ಅಪೌಷ್ಟಿಕತೆ ತಡೆಗೆ ಸ್ತನ್ಯಪಾನ ಅತ್ಯಂತ ಮಹತ್ವಪೂರ್ಣ

ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಆರೋಗ್ಯಾಧಿಕಾರಿ ಡಾ. ದೇವರಾಜ ಪಟಗೆ

ದಾವಣಗೆರೆ, ಆ. 11- ಮಗುವನ್ನು ನ್ಯೂಮೋನಿಯಾ ಅತೀಸಾರ ಭೇದಿ ಅಪೌಷ್ಠಿಕತೆ ಇವುಗಳಿಂದ ತಡೆಗಟ್ಟಲು ಸ್ತನ್ಯಪಾನವು ಅತ್ಯಂತ ಮಹತ್ವಪೂರ್ಣ ಪಾತ್ರ ವಹಿಸುತ್ತದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ದೇವರಾಜ ಪಟಗೆ ತಿಳಿಸಿದರು.

ಬುಧವಾರ ಬಾಷಾ ನಗರದಲ್ಲಿರುವ  ಪ್ರಸೂತಿ ಆರೈಕೆ ಕೇಂದ್ರದಲ್ಲಿ ಜರುಗಿದ ವಿಶ್ವ ಸ್ತನ್ಯಪಾನ ಸಪ್ತಾಹ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಹೆರಿಗೆ ಪ್ರಮಾಣ ಹೆಚ್ಚಾಗಿದ್ದರೂ ಸಹ ತಾಯಿ ಮಗುವಿಗೆ ಎದೆ ಹಾಲು ಕುಡಿಸುವ ಪ್ರಮಾಣ ಕಡಿಮೆ ಆಗಿದೆ. ಮಗುವಿಗೆ 6 ತಿಂಗಳವರೆಗೆ ಕೇವಲ ಎದೆ ಹಾಲನ್ನು ಮಾತ್ರ ಉಣಿಸಬೇಕು. ಇದರಿಂದ ಶಿಶುಗಳಿಗೆ ಬರುವಂತಹ ಸೋಂಕು ರೋಗಗಳನ್ನು ತಡೆಗಟ್ಟಿ, ಶಿಶು ಮರಣಗಳನ್ನು ತಪ್ಪಿಸಬಹುದು ಎಂದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಹೆಚ್.ಉಮಾಪತಿ  ಮಾತನಾಡಿ,  ನಮ್ಮ ಆಸ್ಪತ್ರೆಯಲ್ಲಿ ಹೆರಿಗೆ ಸೇವೆಗಳಿಗೆ ದಾಖಲಾಗುವ ಎಲ್ಲಾ ತಾಯಂದಿರಿಗೂ ಸ್ತನ್ಯ ಪಾನವನ್ನು ಸಕ್ರಿಯವಾಗಿ ಬೆಂಬಲಿಸಲು,   ಉತ್ತೇಜಿಸಲು   ಸಾಧ್ಯವಿರುವ ಎಲ್ಲಾ ಪ್ರಯತ್ನವನ್ನು ಮಾಡುತ್ತೇವೆ . ಪ್ರಸವ ನಂತರದ ಆರೈಕೆಯಲ್ಲಿ  ಕಡ್ಡಾಯವಾಗಿ 6 ತಿಂಗಳು ಸಂಪೂರ್ಣ ಸ್ತನ್ಯಪಾನವನ್ನು ಅಭ್ಯಾಸ ಮಾಡಲು ತಾಯಂದಿರಿಗೆ ಬೆಂಬಲ ನೀಡುತ್ತೇವೆ ಎಂಬ ಪ್ರತಿಜ್ಞೆಯನ್ನು ಬೋಧಿಸಿದರು.

ಪ್ರಸೂತಿ ವೈದ್ಯಾಧಿಕಾರಿ ಡಾ. ರೇಖಾ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವೆಂಕಟಾಚಲ ಕುಮಾರ್  ಟಿ.ಎಸ್,  ಆರೋಗ್ಯ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

error: Content is protected !!