ಅಭಿವೃದ್ಧಿ ವಿಚಾರದಲ್ಲಿ ಹೊಳೆಸಿರಿಗೆರೆ ಗ್ರಾಮಸ್ಥರ ಒಗ್ಗಟ್ಟು ಮಾದರಿ

ಅಭಿವೃದ್ಧಿ ವಿಚಾರದಲ್ಲಿ ಹೊಳೆಸಿರಿಗೆರೆ ಗ್ರಾಮಸ್ಥರ ಒಗ್ಗಟ್ಟು ಮಾದರಿ

ಕೃಷಿ ಉಗ್ರಾಣ ಕಟ್ಟಡಗಳ ಉದ್ಘಾಟನೆಯಲ್ಲಿ ಶಾಸಕರಾದ ಬಿ.ಪಿ.ಹರೀಶ್, ಡಿ.ಜಿ.ಶಾಂತನಗೌಡ ಮೆಚ್ಚುಗೆ

ಡಿಸಿಸಿ ಬ್ಯಾಂಕಿನಿಂದ ನೀಡುತ್ತಿದ್ದ ಕೃಷಿ ಸಾಲ 300 ಕೋಟಿಯಿಂದ 700 ಕೋಟಿಗೆ ಹೆಚ್ಚಳ : ಜೆ.ಆರ್‌. ಷಣ್ಮುಖಪ್ಪ

ಮಲೇಬೆನ್ನೂರು, ಆ.13- ಹೊಳೆಸಿರಿಗೆರೆ ಗ್ರಾಮಕ್ಕೆ ಅವಶ್ಯವಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಈಗಿರುವ 10 ಹಾಸಿಗೆಯ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 50 ಹಾಸಿಗೆಯ ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೆ ಏರಿಸಲು ನಿರಂತರ ಪ್ರಯತ್ನ ಮಾಡುವುದಾಗಿ ಶಾಸಕ ಬಿ.ಪಿ. ಹರೀಶ್‌ ಗ್ರಾಮಸ್ಥರಿಗೆ ಭರವಸೆ ನೀಡಿದರು.

ಭಾನುವಾರ ಹೊಳೆಸಿರಿಗೆರೆ ಗ್ರಾಮದ ಕಲ್ಲೇಶ್ವರ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಸಿರಿಗೆರೆ ವಿವಿಧೋದ್ಧೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಉಗ್ರಾಣ ಮತ್ತು ಸಿರಿಗೆರೆ ಭದ್ರಾ ವಿವಿಧೋದ್ಧೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಉಗ್ರಾಣ ಹಾಗೂ ವೇಬ್ರಿಡ್ಜ್‌ ಉದ್ಘಾಟನಾ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.

ಭದ್ರಾ ಅಚ್ಚುಕಟ್ಟಿನ ಕೊನೆ ಭಾಗದ ಹಳ್ಳಿಗಳ ರೈತರಿಗೆ ನೀರಿನ ತೊಂದರೆ ಆಗುತ್ತಿರುವುದನ್ನು ಗಮನಿಸಿಯೇ ನಾನು ಈ ಹಿಂದೆ ಶಾಸಕನಾಗಿದ್ದಾಗ ಭೈರನಪಾದ ಏತ ನೀರಾವರಿ ಯೋಜನೆಗೆ ಭೂಮಿ ಪೂಜೆ ಮಾಡಿದ್ದೇವೆ. ನಂತರ ಬಂದ ಸರ್ಕಾರಗಳು ಈ ಯೋಜನೆಗೆ ಅನುದಾನ ಬಿಡುಗಡ ಮಾಡದಿರುವ ಕಾರಣ ಯೋಜನೆ ವಿಳಂಬವಾಗಿದೆ. ಈಗ ಕ್ಷೇತ್ರದ ಜನ ನನ್ನನ್ನು ಶಾಸಕನನ್ನಾಗಿ ಮಾಡಿದ್ದಾರೆ. ಆದರೆ, ನಮ್ಮ ಬಿಜೆಪಿ ಸರ್ಕಾರ ಬರಲಿಲ್ಲ, ಆದರೂ ನನ್ನ ಪ್ರಯತ್ನ ವನ್ನು ಕೈಬಿಡಲ್ಲ. ಈ ವರ್ಷ ಗ್ಯಾರಂಟಿ ಯೋಜನೆಗಳಿಂದಾಗಿ ಅಭಿವೃದ್ಧಿ ಕೆಲಸಗಳು ಕುಂಠಿತವಾಗಿದ್ದು, ಮುಂದಿನ ವರ್ಷ ಜಿಲ್ಲಾ ಉಸ್ತುವಾರಿ ಸಚಿವರ ಹಾಗೂ ಸ್ಥಳೀಯ ಕಾಂಗ್ರೆಸ್‌ ನಾಯಕರ ಸಹಕಾರ ಪಡೆದು ಭೈರನಪಾದ ಏತ ನೀರಾವರಿ ಯೋಜನೆ ಜಾರಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ಹರೀಶ್‌ ಹೇಳಿದರು.

