ಕಲೆ, ಸಾಹಿತ್ಯ, ರಂಗ ಚಟುವಟಿಕೆ ಗ್ರಾಮೀಣ ಭಾಗದಲ್ಲಿ ಇನ್ನೂ ಜೀವಂತ

ಕಲೆ, ಸಾಹಿತ್ಯ, ರಂಗ ಚಟುವಟಿಕೆ  ಗ್ರಾಮೀಣ ಭಾಗದಲ್ಲಿ ಇನ್ನೂ ಜೀವಂತ

ಹರಪನಹಳ್ಳಿ : ನಾಟಕ ಪ್ರದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಕೆ.ಮಲ್ಲಪ್ಪ

ಹರಪನಹಳ್ಳಿ, ಆ. 13- ಕಲೆ, ಸಾಹಿತ್ಯ ಹಾಗೂ ರಂಗಭೂಮಿ ಚಟುವಟಿಕೆಗಳು ಇಂದು ಉಳಿದಿವೆಯಾದರೂ ಅದು ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ ಎಂದು ವಲಯ ಅರಣ್ಯಾಧಿಕಾರಿ ಕೆ.ಮಲ್ಲಪ್ಪ ತಿಳಿಸಿದರು.

ತಾಲ್ಲೂಕಿನ ಬಾಗಳಿ ಗ್ರಾಮದ ಶಂಕ್ರಮ್ಮ ದಿ.ಬಿ.ಕೆಂಚಪ್ಪ ಸಮುದಾಯ ಭವನದಲ್ಲಿ ಕತ್ತಲೆ ಬೆಳಕು ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಸೋಬಾನೆ ಪದ, ರಂಗಗೀತೆ ಮತ್ತು ನಾಟಕ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹಳ್ಳಿಗಳಲ್ಲಿ ಯಾವುದೇ ಹಬ್ಬಗಳು ಬಂದರೆ ಅತ್ಯಂತ ಸಡಗರದಿಂದ ನಾಟಕ ಪ್ರದರ್ಶನಗಳು ಸ್ಪರ್ಧೆಯಲ್ಲಿ ನಡೆಯುತ್ತಿದ್ದವು, ಆದರೆ ಮೊಬೈಲ್ ಹಾವಳಿಯಿಂದ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗಿದೆ ಎಂದರು.

ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಬಣಕಾರ ರಾಜಶೇಖರ್ ಮಾತನಾಡಿ, ಬಾಗಳಿ ಗ್ರಾಮದಲ್ಲೂ ಸಹ ಅನೇಕ ವರ್ಷಗಳಿಂದ ಐತಿಹಾಸಿಕ ಪ್ರಧಾನ ಗೋಣಿ ಬಸವೇಶ್ವರ ನಾಟಕ ಪ್ರದರ್ಶನ ನಡೆಯುತ್ತಿದೆ. ಇದರಲ್ಲಿ ಅನೇಕ ಕಲಾವಿದರು ಕೆಲಸ ನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿ ಯಾಗಿದೆ ಎಂದರು.

ತಾಲ್ಲೂಕಿನಲ್ಲಿ ಐತಿಹಾಸಿಕವಾಗಿ, ಸಾಂಸ್ಕೃತಿಕವಾಗಿ, ಕಲಾತ್ಮಕವಾಗಿ ಗುರುತಿಸಿಕೊಂಡಿದ್ದು, ಜಾನಪದ, ಸೋಬಾನೆ, ವೇಷಗಾರರು, ನಾಟಕ, ಸೇರಿದಂತೆ ಅನೇಕ ಸಾಂಸ್ಕೃತಿಕ ಚಟುವಟಿಕೆಗಳು ಜರುಗುತ್ತಿದ್ದು, ಇನ್ನಷ್ಟು ಇಮ್ಮಡಿಯಾಗಬೇಕಿದೆ ಎಂದು ಹೇಳಿದರು.

ಬಂಡಿ ಚೌಡಮ್ಮದೇವಿ ಸೋಬಾನೆ ಕಲಾವಿದರ ಸಂಘದ ಸಿ.ರಂಗಮ್ಮನವರ ತಂಡದಿಂದ ಸೋಬಾನ ಪದ ಗಾಯನ, ಬಣಕಾರ ರೇವಣ್ಣ ಮತ್ತು ಶಿವಯೋಗಿ ಇವರಿಂದ ರಂಗಗೀತೆ ಗಾಯನ ನಡೆಯಿತು.

ಚಂದ್ರಶೇಖರ ಕಂಬಾರ ರಚನೆಯ `ಬೆಪ್ಪತಕ್ಕಡಿ ಬೋಳೆಶಂಕರ’ ನಾಟಕ ಮರಿಯಮ್ಮನಹಳ್ಳಿ ಮಲ್ಲೇಶ ಮಾಲ್ವಿ ಮೈದುರು ಇವರ ತಂಡದಿಂದ ಪ್ರದರ್ಶನಗೊಂಡಿತು. 

ಗ್ರಾ.ಪಂ. ಅಧ್ಯಕ್ಷೆ ಉತ್ತಂಗಿ ರೇಣುಕ ನಾಗರಾಜ, ಟ್ರಸ್ಟ್ ಅಧ್ಯಕ್ಷ ಅರುಣ್ ಕುಮಾರ ಮೇದಾರ, ಟಿ.ಶ್ಯಾಮಲ, ಪಿ.ಕರಿಬಸಪ್ಪ, ಕನಕೇಶ್ವರ ಕಲಾ ಸಂಘದ ಅಧ್ಯಕ್ಷ ವಿ.ಬಿ.ವಿರೇಶ್, ಬಣಕಾರ ಮಂಜುನಾಥ, ಮುದ್ದಜ್ಜಿ ಚಿನ್ನಜ್ಜ, ಸಿ.ರಂಗಮ್ಮ, ಹನುಮನಗೌಡ, ಮಡಿವಾಳಜ್ಜ ಸೇರಿದಂತೆ ಇತರರು ಇದ್ದರು.

error: Content is protected !!