ರಾಣೇಬೆನ್ನೂರು, ಆ.10- ಮಕ್ಕಳಾಗದೇ ಇರುವ ಪೋಷಕರು, ಚಿಂತಿಸಬೇಕಾಗಿಲ್ಲ, ಹಾಲೇಶಪ್ಪ ಬಂಗೀಗೌಡ್ರ ರಂತೆ ಅನಾಥ ಮಕ್ಕಳನ್ನು ದತ್ತು ಪಡೆದು ಸ್ವಂತ ಮಕ್ಕಳಂತೆ ಬೆಳೆಸಿ, ಪೋಷಿಸಿ ತಂದೆ-ತಾಯಿಯ ಪ್ರೀತಿ ತೋರಿಸಿ, ಮಕ್ಕಳಿಲ್ಲ ಎಂಬ ಕೊರಗನ್ನು ದೂರ ಮಾಡಿಕೊಳ್ಳುವುದು ಒಂದು ಕಡೆಯಾದರೆ, ತಂದೆ-ತಾಯಿಯನ್ನು ಕಳೆದುಕೊಂಡು ಬೀದಿ ಪಾಲಾಗಿ ಯಾರೂ ಇಲ್ಲ, ಅನಾಥರು ಎಂಬ ಅನಾಥ ಮಕ್ಕಳಲ್ಲಿರುವ ನೋವನ್ನು ಕೂಡ ದೂರ ಮಾಡಿ ಆದರ್ಶಮಯ ಜೀವನ ಸಾಗಿಸಬಹುದೆಂಬುದನ್ನು ಹಾಲೇಶಪ್ಪ ಮತ್ತು ಆತನ ಪತ್ನಿ ರತ್ನಮ್ಮ ತೋರಿಸಿಕೊಟ್ಟಿದ್ದಾರೆ. ಅವರ ಈ ಕಾರ್ಯ ಶ್ಲ್ಯಾಘನೀಯ ಎಂದು ಶಾಸಕ ಪ್ರಕಾಶ್ ಕೆ. ಕೋಳಿವಾಡ ಹೇಳಿದರು.
ಅವರು ಹೊಳೆಆನ್ವೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಾಲೇಶಪ್ಪ ಬಂಗೀಗೌಡ್ರ ತಮಗೆ ಮಕ್ಕಳಾಗದೇ ಇದ್ದಾಗ, ಎಳೆ ಕೂಸು ಇದ್ದಾಗಲೇ ಅನಾಥ ಹೆಣ್ಣು ಮಗು ವೊಂದನ್ನು ತೆಗೆದುಕೊಂಡು ಸ್ವಂತ ಮಗಳಂತೆ ಪೋಷಿಸಿ, ಬೆಳೆಸಿ ಆಕೆ ಬದುಕಿ ಬಾಳಬೇಕಾದ 14 ನೇ ವಯಸ್ಸಿಗೆ ವಿಷಮ ಶೀತ ಜ್ವರಕ್ಕೆ ಬಲಿಯಾದಾಗಿನಿಂದ ಮಗಳ ಚಿಂತೆಯ ಲ್ಲಿಯೇ ದಂಪತಿ ಕೊರುಗುತ್ತಿದ್ದು, ಅವಳ ಅಗಲಿಕೆಯ ನೋವನ್ನು ಭರಿಸಲಾಗದಂತಹ ಸ್ಥಿತಿಯಲ್ಲಿದ್ದರೂ ಕೂಡ ಮೃತಪಟ್ಟ ಮಗಳು ಕವಿತಾಳ ಸವಿನೆನಪಿ ಗಾಗಿ ಪ್ರತಿವರ್ಷ ಆ ಶಾಲೆಯ ಎಲ್ಲಾ ಮಕ್ಕಳಿಗೆ ಉಚಿತವಾಗಿ ನೋಟ್‍ಪುಸ್ತಕ, ಊಟದ ತಟ್ಟೆ ಗಳು, ಪೆನ್ನು ಹಾಗೂ ಇತರೇ ಸಾಮಗ್ರಿಗಳನ್ನು ವಿತರಿಸಿ, ಆತ್ಮ ಸಂತೃಪ್ತಿಯ ಜೊತೆಗೆ ಇತರೇ ಮಕ್ಕಳಲ್ಲಿ ತಮ್ಮನ್ನು ಅಗಲಿದ ಕವಿತಾಳನ್ನು ಕಂಡು ಸಮಾಧಾನ ಪಟ್ಟುಕೊಳ್ಳುವ ಪುಸ್ತಕ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕರು, ಹಾಲೇಶಪ್ಪ-ರತ್ನಮ್ಮ ದಂಪತಿಯ ಬದುಕು ಇತರರಿಗೆ ಮಾದರಿ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ಪಾಟೀಲ ಮಾತನಾಡಿ, ಇಂತಹ ಕಾರ್ಯಕ್ರಮಗಳಿಂದ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುವುದರ ಜೊತೆಗೆ ಮಕ್ಕಳಲ್ಲಿ, ಪೋಷಕರಲ್ಲಿ ಜಾತಿ, ಮತ ಭೇದಗಳನ್ನು ತೊಡೆದುಹಾಕಿ ಮಕ್ಕಳಲ್ಲಿ ದೇವರನ್ನು ಕಾಣಬಹುದಾದ ವಾತಾವರಣ ಸೃಷ್ಟಿಯಾಗುತ್ತದೆ ಎಂದರು.
ನಿವೃತ್ತ ಶಿಕ್ಷಕ ಜೆ.ಎಂ. ಮಠದ ಮಾತನಾಡಿ, ಇಂತಹ ಕಾರ್ಯಕ್ರಮಗಳು ಮನಸ್ಸಿಗೆ ನೆಮ್ಮದಿ ನೀಡುತ್ತವೆ. ಇದು ಮೂರು ದಿನದ ಬದುಕು. ಇಂತಹ ಸತ್ಕಾರ್ಯ ಮಾಡಿ ಪುಣ್ಯಕಟ್ಟಿಕೊಳ್ಳಬೇಕೆಂದರು.
ವೇದಿಕೆಯಲ್ಲಿ ನಗರಸಭೆ ಸದಸ್ಯ ಶಶಿ ಬಸ್ಯನಾಯ್ಕರ, ರಮೇಶ ಹೂಲಿಹಳ್ಳಿ, ಶಾಲಾ ಮುಖ್ಯೋಪಾಧ್ಯಾಯರು ಇದ್ದರು. ಈ ಸಂದ ರ್ಭದಲ್ಲಿ ಹಾಲೇಶಪ್ಪ, ರತ್ನಮ್ಮ ದಂಪತಿಗಳನ್ನು ಸತ್ಕರಿಸಲಾಯಿತು. ಹೊಳೆಆನ್ವೇರಿ, ಮಲಕನ ಹಳ್ಳಿ ಗ್ರಾಮಗಳ ಅಂಗನವಾಡಿ ಮಕ್ಕಳಿಗೂ ಕೂಡ ಅಗತ್ಯವಿರುವ ಪುಸ್ತಕ ವಿತರಿಸಲಾಯಿತು.