ಹೊನ್ನಾಳಿ ತಾಲ್ಲೂಕಿನ 18 ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸುವ ಯೋಜನೆಯಲ್ಲಿ ಕೊಮಾರನಹಳ್ಳಿ ಕೆರೆಗೂ ನೀರು ಹರಿಸುವ ಕಾಮಗಾರಿ ಭರದಿಂದ ನಡೆದಿದೆ. ದೇವರ ಬೆಳಕೆರೆ ಪಿಕಪ್‌ ಡ್ಯಾಮ್‌ಗೂ ನದಿ ನೀರು ತುಂಬಿಸುವ ಯೋಜನೆಯನ್ನೂ ಮುಂದಿನ ವರ್ಷಗಳಲ್ಲಿ ಮಂಜೂರು ಮಾಡಿಸುವ ಪ್ರಯತ್ನ ಮಾಡುತ್ತೇನೆ.

ಹೊಳೆಸಿರಿಗೆರೆ ಗ್ರಾಮದ ಎರಡೂ ಕೃಷಿ ಸಹಕಾರ ಸಂಘಗಳು ಆರೋಗ್ಯಕರ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ಮಾಡಿದ್ದು, ರೈತರಿಗೆ 16 ಕೋಟಿ ರೂ. ಕೆ.ಸಿ.ಸಿ. ಸಾಲ ನೀಡಿರುವುದು ಸ್ವಾಗತಾರ್ಹ ಎಂದು ಹರೀಶ್‌ ಮೆಚ್ಚುಗೆ ವ್ಯಕ್ತಪಡಿಸಿ, ಹೊಳೆಸಿರಿಗೆರೆ ಗ್ರಾಮಸ್ಥರು ಅಭಿವೃದ್ಧಿ ವಿಚಾರದಲ್ಲಿ ಒಗ್ಗಟ್ಟು ಪ್ರದರ್ಶಿಸುವ ಮೂಲಕ ಮಾದರಿಯಾಗಿದ್ದಾರೆ ಎಂದು ಶ್ಲ್ಯಾಘಿಸಿದರು.

ಹೊನ್ನಾಳಿ ಶಾಸಕ ಡಿ.ಜಿ. ಶಾಂತನಗೌಡ ಮಾತನಾಡಿ, ಒಂದೇ ಊರಿನಲ್ಲಿ 2 ಕೃಷಿ ಸಹಕಾರ ಸಂಘಗಳು ಇರುವುದನ್ನು ನೋಡಿರುವುದು ನನ್ನ ರಾಜಕೀಯ ಜೀವನದಲ್ಲಿ ಇದೇ ಮೊದಲು. ಅದು ಹೊಳೆಸಿರಿಗೆರೆಯಲ್ಲಿ ಎಂದು ಅಚ್ಚರಿ ವ್ಯಕ್ತಪಡಿಸಿದರು.

ಭದ್ರಾ ನೀರಿನ ಸಮಸ್ಯೆ ನಿಮ್ಮ ಭಾಗಕ್ಕೆ ಯಾವತ್ತೂ ಆಗುತ್ತಿರುವ ಬಗ್ಗೆ ಮಾಹಿತಿ ಇದೆ. ಈ ಬಾರಿ ಡ್ಯಾಂ ಭರ್ತಿ ಆಗದಿದ್ದರೂ, ಮುಂಗಾರಿನ ಬೆಳೆಗಳಿಗೆ 100 ದಿನ ನೀರು ಹರಿಸುವ ತೀರ್ಮಾನ ಮಾಡಿದ್ದೇವೆ. ಮಳೆ ಬಂದು ಡ್ಯಾಂ ತುಂಬುವ ವಿಶ್ವಾಸ ಇದ್ದು, ನಿಮಗೆ ನೀರಿನ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಶಾಂತನಗೌಡರು ಹೇಳಿದರು.

ಹಿರಿಯ ಸಹಕಾರಿ ಧುರೀಣ ಜೆ.ಆರ್‌. ಷಣ್ಮುಖಪ್ಪ ಮಾತನಾಡಿ, ಡಿಸಿಸಿ ಬ್ಯಾಂಕ್‌ನಿಂದ ಕೊಡುತ್ತಿದ್ದ ಕೃಷಿ ಸಾಲವನ್ನು 300 ಕೋಟಿಯಿಂದ 700 ಕೋಟಿಗೆ ಹೆಚ್ಚಿಸುವ ಮೂಲಕ ಜಿಲ್ಲೆಯ ರೈತರಿಗೆ ನೆರವಾಗಿದ್ದೇವೆ.

