ಚಂದ್ರನ ಮೇಲೆ ಭಾರತದ ಪತಾಕೆ

ಚಂದ್ರನ ಮೇಲೆ ಭಾರತದ ಪತಾಕೆ

ಮೊದಲು ದಕ್ಷಿಣ ಧ್ರುವ ತಲುಪಿ ಇತಿಹಾಸ ಬರೆದ ಇಸ್ರೋ

ಬೆಂಗಳೂರು, ಆ. 23 – ಬಾಹ್ಯಾಕಾಶ ವಲಯದಲ್ಲಿ ದಿಗ್ಗಜ ಸಾಧನೆ ಮಾಡಿರುವ ಇಸ್ರೋ, ಚಂದ್ರಯಾನ – 3ನ್ನು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಸುವಲ್ಲಿ ಯಶಸ್ಸು ಕಂಡಿದೆ. ಸಂಜೆ 6.04ರ ಸಮಯದಲ್ಲಿ ಈ ಸಾಧನೆ ಮಾಡುವುದರೊಂದಿಗೆ, ಚಂದ್ರನ ತಲುಪಿದ ನಾಲ್ಕನೇ ದೇಶವಾಗಿ ಭಾರತ ಹೊರ ಹೊಮ್ಮಿದೆ. ದಕ್ಷಿಣ ಧ್ರುವ ತಲುಪಿದ ಮೊದಲ ದೇಶ ಭಾರತ ಎಂಬ ಹೆಗ್ಗಳಿಕೆಯೂ ದೊರೆತಿದೆ.

ಮೂರನೇಯ ಮಹತ್ವಾಕಾಂಕ್ಷಿ ಚಂದ್ರಯಾನದಲ್ಲಿ, ಚಂದ್ರನ ಮೇಲೆ ಗಗನನೌಕೆ ಇಳಿಸುವ ಭಾರತೀಯ ಬಾಹ್ಯಾಕಾಶ ಸಂಸ್ಥೆಯಾದ ಇಸ್ರೋ ಕನಸು ನನಸಾಗಿದೆ.

ಲ್ಯಾಂಡರ್ ಆಗಿರುವ ವಿಕ್ರಮ ಹಾಗೂ ರೋವರ್ ಪ್ರಗ್ಯಾನ್‌ಗಳು ಚಂದ್ರನ ಮೇಲೆ ಇಳಿಯುವುದರೊಂದಿಗೆ ಬಾಹ್ಯಾಕಾಶದಲ್ಲಿ ಭಾರತದ ಸಾಧನೆಯನ್ನು ವಿಶ್ವಕ್ಕೆ ಸಾರಿದಂತಾಗಿದೆ. ಕಳೆದ ವಾರವಷ್ಟೇ ರಷ್ಯಾದ ಲ್ಯಾಂಡರ್ ಚಂದ್ರನ ಮೇಲೆ ಇಳಿಯುವ ಪ್ರಯತ್ನದಲ್ಲಿ ವೈಫಲ್ಯ ಕಂಡು, ಪತನಗೊಂಡಿತ್ತು. ಇದು ಚಂದ್ರಯಾನದ ಹಾದಿ ಎಷ್ಟು ಕಠಿಣ ಎಂಬುದನ್ನು ತೋರಿಸುತ್ತಿದೆ.

ಜುಲೈ 14ರಂದು ಉಡಾವಣೆಗೊಂಡಿದ್ದ ಚಂದ್ರಯಾನ -3, ಅತ್ಯಂತ ನಿಖರವಾದ 41 ದಿನಗಳ ಪ್ರಯಾಣದ ನಂತರ ಚಂದ್ರನ ಮೇಲೆ ಇಳಿದಿದೆ.

ಕಳೆದ ನಾಲ್ಕು ವರ್ಷಗಳಲ್ಲಿ ಎರಡನೇ ಬಾರಿ ಇಸ್ರೋ ಚಂದ್ರಯಾನದ ಪ್ರಯತ್ನ ನಡೆಸಿತ್ತು. 2019ರಲ್ಲಿ ನಡೆಸಿದ ಪ್ರಯತ್ನ ವಿಫಲವಾಗಿತ್ತು. ಈ ಬಾರಿ 140 ಕೋಟಿ ಭಾರತೀಯರ ಕನಸುಗಳನ್ನು ಹೊತ್ತ ಚಂದ್ರಯಾನ – 3, ಯಶಸ್ಸು ಕಾಣುವುದರೊಂದಿಗೆ ದೇಶಾದ್ಯಂತ ಸಂಭ್ರಮಕ್ಕೆ ಕಾರಣವಾಗಿದೆ.

ಅಮೆರಿಕ, ಚೀನ ಹಾಗೂ ಹಿಂದಿನ ಸೋವಿಯತ್ ಒಕ್ಕೂಟಗಳು ಚಂದ್ರನ ಮೇಲೆ ಗಗನನೌಕೆ ಇಳಿಸುವಲ್ಲಿ ಯಶಸ್ಸು ಕಂಡಿವೆ. ಆದರೆ, ಯಾವ ದೇಶವೂ ಇದುವರೆಗೆ ಚಂದ್ರನ ದಕ್ಷಿಣ ಧ್ರುವ ತಲುಪಲು ಸಾಧ್ಯವಾಗಿರಲಿಲ್ಲ.

ಲ್ಯಾಂಡರ್ ಹಾಗೂ ಆರು ಗಾಲಿಗಳ ರೋವರ್ ಮುಂದಿನ ಹದಿನಾಲ್ಕು ದಿನಗಳ ಕಾಲ ಚಂದ್ರನ ಮೇಲೆ ಕಾರ್ಯನಿರ್ವಹಿಸಲಿವೆ. ಇಸ್ರೋ ವಿಜ್ಞಾನಿಗಳು ಇಲ್ಲಿ ಹಲವಾರು ಪ್ರಯೋಗಗಳನ್ನು ನಡೆಸಲಿದ್ದಾರೆ.

ಚಂದ್ರಯಾನವು 41 ದಿನಗಳ ಸುದೀರ್ಘ ಅವಧಿಯದ್ದಾಗಿತ್ತು. ಆದರೆ, ಚಂದ್ರನ ಮೇಲೆ ಇಳಿಯುವ ಕೊನೆಯ 20 ನಿಮಿಷಗಳು ಅತ್ಯಂತ ಕಠಿಣವಾಗಿದ್ದವು. 5.44ಕ್ಕೆ ಚಂದ್ರನ ಮೇಲೆ ಇಳಿಯುವ ಪ್ರಕ್ರಿಯೆ ಆರಂಭವಾದಾಗ, ಇಸ್ರೋಗೆ ದೊಡ್ಡ ಸವಾಲು ಎದುರಾಗಿತ್ತು. ಈ ಇಪ್ಪತ್ತು ನಿಮಿಷಗಳು ಪೂರ್ಣಗೊಂಡು ಯಶಸ್ಸು ದೊರೆತಾಗ, ಬೆಂಗಳೂರಿನಲ್ಲಿ ಇಸ್ರೋ ಕೇಂದ್ರದ ವಿಜ್ಞಾನಿಗಳು ವಿಜಯೋತ್ಸಾಹದಿಂದ ಸಂಭ್ರಮಿಸಿದರು.

error: Content is protected !!