ಬಡವರಲ್ಲಿಯೂ ಹೆಚ್ಚುತ್ತಿರುವ ಶ್ರೀಮಂತ ಕಾಯಿಲೆ ಬಿಪಿ-ಶುಗರ್

ಬಡವರಲ್ಲಿಯೂ ಹೆಚ್ಚುತ್ತಿರುವ ಶ್ರೀಮಂತ  ಕಾಯಿಲೆ ಬಿಪಿ-ಶುಗರ್

ಕರುಣಾ ಟ್ರಸ್ಟ್‌ನ ಸೈಕಲ್ ವಿತರಣಾ ಕಾರ್ಯಕ್ರಮದಲ್ಲಿ ಶಿವನಕೆರೆ ಬಸವಲಿಂಗಪ್ಪ

ದಾವಣಗೆರೆ, ಆ.20- ಬಡವರು ಆರ್ಥಿಕವಾಗಿ ಸಬಲರಾಗುವುದರ ಜೊತೆಗೆ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಕೇವಲ ಶ್ರೀಮಂತರ ಕಾಯಿಲೆಗಳಾಗಿದ್ದ ಬಿ.ಪಿ., ಶುಗರ್ ಬಡವರಲ್ಲೂ ಹೆಚ್ಚಾಗುತ್ತಿವೆ ಎಂದು ಕರುಣಾ ಜೀವ ಕಲ್ಯಾಣ ಟ್ರಸ್ಟ್ ಕಾರ್ಯದರ್ಶಿ ಹೇಳಿದರು.

ಕರುಣಾ ಜೀವ ಕಲ್ಯಾಣ ಟ್ರಸ್ಟಿನಲ್ಲಿ ನಡೆದ ಸೈಕಲ್ ವಿತರಣಾ ಕಾರ್ಯಕ್ರಮದಲ್ಲಿ ಫಲಾನುಭವಿಗಳನ್ನುದ್ದೇಶಿಸಿ ಅವರು ಮಾತನಾಡಿದರು.        

ದೈಹಿಕ ಶ್ರಮವಿಲ್ಲದ ಜೀವನ ಶೈಲಿ, ಅನಾರೋಗ್ಯಕರ ಆಹಾರ ಸೇವನೆ, ಬಡವರಾದರೂ ಪೆಟ್ರೋಲ್ ವಾಹನಗಳನ್ನು ಬಳಸುತ್ತಿರುವುದು ಇದಕ್ಕೆ ಪ್ರಮುಖ ಕಾರಣ. ಇದರಿಂದ ಹಣ ವ್ಯಯವಾಗುವುದರ ಜೊತೆಗೆ ಆರೋಗ್ಯವನ್ನೂ ಕಳೆದುಕೊಳ್ಳಬೇಕಾಗುತ್ತದೆ. ಕೆಲವು ದಶಕಗಳ ಹಿಂದೆ ಸೈಕಲ್ ಹಲವು ವಿಧಗಳಲ್ಲಿ ಜೀವನದ ಅವಿಭಾಜ್ಯ ಅಂಗವಾಗಿತ್ತು. ಈಗ ಅದು ಅಳಿವಿನಂಚಿಗೆ ಬಂದಿದೆ.  ಸೈಕಲ್ ಬಳಕೆಯಿಂದ ಪರಿಸರ ಮಾಲಿನ್ಯವನ್ನೂ ಸಹ ನಿಯಂತ್ರಿಸಬಹುದು.  ಕರುಣಾ ಜೀವ ಕಲ್ಯಾಣ ಟ್ರಸ್ಟ್ ವತಿಯಿಂದ ಕಡು ಬಡವರು ಸೈಕಲ್ ಸವಾರಿ ಮಾಡಲು ಪ್ರೋತ್ಸಾಹಿಸಲಾಗುತ್ತಿದೆ. ಈಗಾಗಲೇ 32 ಸೈಕಲ್‌ಗಳನ್ನು ಟ್ರಸ್ಟಿನ ವತಿಯಿಂದ ನೀಡಲಾಗಿದೆ. ಇನ್ನೂ 200 ಸೈಕಲ್ ಕೊಡುವ ಗುರಿಯಿದೆ.  ಬಡವರು ಇದರ ಸದುಪಯೋಗವನ್ನು ಮಾಡಿಕೊಳ್ಳಬೇಕು ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಡಾ. ಹೆಚ್.ಎನ್.ಮಲ್ಲಿಕಾರ್ಜುನ್ ಮಾತನಾಡಿ, ಬಡವರ ಜೊತೆಗೆ    ಶ್ರೀಮಂತರೂ ಸಹ ಹೆಚ್ಚಾಗಿ ಸೈಕಲ್‌ಗಳನ್ನು ಬಳಸಬೇಕಾಗಿದೆ. ದಿನಕ್ಕೆ 30 ನಿಮಿಷ ವೇಗವಾಗಿ ಸೈಕಲ್   ಓಡಿಸುವುದರಿಂದ ದೈಹಿಕ, ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ ಎಂದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ  ಎ.ಎಂ. ಕೊಟ್ರೇಶ್ವರ್ ಮಾತನಾಡಿ,  ಸೈಕಲ್ ಸವಾರಿ ಉತ್ತಮ ಆರೋಗ್ಯಕ್ಕೆ ರಹದಾರಿ    ಮನುಷ್ಯನ ಮೆದುಳಿನ ಕಾರ್ಯಕ್ಷಮತೆ ಹೆಚ್ಚಿಸುತ್ತದೆ. ವಿಲ್ ಪವರ್ ವೃದ್ಧಿಯಾಗುತ್ತದೆ. ಒತ್ತಡ ನಿವಾರಣೆ    ಮಾಡುತ್ತದೆ. ಆದ್ದರಿಂದ ಎಲ್ಲರೂ ಸೈಕಲ್ ಬಳಸೋಣ ಎಂದರು.

ನಿರ್ದೇಶಕ ಬಸವರಾಜ್ ಒಡೆಯರ್ ಮಾತನಾಡಿ, ಇನ್ನೂ 10 ಸೈಕಲ್ ಗಳನ್ನು ಕೊಡಿಸಲು ಧನಸಹಾಯ  ಮಾಡುವುದಾಗಿ ತಿಳಿಸಿದರು. ಈ ರೀತಿ ಧನಸಹಾಯ ಮಾಡಲು ಇಚ್ಚಿಸುವವರು ಮೊ.  9110455199 / 8310520002 ಸಂಪರ್ಕಿಸಬಹುದು ಎಂದರು.

 ಶ್ರೀಮತಿ ಮಂಜುಳ ಬಸವಲಿಂಗಪ್ಪ ಸ್ವಾಗತಿಸಿದರು. ಎನ್.ಪಿ.ಜಯಣ್ಣ  ವಂದಿಸಿದರು. ಪ್ರೊ. ಎಂ.ಬಸವರಾಜ್, ಮಲ್ಲಾಬಾದಿ ಬಸವರಾಜ್ ಮುಂತಾದವರಿದ್ದರು.

error: Content is protected !!