ವಿದ್ಯಾರ್ಥಿ ನಿಲಯಗಳು ಮಕ್ಕಳ ಉಜ್ವಲ ಭವಿಷ್ಯ ರೂಪಿಸುವ ಕೇಂದ್ರಗಳು

ವಿದ್ಯಾರ್ಥಿ ನಿಲಯಗಳು ಮಕ್ಕಳ ಉಜ್ವಲ ಭವಿಷ್ಯ ರೂಪಿಸುವ ಕೇಂದ್ರಗಳು

ಭಾವುಕರಾದ ಶಾಸಕ ದೇವೇಂದ್ರಪ್ಪ 

80ರ ದಶಕದಲ್ಲಿ ಪ್ರೌಢಶಾಲೆ ವ್ಯಾಸಂಗ ಮಾಡುತ್ತಿರುವಾಗ ಸರ್ಕಾರಿ ಹಾಸ್ಟೆಲ್ ಸಿಗದಿದ್ದಾಗ ಬಿಡಿಓ ಅವರ ಶಿಫಾರಸ್ಸಿನ ಮೇರೆಗೆ ಹಾಸ್ಟೆಲ್ ಸೌಲಭ್ಯ ಪಡೆದರೂ ಹಾಸಿಗೆ, ಹೊದಿಕೆ ವಿತರಣೆ ವಿಳಂಬವಾದ ವೇಳೆ ನಾನು ಗೋಣಿ ಚೀಲವನ್ನು ಹೊದಿಕೆಯಾಗಿಸಿಕೊಂಡಿದ್ದೆ. ಇದೀಗ ಐಷರಾಮಿ ಬದುಕು ಅನುಭವಿಸುತ್ತಿರುವೆ. ಕಡುಬಡತನದಲ್ಲಿ ಜನಿಸಿದ ನಾನು ಶಾಸಕನಾಗಿ ಹಾಸ್ಟೆಲ್‌ನ ಲೋಕಾರ್ಪಣೆ ಸಂತಸ ತಂದಿದೆ.

ಬಿ. ದೇವೇಂದ್ರಪ್ಪ, ಶಾಸಕರು, ಜಗಳೂರು

ಜಗಳೂರು, ಆ.11- ಗ್ರಾಮೀಣ ಭಾಗದಲ್ಲಿರುವ ವಿದ್ಯಾರ್ಥಿನಿಲಯಗಳು   ಮಕ್ಕಳ ಉಜ್ವಲ ಭವಿಷ್ಯ ರೂಪಿಸುವ ಕೇಂದ್ರಗಳಾಗಿದ್ದು, ಇದರ ಸದುಪಯೋಗಪಡೆದುಕೊಳ್ಳಬೇಕು ಎಂದು ಶಾಸಕ ಬಿ.ದೇವೇಂದ್ರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಲ್ಲೂಕಿನ ಗುತ್ತಿದುರ್ಗ ಗ್ರಾಮದಲ್ಲಿ ಬಿಸಿಎಂ ಇಲಾಖೆ ನೂತನ ಕಟ್ಟಡ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲಿ ಕಾಯಕ ಮನೋಭಾವ ಮೈಗೂಡಿಸಿ ಕೊಳ್ಳಬೇಕಿದೆ. ಅಕ್ಷರ, ಅನ್ನ, ಅಧ್ಯಾತ್ಮಿಕತೆಗಳ  ತ್ರಿವಿಧದ ದಾಸೋಹ  ಕೇಂದ್ರಗಳು ಹಾಸ್ಟೆಲ್‌ಗಳಾಗಿವೆ. ತಾಲ್ಲೂಕಿನ ಉದ್ಗಟ್ಟ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿಶಾಲೆಯಲ್ಲಿ ವ್ಯವಸ್ಥೆ, ವಿದ್ಯಾರ್ಥಿಗಳ ತೇಜಸ್ಸು ಕಂಡು ಮೂಕವಿಸ್ಮಿತ ನಾಗಿದ್ದೇನೆ ಎಂದರು.

ಹಿಂದುಳಿದವರಿಗೆ ಅಧಿಕಾರ, ಅವಕಾಶಗಳ ಹೆಬ್ಬಾಗಿಲು ತೆರೆದ ಮುತ್ಸದ್ದಿ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರು ಯುವ ಪೀಳಿಗೆಗೆ ಆದರ್ಶವಾಗಬೇಕು. ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳ ಕ್ರಾಂತಿಯ ಹರಿಕಾರರಾಗಿದ್ದರು ಎಂದು ದೇವೇಂದ್ರಪ್ಪ ಬಣ್ಣಿಸಿದರು.

