`ತುಮ್ಹಾರೆ ಸಿವಾ ಔರ್ ಕೋಯಿ ನಹೀ’ ವಚನ ನೃತ್ಯ ರೂಪಕ; ಪ್ರಧಾನಿ ಮೋದಿ ಪ್ರಶಂಸೆ

`ತುಮ್ಹಾರೆ ಸಿವಾ ಔರ್ ಕೋಯಿ ನಹೀ’ ವಚನ ನೃತ್ಯ ರೂಪಕ; ಪ್ರಧಾನಿ ಮೋದಿ ಪ್ರಶಂಸೆ

`ತುಮ್ಹಾರೆ ಸಿವಾ ಔರ್ ಕೋಯಿ ನಹೀ' ವಚನ ನೃತ್ಯ ರೂಪಕ; ಪ್ರಧಾನಿ ಮೋದಿ ಪ್ರಶಂಸೆ - Janathavaniಸಾಣೇಹಳ್ಳಿ, ಆ.10-  ಇಲ್ಲಿನ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರ ಮಾರ್ಗದರ್ಶನದಲ್ಲಿ ದೇಶದಾದ್ಯಂತ ಸಂಚಾರ ಮಾಡುತ್ತಿರುವ ದೇಶದ ಮೊದಲ ವಚನ ಅಭಿಯಾನ `ತುಮ್ಹಾರೆ ಸಿವಾ ಔರ್ ಕೋಯಿ ನಹೀ’ ಹಿಂದಿ ವಚನ ನೃತ್ಯರೂಪಕ ಪ್ರದರ್ಶನ ತಂಡ,  ಆಂಧ್ರಪ್ರದೇಶ, ತೆಲಂಗಾಣ, ಒಡಿಸ್ಸಾ, ಪಶ್ಚಿಮ ಬಂಗಾಳ, ಜಾರ್ಖಂಡ್, ಬಿಹಾರ್, ಉತ್ತರ ಪ್ರದೇಶ, ದೆಹಲಿ, ಉತ್ತರಖಾಂಡ್ ರಾಜ್ಯಗಳಲ್ಲಿ 5900 ಕಿ.ಮೀ. ಸಂಚರಿಸಿ ಪ್ರಮುಖ ನಗರಗಳಲ್ಲಿ 25 ಪ್ರದರ್ಶನಗಳನ್ನು ನೀಡಿದೆ.

ಅದರಂತೆ ಇತ್ತೀಚೆಗೆ ದೆಹಲಿಯಲ್ಲಿಯೂ ಮೂರು ಪ್ರದರ್ಶನಗಳನ್ನು ನೀಡಿತ್ತು. 

ಈ ಸಂದರ್ಭದಲ್ಲಿ ಕೇಂದ್ರ ಸಚಿವ ಎ. ನಾರಾಯಣ ಸ್ವಾಮಿ ಮತ್ತು ಸಂಸದ ಜಿ.ಎಂ. ಸಿದ್ದೇಶ್ವರ ಅವರು ಪಂಡಿತಾರಾಧ್ಯ ಶ್ರೀಗಳ ಸಾನ್ನಿಧ್ಯದಲ್ಲಿ ತಮ್ಮ ಮನೆಗಳಲ್ಲಿ ಕಲಾವಿದರಿಗೆ ಔತಣ ನೀಡಿದ್ದರು. ಅಲ್ಲಿಗೆ ಆಗಮಿಸಿದ್ದ ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ, ಸಚಿವ ಭಗವಂತ ಖೂಬಾ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಸಂಸದರಾದ ಬಿ.ವೈ. ರಾಘವೇಂದ್ರ, ಉಮೇಶ್ ಜಾಧವ್, ಪಿ.ಸಿ. ಗದ್ದೀಗೌಡರ್, ಎಸ್. ಮುನಿಸ್ವಾಮಿ, ಶಿವಕುಮಾರ್ ಉದಾಸಿ, ಬಸವರಾಜ್, ಕರಡಿ ಸಂಗಣ್ಣ ಮೊದಲಾದವರು ತಂಡದ ಸಾಹಸದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ, ಶುಭ ಕೋರುವು ದರ ಜೊತೆಗೆ ಈ ಬಗ್ಗೆ ಪ್ರಧಾನಮಂತ್ರಿಗಳ ಗಮನ ಸೆಳೆಯುವುದಾಗಿ ಹೇಳಿದ್ದರು. 