ಗ್ರಾಮದ ಹಿರಿಯ ಮುತ್ಸದ್ಧಿ ಎನ್‌.ಜಿ. ನಾಗನಗೌಡ್ರು ಮಾತನಾಡಿ, ಒಗ್ಗಟ್ಟಿನಲ್ಲಿ ಬಲ ಅಷ್ಟೇ ಅಲ್ಲ ಅಭಿವೃದ್ಧಿಯೂ ಇದೆ ಎಂಬುದಕ್ಕೆ ನಮ್ಮ ಗ್ರಾಮ ಸಾಕ್ಷಿಯಾಗಿದೆ. ಇದೇ ಒಗ್ಗಟ್ಟನ್ನು ಕಾಪಾಡಿಕೊಂಡು ಹೋಗೋಣ ಎಂದರು.

ಗ್ರಾಮದ ಮುಖಂಡ ಎಂ.ಜಿ. ಪರಮೇಶ್ವರಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬಿ. ಹಾಲೇಶಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ವೇಳೆ ಸಿರಿಗೆರೆ ಭದ್ರಾ ಪ್ರಾಥಮಿಕ ಕೃಷಿ ಸಹಕಾರ ಸಂಘದ ಸಂಸ್ಥಾಪಕ ಕಾರ್ಯದರ್ಶಿ ಕೆ. ಮಲ್ಲೇಶಪ್ಪ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. 

ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಬಿ. ಶೇಖರಪ್ಪ, ನಿರ್ದೇಶಕರಾದ ಜಗದೀಶಪ್ಪ ಬಣಕಾರ್‌, ಜೆ.ಎಸ್‌. ವೇಣುಗೋಪಾಲರೆಡ್ಡಿ, ಕೆಂಗಲಹಳ್ಳಿ ಷಣ್ಮುಖಪ್ಪ, ಜೆ.ಎನ್‌. ಸ್ವಾಮಿ, ಆರ್‌.ಜಿ. ಶ್ರೀನಿವಾಸ್‌ಮೂರ್ತಿ, ಹೆಚ್‌.ಕೆ. ಪಾಲಾಕ್ಷಪ್ಪ, ಡಿಸಿಸಿ ಬ್ಯಾಂಕ್‌ ಎಂ ಡಿ ಕೆ.ಎನ್‌. ನಂಜನಗೌಡ, ಡಿಸಿಸಿ ಬ್ಯಾಂಕ್‌ ಮಾಜಿ ನಿರ್ದೇಶಕರಾದ ಕತ್ತಲಗೆರೆ ನಾಗರಾಜಪ್ಪ, ಜೀವನ್‌ ಪ್ರಕಾಶ್‌, ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಹೆಚ್‌. ಅನ್ನಪೂರ್ಣ, ನಬಾರ್ಡ್‌ ಅಧಿಕಾರಿ ರಶ್ಮಿರೇಖಾ, ಸಿರಿಗೆರೆ ಭದ್ರಾ ಸಂಘದ  ಅಧ್ಯಕ್ಷ ಶ್ಯಾಮನೂರು ಮಂಜಪ್ಪ, ಸಿಇಓ ಎಂ. ಬಸವನಗೌಡ, ಮಾಜಿ ಕಾರ್ಯದರ್ಶಿ ಎನ್‌.ಎಂ. ಹಾಲಸ್ವಾಮಿ, ಡಿಸಿಸಿ ಬ್ಯಾಂಕಿನ ಮೇಲ್ವಿಚಾರಕರಾದ ಪಿ. ಲಿಂಗನಗೌಡ, ಲೋಕೇಶ್‌ನಾಯ್ಕ, ಭಾನುವಳ್ಳಿ ಶಿವಕುಮಾರ್‌ ಸೇರಿದಂತೆ ಇತರರು ಭಾಗವಹಿಸಿದ್ದರು. 

ಕೆ. ಮಹಾಂತೇಶ್ ಸ್ವಾಗತಿಸಿದರು. ಉಪನ್ಯಾಸಕಿ ಹಾಗೂ ದಾವಣಗೆರೆ ತಾಲ್ಲೂಕು ಕಸಾಪ ಅಧ್ಯಕ್ಷೆ ಶ್ರೀಮತಿ ಸುಮತಿ ಜಯ್ಯಪ್ಪ ಉಪನ್ಯಾಸ ನೀಡಿ, ಕಾರ್ಯಕ್ರಮ ನಿರೂಪಿಸಿದರು. ಯಲವಟ್ಟಿ ಪಿಎಸಿಎಸ್‌ ಸಿಇಓ ಶೇಖರಪ್ಪ ವಂದಿಸಿದರು.

error: Content is protected !!