ಹರಪನಹಳ್ಳಿ, ಆ.2- ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಮೂಲ ಭೂತ ಸೌಕರ್ಯ ಒದಗಿಸುವುದು ಸೇರಿದಂತೆ ವಿವಿಧ ಅಭಿವೃದ್ಧಿ ಕೈಗೊಳ್ಳಲು ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ತಿಳಿಸಿದರು.
ಅವರು ಜಿಲ್ಲಾಧಿಕಾರಿಯಾಗಿ ಹೊಸಪೇಟೆಗೆ ಆಗಮಿಸಿದ ನಂತರ ಪ್ರಥಮ ಬಾರಿಗೆ ಹರಪನಹಳ್ಳಿ ಪಟ್ಟಣಕ್ಕೆ ಬುಧವಾರ ಆಗಮಿಸಿ, ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ್ದರು.
ಆಸ್ಪತ್ರೆಯ ಔಷಧಿ ದಾಸ್ತಾನು ಕೊಠಡಿ, ಒಳರೋಗಿಗಳ ಯೋಗಕ್ಷೇಮ ವಿಚಾರಿಸಿ, ಕುಂದು -ಕೊರತೆ ಆಲಿಸಿದರು. ಅಡುಗೆ ತಯಾರಿಸುವ ಕೊಠಡಿ, ಐಸಿಯು ಹಾಗೂ ಡಯಾಲಿಸಿಸ್ ಘಟಕ ಹಾಗೂ ಮಕ್ಕಳ ವಾರ್ಡ್‌ಗಳನ್ನು ಪರಿಶೀಲಿಸಿದರು.
ಆಹಾರ ದಾಸ್ತಾನು ಕೊಠಡಿ ಪರಿಶೀಲಿಸಿದ ಅವರು, ಕಳಪೆ ಮೊಟ್ಟೆಗಳನ್ನು ನೋಡಿ ಸಿಟ್ಟೆಗೆದ್ದು, ಮೊಟ್ಟೆ ಸರಬರಾಜು ಮಾಡುವ ಏಜೆನ್ಸಿಯವರಿಗೆ ನೋಟಿಸ್ ನೀಡಲು ವೈದ್ಯಾಧಿಕಾರಿಗೆ ಸೂಚಿಸಿದರು.
ಆಸ್ಪತ್ರೆಯ ಆವರಣದಲ್ಲಿ ನಿರ್ಮಾಣ ಹಂತದಲ್ಲಿರುವ ಓವರ್‍ಹೆಡ್ ಕಾಮಗಾರಿ ವಿಕ್ಷಿಸಿ, ಸ್ಥಗಿತಗೊಂಡಿರುವ ಬಗ್ಗೆ ವಿಚಾರಿಸಿ ಸಂಬಂಧಪಟ್ಟ ಗುತ್ತಿಗೆದಾರರಿಗೆ ನೋಟಿಸ್ ನೀಡಲು ತಿಳಿಸಿದರು. ಆಸ್ಪತ್ರೆಯ ಆವರಣದಲ್ಲಿರುವ ಆಕ್ಸಿ ಜನ್ ಘಟಕವನ್ನು ಸಹ ಪರಿಶೀಲಿಸಿ ದರು. ಕೆಲವರಿಂದ ದೂರು ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಯ ದಂತವೈದ್ಯರಿಗೆ ನೋಟಿಸ್ ನೀಡಲು ಅವರು ಸೂಚಿಸಿದರು. ಸ್ತ್ರೀರೋಗ ವೈದ್ಯರ ಕೊರತೆಯನ್ನು ಶೀಘ್ರವೇ ನೀಗಿಸುವುದಾಗಿ ಹೇಳಿದರು.
ಆಸ್ಪತ್ರೆಯ ಮುಂಭಾಗ ಹೊರರೋಗಿ ನೋಂದಣಿ ಕೌಂಟರ್ ಎದುರು ರೋಗಿಗಳು ಕುಳಿತುಕೊಳ್ಳಲು ಛಾವಣಿಯನ್ನು ಹಾಕಿಸಲು ಅನುದಾನ ನೀಡುವುದಾಗಿ ಅವರು ತಿಳಿಸಿದರು. ಆಸ್ಪತ್ರೆಯ ಕುಂದು-ಕೊರತೆಗಳ ಬಗ್ಗೆ ಪ್ರಸ್ತಾವನೆ ಸಲ್ಲಿಸಿದರೆ ಒದಗಿಸುವುದಾಗಿ ವೈದ್ಯಾಧಿಕಾರಿ ಡಾ.ಶಂಕರನಾಯ್ಕರವರಿಗೆ ತಿಳಿಸಿದರು.
ಪ್ರವಾಸಿಮಂದಿರ ವೃತ್ತದಲ್ಲಿ ತಲೆಎತ್ತಿರುವ ತಳ್ಳುವ ಗಾಡಿ ಹೋಟೆಲ್‍ಗಳನ್ನು ಹಾಗೂ ಹೊಸ ಬಸ್ ನಿಲ್ದಾಣದ ಬಳಿ ಇರುವ ಗೂಡಂಗಡಿಗಳನ್ನು ತೆರವುಗೊಳಿಸಲು ಹಾಗೂ ಲಂಡನ್ ಹಳ್ಳಕ್ಕೆ ತಂತಿ ಬೇಲಿ ಮೆಸ್ ಅಳವಡಿಸಲು ಪುರಸಭೆ ಮುಖ್ಯಾಧಿ ಕಾರಿ ಎರಗುಡಿ ಶಿವಕುಮಾರ್ ಅವರಿಗೆ ಸೂಚಿಸಿದರು.
