ಮನುಷ್ಯನಿಗೆ ಕಲೆಯೇ ಭೂಷಣ : ಶ್ರೀ ಮುರುಳೀಧರ ಸ್ವಾಮೀಜಿ

ಮನುಷ್ಯನಿಗೆ ಕಲೆಯೇ ಭೂಷಣ : ಶ್ರೀ ಮುರುಳೀಧರ ಸ್ವಾಮೀಜಿ

ದಾವಣಗೆರೆ, ಆ.17- ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡಾಗ ಸಾರ್ಥಕ ಬದುಕು ನಮ್ಮದಾಗುತ್ತದೆ. ಮನುಷ್ಯನಿಗೆ ಕಲೆಯೇ ಭೂಷಣ. ಕಲೆಯನ್ನು ಪ್ರತಿಯೊಬ್ಬನಿಗೂ ಹಂಚಬೇಕು ಎಂದು ಹದಡಿ ಚಂದ್ರಗಿರಿ ಮಠದ ಶ್ರೀ ಮುರುಳೀಧರ ಸ್ವಾಮೀಜಿ ಹೇಳಿದರು.

ನಗರದ ರೋಟರಿ ಬಾಲಭವನದಲ್ಲಿ ಸ್ಫೂರ್ತಿ ಸಾಂಸ್ಕೃತಿಕ ಸೇವಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಾನಪದ ಮೇಳ ಮತ್ತು ವಿಚಾರಗೋಷ್ಠಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

ಮನುಷ್ಯ ಪರೋಪಕಾರ ಮಾಡುವ ಜೊತೆಗೆ ತಂದೆ-ತಾಯಿ, ಗುರು-ಹಿರಿಯರ, ಬಂಧು-ಬಳಗದ,  ಸಮಾಜದ, ನಿಸರ್ಗದ ಋಣವನ್ನು ತೀರಿಸುವ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.

ಉಸಿರು ಇರುವವರೆಗೂ ಜನ ಮೆಚ್ಚುವ ರೀತಿಯಲ್ಲಿ ಬದುಕು ನಮ್ಮದಾಗಬೇಕು. ಕಿಂಕರತ್ವ ಇದ್ದಲ್ಲಿ ಶಂಕರತ್ವ ಬರುತ್ತದೆ ಎಂದರು.

ಲೇಖಕರೂ, ರಂಗಕಲಾವಿದರೂ ಆದ ಡಾ.ಎ. ಶಿವನಗೌಡ್ರು ಕಡಬಗೆರೆ ಮಾತನಾಡಿ, ಜನಪದ ಭಾರತೀಯ ಸಂಸ್ಕೃತಿಯ ತಾಯಿ ಬೇರು. ಜಾನಪದ ಕಲೆಯಿಂದ ಕನ್ನಡಕ್ಕೆ ಮೆರಗು ಬಂದಿದೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಎಂ. ಶಿವಕುಮಾರ್ ಮಾತನಾಡಿ, ಸ್ಫೂರ್ತಿ ಸಾಂಸ್ಕೃತಿಕ ಸೇವಾ ಸಂಘದ ಸಮಾಜ ಸೇವಾ ಕಾರ್ಯ ಶ್ಲ್ಯಾಘನೀಯ ಎಂದರು.

ಕಲಾವಿದರ ಬಗ್ಗೆ ಅತ್ಯಂತ ಕಾಳಜಿ ವಹಿಸುತ್ತಿರುವ ಸ್ಫೂರ್ತಿ ಸೇವಾ ಸಂಘದ ಅಧ್ಯಕ್ಷ ಎನ್.ಎಸ್. ರಾಜು ಅವರು ಬಡ ಮಕ್ಕಳಿಗೆ ನೋಟ್ ಬುಕ್ ವಿತರಣೆ, ಕಲಾವಿದರಿಗೆ ನಾಟಕ, ಯಕ್ಷಗಾನ, ಬಯಲಾಟ ಮುಂತಾದ ಜಾನಪದ ಕಲೆಗಳ ಬಗ್ಗೆ ತರಬೇತಿ ಕೊಡಿಸುವುದು ಸೇರಿದಂತೆ ಅನೇಕ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವುದು ಪ್ರಶಂಸನೀಯ ಎಂದು ಹೇಳಿದರು.

ಚನ್ನಗಿರಿ ತಾಲ್ಲೂಕು ಹವ್ಯಾಸಿ, ಗ್ರಾಮೀಣ ವಿವಿಧ ಕಲಾವಿದರ ಒಕ್ಕೂಟದ ಅಧ್ಯಕ್ಷ ಬಿ.ಇ. ತಿಪ್ಪೇಸ್ವಾಮಿ ಮಾತನಾಡಿ, ಕಲಾವಿದರಿಗೆ ಈಗಿರುವ ಎರಡು ಸಾವಿರ ರೂ. ಮಾಸಾಶನವನ್ನು ಮೂರರಿಂದ ನಾಲ್ಕು ಸಾವಿರ ರೂ.ಗಳಿಗೆ ಹೆಚ್ಚಳ ಮಾಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಅವರು ಇಲಾಖೆಯಿಂದ ಕಲಾವಿದರಿಗೆ ದೊರೆಯಬಹುದಾದ ಯೋಜನೆಗಳ ಮಾಹಿತಿ ನೀಡಿದರು.

ಕರ್ನಾಟಕ ಯಕ್ಷಗಾನ ಅಕಾಡೆಮಿ ನಿವೃತ್ತ ರಿಜಿಸ್ಟ್ರಾರ್ ಎಸ್.ಹೆಚ್. ಶಿವರುದ್ರಪ್ಪ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದಲೂ ಅರ್ಹ ಕಲಾವಿದರು ಸವಲತ್ತುಗಳನ್ನು ಪಡೆಯಲು ಅವಕಾಶವಿದೆ. ಜಾನಪದ ಕಲೆ ಆರಾಧನಾ ಮತ್ತು ರಂಗಭೂಮಿ ಕಲೆಯಾಗಿದೆ. ಕಲಾವಿದರನ್ನು ಪ್ರೋತ್ಸಾಹಿಸುವ ಅಗತ್ಯವಿದೆ ಎಂದರು.

ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಬಿಳಿಚೋಡಿನ ಪಿ.ಜಿ. ಪರಮೇಶ್ವರಪ್ಪ, ಸ್ಫೂರ್ತಿ ಸಾಂಸ್ಕೃತಿಕ ಸೇವಾ ಸಂಘದ ಅಧ್ಯಕ್ಷ ಎನ್.ಎಸ್. ರಾಜು, ಕಾರ್ಯದರ್ಶಿ ಎ. ಸೂರೇಗೌಡ್ರು ಮತ್ತಿತರರು ಉಪಸ್ಥಿತರಿದ್ದರು. ಕಲಾವಿದ ಹೆಗ್ಗೆರೆ ರಂಗಪ್ಪ ಜಾನಪದ ಗೀತೆ ಹಾಡಿದರು. 

error: Content is protected !!