ಅಮೃತ ಯೋಜನೆಯಲ್ಲಿ ಅಭಿವೃದ್ಧಿ

ಅಮೃತ ಯೋಜನೆಯಲ್ಲಿ ಅಭಿವೃದ್ಧಿ

ಹರಿಹರ: ಸ್ವಾತಂತ್ರ್ಯ ದಿನಾಚರಣೆಯಲ್ಲಿ ಶಾಸಕ ಬಿ.ಪಿ. ಹರೀಶ್

ಹರಿಹರ, ಅ. 15 – ಮುಂದಿನ ದಿನಗಳಲ್ಲಿ, ಅಮೃತ ಯೋಜನೆ ಅಡಿಯಲ್ಲಿ ತಾಲ್ಲೂಕನ್ನು ಸರ್ವಾಂಗೀಣ ಅಭಿವೃದ್ಧಿ ಪಡಿಸಲಾಗುವುದು ಎಂದು ಶಾಸಕ ಬಿ.ಪಿ. ಹರೀಶ್ ಹೇಳಿದರು.

ನಗರದ ಗಾಂಧಿ ಮೈದಾನದಲ್ಲಿ ನಡೆದ 77 ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಸಾಕಷ್ಟು ರಸ್ತೆಗಳು ಹಾಳಾಗಿದ್ದು, ಅವುಗಳನ್ನು ದುರಸ್ತಿ ಪಡಿಸುವುದರ ಜೊತೆಗೆ, ಭದ್ರ ಅಚ್ಚುಕಟ್ಟು ಪ್ರದೇಶದ ಕೊನೆ ಭಾಗದ ರೈತರಿಗೆ ನೀರನ್ನು ಸಮರ್ಪಕವಾಗಿ ಪೂರೈಸಲು ಯೋಜನೆ ಕಾರ್ಯರೂಪಕ್ಕೆ ತರಲು ಪ್ರಯತ್ನಿಸಲಾಗುವುದು ಎಂದರು.

ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ತಾಲ್ಲೂಕಿನಲ್ಲಿ 685 ಮನೆಗಳನ್ನು ನಿರ್ಮಿಸಲಾಗಿದೆ. ಮೇಕ್ ಇನ್ ಇಂಡಿಯಾ, ರಾಷ್ಟ್ರೀಯ ವಿಕಾಸ, ಕಿಸಾನ್ ಸಮ್ಮಾನ್, ಫಸಲ್ ಬಿಮಾ, ಸ್ಮಾರ್ಟ್ ಸಿಟಿ ಸೇರಿ ಹತ್ತಾರು ಯೋಜನೆಗಳ ಮೂಲಕ ದೇಶ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಎಂದರು.

ನಗರದಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ರೈಲ್ವೆ ನಿಲ್ದಾಣ ಕಾಮಗಾರಿ ಆರಂಭಗೊಂಡಿದೆ. ಇನ್ನು ಕೆಲವೇ ತಿಂಗಳುಗಳಲ್ಲಿ ಅಮೃತ ರೈಲ್ವೆ ನಿಲ್ದಾಣಕ್ಕೆ ಚಾಲನೆ ಮಾಡಲಾಗುತ್ತದೆ ಎಂದು ಹೇಳಿದರು.

ತಹಶೀಲ್ದಾರ್ ಪೃಥ್ವಿ ಸಾನಿಕಂ ಧ್ವಜಾರೋಹಣ ಮಾಡಿ, ಮಾತನಾಡಿ, ದೇಶದಲ್ಲಿ ಅನೇಕ ಹಿರಿಯರು ಮಾಡಿದ ತ್ಯಾಗ, ಬಲಿದಾನದಿಂದಾಗಿ ನಮಗೆ ಸ್ವಾತಂತ್ರ್ಯವನ್ನು ಪಡೆಯಲು ಸಾಧ್ಯವಾಯಿತು. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದವರ ಸ್ಮರಣೆ ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ ಎಂದು ಹೇಳಿದರು. 

ಉಪನ್ಯಾಸಕರಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಸ್.ಹೆಚ್. ಹೂಗಾರ್ ಮಾತನಾಡಿದರು.

ಈ ವೇಳೆ ವಿವಿಧ ಶಾಲಾ ಮಕ್ಕಳು, ಪೊಲೀಸ್ ಸಿಬ್ಬಂದಿ, ಗೃಹ ರಕ್ಷಕ ದಳದವರಿಂದ ಪಥ ಸಂಚಲನ ಮತ್ತು ಶಾಸಕರಿಂದ ಗೌರವ ರಕ್ಷೆ ಸ್ವೀಕಾರ, ಶಾಲಾ ಮಕ್ಕಳಿಂದ ಮನರಂಜನಾ ಕಾರ್ಯಕ್ರಮ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ನಡೆದವು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ನಿಂಬಕ್ಕ ಚಂದಾಪೂರ್, ಪೌರಾಯುಕ್ತ ಐಗೂರು ಬಸವರಾಜ್, ಬಿಇಓ ಎಂ. ಹನುಮಂತಪ್ಪ, ತಾಪಂ ಇಓ ಎನ್. ರವಿ, ವೃತ್ತ ನಿರೀಕ್ಷಕರಾದ ಎಸ್. ದೇವಾನಂದ್, ಸುರೇಶ್ ಸರಗಿ, ಪಿಎಸ್ಐ ಚಿದಾನಂದ, ಕೃಷಿ ಇಲಾಖೆಯ ನಾರನಗೌಡ, ಲೋಕೋಪಯೋಗಿ ಇಲಾಖೆ ಶಿವಮೂರ್ತಿ, ತಾಪಂ ಇಲಾಖೆ ಲಿಂಗರಾಜ್, ಹಿಂದುಳಿದ ವರ್ಗಗಳ ಇಲಾಖೆ ನಸ್ರತ್ ಪರವೀನ್ ಬಾನು, ತಾಲ್ಲೂಕು ಆಡಳಿತದ ಹೇಮಂತ್ ಕುಮಾರ್, ಸಮೀರ್, ನಗರಸಭೆ ಸದಸ್ಯ ದಿನೇಶ್ ಬಾಬು ಮತ್ತಿತರರು ಉಪಸ್ಥಿತರಿದ್ದರು.

error: Content is protected !!