ಹೈಕೋರ್ಟ್‌ ಜಡ್ಜ್‌ಗಳಲ್ಲಿ ಮೇಲ್ಜಾತಿಯವರೇ ಹೆಚ್ಚು

ಹೈಕೋರ್ಟ್‌ ಜಡ್ಜ್‌ಗಳಲ್ಲಿ ಮೇಲ್ಜಾತಿಯವರೇ ಹೆಚ್ಚು

ಹಿಂದುಳಿದ ವರ್ಗಗಳ ಜಡ್ಜ್‌ಗಳ ನೇಮಕ ಕಡಿಮೆ : ನಿ.ನ್ಯಾಯಮೂರ್ತಿ ನಾಗಮೋಹನದಾಸ್

ದಾವಣಗೆರೆ, ಆ. 24 – ಕಳೆದ ಐದು ವರ್ಷಗಳಲ್ಲಿ ದೇಶದ ಹೈಕೋರ್ಟ್‌ಗಳಿಗೆ ನೇಮಕಗೊಂಡ 604 ನ್ಯಾಯಮೂರ್ತಿಗಳಲ್ಲಿ 458 ನ್ಯಾಯಮೂರ್ತಿಗಳು ಮೇಲ್ಜಾತಿ ಹಾಗೂ ಸಾಮಾನ್ಯ ವರ್ಗಕ್ಕೆ ಸೇರಿದವ ರಾಗಿದ್ದಾರೆ. ಹೀಗಿರುವಾಗ ದೇಶದ ಉನ್ನತ ನ್ಯಾಯಾ ಲಯ ಭಾರತದ ಪ್ರತಿಬಿಂಬವಾಗಲು ಸಾಧ್ಯವೇ? ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನದಾಸ್ ಪ್ರಶ್ನಿಸಿದ್ದಾರೆ.

ಜಿಲ್ಲಾ ವಕೀಲರ ಸಂಘ ಹಾಗೂ ಆರ್.ಎಲ್. ಕಾನೂನು ಕಾಲೇಜುಗಳ ವತಿಯಿಂದ ನಗರದ ವಕೀಲರ ಭವನದಲ್ಲಿ `ಯುವ ವಕೀಲರ ಮುಂದಿರುವ ಸವಾಲುಗಳು’ ಎಂಬ ವಿಷಯ ಕುರಿತು ಆಯೋಜಿಸಲಾಗಿದ್ದ ಉಪನ್ಯಾಸ ಮಾಲಿಕೆಯ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಮೊನ್ನೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ಮಾತನಾಡುತ್ತಾ, ಸುಪ್ರೀಂ ಕೋರ್ಟ್‌ ಭಾರತದ ವೈವಿಧ್ಯತೆ ಬಿಂಬಿಸುತ್ತದೆ. ಇಲ್ಲಿ ಮಹಾರಾಷ್ಟ್ರ ಹಾಗೂ ಪಶ್ಚಿಮ ಬಂಗಾಳದ ನ್ಯಾಯಮೂರ್ತಿಗಳು ಒಂದು ಪೀಠದಲ್ಲಿ ಸದಸ್ಯರಾಗಿ ಹರಿಯಾಣದ ವಿಷಯ ನಿರ್ಧರಿಸುತ್ತಾರೆ ಎಂದು ಹೇಳಿದ್ದರು. ಇದು ನಿಜ. ಆದರೆ, ಉನ್ನತ ನ್ಯಾಯಾಂಗ ನಿಜವಾಗಿಯೂ ಭಾರತವನ್ನು ಪ್ರತಿಬಿಂಬಿಸುತ್ತಿದೆಯೇ? ಎಂದು ನಾಗಮೋಹನದಾಸ್ ಪ್ರಶ್ನಿಸಿದರು.

