ಹರಪನಹಳ್ಳಿ, ಆ.4- ತಾಲ್ಲೂಕಿನ ಲಕ್ಷ್ಮೀಪುರ ಗ್ರಾಮ ಪಂಚಾಯಿತಿಯಲ್ಲಿ ಶುಕ್ರವಾರ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿದೆ.
ಒಟ್ಟು 16 ಸಂಖ್ಯಾ ಬಲವಿರುವ ಗ್ರಾಮ ಪಂಚಾಯಿತಿಯಲ್ಲಿ ಒಬ್ಬರು ರಾಜೀನಾಮೆ ನೀಡಿದ್ದು, 15 ಸದಸ್ಯರಲ್ಲಿ ಒಬ್ಬರು ಗೈರಾಗಿದ್ದು 14 ಜನ ಸದಸ್ಯರ ಕೋರಂನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪಿ.ಟಿ.ಭರತ್ ಮತ್ತು ಹೇಮರಾಜನಾಯ್ಕ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷರಾಗಿ ಪಿರೀಬಾಯಿ ಹನುಮಂತನಾಯ್ಕ ಮಾತ್ರ ನಾಮಪತ್ರ ಸಲ್ಲಿಸಿದ್ದರು.
ಬಳಿಕ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದು ಪಿ.ಟಿ.ಭರತ್ ಅವರು 11 ಮತ ಪಡೆಯುವ ಮೂಲಕ ಎರಡನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಒಬ್ಬರೇ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಪಿರೀಬಾಯಿ ಹನುಮಂತನಾಯ್ಕ ಅವಿರೋಧವಾಗಿ ಆಯ್ಕೆಯಾದರು. ಚುನಾವಣಾಧಿ ಕಾರಿಯಾಗಿ ಜಯರಾಜ್ ಕರ್ತವ್ಯ ನಿರ್ವಹಿಸಿದರು. ಈ ಸಂದರ್ಭದಲ್ಲಿ ಪಿಡಿಓ ಬೋರಯ್ಯ, ಮುಖಂಡರಾದ ಪಿ.ಟಿ.ಅವಿನಾಶ, ರವಿನಾಯ್ಕ, ಉಮೇಶನಾಯ್ಕ, ಪವನಕುಮಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.