ದಾವಣಗೆರೆ, ಆ. 17 – ಜಿಲ್ಲೆಯಲ್ಲಿ ಅಪೌಷ್ಟಿಕ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದ್ದು, ಸಂಬಂಧಿತ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಅಪರ್ಣಾ ಎಂ.ಕೊಳ್ಳ ತಿಳಿಸಿದರು.
ಸೋಮವಾರ ಜಿಲ್ಲೆಯಲ್ಲಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸರ್ಕಾರಿ ಬಾಲಕಿಯರ ಬಾಲ ಮಂದಿರ, ಸ್ವಯಂ ಸೇವಾ ಮಕ್ಕಳ ಪಾಲನಾ ಸಂಸ್ಥೆ, ಸರ್ಕಾರಿ ದತ್ತು ಸಂಸ್ಥೆ, ಸಮಾಜ ಕಲ್ಯಾಣ ಇಲಾಖೆಯ ಪೋಸ್ಟ್ ಮೆಟ್ರಿಕ್ ವಸತಿ ನಿಲಯಗಳಿಗೆ ಭೇಟಿ ನೀಡಿ, ಜಿಲ್ಲಾ ಆಸ್ಪತ್ರೆ ಮತ್ತು ಜಿಲ್ಲಾ ಧಿಕಾರಿಗಳೊಂದಿಗೆ ಸಂವಾದ ನಡೆಸಿ, ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಅಪೌಷ್ಟಿಕ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದ್ದು, ಅಧಿಕಾರಿಗಳು ಯಾವುದೇ ನಿರ್ಲಕ್ಷ್ಯ ವಹಿಸದೇ ಸೂಕ್ತ ಕ್ರಮ ಕೈಗೊಳ್ಳಬೇಕು. ಜಿಲ್ಲಾಸ್ಪತ್ರೆಯಲ್ಲಿ 30 ಅಪೌಷ್ಟಿಕ ಮಕ್ಕಳಿಗೆ ಮಾತ್ರ ಹಾಸಿಗೆ ವ್ಯವಸ್ಥೆ ಇದ್ದು ಹೆಚ್ಚುವರಿ ಹಾಸಿಗೆ, ಕೊಠಡಿ ಮತ್ತು ಸಿಬ್ಬಂದಿಗಳನ್ನು ತೆಗೆದುಕೊಳ್ಳಲು ಸೂಚಿಸಿದರು.
ನಗರದ ಕುಂದುವಾಡ ರಸ್ತೆಯ ಸರ್ಕಾರಿ ಪೋಸ್ಟ್ ಮೆಟ್ರಕ್ ವಸತಿ ನಿಲಯಕ್ಕೆ ಭೇಟಿ ನೀಡಿ ಬೆಳಿಗ್ಗೆ 10 ಗಂಟೆಯಾದರೂ ಅಡುಗೆ ಸಿಬ್ಬಂದಿ ಮತ್ತು ನಿಲಯ ಪಾಲಕರು ಹಾಜರಿರುವುದಿಲ್ಲ. ಅಡುಗೆ ಪರಿಕರಗಳು ಸ್ವಚ್ಚತೆಯಿಂದ ಕೂಡಿರುವುದಿಲ್ಲ, ಸ್ಯಾನಿಟರಿ ಪ್ಯಾಡ್ 1 ತಿಂಗಳು ಮಾತ್ರ ವಿತರಿಸಿ ನಂತರ ವಿತರಣೆ ಮಾಡಿರುವುದಿಲ್ಲ, 150 ಮಕ್ಕಳಲ್ಲಿ 110 ಮಕ್ಕಳು ಮಾತ್ರ ಹಾಜರಿದ್ದಾರೆ. ಊಟ ಮತ್ತು ತಿಂಡಿಯಲ್ಲಿ ರುಚಿ ಹಾಗೂ ಪೌಷ್ಟಿಕತೆ ಇಲ್ಲದಿರುವುದು ಕಂಡುಬಂದಿದ್ದರಿಂದ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.