2018ರಿಂದ ಮಾರ್ಚ್ 2023ರ ನಡುವಿನ ಅವಧಿಯಲ್ಲಿ ದೇಶದ ವಿವಿಧ ಹೈಕೋರ್ಟ್‌ಗಳಿಗೆ 604 ನ್ಯಾಯಮೂರ್ತಿಗಳು ನೇಮಕಗೊಂಡಿದ್ದಾರೆ. ಇವರಲ್ಲಿ ಪರಿಶಿಷ್ಟ ಜಾತಿಯ 18, ಪರಿಶಿಷ್ಟ ಪಂಗಡದ ಒಂಭತ್ತು, ಇತರೆ ಹಿಂದುಳಿದ ವರ್ಗಗಳ 72 ಹಾಗೂ ಅಲ್ಪಸಂಖ್ಯಾತ ಸಮುದಾಯದ ಕೇವಲ 34 ನ್ಯಾಯಮೂರ್ತಿಗಳಿದ್ದಾರೆ ಎಂದವರು ಹೇಳಿದರು.

604ರಲ್ಲಿ ಕೆಲವೇ ಜಾತಿಯ ಜನರನ್ನು 458 ನ್ಯಾಯಮೂರ್ತಿಗಳಾಗಿ ನೇಮಿಸಿದರೆ, ಅದು ನಿಜವಾದ ಭಾರತದ ಪ್ರತಿಬಿಂಬವಾಗುತ್ತದೆಯೇ? ಈ ಬಗ್ಗೆ ಚರ್ಚಿಸುವ ಅಗತ್ಯವಿಲ್ಲವೇ? ನಮ್ಮ ದನಿ ಎತ್ತುವ ಅಗತ್ಯವಿಲ್ಲವೇ? ನ್ಯಾಯಿಕ ವ್ಯವಸ್ಥೆಯಲ್ಲಿ ಎಲ್ಲ ಹಂತಗಳಲ್ಲಿ ಪ್ರತಿಯೊಂದು ವರ್ಗಕ್ಕೂ ಪ್ರಾತಿನಿಧ್ಯದ ಹಕ್ಕು ನೀಡಲು ನ್ಯಾಯಾಂಗ ತನ್ನ ದಾರಿ ಸರಿಪಡಿಸಿಕೊಳ್ಳಬೇಕಲ್ಲವೇ? ಆದರೆ, ಈ ಬಗ್ಗೆ ಚರ್ಚೆ ಮಾಡುತ್ತಿಲ್ಲ ಎಂದವರು ವಿಷಾದಿಸಿದರು.

ನ್ಯಾಯಾಂಗದ ಮೇಲೆ ಹಿಡಿತ ಸಾಧಿಸಲು ಈ ಹಿಂದೆಯೂ ಪ್ರಯತ್ನಗಳು ನಡೆಯುತ್ತಿದ್ದವು. ಈಗ ಆ ಪ್ರಯತ್ನಗಳು ಹೆಚ್ಚಾಗಿವೆ. ನ್ಯಾಯಮೂರ್ತಿಗಳನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡುವ ಮೂಲಕ, ಆಯೋಗಗಳಿಗೆ ನೇಮಕ ಮಾಡುವ ಮೂಲಕ ರಾಜಕೀಯ ಪ್ರಭಾವ ಬೀರುವ ಪ್ರಯತ್ನಗಳು ನಡೆದಿವೆ. ಈ ಬಗ್ಗೆಯೂ ಚರ್ಚೆಗಳು ನಡೆಯಬೇಕಿದೆ ಎಂದವರು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್. ಅರುಣಕುಮಾರ್, ಯುವ ವಕೀಲರು ಭಾರತದ ಸ್ವಾತಂತ್ರ್ಯ ಹಾಗೂ ಗಣತಂತ್ರವನ್ನು ಕಾಪಾಡುವ ಹೊಣೆ ಹೊಂದಿದ್ದಾರೆ ಎಂದರು.

ವೇದಿಕೆಯ ಮೇಲೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಮೂರ್ತಿ ರಾಜೇಶ್ವರಿ ಎನ್. ಹೆಗಡೆ, ಆರ್.ಎಲ್. ಕಾನೂನು ಕಾಲೇಜಿನ ಪ್ರಾಂಶುಪಾಲ ಜಿ.ಎಸ್. ಯತೀಶ್, ಸಂವಿಧಾನ ಓದು ಅಭಿಯಾನದ ಸಂಯೋಜಕ ಕೆ.ಹೆಚ್. ಪಾಟೀಲ್ ಉಪಸ್ಥಿತರಿದ್ದರು.

error: Content is protected !!