ಉಪನೋಂದಣಿ ಕಚೇರಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಯವರು ಕಟ್ಟಡ ಅತ್ಯಂತ ಶಿಥಿಲಗೊಂಡಿರುವುದನ್ನು ಗಮನಿಸಿ, ಕೂಡಲೇ ಐ.ಬಿ.ಆವರಣದಲ್ಲಿರುವ ಲೋಕೋಪಯೋಗಿ ಕಟ್ಟಡಕ್ಕೆ ಸ್ಥಳಾಂತರಿಸಲು ಸೂಚಿಸಿದರು. ಆ ಕಟ್ಟಡಕ್ಕೆ 3 ಪೇಸ್ ವಿದ್ಯುತ್ ಸಂಪರ್ಕವನ್ನು 3 ದಿನಗಳೊಳಗಾಗಿ ಕಲ್ಪಿಸಲು ಬೆಸ್ಕಾಂ ಎಇಇ ಅವರಿಗೆ ದೂರವಾಣಿ ಮೂಲಕ ಸೂಚಿಸಿದರು.
ಸರ್ಕಾರಿ ಬಾಲಕಿಯರ ಪ್ರೌಢಶಾಲೆಗೆ ಭೇಟಿ ನೀಡಿ ತರಗತಿಗಳ ಕೊಠಡಿಗಳನ್ನು ಪರಿಶೀಲಿಸಿದ ಅವರು, ಮಕ್ಕಳಿಗೆ ಕ್ಷೀರಭಾಗ್ಯ ಯೋಜನೆಯಲ್ಲಿ ನೀಡುವ ಹಾಲನ್ನು ಬೆಳಿಗ್ಗೆ ನೀಡದೆ ತಡವಾಗಿ ನೀಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಈ ರೀತಿಯಾದರೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಶಿಕ್ಷಕರು ಶಾಲೆಗೆ ಬಂದಾಗ ಹಾಜರಿ ಪುಸ್ತಕದಲ್ಲಿ ಬೆಳಿಗ್ಗೆ ಹಾಗೂ ಮಧ್ಯಾಹ್ನ ಪ್ರತ್ಯೇಕವಾಗಿ ಸಹಿಯನ್ನು ಹಾಕಬೇಕು ಎಂದು ಹೇಳಿದ ಅವರು, ಈ ಬಗ್ಗೆ ತಾಲ್ಲೂಕಿನ ಎಲ್ಲಾ ಶಾಲೆಗಳಿಗೆ ಸುತ್ತೋಲೆ ಕಳಿಸಲು ಬಿಇಓ ಯು.ಬಸವರಾಜಪ್ಪ ಸೂಚಿಸಿದರು.
ಮಕ್ಕಳನ್ನು ಯಾವ ಕಾರಣಕ್ಕೂ ಕೊಠಡಿ ಹೊರಗೆ ಆವರಣದಲ್ಲಿ ಕೂಡಿಸದಂತೆ ತಾಕೀತು ಮಾಡಿದರು. ಬಾಲಕಿಯರ ಶಾಲೆಗೆ ಹೈಟೆಕ್ ಶೌಚಾಲಯ ಕಟ್ಟಿಸಲು ಲೋಕೋಪಯೋಗಿ ಇಲಾಖೆ ಎಇಇ ಸತೀಶ್ ಪಾಟೀಲ್ ಅವರಿಗೆ ಸೂಚಿಸಿದರು. ಕೊಟ್ಟೂರು ರಸ್ತೆಯ ವೃತ್ತದಲ್ಲಿ ಇರುವ ಅವೈಜ್ಞಾನಿಕ ವೃತ್ತದ ಕಟ್ಟಡವನ್ನು ತೆರವುಗೊಳಿಸಲು ಸೂಚಿಸಿದರು.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಟಿ.ವಿ.ಪ್ರಕಾಶ್, ಬಿಇಓ ಬಸವರಾಜಪ್ಪ, ಅಕ್ಷರ ದಾಸೋಹ ಎಡಿ ಜಯರಾಜ್, ಕೃಷಿ ಸಹಾಯಕ ನಿರ್ದೇಶಕ ಗೋಂದಿ ಮಂಜುನಾಥ್, ಟಿಎಚ್‍ಓ ವೈದ್ಯ ಹಾಲಸ್ವಾಮಿ, ಎಇಇ ಸತೀಶ್ ಪಾಟೀಲ್, ಆರ್‍ಎಫ್‍ಓ ಮಲ್ಲಪ್ಪ, ತೋಷನ್‍ಕುಮಾರ್, ಬಿಸಿಎಂ ನಿಲಯ ಮೇಲ್ವಿಚಾರಕ ಬಿ.ಎಚ್.ಚಂದ್ರಪ್ಪ ಹಾಗೂ ಕಂದಾಯ ಅಧಿಕಾರಿಗಳು ಉಪಸ್ಥಿತರಿದ್ದರು.