ರಾಣೇಬೆನ್ನೂರು, ಆ. 17- ಕಳೆದ 15 ದಿನಗಳ ಹಿಂದೆ ಇಲ್ಲಿನ ಎರೇಕುಪ್ಪಿ ರಸ್ತೆಯ ಮಾರುತಿ ನಗರದ ವಿಘ್ನೇಶ್ವರ ಸ್ಪಾರ್ಕಲ್ಸ್ ಮತ್ತು ಪಾರ್ಟಿ ಪೂಪರ್ ಕೇಂದ್ರದಲ್ಲಿ (ಸ್ಪಾರ್ಕ್ ಕ್ಯಾಂಡಲ್) ನಡೆದ ಘಟನೆ ಮಾಸುವ ಮುನ್ನವೇ ಗುರುವಾರ ಬೆಳಗಿನ ಜಾವ ಮತ್ತೆ ಮರುಕಳಿಸಿದ್ದು, ಜನರಲ್ಲಿ ಆತಂಕ ಮೂಡಿಸಿದೆ.
ನಗರದ ಶಿವಪ್ಪ ನೀಲಮ್ಮನವರಿಗೆ ಸೇರಿದ ಕಟ್ಟಡದಲ್ಲಿ ಬಾಡಿಗೆ ಪಡೆದು ಬ್ಯಾಡಗಿ ತಾಲ್ಲೂಕಿನ ಶ್ರೀಕಾಂತ ತಿಮ್ಮಾಪುರ ಎಂಬು ವರು ಅನಧಿಕೃತವಾಗಿ ಸ್ಪಾರ್ಕ್ ಕ್ಯಾಂಡಲ್ ತಯಾರಿಕಾ ಘಟಕ ನಡೆಸುತ್ತಿದ್ದರು.
ಸ್ಫೋಟಕ ವಸ್ತುವಿನ ಪರಿಶೀಲನೆ ನಡೆಸಿ ಎಫ್ಎಸ್ಎಲ್ಗೆ ಕಳುಹಿಸಬೇಕಾಗಿದ್ದರಿಂದ ಅದನ್ನು ನಿಷ್ಕ್ರೀಯಗೊಳಿಸಿರಲಿಲ್ಲ. ಮೇಲಾಗಿ ಪ್ರಕರಣವು ಪೊಲೀಸ್ ಇಲಾಖೆ ವ್ಯಾಪ್ತಿಗೆ ವಹಿಸಿದ್ದರಿಂದ ಅವರು ನಿಷ್ಕ್ರಿಯಗೊಳಿಸುವ ಕೆಲಸ ಮಾಡಬೇಕಾಗಿತ್ತು.
– ನಿಂಗಪ್ಪ ಕುಮ್ಮಣ್ಣನವರ, ನಗರಸಭೆ ಆಯುಕ್ತ, ರಾಣೇಬೆನ್ನೂರು.
ಸ್ಪಾರ್ಕ್ ಕ್ಯಾಂಡಲ್ಗೆ ಯಾವ ಕೆಮಿಕಲ್ ಬಳಸುತ್ತಿದ್ದರು, ಅದರ ತೀವ್ರತೆ ಎಷ್ಟು ಎಂಬುದರ ಬಗ್ಗೆ ತಯಾರಿಕಾ ಘಟಕದ ಮಾಲೀಕರಿಗೆ ಗೊತ್ತಿತ್ತು. ಇದರ ಬಗ್ಗೆ ಮಾಹಿತಿ ಪಡೆಯೋಣವೆಂದರೇ ಆ.1ರಂದು ಸಂಭವಿಸಿದ ಸ್ಫೋಟದಲ್ಲಿ ಅವರು ಕೂಡ ಗಾಯಗೊಂಡಿದ್ದರು. ಹೀಗಾಗಿ ಘಟನೆ ನಂತರ ಸ್ಫೋಟಕ ವಸ್ತುವನ್ನು ನಿಷ್ಕ್ರಿಯಗೊಳಿಸಿರಲಿಲ್ಲ. ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕುವ ಸಮಯದಲ್ಲಿಯೇ ಅವಘಡ ಸಂಭವಿಸಿದೆ.
– ಶಂಕರ, ಸಿಬಿಐ ಶಹರ ಠಾಣೆ, ರಾಣೇಬೆನ್ನೂರು.
ನಗರದಲ್ಲಿ ಪದೇ ಪದೇ ಇಂತಹ ಅವಘಡ ನಡೆಯುತ್ತಿರುವುದು ಸರಿಯಲ್ಲ. 15 ದಿನಗಳ ಹಿಂದೆ ನಡೆದ ಬೆಂಕಿ ಅವಘಡದಲ್ಲಿ ಓರ್ವ ಮೃತಪಟ್ಟಿದ್ದು ಈಗ ಮತ್ತೇ ಅದೇ ಸ್ಥಳದಲ್ಲಿ ಸ್ಫೋಟದ ಘಟನೆ ಮರುಕಳಿಸಿರುವುದು ಖೇದಕರ ಸಂಗತಿ. ಇದಕ್ಕೆ ಕಾರಣವಾದ ಅಧಿಕಾರಿಗಳನ್ನು ಕೂಡಲೇ ಅಮಾನತ್ತು ಮಾಡಬೇಕು.
– ಹನುಮಂತಪ್ಪ ಕಬ್ಬಾರ, ರೈತ ಮುಖಂಡರು, ರಾಣೇಬೆನ್ನೂರು.
ಆ.1ರಂದು ಘಟಕದಲ್ಲಿ ಸ್ಫೋಟ ಸಂಭವಿಸಿ ಶ್ರೀಕಾಂತ ಸೇರಿದಂತೆ 7 ಜನರು ಗಾಯಗೊಂಡಿದ್ದು, ಆ ಪೈಕಿ ಒಬ್ಬ ವ್ಯಕ್ತಿ ಆ.2 ರಂದು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದರು. ಆ ಸಮಯದಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಸ್ಥಳೀಯ ಶಾಸಕ ಪ್ರಕಾಶ ಕೋಳಿವಾಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಇಂದಿನ ಘಟನೆಗೆ ಕಾರಣ: ಆ.1ರಂದು ಸ್ಫೋಟ ಸಂಭವಿಸಿದ ನಂತರ ಎರಡು ಬ್ಯಾರೆಲ್ಗಳಲ್ಲಿ ಸಂಗ್ರಹಿಸಿಡಲಾಗಿದ್ದ ಸ್ಫೋಟಕ ವಸ್ತುವನ್ನು (ಮದ್ದಿನ ಪೌಡರ್) ನಗರಸಭೆಯವರಾಗಲೀ ಅಥವಾ ಪೊಲೀಸ್ ಇಲಾಖೆಯವರಾಗಲೀ ನಿಷ್ಕ್ರಿಯಗೊಳಿಸ ದಿರುವುದೇ ಇಂದಿನ ಘಟನೆಗೆ ಪ್ರಮುಖ ಕಾರಣವಾಗಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ. ಈ ಘಟನೆ ಕುರಿತಂತೆ ನಗರಸಭೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆಯೇ ಎಂಬ ಅನುಮಾನ ಉಂಟಾಗುತ್ತಿದೆ.