ಮಾಜಿ ಶಾಸಕ ಎಸ್.ವಿ‌.ರಾಮಚಂದ್ರ ಮಾತ ನಾಡಿ, ನನ್ನ ಆಡಳಿತಾವಧಿಯಲ್ಲಿ ವಿದ್ಯಾರ್ಥಿನಿಲಯಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದೆ. ಇದೀಗ ಲೋಕಾರ್ಪಣೆ ಗೊಂಡಿದೆ. ಮಕ್ಕಳ ಉಜ್ವಲ ಭವಿಷ್ಯ ರೂಪಿಸಲಿ. ತಾಲ್ಲೂಕಿಗೆ ಕೀರ್ತಿ ತರಬೇಕು ಎಂದರು. 

ನೀರಾವರಿ ಯೋಜನೆಗಳು ಸೇರಿದಂತೆ  ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಶಾಸಕರಿಗೆ ಸಂಪೂರ್ಣಬೆಂಬಲವಿದೆ ಎಂದು ಮಾಜಿ ಶಾಸಕರು ತಿಳಿಸಿದರು.

ಕೆಪಿಸಿಸಿ ಎಸ್‌ಟಿ ಘಟಕದ ರಾಜ್ಯಾಧ್ಯಕ್ಷ  ಕೆ.ಪಿ.ಪಾಲಯ್ಯ ಮಾತನಾಡಿ, ಹಿಂದುಳಿದ ವರ್ಗ ಪರಿಶಿಷ್ಟ ಸಮುದಾಯ ಹೆಚ್ಚಾಗಿರುವ ತಾಲ್ಲೂಕಿನಲ್ಲಿ ನದಿಮೂಲ, ಗಣಿಗಾರಿಕೆಗಳಿಲ್ಲದ ತಾಲ್ಲೂಕಿನಲ್ಲಿ
ಶಿಕ್ಷಣದ ಪ್ರಗತಿಗೆ ಹಾಸ್ಟೆಲ್ ಸೌಲಭ್ಯಗಳು ಅಗತ್ಯವಿದೆ‌. ಬಡತನದ ಮಧ್ಯೆ ಬೆಳೆದು
ಮಕ್ಕಳಿಗೆ ಶಿಕ್ಷಣ ಕೊಡಿಸಿ ಮಕ್ಕಳನ್ನೇ
ಆಸ್ತಿಯನ್ನಾಗಿಸಿದ ಶಾಸಕ ದೇವೇಂದ್ರಪ್ಪ ಅವರು ಮಾದರಿಯಾಗಿದ್ದಾರೆ ಎಂದು ಹೇಳಿದರು.

ಬಿಸಿಎಂ ಇಲಾಖೆ ಜಿಲ್ಲಾಧಿಕಾರಿ ಗಾಯಿತ್ರಿ ಮಾತನಾಡಿ, 50 ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದರೂ, ಹಾಸ್ಟೆಲ್ ಪ್ರಾರಂಭವಾಗದೇ ಇರುವುದು ಬೇಸರ ತಂದಿತ್ತು. ವಿವಿಧ ಗ್ರಾಮಗಳಲ್ಲಿ ಆರಂಭಿಸುವ  ಗೊಂದಲದ ನಿರ್ಧಾರಕ್ಕೆ ಕಟ್ಟಡದ ಕೊರತೆಗೆ  ತೆರೆ ಎಳೆದು ಶಾಸಕರ ಕಾಳಜಿಯಿಂದ ಬಡಮಕ್ಕಳಿಗಾಗಿ ಗುತ್ತಿದುರ್ಗದಲ್ಲಿ ಆರಂಭವಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ಮಾನಸ ನಿಂಗಪ್ಪ, ಉಪಾಧ್ಯಕ್ಷ ಅರ್ಜುನ್, ಬಿಸಿಎಂ ವಿಸ್ತರಣಾಧಿಕಾರಿ ಆಸ್ಮಾಬಾನು, ಪ್ರಭಾರಿ ಬಿಇಓ ಸುರೇಶ್ ರೆಡ್ಡಿ, ಎಸ್‌ಡಿಎಂಸಿ ಅಧ್ಯಕ್ಷ ಕಲ್ಲೇಶ್, ಮುಖಂಡರಾದ ಸಿದ್ದಪ್ಪ, ಸಣ್ಣಸೂರಯ್ಯ, ಪ್ರಕಾಶ್ ರೆಡ್ಡಿ, ಪಲ್ಲಾಗಟ್ಟೆ ಶೇಖರಪ್ಪ, ಬಿ.ಮಹೇಶ್ವರಪ್ಪ, ರೇವಣಸಿದ್ದಪ್ಪ, ಶಿವಣ್ಣ, ಮುಖ್ಯಶಿಕ್ಷಕಿ ಶಿವಮ್ಮ, ನಿಲಯ ಮೇಲ್ವಿಚಾರಕ  ದೇವೇಂದ್ರಪ್ಪ ಹಾಗೂ ಗ್ರಾಮಸ್ಥರು ಇದ್ದರು.

error: Content is protected !!