ಜಗಳೂರು ತಾಲ್ಲೂಕನ್ನು ಶಾಶ್ವತ ಬರಪೀಡಿತ ಪ್ರದೇಶವೆಂದು ಘೋಷಿಸಬೇಕು

ಜಗಳೂರು ತಾಲ್ಲೂಕನ್ನು ಶಾಶ್ವತ ಬರಪೀಡಿತ ಪ್ರದೇಶವೆಂದು ಘೋಷಿಸಬೇಕು

 ರೈತ ಸಂಘದ ಆಗ್ರಹ

ಜಗಳೂರು, ಆ.21- ತಾಲ್ಲೂಕನ್ನು ಶಾಶ್ವತ ಬರಪೀಡಿತ ಪ್ರದೇಶ ಎಂದು ಘೋಷಿಸಲು ಹಾಗೂ  ರೈತ ಕೃಷಿ ಕಾರ್ಮಿಕರಿಗೆ ಉದ್ಯೋಗ ನೀಡಲು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ಪ್ರತಿಭಟನೆ‌ ನಡೆಸಲಾಯಿತು.

ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆ‌ ಕೂಗುತ್ತಾ ಮಹಾತ್ಮ ಗಾಂಧಿ ವೃತ್ತದ ಮೂಲಕ, ಅಂಬೇಡ್ಕರ್ ವೃತ್ತದಿಂದ ತಾಲ್ಲೂಕು ಕಛೇರಿ ಮುಂಭಾಗ ಜಮಾಯಿಸಿ, ಲಿಖಿತ ಮನವಿ ಸಲ್ಲಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿರಂಜೀವಿ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಸರಿಯಾಗಿ ಮಳೆ ಬಾರದೆ ಮುಖ್ಯ ಬೆಳೆಗಳಾದ ಮೆಕ್ಕೆಜೋಳ, ಶೇಂಗಾ, ಸೂರ್ಯಕಾಂತಿ, ರಾಗಿ, ಈರುಳ್ಳಿ, ತರಕಾರಿ ಬೆಳೆಗಳು ಒಣಗುತ್ತಿವೆ. 

ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿ ರೈತರು ಕಂಗಾಲಾಗಿದ್ದಾರೆ. ಕೂಡಲೇ ಬರಪೀಡಿತ ಪ್ರದೇಶವೆಂದು ಘೋಷಿಸಬೇಕು. ರೈತ ಕೃಷಿ ಕಾರ್ಮಿಕರು ಗುಳೇ ಹೋಗುವುದನ್ನು ತಪ್ಪಿಸುವ ಸಲುವಾಗಿ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿದರು.

ತಾಲ್ಲೂಕಿನಲ್ಲಿ ಅಧಿಕಾರಿಗಳು ಬೆಳೆ ಸಮೀಕ್ಷೆ ವರದಿ ಸಲ್ಲಿಸಬೇಕು. ಅಲ್ಪ ಸ್ವಲ್ಪ ಕೊಳವೆ ಬಾವಿಗಳಿಂದ ನೀರು ಹಾಯಿಸಲು ಗುಣಮಟ್ಟದ ವಿದ್ಯುತ್ ಸರಬರಾಜು ಮಾಡಬೇಕು. ಇಲ್ಲದಿದ್ದರೆ ಉಗ್ರ ಸ್ವರೂಪದ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಸಂಘಟನೆಯ ದಿಬ್ಬದಹಳ್ಳಿ ಗಂಗಾಧರಪ್ಪ, ಜಿಲ್ಲಾ‌ ಕಾರ್ಯದರ್ಶಿ ಗೌಡಗೊಂಡನಹಳ್ಳಿ ಸತೀಶ್, ಪದಾಧಿಕಾರಿಗಳಾದ ವೀರೇಶ್, ಪ್ರಹ್ಲಾದಪ್ಪ, ತಿಪ್ಪೇಸ್ವಾಮಿ, ಏಕಾಂತಪ್ಪ, ಸಹದೇವರೆಡ್ಡಿ, ತಿಪ್ಪೇಸ್ವಾಮಿ, ರಂಗಪ್ಪ, ಶರಣಮ್ಮ ಸೇರಿದಂತೆ ಇತರರು ಭಾಗವಹಿಸಿದ್ದರು.

error: Content is protected !!