ಸಚ್ಚಾರಿತ್ರ್ಯವೇ ಧರ್ಮ : ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ
ದಾವಣಗೆರೆ, ಆ.13- ಮನಸ್ಸಿನಲ್ಲಿ ವಿವಿಧ ರೂಪಗಳಲ್ಲಿ ಪ್ರಕಟಗೊಳ್ಳುವ ಭಾವನೆಗಳನ್ನು ಸಾಕ್ಷಿ ಪ್ರಜ್ಞೆಯಿಂದ ನೋಡುವುದು ಅರಿವಿನ ಮೊದಲ ಹೆಜ್ಜೆ. ಸಚ್ಚಾರಿತ್ರ್ಯವೇ ಧರ್ಮ ಮಾನವ ಆತ್ಮಸಾಕ್ಷಿ ಪ್ರಜ್ಞೆಯೊಂದಿಗೆ ಅದಮ್ಯ ಚೇತನವನ್ನು ಆನಂದಿ ಸಬಹುದು. ಅಂತರಂಗ ಶುದ್ಧಿಗೊಂಡ ಮಾನವನ ಮನಸ್ಸಿನಿದ್ದಲ್ಲಿ ಮಹಾದೇವನ ಸಾಕ್ಷಾತ್ಕಾರ ಸಾಧ್ಯ ವೆಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.
ನಗರದ ವೆಂಕಾಭೋವಿ ಕಾಲೋನಿಯ ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ, ಭೋವಿ ಗುರುಪೀಠ ದಾವಣಗೆರೆ ಶಾಖಾಮಠದ ಆವರಣದಲ್ಲಿ ಜರುಗಿದ ಶಿವಯೋಗಿ ಶ್ರೀ ಸಿದ್ಧರಾಮೇಶ್ವರ ದೇವರ 61ನೇ ರಥೋತ್ಸವದ ಪ್ರಯುಕ್ತ ಧರ್ಮ ಧ್ವಜಾರೋಹಣ ಜರುಗಿದ ಸಮಾರಂಭದ ದಿವ್ಯ ಅಧ್ಯಕ್ಷತೆ ವಹಿಸಿ ಶ್ರೀಗಳು ಮಾತನಾಡಿದರು.
ದೇವರ ನಿಜ ಸ್ವರೂಪ ನಮ್ಮ ಇಂದ್ರಿಯ, ಮನಸ್ಸು, ಬುದ್ಧಿಗಳಿಗಿಂತ ಎಷ್ಟೋ ಪಟ್ಟು ಸೂಕ್ಷ್ಮವಾದುದು. ಔನ್ನತ್ಯದಲ್ಲಿ ಯಾವ ಎಣಿಕೆಗೂ ನಿಲುಕದ್ದು. ಹಾಗಿರುವಾಗ, ಅತಿಸೂಕ್ಷ್ಮವಾದ ಪರ ಮಾಣುವನ್ನು ನಮ್ಮ ಕಣ್ಣು ಹೇಗೆ ನೋಡಲಾರವೋ ಹಾಗೆ, ಎಲ್ಲ ಸೂಕ್ಷ್ಮ ವಸ್ತುಗಳಿಗಿಂತಲೂ ಸೂಕ್ಷ್ಮವಾಗಿರುವ ಭಗವಂತನನ್ನು ನಮ್ಮ ಯಾವ ದೈಹಿಕ ಯಂತ್ರಗಳೂ ಗ್ರಹಿಸಲಾರವು.
ಭಗವಂತನನ್ನು ಕಾಣಲು ಸಾಮಾನ್ಯ ಕಣ್ಣು, ಸಾಮಾನ್ಯ ಮನಸ್ಸು ಸಾಲದು. ವಿಶೇಷ ಮನಸ್ಸು, ವಿಶೇಷ ಬುದ್ದಿ ಬೇಕು. ಅಂಥ ಹೊಸ ದೃಷ್ಟಿ ಬರಬೇಕಾದರೆ ಅಧ್ಯಾತ್ಮಿಕ ಸಾಧನೆ ಅಗತ್ಯ. ದೈಹಿಕ ಮಾನಸಿಕ ಪರಿಶುದ್ಧತೆ ಅಗತ್ಯ. ಆದ್ದರಿಂದ ಸತ್ಯದ ಬೆಳಕಲ್ಲಿ ತೆರೆದುಕೊಳ್ಳುವ ಮನಸ್ಸುಗಳು ಶುಭ್ರವಾಗಿರುತ್ತವೆ. ತಮ್ಮನ್ನು ಅಡಿಗಡಿಗೂ ಅಳೆದು ತೂಗಿ ನೋಡುವ, ವಿಮರ್ಶೆಯ ನಿಕಷಕ್ಕೊಡ್ಡಿ ಪರೀಕ್ಷಿಸಿಕೊಳ್ಳುವ ಅಪರೂಪದ ಗುಣವನ್ನು ಬೆಳೆಸಿಕೊಂಡವರು ಮಾತ್ರ ಮನಸ್ಸಿನಿಂದ ಮಹಾದೇವನ ಸಾಕ್ಷಾತ್ಕಾರ ಮಾಡಿಕೊಳ್ಳುತ್ತಾನೆ. ಎಂದು ಹೇಳಿದರು.
ಈ ಸಂದರ್ಭದಲ್ಲಿ ಭೋವಿ ಸಮಾಜದ ಮುಖಂಡರಾದ ಡಿ.ಬಸವರಾಜ್, ಇಂಜಿನಿಯರ್ ಹೆಚ್.ವೆಂಕಟೇಶ್, ಎ.ಬಿ. ನಾಗರಾಜ್, ಎಚ್.ಹೇಮರಾಜ್, ಪಿ.ಶ್ರೀನಿವಾಸ್, ಪಿ.ಮಂಜುನಾಥ್, ಹೆಚ್.ಗಣೇಶ್, ಮಲೆಬೆನ್ನೂರು ಮಂಜಣ್ಣ, ಹರಿಹರ ಆದಾಪುರ ವೀರಭದ್ರಪ್ಪ, ಶಿವಣ್ಣ, ತರಕಾರಿ ಮೂರ್ತ್ಯಪ್ಪ, ಶೇಖರಪ್ಪ ಹಾಗೂ ಮತ್ತಿತರರು ಉಪಸ್ಥಿತರಿದ್ದರು.