ಅದರಂತೆ ಈ ಬಗ್ಗೆ ತಿಳಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಪಂಡಿತಾರಾಧ್ಯ ಶ್ರೀಗಳವರಿಗೆ ಮೇಲ್ ಮೂಲಕ ಪ್ರಶಂಸೆಯ ಸಂದೇಶ ಕಳುಹಿಸಿದ್ದಾರೆ.  

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಂದೇಶದಲ್ಲಿ, ಜಗದ್ಗುರು ಬಸವೇಶ್ವರರ ಹಿಂದಿ ವಚನಗಳನ್ನು `ತುಮ್ಹಾರೆ ಸಿವಾ ಔರ್ ಕೋಯಿ ನಹಿ’ ಎಂಬ ಸಮೂಹ ನೃತ್ಯ ಸಂಯೋಜನೆಯ ರೂಪದಲ್ಲಿ ಪ್ರಸ್ತುತಪಡಿಸಿದ ಬಗ್ಗೆ ತಿಳಿದು ನನಗೆ ಸಂತೋಷವಾಗಿದೆ. ಮನೋರಂಜನೆಯ ಮೂಲಕ ಜಾಗೃತಿ ಮೂಡಿಸುತ್ತಿರುವ ಈ ಪ್ರಯತ್ನ ನಿಜವಾಗಿಯೂ ಶ್ಲ್ಯಾಘನೀಯವಾದುದು.

ಆಧ್ಯಾತ್ಮಿಕ ವ್ಯಕ್ತಿಗಳು ಶತಮಾನಗಳಿಂದ ನಮ್ಮ ದೇಶದ ಉದ್ದಗಲಕ್ಕೂ ವ್ಯಾಪಿಸಿದ್ದಾರೆ. ಜವಾಬ್ದಾರಿ ಮತ್ತು ನ್ಯಾಯದ ನಡವಳಿಕೆಯ ಹಾದಿಯಲ್ಲಿ ನಡೆಯಲು ಜನರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಜೊತೆಗೆ ತಮ್ಮ ಆಳವಾದ ತಿಳುವಳಿಕೆ ಮತ್ತು ಜ್ಞಾನದ ಮೂಲಕ ಜನರ ಮನಸ್ಸನ್ನು  ಪ್ರೇರೇಪಿಸುತ್ತಿದ್ದಾರೆ. ಅಂತಹ ಅಧ್ಯಾತ್ಮಿಕ ನಾಯಕರಲ್ಲಿ ಜಗದ್ಗುರು ಬಸವೇಶ್ವರರು ಶ್ರೇಷ್ಠರು. ಅವರ ಜೀವನ ಮತ್ತು ಆದರ್ಶಗಳು ಮಾನವೀಯತೆಗೆ ಪ್ರಾಯೋಗಿಕವಾಗಿ ಮಾರ್ಗದರ್ಶಿಯಾಗಿವೆ. ಅವರ ಆಲೋಚನೆಗಳು ಅವರ ಸಮಯಕ್ಕಿಂತ ಬಹಳ ಮುಂದಿದ್ದವು ಎನ್ನುವುದಕ್ಕೆ ಶತಮಾನಗಳು ಉರುಳಿದಂತೆ ಅವರ ವಚನಗಳು ಹೆಚ್ಚಿನ ಪ್ರಸ್ತುತತೆಯನ್ನು ಗಳಿಸುತ್ತಾ, ಸಮಯದ ಪರೀಕ್ಷೆಗೇ ನಿಂತಿರುವುದು ಸಾಕ್ಷಿಯಾಗಿದೆ. 

