜಯ್, `ರಾಜ್ ನ್ಯೂಸ್’ ವರದಿಗಾರ ರಾಮ್ ಪ್ರಸಾದ್ ಅವರಿಗೆ ಮಾಧ್ಯಮ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದೇ ವೇಳೆ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಸಮಾಜ ಹಾಗೂ ಸರ್ಕಾರದ ನಡುವೆ ಸೇತುವೆಯಾಗಿ ಕಾರ್ಯ ನಿರ್ವಹಿಸುವ ಪತ್ರಕರ್ತರು ವೈಯಕ್ತಿವಾಗಿಯೂ ಬೆಳೆಯಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ತಲುಪಿಸಲು ಕ್ರಮ ವಹಿಸುವುದಾಗಿ ಹೇಳಿದರು.
ಜಿಲ್ಲಾಧಿಕಾರಿ ಎಂ.ವಿ. ವೆಂಕಟೇಶ್ ಮಾತನಾಡಿ, ಜನರಿಗೆ ಶೀಘ್ರವಾಗಿ ಸುದ್ದಿ ನೀಡುವ ಧಾವಂತದಲ್ಲಿ ಪತ್ರಕರ್ತರು ಒತ್ತಡಕ್ಕೆ ಸಿಲುಕುತ್ತಾರೆ. ಖಿನ್ನತೆಗೆ ಒಳಗಾಗುವ ಸಾಧ್ಯತೆಯೂ ಇರುತ್ತದೆ. ಈ ನಿಟ್ಟಿನಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು.
ಹಲವು ದಶಕಗಳಿಂದ ಮಾಧ್ಯಮ ಕ್ಷೇತ್ರ ಸಮಾಜ ಕಟ್ಟುವ ಕೆಲಸ ಮಾಡುತ್ತಿದೆ. ವಿಷಯಗಳನ್ನು ವಿಶ್ಲೇಷಿಸಿ, ವಿಮರ್ಶಿಸಿ ಸರಳವಾಗಿ ಹಾಗೂ ನೇರವಾಗಿ ಜನತೆಗೆ ತಲುಪಿಸುವ ಪತ್ರಕರ್ತರ ಕಾರ್ಯ ಶ್ಲ್ಯಾಘನೀಯ ಎಂದರು. ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ನ್ಯಾಯ ಒದಗಿಸುವ ಕಾರ್ಯಗಳನ್ನು ಮಾಧ್ಯಮಗಳು ಮಾಡುತ್ತಿವೆ ಎಂದು ಬಣ್ಣಿಸಿದರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ, ಸಮಾಜದ ಸ್ವರೂಪ ತೋರಿಸುವ ಪತ್ರಕರ್ತರು ಕನ್ನಡಿ ಇದ್ದಂತೆ ಎಂದು ಬಣ್ಣಿಸಿದರು.
ಖಡ್ಕಕ್ಕಿಂತ ಹರಿತವಾದ ಲೇಖನಿಯನ್ನು ಆಯುಧದಂತ ಬಳಸಿ ಸಮಾಜವನ್ನು ಎಚ್ಚರಿಸುವ ಕೆಲಸವನ್ನು ಪತ್ರಕರ್ತರು ಮಾಡುತ್ತಾರೆ. ಅವರು ಸಮಾಜದೊಳಗಿನ ಸೈನಿಕರಿದ್ದಂತೆ. ಪತ್ರಕರ್ತರ ಸೇವೆ ದೇಶ ಸೇವೆಗೆ ಸಮಾನವಾದದ್ದು ಎಂದರು.
ಜಿಲ್ಲೆಯಲ್ಲಿ ಪತ್ರಿಕಾ ಭವನ ನಿರ್ಮಾಣಕ್ಕೆ ಹಾಗೂ ಪತ್ರಕರ್ತರಿಗೆ ಸಿಗಬೇಕಾದ ಸೌಲಭ್ಯಗಳು ಸಿಗುವಂತಾಗಿಸಲು ಜಿಲ್ಲಾ ಉಸ್ತುವಾರಿ ಸಚಿವರು ಕ್ರಮ ಕೈಗೊಳ್ಳಲಿ ಎಂದು ಆಶಿಸಿದರು.
ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಕೆ.ಏಕಾಂತಪ್ಪ ಅಧ್ಯಕ್ಷತೆ ವಹಿಸಿದ್ದರು. ದಾವಣಗೆರೆ ವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ.ಶಿವಕುಮಾರ ಕಣಸೋಗಿ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಇ.ಎಂ. ಮಂಜುನಾಥ, ಕೂಟದ ಮಾಜಿ ಅಧ್ಯಕ್ಷರುಗಳಾದ ಬಿ.ಎನ್. ಮಲ್ಲೇಶ್, ಬಸವರಾಜ ದೊಡ್ಮನಿ, ಕಾನಿಪ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ್, ವಾರ್ತಾಧಿಕಾರಿ ಧನಂಜಯ್ ಉಪಸ್ಥಿತರಿದ್ದರು.
ವರದಿಗಾರರ ಕೂಟದ ಪ್ರಧಾನ ಕಾರ್ಯದರ್ಶಿ ಸಿ.ವರದರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಖಜಾಂಚಿ ಮಧು ನಾಗರಾಜ್ ಸ್ವಾಗತಿಸಿದರು. ನಮನ ಅಕಾಡೆಮಿ ವಿದ್ಯಾರ್ಥಿಗಳು ನೃತ್ಯರೂಪಕ ಪ್ರದರ್ಶಿಸಿದರು. ರುದ್ರಾಕ್ಷಿಬಾಯಿ ಪ್ರಾರ್ಥಿಸಿದರು. ಪಿಆರ್ಓ ಡಿ.ರಂಗನಾಥ ರಾವ್ ವಂದಿಸಿದರು.