ನೂತನ ಎಸ್ಪಿ ಉಮಾ ಅಧಿಕಾರ ಸ್ವೀಕಾರ

ನೂತನ ಎಸ್ಪಿ ಉಮಾ ಅಧಿಕಾರ ಸ್ವೀಕಾರ

ಜನಸ್ನೇಹಿ ಪೊಲೀಸ್, ಅಪರಾಧ ಪ್ರಕರಣಗಳ ಶೀಘ್ರ ಪತ್ತೆಗೆ ಕ್ರಮ

ದಾವಣಗೆರೆ, ಆ. 25 – ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಉಮಾ ಪ್ರಶಾಂತ್ ಅವರು ಶುಕ್ರವಾರ ಸಂಜೆ ಅಧಿಕಾರ ವಹಿಸಿಕೊಂಡರು.

ನಿರ್ಗಮಿತ ಎಸ್ಪಿ ಡಾ.ಕೆ. ಅರುಣ್ ಅವರು ಎಸ್ಪಿ ಕಚೇರಿಯಲ್ಲಿ ಅಧಿಕಾರ ಹಸ್ತಾಂತರಿಸಿದರು. ಉಮಾ ಪ್ರಶಾಂತ್ ಇದಕ್ಕೂ ಮುನ್ನ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. 

ಕಳೆದ ಐದು ತಿಂಗಳಿನಿಂದ ದಾವಣಗೆರೆಯ ಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ. ಕೆ. ಅರುಣ್ ಅವರನ್ನು ಕಲಬುರ್ಗಿಯ ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲರಾಗಿ ವರ್ಗಾವಣೆ ಮಾಡಲಾಗಿದೆ.

ಅಧಿಕಾರ ಸ್ವೀಕರಿಸಿದ ನಂತರ ಪತ್ರಕರ್ತರೊಂದಿಗ ಮಾತನಾಡಿದ ಉಮಾ ಪ್ರಶಾಂತ್, ಪೊಲೀಸ್ ವ್ಯವಸ್ಥೆ ಜನಸ್ನೇಹಿ ಮಾಡಲಾಗುವುದು. ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳ ತಡೆಗೆ ವಿಶೇಷ ಆದ್ಯತೆ ನೀಡಲಾಗುವುದು ಎಂದರು.

ಡಿಜಿ-ಐಜಿಪಿ ಸೇರಿ ಎಲ್ಲ ಮೇಲಾಧಿಕಾರಿಗಳ ನಿರ್ದೇಶನದಂತೆ ಪೊಲೀಸ್ ಅಧಿಕಾರಿ-ಸಿಬ್ಬಂದಿ ಕಲ್ಯಾಣದ ಜತೆಗೆ, ಸಾರ್ವಜನಿಕರ ಸಹಯೋಗದೊಂದಿಗೆ ಜನಸ್ನೇಹಿ ಪೊಲೀಸ್ ಆಡಳಿತ ತರಲು ಉತ್ತಮ ಕಾರ್ಯಕ್ರಮ ರೂಪಿಸಲಾಗುವುದು ಎಂದು ಹೇಳಿದರು. ಇಲ್ಲಿ ಉತ್ತಮ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದು ಅಪರಾಧ ಪ್ರಕರಣಗಳು ಹೆಚ್ಚಾಗದಂತೆ ಎಚ್ಚರ ವಹಿಸಲಾಗುವುದು. ಅಪರಾಧ ಪ್ರಕರಣಗಳ ಶೀಘ್ರ ಪತ್ತೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. 

ಅಕ್ರಮ ಮರಳುಗಾರಿಕೆ ಸೇರಿದಂತೆ ಎಲ್ಲ ರೀತಿಯ ಅನೈತಿಕ ಚಟುವಟಿಕೆಗಳನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುವುದರ ಜತೆಗೆ ಹಿಂದಿನ ಎಸ್ಪಿ ಅರುಣ್ ಅವರು ಮಾಡಿದ ಎಲ್ಲ ಒಳ್ಳೆಯ ಕೆಲಸ ಕಾರ್ಯವನ್ನು ಮುಂದುವರೆಸುತ್ತೇವೆ ಎಂದರು.

error: Content is protected !!