ಜಗದ್ಗುರು ಬಸವೇಶ್ವರರು ಮಾನವ ಜೀವನದ ಪ್ರತಿಯೊಂದು ಸಮಾಜ, ಸಂಸ್ಕೃತಿ ಅಥವಾ ರಾಜಕೀಯ ಅಂಶಗಳನ್ನು ಪ್ರಭಾವಿಸಿದ್ದಾರೆ. ಅವರ ಬೋಧನೆಗಳು ನಮಗೆ ಉತ್ತಮ ಮಾನವರಾಗಲು ಮತ್ತು ನಮ್ಮ ಸಮಾಜವನ್ನು ಬಲಿಷ್ಠ, ದಯೆ ಮತ್ತು ಹೆಚ್ಚು ಸಹಾನುಭೂತಿಯಿಂದ ವರ್ತಿಸಲು ಪ್ರೇರೇಪಿಸುತ್ತವೆ. ಅವರು `ಅನುಭವ ಮಂಟಪ’ದ ಮೂಲಕ ಜನರನ್ನು ಒಗ್ಗೂಡಿಸುವುದಕ್ಕೆ, ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಬೆಳೆಸುವುದಕ್ಕೆ, ಮಹಿಳೆಯರು ಮತ್ತು ಸಮಾಜದ ಹಿಂದುಳಿದ ವರ್ಗಗಳ ಸಬಲೀಕರಣಕ್ಕೆ ಒತ್ತು ನೀಡಿದ್ದರು.

ಅವರ ಉದಾತ್ತ ಬೋಧನೆಗಳು ಸರಳ ಮತ್ತು ಸಂಕ್ಷಿಪ್ತ ರೀತಿಯಲ್ಲಿ ರಚಿತವಾದ ವಚನಗಳ ಮೂಲಕ ಲಕ್ಷಾಂತರ ಜನರನ್ನು ತಲುಪಿವೆ. 

ಡಾ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ಪ್ರಯತ್ನಗಳಿಂದಾಗಿ ಈ ವಚನಗಳು ಈಗ ನೃತ್ಯದಂತಹ ವಿಭಿನ್ನ ಅಭಿವ್ಯಕ್ತಿ ಕಲೆಯ ಮೂಲಕ ಜನರನ್ನು ತಲುಪುತ್ತಿರುವುದು ವಿಶೇಷವಾಗಿದೆ.

ಬಸವಣ್ಣನವರ ವಚನಗಳಲ್ಲಿ ಆಳವಾಗಿ ಬೇರೂರಿರುವ ಜ್ಞಾನ ಸಂಪತ್ತನ್ನು ನೃತ್ಯ ಕಲಾವಿದರನ್ನೊಳಗೊಂಡ ಸಮೂಹ ನೃತ್ಯ ರೂಪಕವು ಯಶಸ್ವಿಯಾಗಿ ಪ್ರದರ್ಶನಗೊಳ್ಳಲಿ. ಹಿಂದಿ, ಪ್ರದರ್ಶನದ ಭಾಷೆಯಾಗಿ ಆಯ್ಕೆಯಾಗಿರುವುದು ಜಗದ್ಗುರು ಬಸವೇಶ್ವರರ ಭವ್ಯ ಸಂದೇಶವನ್ನು ವ್ಯಾಪಕವಾಗಿ ಹರಡಲು ಸಹಾಯ ಮಾಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಭ ಹಾರೈಸಿದ್ದಾರೆ. 

ಪ್ರಧಾನಮಂತ್ರಿಗಳ ಪತ್ರಕ್ಕೆ ಪ್ರತಿಕ್ರಿಯಿಸಿರುವ  ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಮೋದಿ ಅವರು ತಮ್ಮ ನಿಗದಿತ ಕಾರ್ಯಕ್ರಮಗಳ ಕಾರ್ಯಬಾಹುಳ್ಯದ ನಡುವೆಯೂ ನಮ್ಮ ತಂಡದ ಈ ಸಾಹಸದ ಯಾತ್ರೆಯನ್ನು ಮೆಚ್ಚಿ ಶುಭಾಶಯ ಕೋರಿ ಕೂಡಲೇ ಈಮೇಲ್ ಮೂಲಕ ನಮಗೆ ಪತ್ರ ಬರೆದಿರುವುದು ಸಂತೋಷ ತಂದಿದೆ ಎಂದಿದ್ದಾರೆ. 

error: Content is protected !!