ದಾವಣಗೆರೆ, ಆ. 13 – ಕವಿಗಳು ಮಾತನಾಡಬಾರದು, ಕವಿತೆಗಳು ಮಾತನಾಡಬೇಕು. ಕವಿ ಎಂದರೆ ಕಂಡದ್ದನ್ನೆಲ್ಲ ವಿಮರ್ಶೆ ಮಾಡುವವ. ಕಾವ್ಯ ಅತ್ಯಂತ ಶಕ್ತಿಶಾಲಿ ಮಾಧ್ಯಮ ಎಂದು ಹಿರಿಯ ಸಾಹಿತಿ ವೀರಭದ್ರಪ್ಪ ತೆಲಗಿ ಪ್ರತಿಪಾದಿಸಿದರು.
ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಜಿಲ್ಲಾ ಸಮಿತಿ ವತಿಯಿಂದ ಸ್ಥಳೀಯ ವಿನೋಬ ನಗರದ ಜ.ಜ.ಮು. ಪ್ರೌಢಶಾಲೆಯಲ್ಲಿ ಇಂದು ಹಮ್ಮಿಕೊಂಡಿದ್ದ ‘ತುಂಗಭದ್ರೆ’ ಶೀರ್ಷಿಕೆಯಡಿ ಕವಿಗೋಷ್ಠಿಯಲ್ಲಿ ಅವರು ಸುಮಾರು 20ಕ್ಕೂ ಹೆಚ್ಚು ಕವಿಗಳ ಕವಿತೆಗಳ ಕುರಿತು ಮನೋಘ್ನವಾಗಿ ಮಾತನಾಡಿದರು.
ಪ್ರಾಸ್ತಾವಿಕ ನುಡಿಗಳನ್ನು ಕಾರ್ಯದರ್ಶಿ ಪ್ರಶಾಂತ್ ಕೋಲ್ಕುಂಟೆ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ನಡೆದು ಬಂದ ದಾರಿಯ ಪಕ್ಷಿನೋಟವನ್ನು ತಿಳಿಸಿದರು.
ದಾವಣಗೆರೆ ಘಟಕದ ಸಂಚಾಲಕ ಅಣಬೇರು ತಾರೇಶ್ ಸ್ವಾಗತಿಸಿದರು. ಕವಯತ್ರಿ ಉಮಾದೇವಿ ಪ್ರಾರ್ಥಿಸಿದರು. ತಾಲ್ಲೂಕು ಕಾರ್ಯದರ್ಶಿ ಪಂಚಾಕ್ಷರಯ್ಯ ವಂದಿಸಿದರು. ಮಾಧ್ಯಮ ಸಂಪರ್ಕ ಪ್ರಮುಖರಾದ ಶ್ರೀಮತಿ ಸುನೀತಾ ಪ್ರಕಾಶ್ ನಿರೂಪಿಸಿದರು. ಜಿಲ್ಲಾ ಸಹ ಸಂಯೋಜಕ ಅಮರೇಶ, ಶಿಕ್ಷಕ ರುದ್ರೇಶ್ ಮತ್ತು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.